ಮಾನವ ಸಂಬಂಧಗಳಲ್ಲಿ ಬಿರುಕು
ಕ.ಪ್ರ.ವಾರ್ತೆ ಕುಶಾಲನಗರ ಜ. 3
ಆಧುನಿಕ ಜಗತ್ತಿನಲ್ಲಿ ಅತ್ಯಾಧುನಿಕ ವಿಜ್ಞಾನ ತಂತ್ರಜ್ಞಾನಗಳ ನಡುವೆ ಮಾನವ ಸಂಬಂಧಗಳಲ್ಲಿ ಬಿರುಕು ಕಂಡು ಬರುವುದರೊಂದಿಗೆ ಪರಸ್ಪರ ಶಾಂತಿ, ನೆಮ್ಮದಿ ಕ್ಷೀಣಿಸುತ್ತಿರುವ ಬಗ್ಗೆ ನೊಬೆಲ್ ಪ್ರಶಸ್ತಿ ವಿಜೇತ ಬೌದ್ಧ ಧಾರ್ಮಿಕ ಗುರು 14ನೇ ದಲೈಲಾಮ ವಿಷಾದ ವ್ಯಕ್ತಪಡಿಸಿದರು.
ಬೈಲುಕುಪ್ಪೆ ಟಿಬೆಟಿಯನ್ ಶಿಬಿರದಲ್ಲಿ ಶುಕ್ರವಾರ ಧಾರ್ಮಿಕ ಪ್ರವಚನದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಪುರಾತನ ಇತಿಹಾಸ ಹೊಂದಿರುವ ಭಾರತದಲ್ಲಿ ಇನ್ನೂ ಅಹಿಂಸಾ ತತ್ವ ಜೀವಂತವಾಗಿದೆ. ಇಂದಿನ ಯುವ ಜನಾಂಗ ಆಧುನಿಕ ಶಿಕ್ಷಣದೊಂದಿಗೆ, ಸಾಂಪ್ರದಾಯಿಕ ಮೌಲ್ಯಗಳ ಅರಿವು ಹೊಂದಬೇಕಾಗಿದೆ. ಭಾರತ ಶ್ರೀಮಂತ ಜ್ಞಾನ ಭಂಡಾರಗಳನ್ನು ಹೊಂದಿದ್ದು, ನಾನು ಆ ಮೂಲಕ ಸಂದೇಶ ವಾಹಕನಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿಸಿದರು.
ರಾಷ್ಟ್ರದಲ್ಲಿ ಉಗ್ರರ ರೂಪದಲ್ಲಿ ಹಿಂಸಾ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಭಾರತದಂಥ ದೇಶದಲ್ಲಿ ಭಯೋತ್ಪಾದನೆ ಘಟನೆಗಳು ನಡೆಯುವುದು ವಿಷಾದನೀಯ ಎಂದರು.
ಬೌದ್ಧಧರ್ಮ ಸಿದ್ಧಾಂತ ಅಳವಡಿಸಿಕೊಳ್ಳಿ
ಬೈಲಕುಪ್ಪೆ: ಬೌದ್ಧಧರ್ಮ ತತ್ವ ಸಿದ್ಧಾಂತವನ್ನು ಅಳವಡಿಸಿಕೊಂಡು ಶಾಂತಿಯಿಂದ ಜೀವನ ನಡೆಸಿಕೊಂಡು ಹೋಗುವಂತೆ ಶ್ರೀ ದಲೈಲಾಮಾ ಕರೆ ನೀಡಿದರು.
ಶುಕ್ರವಾರ ಬೆಳಗ್ಗೆ ಲಾಮಾ ಕ್ಯಾಂಪಿನ ಸೆರಾಜೆ ಸಂಸ್ಥೆ ಆವರಣದಲ್ಲಿ ಕೊನೆಯ ಮಂಡಲ ಪೂಜೆಗೆ ಜ್ಯೋತಿ ಬೆಳಗಿಸಿ ಮಾತನಾಡಿದ ಅವರು, ನಾವೆಲ್ಲರೂ ಭಾರತ ದೇಶದ ಗಾಂಧೀಜಿ, ನೆಹರೂ ಮುಂತಾದವರು ಕೊಟ್ಟ ಅಪಾರವಾದ ಕೊಡುಗೆಯನ್ನು ಸ್ಮರಿಸಿಕೊಂಡು ಇಲ್ಲಿಯ ಜನರೊಂದಿಗೆ ಅಣ್ಣ ತಮ್ಮಂದಿರಂತೆ ಜೀವನ ನಡೆಸಿಕೊಂಡು ಹೋಗಬೇಕು ಎಂದು ತಿಳಿಸಿದರು. ಬೆಳಗ್ಗೆಯಿಂದಲೇ ಪ್ರಾರಂಭವಾದ ಮಂಡಲ ಪೂಜೆ ಮಧ್ಯಾಹ್ನದವರೆಗೂ ನಡೆಯಿತು. ಇದೇ ವೇಳೆ ಹೊರ ರಾಷ್ಟ್ರದ ಹಾಗೂ ಬೌದ್ಧ ಅನುಯಾಯಿಗಳು, ಟಿಬೆಟಿಯನ್ನರು ಸೇರಿದಂತೆ ಸುಮಾರು 25 ರಿಂದ 30 ಸಾವಿರದಷ್ಟು ಮಂದಿ ಭಕ್ತರು ಭಾಗವಹಿಸಿದ್ದರು. ಮುಖಂಡರಾದ ಕುಪ್ತಿನ್, ತಂಡುಪ್, ಗೆಲ್ಲಕ್, ತೆಂನ್ಜಿನ್, ಫೆಲ್ಜನ್, ಕರ್ಮ, ಎಸ್ಪಿ ಅಭಿನವ್ ಖರೆ, ಡಿವೈಎಸ್ಪಿ ನಂಜುಂಡ ಇತರರು ಇದ್ದರು.