ಆಡಳಿತಕ್ಕಾಗಿ ವಿಧಾನಸೌಧದ ಗೋಡೆ ಒಡೆಯುವೆ
ತಮ್ಮ ಕೊಠಡಿ ನವೀಕರಣಕ್ಕಾಗಿ ವಿಧಾನಸೌಧದ ಗೋಡೆ ಒಡೆಯುತ್ತೇನೆ ಎಂದು ಘೋಷಿಸಿಯೇ ಸಮಾಜ ಕಲ್ಯಾಣ ಸಚಿವ...
ಕನ್ನಡಪ್ರಭ ವಾರ್ತೆ ಬೆಂಗಳೂರು ಜ. 4
ತಮ್ಮ ಕೊಠಡಿ ನವೀಕರಣಕ್ಕಾಗಿ ವಿಧಾನಸೌಧದ ಗೋಡೆ ಒಡೆಯುತ್ತೇನೆ ಎಂದು ಘೋಷಿಸಿಯೇ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ನವೀಕರಣ ಕಾರ್ಯಕ್ಕೆ ಮುಂದಾಗಿದ್ದಾರೆ. ಅಷ್ಟೇ ಅಲ್ಲ, ಗೋಡೆ ಒಡೆಯುತ್ತಿರುವುದು ಜನರಿಗೋಸ್ಕರ ಮತ್ತು ಆಡಳಿತ ನಿರ್ವಹಣೆಗೆ ಎಂದು ಹೇಳಿ ಅದನ್ನು ಸಮರ್ಥಿಸಿಕೊಂಡಿದ್ದಾರೆ.
ಹೈಕೋರ್ಟ್ ಮುಂಭಾಗದಲ್ಲಿರುವ ವಿಧಾನಸೌಧದ ಕೊಠಡಿ ಸಂಖ್ಯೆ 340, 340ಎ ಮತ್ತು 341ನೇ ಕೊಠಡಿಯನ್ನು ಶುಕ್ರವಾರ ಪ್ರವೇಶಿಸಿರುವ ಅವರು ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಕೊಠಡಿ ನವೀಕರಣಕ್ಕಾಗಿ ಗೋಡೆ ಒಡೆಯಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿರುವುದಾಗಿ ಘೋಷಿಸಿದರು. ಗೋಡೆ ಒಡೆಯುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದೇನು ಮಾಡುತ್ತಾರೋ ಗೊತ್ತಿಲ್ಲ. ನನ್ನ ಈ ಕೊಠಡಿ ಸಣ್ಣದಾಗಿದೆ. ಅದನ್ನು ದೊಡ್ಡದು ಮಾಡಿಕೊಡಿ ಎಂದು ಅಧಿಕಾರಿಗಳಿಗೆ ಹೇಳಿದ್ದೇನೆ. ಏನು ಮಾಡುತ್ತಾರೆ ಎಂಬುದನ್ನು 15 ದಿನ ಬಿಟ್ಟು ನೋಡಿ ಎಂದು ಹೇಳಿದರು.
ಸಮರ್ಥನೆ: ವಿಧಾನಸೌಧ ಪಾರಂಪರಿಕ ಕಟ್ಟಡ. ಹೀಗಿರುವಾಗ ಯಾವುದೇ ನಿರ್ಮಾಣವನ್ನು ಒಡೆಯುವುದು ಸರಿಯಲ್ಲ. ಈ ಹಿಂದೆ ಸಚಿವರು ಗೋಡೆ ಒಡೆದಾಗ ವಿವಾದವಾಗಿತ್ತು. ಮತ್ತೆ ನೀವು ಗೋಡೆ ಒಡೆದರೆ ಹೇಗೆ ಎಂಬ ಪ್ರಶ್ನೆಗೆ, ವಾಸ್ತು -ಗೀಸ್ತು ಎಂದು ಗೋಡೆ ಒಡೆದರೆ ತಪ್ಪಾಗುತ್ತದೆ.
ನನಗೆ ನೀಡಿರುವ ಕೊಠಡಿ ಚಿಕ್ಕದು. ಇಲ್ಲಿ ಜಾಗ ಕಡಿಮೆ. ಹೀಗಾಗಿ ಬರುವ ಜನರಿಗೆ ಕುಳಿತುಕೊಳ್ಳಲು, ಆಡಳಿತ ಮತ್ತು ಕಚೇರಿ ನಿರ್ವಹಣೆಗಾಗಿ ಗೋಡೆ ಒಡೆಯಲಾಗುತ್ತಿದೆ ಎಂದು ಸಮರ್ಥಿಸಿಕೊಂಡರು.
ಅಲ್ಲದೆ, ಈ ರೀತಿ ಗೋಡೆ ಒಡೆಯುವುದರಿಂದ ವಿದಾನಸೌಧದ ಪಾರಂಪರಿಕತೆಗೆ ಧಕ್ಕೆಯಾಗುವುದಿಲ್ಲ. ಏಕೆಂದರೆ, ವಿಧಾನಸೌಧಕ್ಕೆ ಮೂರು ಗೋಡೆಗಳಿವೆ. ಒಂದು ಮುಭಾಗದ ಕಲ್ಲಿನ ಗೋಡೆ, ಇನ್ನೊಂದು ಕೊಠಡಿಯ ಹಿಂಭಾಗದ ಗೋಡೆ ಮತ್ತು ಮೂರನೆಯದ್ದು ಕೊಠಡಿಯ ಹಿಂಭಾಗದ ಗೋಡೆ. ಈ ಮೂರು ಗೋಡೆಗಳನ್ನು ಒಡೆಯುವುದು ತಪ್ಪಾಗುತ್ತದೆ. ಆದರೆ, ನಾನು ಒಡೆಸುತ್ತಿರುವುದು ಕೊಠಡಿಗಳನ್ನು ವಿಭಾಗ ಮಾಡಲು ನಿರ್ಮಿಸಿರುವ ನಾಲ್ಕೂವರೆ ಇಂಚಿನ ಗೋಡೆ. ಹೀಗಾಗಿ ಇದು ತಪ್ಪಾಗುವುದಿಲ್ಲ ಎಂದರು.
ಕೆಂಗಲ್ ಹನುಮಂತಯ್ಯ ವಿದಾನಸೌಧ ಕಟ್ಟಿದಾಗ ನಾಲ್ಕಾರು ಮಂತ್ರಿಗಳು ಮಾತ್ರ ಇದ್ದರು. ಈಗ ಮಂತ್ರಿಗಳ ಸಂಖ್ಯೆ ಹೆಚ್ಚಾಗಿದೆ. ಅವರನ್ನು ನೋಡಲು ಬರುವವರ ಸಂಖ್ಯೆಯೂ ಹೆಚ್ಚಾಗಿದೆ. ಕಾಲ ಬದಲಾದಂತೆ ಆಗುವ ಬದಲಾವಣೆಗಳಿಗೆ ನಾವು ಹೊಂದಿಕೊಳ್ಳಬೇಕು ಎಂದು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡರು.
ಯಾವುದೇ ಹೊಸ ಸರ್ಕಾರ ಬಂದು ಹೊಸ ಮಂತ್ರಿಗಳು ಅಧಿಕಾರ ಸ್ವೀಕರಿಸಿದಾಗ ಹಿಂದೆ ಸಚಿವರು ಇದ್ದ ಕೊಠಡಿಗಳನ್ನು ನವೀಕರಣ ಮಾಡಿ ಹೊಸ ಪೀಠೋಪಕರಣಗಳನ್ನು ಅಳವಡಿಸುತ್ತಾರೆ. ಗೋಡೆಗೆ ಬಣ್ಣ ಹೊಡೆಯುತ್ತಾರೆ. ಆದರೆ, ಅಂತಹ ಯಾವುದೇ ನವೀಕರಣ ಮಾಡದೆ ಹಿಂದೆ ಇದ್ದ ಸಚಿವರು ಬಳಸಿದ ಪೀಠೋಪಕರಣಗಳನ್ನೇ ಬಳಸಿದ ಏಕೈಕ ಸಚಿವ ನಾನು ಎಂದು ಹೇಳಿದರು. ಹಾಗಿದ್ದರೆ ಈಗೇಕೆ ಜನರ ದುಡ್ಡುಹಾಳು ಮಾಡಿ ಕೊಠಡಿ ನವೀಕರಿಸುತ್ತೀರಿ? ಗೋಡೆ ಏಕೆ ಒಡೆಸುತ್ತೀರಿ ಎಂದು ಪ್ರಶ್ನಿಸಿದಾಗ ಇದೆಲ್ಲವೂ ಜನರಿಗಾಗಿ ಮತ್ತು ಆಡಳಿತ ನಿರ್ವಹಣೆಗಾಗಿ ಎಂದು ಪ್ರತಿಕ್ರಿಯಿಸಿದರು.
ಈಗೇನಿದ್ದರೂ ಆದೇಶ ನೀಡುವ ಕಾಲ: ವಿಧಾನಸೌಧದಲ್ಲಿ ತಾವು ಕೇಳಿದ ಕೊಠಡಿ ನೀಡದಿದ್ದರೆ ಸಚಿವ ಆಂಜನೇಯ ಧರಣಿ ಮಾಡುತ್ತಾರಂತೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಆದರೆ, ಧರಣಿ ಮಾಡುವ ಕಾಲ ಹೋಯಿತು. ಈಗೇನಿದ್ದರೂ ಆದೇಶ ನೀಡು, ಆಜ್ಞೆ ಮಾಡುವ ಸ್ಥಾನದಲ್ಲಿ ನಾನಿದ್ದೇನೆ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಹೇಳಿದ್ದಾರೆ. 40 ವರ್ಷ ಧರಣಿ, ಹೋರಾಟ ಮಾಡಿ ಬಂದಿದ್ದೇನೆ. ಈಗ ಸಚಿವನಾಗಿದ್ದೇನೆ. ಹೀಗಿರುವಾಗ ಧರಣಿ ಮಾಡುವ ಪರಿಸ್ಥಿತಿ ನನಗೇಕೆ? ಸಂವಿಧಾನಾತ್ಮಕವಾಗಿ ನನಗಿರುವ ಅಧಿಕಾರ ಬಳಸಿಕೊಂಡು ಆದೇಶ ಮಾಡುತ್ತೇನೆ ಎಂದು ತಿಳಿಸಿದರು.
ಕೆಂಗಲ್ ಹನುಮಂತಯ್ಯ ವಿಧಾನಸೌಧ ಕಟ್ಟಿದಾಗ ನಾಲ್ಕಾರು ಮಂತ್ರಿಗಳು ಮಾತ್ರ ಇದ್ದರು. ಈಗ ಸಂಖ್ಯೆ ಹೆಚ್ಚಾಗಿದೆ. ಅವರನ್ನು ನೋಡಲು ಬರುವವರ ಸಂಖ್ಯೆಯೂ ಹೆಚ್ಚಾಗಿದೆ. ಕಾಲ ಬದಲಾದಂತೆ ನಾವು ಹೊಂದಿಕೊಳ್ಳಬೇಕು
ಎಚ್.ಆಂಜನೇಯ
ಸಚಿವ
ಗೋಡೆ ಹಿಂದಿನ ವಿವಾದ
ಈ ಹಿಂದೆ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಅವರ ರಾಜಕೀಯ ಕಾರ್ಯದರ್ಶಿ ಶಂಕರ ಪಾಟೀಲ್ ಮುನೇನಕೊಪ್ಪ ವಿಧಾನಸೌಧದ ತಮ್ಮ ಕೊಠಡಿ ನವೀಕರಣಕ್ಕಾಗಿ ಗೋಡೆ ಒಡೆದು ವಿವಾದಕ್ಕೊಳಗಾಗಿದ್ದರು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಅರಣ್ಯ ಸಚಿವ ರಮಾನಾಥ ರೈ ಕೂಡ ಇದೇ ರೀತಿ ಗೋಡೆ ಒಡೆದು ಸಾಕಷ್ಟು ವಿವಾದ ಸೃಷ್ಟಿಯಾಗಿತ್ತು.