ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ನನಸಾಗುವುದೇ ಕೆಎಟಿ ಕನಸು?

Mainashree
Updated On : 3 Jan 2014, 10:27 am

-ಉಕ 8 ಜಿಲ್ಲೆಗಳ ಸುಮಾರು 6 ಸಾವಿರ ಪ್ರಕರಣಗಳು ಬಾಕಿ

ಧಾರವಾಡ:
ಉತ್ತರ ಕರ್ನಾಟಕದ ಬಹುದಿನಗಳ ಕನಸಾಗಿದ್ದ ಹೈಕೋರ್ಟ್ ಸಂಚಾರಿ ಪೀಠ ಕಾಯಂ ಆಗಿ ನಾಲ್ಕು ತಿಂಗಳಾದವು. ಅದರ ಪೂರ್ವದಿಂದಲೂ ಈ ಭಾಗದಲ್ಲಿ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ)ಯ ಪೀಠ ಸ್ಥಾಪನೆಯಾಗಬೇಕೆನ್ನುವ ಬೇಡಿಕೆ ಮಾತ್ರ ಇನ್ನೂ ಕನಸಾಗಿಯೇ ಉಳಿದಿದೆ.
ಕೆಎಟಿ ಅಧ್ಯಕ್ಷರಾಗಿದ್ದ ನ್ಯಾ. ಅಜೀತ ಕಬ್ಬಿನ ನಿವೃತ್ತಿ ಹೊಂದಿದ್ದು, ಹೊಸಬರ ನೇಮಕಾತಿಯಾಗಬೇಕಿದೆ. ಅಲ್ಲದೆ ಹಲವು ಸದಸ್ಯ ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ತುಂಬಬೇಕಿದೆ. ಅಧ್ಯಕ್ಷ ಮತ್ತು ಸದಸ್ಯರ ನೇಮಕಾತಿ ಆಗದಿರುವ ಹಿನ್ನೆಲೆಯಲ್ಲಿ ಬಾಕಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ಪ್ರಸ್ತುತ ಸುಮಾರು 22 ಸಾವಿರ ಪ್ರಕರಣಗಳು ಕೆಎಟಿ ಎದುರು ವಿಲೇವಾರಿಗಾಗಿ ಕಾದಿವೆ ಎನ್ನುತ್ತವೆ ಅಧಿಕೃತ ಮೂಲಗಳು.  ಸರ್ಕಾರಿ ನೌಕರರು ತಮ್ಮ ಸೇವೆ ಮತ್ತು ಇತರೆ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹೋಗುವ ಪೂರ್ವದಲ್ಲಿ ಕೆಎಟಿಗೆ ಹೋಗುವುದು ಅಗತ್ಯ. ಈ ಭಾಗದ ಗ್ರೇಡ್ 1 ಅಧಿಕಾರಿಗಳಿಂದ ಹಿಡಿದು 'ಡಿ' ಗ್ರೂಪ್ ನೌಕರರು ತಮ್ಮ ಬಡ್ತಿ, ವರ್ಗಾವಣೆ, ಆರ್ಥಿಕ ಸೌಲಭ್ಯಗಳಿಗೆ ಸಂಬಂಧಿಸಿದ ವ್ಯಾಜ್ಯಗಳಿಗೆ ಬೆಂಗಳೂರಿಗೆ ಹೋಗುವುದು ಅನಿವಾರ್ಯ. ಇದರಿಂದ ಸಮಯದ ತೊಂದರೆ, ವಕೀಲರ ನೇಮಕವಲ್ಲದೇ, ವೆಚ್ಚದಾಯಕವೂ ಹೌದು. ಇದರಿಂದ ನೌಕರರಿಗೆ ತೀವ್ರ ತೊಂದರೆ ಉಂಟಾಗಿದೆ.
ತುತ್ತು ಬಾಯಿಗೆ ಬರಲಿಲ್ಲ: ಧಾರವಾಡ ಹೈಕೋರ್ಟ್ ಪೀಠ ವ್ಯಾಪ್ತಿಯ ಎಂಟು ಜಿಲ್ಲೆಗಳ ಸುಮಾರು ಆರು ಸಾವಿರಕ್ಕಿಂತಲೂ ಹೆಚ್ಚು ಪ್ರಕರಣಗಳು ಬಾಕಿ ಇದ್ದು, ಈ ಭಾಗದಲ್ಲಿ ಕೆಎಟಿ ಪೀಠ ಸ್ಥಾಪನೆಯಾದರೆ ನೌಕರರು ಶೀಘ್ರ ನ್ಯಾಯ ಪಡೆಯಲು ಸಾಧ್ಯವಾಗುತ್ತದೆ ಎನ್ನುವುದು ನೌಕರರ ಅಭಿಪ್ರಾಯ. ಇದೀಗ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವಾದರೂ ಕೆಎಟಿ ಪೀಠ ಸ್ಥಾಪನೆಯ ಕನಸನ್ನು ನನಸಾಗಿಸಲಿ ಎಂಬುದು ಈ ಭಾಗದ ಸರ್ಕಾರಿ ನೌಕರರ ಆಶಯ.
2013ರ ಫೆಬ್ರವರಿಯಲ್ಲಿ ಧಾರವಾಡ ಸಂಚಾರಿ ಪೀಠ ವಕೀಲರ ಸಂಘ ಬರೆದಿದ್ದ ಪತ್ರವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಹಣಕಾಸು ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಕಳುಹಿಸಿಕೊಟ್ಟಿದ್ದರು. ಕೆಎಟಿ ಸ್ಥಾಪನೆಯ ಸಾಧ್ಯಾಸಾಧ್ಯತೆ ಪರಿಶೀಲಿಸುವಂತೆ ಕೆಎಟಿ ಅಧ್ಯಕ್ಷರಿಗೂ ಪತ್ರ ಬರೆಯಲಾಗಿತ್ತು. ಕೆಎಟಿಯು ವಿವರವಾದ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಿತ್ತು. ಚುನಾವಣೆ ಹಿನ್ನೆಲೆಯಲ್ಲಿ ಕನಸು ಈಡೇರಲಿಲ್ಲ. ಉತ್ತರ ಕರ್ನಾಟಕ ಭಾಗದ ಜನತೆ ಎಲ್ಲವನ್ನೂ ಹೋರಾಟದ ಮೂಲಕವೇ ಪಡೆದುಕೊಳ್ಳಬೇಕು ಎನ್ನುವ ಸ್ಥಿತಿ ನಿರ್ಮಾಣ ಮಾಡಿರುವ ಸರ್ಕಾರಗಳು ಇನ್ನಾದರೂ ಬದಲಾಗಬೇಕಿದೆ. ಅಂದುಕೊಂಡಂತೆ ಸಂಚಾರಿ ಪೀಠ ಕಾಯಂ ಆಗಿದ್ದು, ಇಲ್ಲಿಯೇ ಕೆಎಟಿ ಸ್ಥಾಪನೆಯಾದರೆ ಬಹಳ ಅನುಕೂಲ. ಈ ಭಾಗದ ಜನಪ್ರತಿನಿಧಿಗಳು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿ ಆದಷ್ಟು ಶೀಘ್ರ ಧಾರವಾಡ ಹೈಕೋರ್ಟ್ ಪೀಠದಲ್ಲಿ ಕೆಎಟಿ ಸ್ಥಾಪಿಸಲು ಸರ್ಕಾರದ ಮೇಲೆ ಒತ್ತಡ ತರಬೇಕಿದೆ.
ಈ ಭಾಗದಲ್ಲಿ ಕೆಎಟಿ ಪೀಠ ಸ್ಥಾಪನೆ ಆಗುವುದರಿಂದ ಸರ್ಕಾರಿ ನೌಕರರಿಗೆ ವೆಚ್ಚದಾಯಕವಾಗುವ ನ್ಯಾಯದಾನ ಕಡಿಮೆ ಖರ್ಚಿನಲ್ಲಿ ಲಭ್ಯವಾಗಲಿದೆ. ಅಲ್ಲದೆ, ಸಮಯವೂ ಉಳಿತಾಯವಾಗುತ್ತದೆ. ಹೀಗಾಗಿ, ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೈಕೋರ್ಟ್ ಪೀಠದ ವಕೀಲರ ಸಂಘದೊಡನೆ ಸರ್ಕಾರಿ ನೌಕರರು ಪ್ರತಿಭಟನೆ ಅಸ್ತ್ರ ಹಿಡಿಯಬೇಕಾಗುತ್ತದೆ.
- ಬಸವರಾಜ ಗುರಿಕಾರ, ಕರ್ನಾಟಕ ರಾಜ್ಯ
 ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ
ಈಗಲಾದರೂ ಕಾಂಗ್ರೆಸ್ ಸರ್ಕಾರ ಕೆಎಟಿ ಸ್ಥಾಪನೆಯ ನಿಟ್ಟಿನಲ್ಲಿ ಧನಾತ್ಮಕ ಸ್ಪಂದನೆ ತೋರಬೇಕು. ಇಲ್ಲದಿದ್ದರೆ ಹೊಸ ವರ್ಷದ ಮೊದಲ ಭಾಗದಲ್ಲಿ ಕೆಎಟಿ ಸ್ಥಾಪನೆಯಾಗದಿದ್ದರೆ ಆಮರಣಾಂತ ಉಪವಾಸ ಕೈಗೊಳ್ಳುವುದು ಅನಿವಾರ್ಯ.
- ಬಿ.ಡಿ. ಹಿರೇಮಠ, ಧಾರವಾಡ ಹೈಕೋರ್ಟ್ ಪೀಠದ ವಕೀಲರ ಸಂಘದ ಅಧ್ಯಕ್ಷ

- ಬಸವರಾಜ ಹಿರೇಮಠ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement