ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 11ರಿಂದ ಅನಿರ್ದಿಷ್ಟಾವಧಿ ಲಾರಿ ಮುಷ್ಕರ

Mainashree
Updated On : 3 Jan 2014, 10:29 am

ಬೆಂಗಳೂರು: ಮರಳು ಸಾಗಣೆಗೆ ಅನುಮತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಲಾರಿ  ಮಾಲೀಕರು ಜ.11ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ. ಅಲ್ಲದೆ, ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ಸರ್ಕಾರಕ್ಕೆ ಜ.14ರವರೆಗೆ ಗಡುವು ನೀಡಿದ್ದಾರೆ. ಸದ್ಯ ಮುಷ್ಕರದಲ್ಲಿರುವ ಮರಳು ಲಾರಿ ಮಾಲೀಕರ ಹೋರಾಟಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ. ಹೀಗಾಗಿ ಜ.11ರ ಮಧ್ಯರಾತ್ರಿಯಿಂದ ರಾಜ್ಯಾದ್ಯಂತ ಎಲ್ಲಾ ರೀತಿಯ ಲಾರಿಗಳನ್ನು ಬಂದ್ ಮಾಡಲಾಗುತ್ತಿದೆ. ಇದಕ್ಕೆ ಮ್ಯಾಕ್ಸಿಕ್ಯಾಬ್ ಮತ್ತು ಅನಿಲ ಪೂರೈಕೆ ಲಾರಿ, ಬೋರ್‌ವೆಲ್ ಲಾರಿ, ಪ್ರವಾಸಿ ವಾಹನಗಳು ಹಾಗೂ ಹಾಲು, ತರಕಾರಿ ಪೂರೈಕೆ ಲಾರಿಗಳ ಮಾಲೀಕರು ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ರಾಜ್ಯ ಲಾರಿ ಮಾಲೀಕರು, ಚಾಲಕರು ಮತ್ತು ಏಜೆಂಟರ ಸಂಘದ ರಾಜ್ಯಾಧ್ಯಕ್ಷ ಷಣ್ಮುಗಪ್ಪ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ರಾಜ್ಯದ ಲಾರಿಗಳು ದಿನಕ್ಕೆ 50ಲಕ್ಷ ಟೋಲ್ ಪಾವತಿಸಬೇಕಿದೆ. ಇನ್ನು ಮರಳು ಲಾರಿ ಚಾಲಕರ ಮೇಲೆ ಸಾರಿಗೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳ ದೌರ್ಜನ್ಯ ಹೆಚ್ಚುತ್ತಿದೆ. ಇವರೊಂದಿಗೆ ಲೋಕೋಪಯೋಗಿ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಕಿರುಕುಳ ಹೆಚ್ಚಾಗಿದೆ. ಹೀಗಾಗಿ ಲಾರಿ ಮುಷ್ಕರವನ್ನು ಇನ್ನೂ ತೀವ್ರಗೊಳಿಸಲಾಗುತ್ತದೆ. ಸರ್ಕಾರ ಮಾತುಕತೆ ಮೂಲಕ ಪರಿಹರಿಸದಿದ್ದರೆ, ಇನ್ನು ಮುರ್ನಾಲ್ಕು ದಿನಗಳಲ್ಲಿ ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗುವುದು ಎಂದು ಅವರ ವಿವರಿಸಿದರು. ಒಟ್ಟಾರೆ ಗ್ಯಾಸ್, ಹಾಲು, ತರಕಾರಿಯಂತ ಅಗತ್ಯ ವಸ್ತುಗಳನ್ನು ಸಾಗಣೆ ಮಾಡುವ ಲಾರಿಗಳೂ ಸೇರಿದಂತೆ ಸುಮಾರು 7ಲಕ್ಷ ಲಾರಿಗಳ ಸಂಚಾರ ಸ್ಥಗಿತವಾಗಲಿದ್ದು, ಇದಕ್ಕೆ ನೆರೆಯ ತಮಿಳುನಾಡು, ಕೇರಳ, ಆಂಧ್ರಪ್ರದೇಶ ರಾಜ್ಯಗಳ ಲಾರಿ ಮಾಲೀಕರ ಸಂಘಟನೆಗಳು ಬೆಂಬಲ ಸೂಚಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement