ವಿಲೀನ ಪ್ರಕ್ರಿಯೆ ಶುರು
ಕೆಜೆಪಿಯನ್ನು ಬಿಜೆಪಿ ಜತೆ ವಿಲೀನಗೊಳಿಸುವ ತಾಂತ್ರಿಕ ಮತ್ತು ಕಾನೂನು ಪ್ರಕ್ರಿಯೆಗಳಿಗೆ ಶುಕ್ರವಾರ ಚಾಲನೆ ನೀಡಲಾಗಿದೆ...
ಕನ್ನಡಪ್ರಭ ವಾರ್ತೆ ಬೆಂಗಳೂರು ಜ.3
ಕೆಜೆಪಿಯನ್ನು ಬಿಜೆಪಿ ಜತೆ ವಿಲೀನಗೊಳಿಸುವ ತಾಂತ್ರಿಕ ಮತ್ತು ಕಾನೂನು ಪ್ರಕ್ರಿಯೆಗಳಿಗೆ ಶುಕ್ರವಾರ ಚಾಲನೆ ನೀಡಲಾಗಿದೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಕೆಜೆಪಿಯ ನಾಲ್ವರು ಶಾಸಕರು ಮತ್ತು ಮುಖಂಡರು ವಿಧಾನಸಭೆ ಅಧ್ಯಕ್ಷ ಕಾಗೋಡು ತಿಮ್ಮಪ್ಪ ಅವರನ್ನು ಭೇಟಿಯಾಗಿ ಪಕ್ಷವನ್ನು ಬಿಜೆಪಿ ಜತೆ ವಿಲೀನಗೊಳಿಸುವ ಕುರಿತು ಮನವಿ ಸಲ್ಲಿಸಿದ್ದಾರೆ.
ಪಕ್ಷದ ಶಾಸಕರಾದ ಗುರುಪಾದಪ್ಪ ನಾಗಮಾರಪಲ್ಲಿ, ವಿಶ್ವನಾಥ ಪಾಟೀಲ್, ಯು.ಬಿ. ಬಣಕಾರ್ ಹಾಗೂ ಮುಖಂಡರಾದ ಶೋಭಾ ಕರಂದ್ಲಾಜೆ, ಸಿ.ಎಂ. ಉದಾಸಿ ಮತ್ತಿತರರೊಂದಿಗೆ ವಿಧಾನಸಭೆ ಅಧ್ಯಕ್ಷರನ್ನು ಭೇಟಿಯಾದ ಯಡಿಯೂರಪ್ಪ ಅವರು, ಕೆಜೆಪಿಯನ್ನು ಬಿಜೆಪಿ ಜತೆ ವಿಲೀನಗೊಳಿಸುವ ಕುರಿತು ಕೆಜೆಪಿ ಕಾರ್ಯಕಾರಿಣಿಯಲ್ಲಿ ಕೈಗೊಂಡ ನಿರ್ಧಾರ ಹಾಗೂ ಶಾಸಕಾಂಗ ಪಕ್ಷದಲ್ಲಿ ಕೈಗೊಂಡ ನಿರ್ಣಯಗಳ ಪ್ರತಿಗಳನ್ನು ಸಲ್ಲಿಸಿ ತಮ್ಮನ್ನು ಮುಂದೆ ಬಿಜೆಪಿ ಶಾಸಕರೆಂದು ಪರಿಗಣಿಸುವಂತೆ ಕೋರಿದರು.
ಕೆಜೆಪಿಯಲ್ಲಿ ಯಡಿಯೂರಪ್ಪ ಸೇರಿದಂತೆ ಒಟ್ಟು ಆರು ಶಾಸಕರಿದ್ದು, ಈ ಪೈಕಿ ನಾಲ್ವರು ಬಿಜೆಪಿ ಜತೆ ವಿಲೀನಗೊಳಿಸಬೇಕು ಎಂಬ ಪತ್ರಕ್ಕೆ ಸಹಿ ಹಾಕಿದ್ದಾರೆ. ಇನ್ನೂ ಇಬ್ಬರು ಶಾಸಕರು ಕೂಡ ಬಿಜೆಪಿ ಸೇರಲಿದ್ದಾರೆ. ಹೀಗಾಗಿ ಕಾನೂನಾತ್ಮಕವಾಗಿ ಮತ್ತು ತಾಂತ್ರಿಕವಾಗಿ ಪಕ್ಷವನ್ನು ಬಿಜೆಪಿ ಜತೆ ವಿಲೀನಗೊಳಿಸಲು ಯಾವುದೇ ಸಮಸ್ಯೆ ಇಲ್ಲ. ಆದ್ದರಿಂದ ಈ ಪತ್ರವನ್ನು ಪರಿಗಣಿಸಿ ವಿಲೀನಕ್ಕೆ ಒಪ್ಪಿಗೆ ನೀಡಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಪ್ರತಿಕ್ರಿಯೆ ಬಳಿಕ ನಿರ್ಧಾರ: ಸ್ಪೀಕರ್: ಕೆಜೆಪಿಯನ್ನು ಬಿಜೆಪಿ ಜತೆ ವಿಲೀನಗೊಳಿಸುವ ಕುರಿತು ಯಡಿಯೂರಪ್ಪ ಮತ್ತು ಇತರೆ ಮೂವರು ಶಾಸಕರು ನೀಡಿದ ಮನವಿ ಕುರಿತಂತೆ ಪ್ರತಿಕ್ರಿಯಿಸಿದ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು, ಕೆಜೆಪಿಯ ನಾಲ್ವರು ಶಾಸಕರು ಪಕ್ಷವನ್ನು ಬಿಜೆಪಿ ಜತೆ ವಿಲೀನಗೊಳಿಸುವ ಕುರಿತು ತಮಗೆ ತಿಳಿಸಿದ್ದಾರೆ. ಆದರೆ, ಇವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಬಿಜೆಪಿಯ ತೀರ್ಮಾನ ಏನು ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ. ಆದ್ದರಿಂದ ಬಿಜೆಪಿಯಿಂದ ಈ ಕುರಿತು ಪ್ರತಿಕ್ರಿಯೆ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಕೆಜೆಪಿಯನ್ನು ಬಿಜೆಪಿ ಜತೆ ವಿಲೀನಗೊಳಿಸುತ್ತಿರುವುದರಿಂದ ಬಿಜೆಪಿಗೆ ಅಧಿಕೃತ ಪ್ರತಿಪಕ್ಷದ ಮಾನ್ಯತೆ ಸಿಗಲಿದೆಯೇ? ಯಡಿಯೂರಪ್ಪ ಅವರು ಪ್ರತಿಪಕ್ಷ ಸ್ಥಾನ ಪಡೆಯಲು ಅವಕಾಶವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಅವರು, ಬಿಜೆಪಿಯಿಂದ ಪ್ರತಿಕ್ರಿಯೆ ಬರುವವರೆಗೆ ಯಾವುದನ್ನೂ ಹೇಳಲು ಸಾಧ್ಯವಿಲ್ಲ. ಆ ಪಕ್ಷದ ಅಭಿಪ್ರಾಯ ಬಂದ ಬಳಿಕ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.
ಅಂತಿಮ ಕ್ಷಣದ ಪರದಾಟ: ಇತ್ತೀಚೆಗೆ ನಡೆದ ಕೆಜೆಪಿ ಕಾರ್ಯಕಾರಿಣಿಗೆ ಹಾಜರಾಗಿ ಪಕ್ಷವನ್ನು ಬಿಜೆಪಿ ಜತೆ ವಿಲೀನಗೊಳಿಸುವ ಕುರಿತು ಯಡಿಯೂರಪ್ಪ ಅವರು ಕೈಗೊಳ್ಳುವ ನಿರ್ಧಾರಕ್ಕೆ ಬೆಂಬಲ ವ್ಯಕ್ತಪಡಿಸಿದ್ದ ಶಹಾಪುರ ಶಾಸಕ ಗುರು ಪಾಟೀಲ್ ಕೈಕೊಟ್ಟಿದ್ದರಿಂದ ಪಕ್ಷ ವಿಲೀನಕ್ಕೆ ಮೂರನೇ ಎರಡರಷ್ಟು ಬೆಂಬಲ ಪಡೆಯಲು ಯಡಿಯೂರಪ್ಪ ಪರದಾಡುವಂತಾಯಿತು.
ಗುರು ಪಾಟೀಲ್ ಅವರನ್ನು ಸಂಪರ್ಕಿಸಲು ಕಳೆದ ಮೂರ್ನಾಲ್ಕು ದಿನಗಳಿಂದ ಪ್ರಯತ್ನಿಸುತ್ತಿದ್ದರೂ ಅವರು ಕೈಗೆ ಸಿಕ್ಕಿರಲಿಲ್ಲ. ಹೀಗಾಗಿ ಶುಕ್ರವಾರ ಬೆಳಗ್ಗೆ ಗುರುಪಾದಪ್ಪ ನಾಗಮಾರಪಳ್ಳಿ ಅವರನ್ನು ಮನವೊಲಿಸಿ ಜತೆಗೆ ಕರೆದುಕೊಂಡು ಹೋಗಲು ತೀರ್ಮಾನಿಸಲಾಯಿತು.
ಆದರೆ, ಆರಂಭದಲ್ಲಿ ಅವರು ಕೂಡ ಬಿಜೆಪಿಗೆ ಬರಲು ನಿರಾಕರಿಸಿದರು. ಒಂದು ವೇಳೆ ಬರುವುದಾದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪುತ್ರನಿಗೆ ಬಿಜೆಪಿ ಟಿಕೆಟ್ ನೀಡಬೇಕು ಎಂಬ ಬೇಡಿಕೆಯನ್ನು ಈಡೇರಿಸಬೇಕು ಎಂದು ಹೇಳಿದ್ದರು. ಕೊನೆಗೂ ಅವರ ಮನವೊಲಿಸಿ ಅಂತಿಮ ಕ್ಷಣದ ಪರದಾಟಕ್ಕೆ ತೆರೆ ಎಳೆಯಲಾಯಿತು.
ಇಬ್ಬರು ಶಾಸಕರು ಬಿಜೆಪಿ ಸೇರುವುದಿಲ್ಲ: ಗುಲ್ಬರ್ಗಾ ಜಿಲ್ಲೆ ಅಳಂದ ಶಾಸಕ ಬಿ.ಆರ್. ಪಾಟೀಲ್ ಮತ್ತು ಯಾದಗಿರಿ ಜಿಲ್ಲೆ ಶಹಾಪುರ ಶಾಸಕ ಗುರು ಪಾಟೀಲ್ ಅವರು ಬಿಜೆಪಿ ಸೇರದಿರಲು ನಿರ್ಧರಿಸಿದ್ದಾರೆ. ಹೀಗಾಗಿ ವಿಧಾನಸಭೆಯಲ್ಲಿ ಅವರು ಪಕ್ಷೇತರ ಶಾಸಕರಾಗಿ ಉಳಿದುಕೊಳ್ಳಲಿದ್ದಾರೆ.
ಬಿ.ಆರ್. ಪಾಟೀಲ್ ಮೊದಲಿನಿಂದಲೂ ಬಿಜೆಪಿಯನ್ನು ವಿರೋಧಿಸುತ್ತಾ ಬಂದವರು. ಯಡಿಯೂರಪ್ಪ ಅವರು ಬಿಜೆಪಿ ಸೇರುವ ವಿಚಾರ ಪ್ರಸ್ತಾಪವಾದಾಗಿನಿಂದಲೂ ಅದಕ್ಕೆ ತಮ್ಮ ವಿರೋಧ ವ್ಯಕ್ತಪಡಿಸಿ ಪ್ರತ್ಯೇಕವಾಗಿ ಉಳಿದವರು. ಕೆಜೆಪಿ ಕಾರ್ಯಕಾರಿಣಿಗೂ ಆಗಮಿಸದೆ ಕೆಜೆಪಿಯನ್ನು ಬಿಜೆಪಿ ಜತೆ ವಿಲೀನಗೊಳಿಸುವ ನಿರ್ಣಯದಿಂದ ಹೊರಗುಳಿದಿದ್ದರು.
ಇನ್ನು ಗುರು ಪಾಟೀಲ್ ಅವರು ಯಡಿಯೂರಪ್ಪ ಅವರ ಬೆಂಬಲಿಗರಾದರೂ ತಮ್ಮ ಕ್ಷೇತ್ರದಲ್ಲಿ ಮುಸ್ಲಿಂ ಮತಗಳು ನಿರ್ಣಾಯಕ ಎಂಬ ಕಾರಣಕ್ಕೆ ಬಿಜೆಪಿಯಿಂದ ದೂರ ಉಳಿಯುತ್ತಿದ್ದಾರೆ. ಬಿಜೆಪಿಗೆ ಸೇರಿದರೆ ತಮ್ಮನ್ನು ಈ ಚುನಾವಣೆಯಲ್ಲಿ ಬೆಂಬಲಿಸಿದ ಮುಸ್ಲಿಮರಿಗೆ ದ್ರೋಹ ಬಗೆದಂತಾಗುತ್ತದೆ. ಮೇಲಾಗಿ ಮುಂದೆ ತಮಗೆ ಅದು ಪ್ರತೀಕೂಲ ಪರಿಣಾಮವಾಗುತ್ತದೆ ಎಂಬ ಕಾರಣಕ್ಕೆ ಅವರು ಕೂಡ ಪಕ್ಷೇತರರಾಗಿಯೇ ಉಳಿದುಕೊಳ್ಳಲು ತೀರ್ಮಾನಿಸಿದ್ದಾರೆ.
ಮುಂದಿನ ಪ್ರಕ್ರಿಯೆ ಏನು?
ಬಿಜೆಪಿ ಜತೆ ಕೆಜೆಪಿ ವಿಲೀನಕ್ಕೆ ಸ್ಪೀಕರ್ ಒಪ್ಪಿಗೆ ನೀಡಿದ ಬಳಿಕ ಈ ಕುರಿತ ಪ್ರಸ್ತಾಪವನ್ನು ಸ್ಪೀಕರ್ ಒಪ್ಪಿಗೆ ಪತ್ರದೊಂದಿಗೆ ಚು.ಆಯೋಗಕ್ಕೆ ಕಳುಹಿಸಿಕೊಡಬೇಕಾಗುತ್ತದೆ. ಆಯೋಗ ಇದಕ್ಕೆ ಸಮ್ಮತಿಸಿದ ಬಳಿಕ ಮತ್ತೆ ಸ್ಪೀಕರ್ ಬಳಿ ಬಂದು ವಿಲೀನದ ಬಗ್ಗೆ ತಿಳಿಸಬೇಕಾಗುತ್ತದೆ. ನಂತರ ಸ್ಪೀಕರ್ ಕೆಜೆಪಿಯ 4 ಶಾಸಕರನ್ನು ಬಿಜೆಪಿ ಶಾಸಕರೆಂದು ಪರಿಗಣಿಸಿ ಅಧಿಸೂಚನೆ ಪ್ರಕಟಿಸಬೇಕು. ಅದುವರೆಗೆ ಬಿಎಸ್ವೈ, ನಾಲ್ವರು ಶಾಸಕರು ಕೆಜೆಪಿ ಶಾಸಕರಾಗಿಯೇ ಇರುತ್ತಾರೆ.