ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಗ್ರಾಮೀಣ ಜನರಿಗಿನ್ನು 'ಗೌರವ' ಭಾಗ್ಯ

Mainashree
Updated On : 3 Jan 2014, 9:35 am

ಬೆಂಗಳೂರು: ಗ್ರಾಮೀಣ ಭಾಗದಲ್ಲಿ 'ಹಿತ್ತಲು' ಪರಿಕಲ್ಪನೆಯನ್ನು ಬದಲಿಸಿ, ಜನರ ನಿತ್ಯಕರ್ಮಗಳನ್ನು ಗೌರವಯುತವಾಗಿ ಮುಗಿಸಲು ಅನುವಾಗುವ ನಿಟ್ಟಿನಲ್ಲಿ ಸರ್ಕಾರ 'ಗೌರವ ಭಾಗ್ಯ' ಒದಗಿಸಲು ಮುಂದಾಗಿದೆ.
ಹಳ್ಳಿಗಳಲ್ಲಿ ಸ್ನಾನದ ಗೃಹವೆಂದರೆ ಹಿತ್ತಲು. ಅಲ್ಲಿ ನಾಲ್ಕು ಕಟ್ಟಿಗೆಗಳಿಗೆ ತೆಂಗಿನ ಗರಿಯನ್ನು ಅಡ್ಡವಾಗಿಟ್ಟು, ಅಲ್ಲೇ ಸ್ನಾನ ಮಾಡಿಕೊಳ್ಳುವ ವ್ಯವಸ್ಥೆಯೇ ಹೆಚ್ಚು. ಕೆಲವು ಹಿತ್ತಲಲ್ಲಿ ಕಟ್ಟಿಗೆಗಳೂ ಇರುವುದಿಲ್ಲ. ಸೀರೆಯೇ
ತೆರೆಗೋಡೆಯಾಗುತ್ತದೆ. ಇಂತಹ ಸ್ಥಿತಿಯಲ್ಲಿ ಮಹಿಳೆಯರು ಗೌರವಯುತವಾಗಿ ಸ್ನಾನ ಮಾಡಲು ಸಾಧ್ಯವೇ? ಇಂತಹ ಪರಿಸ್ಥಿತಿ ಹೋಗಲಾಡಿಸಲು 'ಗೌರವ ಭಾಗ್ಯ' ನೀಡಲು ಸರ್ಕಾರ ಉದ್ದೇಶಿಸಿದೆ.
ಗ್ರಾಮಗಳಲ್ಲಿ ಶೌಚವೆಂದರೆ ಅದು ಬಯಲಿಗೇ ಹೋಗಬೇಕು. ಅದನ್ನು ಹೋಗಲಾಡಿಸಲು ಮನೆಗೊಂದು ಶೌಚಾಲಯ ಎಂಬ ಯೋಜನೆ ಜಾರಿಯಾಗಿದೆ. ಆದರೆ, ಸ್ನಾನ ಇಂದೂ ಕೂಡ ಹಿತ್ತಲಿನಲ್ಲೇ ಆಗಬೇಕಿದೆ. ಅದರ ಪರಿಕಲ್ಪನೆಯನ್ನೂ ಬದಲಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಮುಂದಾಗಿದ್ದು, ಸ್ನಾನಗೃಹದ ಸಹಿತ ಶೌಚಾಲಯ ನಿರ್ಮಾಣಕ್ಕೆ ಸಬ್ಸಿಡಿ ನೀಡಲಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ವತಿಯಿಂದ 'ಮನೆಗೊಂದು ಶೌಚಾಲಯ' ಕಾರ್ಯಕ್ರಮದಲ್ಲಿ ಹಳ್ಳಿಗಳ ಮನೆಯಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಲು 9200 ಹಣ ನೀಡಲಾಗುತ್ತಿದೆ. ಇದರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಪಾಲು ಇದೆ. ಇದೀಗ ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿರುವ ಇಲಾಖೆ, 'ಸ್ನಾನಗೃಹ ಸಹಿತ ಶೌಚಾಲಯ' ಕಾರ್ಯಕ್ರಮ ಆರಂಭಿಸಲು ಮುಂದಾಗಿದೆ. ಶೌಚಾಲಯದ ಜತೆಗೆ ಸ್ನಾನದ ಮನೆಯನ್ನೂ ಕಟ್ಟಿಸಿಕೊಳ್ಳಲು ಹಣ ನೀಡಲಿದೆ. ಅಂದರೆ 'ಸ್ನಾನಗೃಹ ಸಹಿತ ಶೌಚಾಲಯ' ನಿರ್ಮಿಸಿಕೊಳ್ಳಲು ಸುಮಾರು 20 ಸಾವಿರ ಅನುದಾನವನ್ನು ಸರ್ಕಾರ ಒದಗಿಸಲಿದೆ.
ಇದು ಕೇವಲ ಪರಿಕಲ್ಪನೆಗಷ್ಟೇ ಮೀಸಲಾಗಿಲ್ಲ. 'ಸ್ನಾನಗೃಹ ಸಹಿತ ಶೌಚಾಲಯ' ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದ್ದು, ಅದರ ಮಾದರಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಉದ್ಘಾಟಿಸಿ, ಭೇಷ್ ಎಂದಿದ್ದಾರೆ. ಗದಗ ತಾಲೂಕು ಪಂಚಾಯತ್‌ನ ಬಿಂಕದಕಟ್ಟಿ ಗ್ರಾಮ ಪಂಚಾಯತ್‌ನ ಹಳ್ಳಿಯಲ್ಲಿ ಈ ಮಾದರಿ 'ಸ್ನಾನಗೃಹ ಸಹಿತ ಶೌಚಾಲಯ' ನಿರ್ಮಾಣವಾಗಿದೆ. ಈ ಗೃಹದ ಮೇಲೆ ನೀರಿನ ಟ್ಯಾಂಕಗೂ ಅವಕಾಶ ಮಾಡಿಕೊಡಲಾಗಿದ್ದು, ನಗರದಲ್ಲಿರುವ ಹೈಟೆಕ್ ವ್ಯವಸ್ಥೆಯಾದ ಶವರ್ ಕೂಡ ಈ ಮಾದರಿ ಗೃಹದಲ್ಲಿ ಲಭ್ಯ.
ನಿರ್ಮಲ ಭಾರತ ಅಭಿಯಾನ ಯೋಜನೆಯಲ್ಲೇ 'ಸ್ನಾನಗೃಹ ಸಹಿತ ಶೌಚಾಲಯ' ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ. 2014-15ನೇ ಸಾಲಿನ ಬಜೆಟ್‌ನಲ್ಲಿ ಈ ಕಾರ್ಯಕ್ರಮಕ್ಕೇ ನೂರಾರು ಕೋಟಿ ರುಪಾಯಿ ಮೀಸಲಿಡಲು ಸರ್ಕಾರ ನಿರ್ಧರಿಸಿದೆ.
ಅದರ ಅನುಸಾರ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ ಎಂಬುದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಎಚ್.ಕೆ. ಪಾಟೀಲ್ ಅವರ ಆಶ್ವಾಸನೆ.
ಕಮೋಡ್‌ಗೆ ಕೂಡ ಅನುದಾನ
ಗ್ರಾಮೀಣ ಭಾಗದಲ್ಲಿ ಸಾಕಷ್ಟು ಜನರು ವೃದ್ಧರಾಗಿದ್ದಾರೆ. ಹಲವು ಜನರಿಗೆ ಕುಳಿತು ಶೌಚ ಮಾಡಲು ಸಾಧ್ಯವಾಗುವುದಿಲ್ಲ. ವಯಸ್ಸಾದಂತೆ ಕಾಲುಗಳ ಕೀಲಿನ ಸಮಸ್ಯೆ ಉಂಟಾಗಿ ಕುಳಿತುಕೊಳ್ಳಲು ಆಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅವರಿಗೆ ಶೌಚ ಒಂದು ಯಮಯಾತನೆ. ಈ ದುಸ್ಥಿತಿ ನಿವಾರಣಗೆ ಮನೆಗೊಂದು ಶೌಚಾಲಯ ಕಾರ್ಯಕ್ರಮದಲ್ಲಿ 'ಕಮೋಡ್‌' ಅಳವಡಿಸಿಕೊಳ್ಳಲೂ ಉತ್ತೇಜಿಸಲಾಗುತ್ತಿದೆ. ಇದಕ್ಕೆ ಅನುದಾನ ಸಿಗುವುದಿಲ್ಲ ಎಂಬ ಅನುಮಾನವಿತ್ತು. ಆದರೆ, ಅದಕ್ಕೆಲ್ಲ ಆಸ್ಪದ ಇಲ್ಲ. ಎಲ್ಲದರ ವೆಚ್ಚ ಒಂದೇ ಆಗುವುದರಿಂದ ಕಮೋಡ್ ಅಳವಡಿಕೆಗೇ ಹೆಚ್ಚು ಒತ್ತು ನೀಡಲು ನಿರ್ಧರಿಸಲಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದಾರೆ.
ಗ್ರಾಮೀಣ ಜನರ ಬದುಕು ಉತ್ತಮ ಆರೋಗ್ಯದಿಂದ ಇದ್ದರೆ ಮಾತ್ರ ಸಾಲದು. ಅವರು ಗೌರವ ಕಾಪಾಡಿಕೊಂಡು ಜೀವಿಸುವ ವ್ಯವಸ್ಥೆಗಳೂ ಲಭ್ಯವಾಗಬೇಕು. ಬಯಲು ಬಹಿರ್ದೆಸೆ ನಿವಾರಿಸಿ, ಶೌಚಾಲಯ ನಿರ್ಮಾಣವಾಗದಿದ್ದರೆ ಗ್ರಾಮೀಣ ಸ್ವರಾಜ್ಯ ಸಾಕಾರವಾಗುವುದಿಲ್ಲ ಎಂಬ ಮಹಾತ್ಮ ಗಾಂಧೀಜಿ ಮಾತು ಕಟುಸತ್ಯ. 80 ವರ್ಷವಾದರೂ ಅದು ಇಂದೂ ನನಸಾಗಿಲ್ಲ. ಈಗಲಾದರೂ ಗ್ರಾಮೀಣ ಜನರು ಗೌರವಯುತವಾಗಿ ಬದುಕುವಂತಾಗಬೇಕು. ಅದಕ್ಕೇ ಈ ಕಾರ್ಯಕ್ರಮಕ್ಕೆ 'ಗೌರವ' ಎಂದೇ ಹೆಸರಿಡಲಾಗಿದೆ.
-ಎಚ್.ಕೆ. ಪಾಟೀಲ್, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಸಚಿವ

 ಕೆರೆ ಮಂಜುನಾಥ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement