ಬಿಜೆಪಿ ಶಾಸಕರ ಸಂಖ್ಯೆ 44ಕ್ಕೆ ಏರಿಕೆ ಪ್ರತಿಪಕ್ಷ ಸ್ಥಾನಕ್ಕೆ ಶೆಟ್ಟರ್ ಕೋರಿಕೆ ಸ್ಪೀಕರ್ ಮಾನ್ಯತೆಯೊಂದೇ ಬಾಕಿ
ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿಗೆ ಅಧಿಕೃತ ಪ್ರತಿಪಕ್ಷವಾಗಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಮಾನ್ಯತೆ...
ಕನ್ನಡಪ್ರಭ ವಾರ್ತೆ ಬೆಂಗಳೂರು ಜ.4
ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿಗೆ ಅಧಿಕೃತ ಪ್ರತಿಪಕ್ಷವಾಗಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಮಾನ್ಯತೆ ನೀಡುವುದೊಂದೇ ಬಾಕಿ.
ಕೆಜೆಪಿಯನ್ನು ಬಿಜೆಪಿ ಜತೆ ವಿಲೀನಗೊಳಿಸಿ ಆ ಪಕ್ಷದ ನಾಲ್ವರು ಶಾಸಕರು ಬಿಜೆಪಿ ಸೇರುತ್ತಿರುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸ್ಪೀಕರ್ಗೆ ಮನವಿ ಸಲ್ಲಿಸಿದ ಮಾರನೇ ದಿನ ಬಿಜೆಪಿಗೆ ಪ್ರತಿಪಕ್ಷದ ಮಾನ್ಯತೆ ನೀಡುವಂತೆ ಕೋರಿ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಕ್ಕು ಪ್ರತಿಪಾದಿಸಿದ್ದಾರೆ.
ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರನ್ನು ಶನಿವಾರ ಭೇಟಿ ಮಾಡಿ ಈ ಕುರಿತು ಪತ್ರ ಸಲ್ಲಿಸಿರುವ ಜಗದೀಶ್ ಶೆಟ್ಟರ್, ಕೆಜೆಪಿಯನ್ನು ಬಿಜೆಪಿ ಜತೆ ವಿಲೀನಗೊಳಿಸಲು ನಿರ್ಧರಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಾಲ್ವರು ಶಾಸಕರೊಂದಿಗೆ ತಮಗೆ ಪತ್ರ ನೀಡಿದ್ದಾರೆ. ಜತೆಗೆ ಅವರು ಬಿಜೆಪಿ ಸೇರುತ್ತಿರುವುದಾಗಿಯೂ ಹೇಳಿದ್ದಾರೆ. ಹೀಗಾಗಿ ಬಿಜೆಪಿ ವಿಧಾನಸಭೆಯಲ್ಲಿ 44 ಶಾಸಕರೊಂದಿಗೆ ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಪ್ರತಿಪಕ್ಷ ಸ್ಥಾನವನ್ನು ಬಿಜೆಪಿಗೆ ನೀಡಬೇಕು.
ಅದೇ ರೀತಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿರುವ ತಮ್ಮನ್ನು ಪ್ರತಿಪಕ್ಷದ ನಾಯಕರಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದರು. ಕೆಜೆಪಿಯ ಮೂರನೇ ಎರಡರಷ್ಟು ಶಾಸಕರು ಬಿಜೆಪಿಗೆ ಸೇರುತ್ತಿರುವುದರಿಂದ ಪಕ್ಷಾಂತರ ವಿರೋಧಿ ಕಾಯ್ದೆ ಅವರಿಗೆ ಅನ್ವಯವಾಗುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಕೆಜೆಪಿಯನ್ನು ಬಿಜೆಪಿ ಜತೆ ವಿಲೀನಗೊಳಿಸಲು ಸಮ್ಮತಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಅವರ ಪತ್ರವನ್ನೂ ಅವರು ಸ್ಪೀಕರ್ಗೆ ಸಲ್ಲಿಸಿದ್ದಾರೆ.
ಸಭಾಧ್ಯಕ್ಷರು ಪರಿಗಣಿಸಬೇಕು: ಸ್ಪೀಕರ್ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್, ಕೆಜೆಪಿಯನ್ನು ಬಿಜೆಪಿ ಜತೆ ವಿಲೀನಗೊಳಿಸಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಇತರೆ ಮೂವರು ಶಾಸಕರು ಬಿಜೆಪಿ ಸೇರಿದ್ದನ್ನು ಪಕ್ಷ ಒಪ್ಪಿರುವ ಬಗ್ಗೆ ಸ್ಪೀಕರ್ಗೆ ತಿಳಿಸಿ ಬಿಜೆಪಿಯನ್ನು ಪ್ರತಿಪಕ್ಷವಾಗಿ ಪರಿಗಣಿಸುವ ಬಗ್ಗೆ ಮನವಿ ಸಲ್ಲಿಸಲಾಗಿದೆ. ಮೂರನೇ ಎರಡರಷ್ಟು ಶಾಸಕರು ಬಿಜೆಪಿಗೆ ಬರುತ್ತಿರುವುದರಿಂದ ನಮ್ಮ ಬೇಡಿಕೆಯನ್ನು ಸ್ಪೀಕರ್ ಪರಿಗಣಿಸಬೇಕಾಗುತ್ತದೆ ಎಂದರು. ಪ್ರಸ್ತುತ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ನಾನಾಗಿರುವುದರಿಂದ ಪ್ರತಿಪಕ್ಷ ನಾಯಕನೂ ನಾನೇ ಆಗಿರುತ್ತೇನೆ ಎಂದು ತಿಳಿಸಿದರು.
ಕೆಜೆಪಿ ಸಂಸ್ಥಾಪಕ ಅಧ್ಯಕ್ಷರ ಆಕ್ಷೇಪ: ಈ ಮಧ್ಯೆ ಕೆಜೆಪಿಯನ್ನು ಬಿಜೆಪಿ ಜತೆ ವಿಲೀನಗೊಳಿಸುವ ನಿರ್ಧಾರಕ್ಕೆ ಮಾನ್ಯತೆ ನೀಡದಂತೆ ಕೋರಿ ಕೆಜೆಪಿ ಸಂಸ್ಥಾಪಕ ಅಧ್ಯಕ್ಷ ಪದ್ಮನಾಭ ಪ್ರಸನ್ನ ಕುಮಾರ್ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಮನವಿ ಸಲ್ಲಿಸಿದ್ದಾರೆ. ಕೆಜೆಪಿಯ ಅಧ್ಯಕ್ಷ ಸ್ಥಾನವನ್ನು ಯಡಿಯೂರಪ್ಪ ಅವರು ವಹಿಸಿಕೊಂಡಿರುವ ವಿಚಾರ ಪ್ರಶ್ನಿಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದೇನೆ. ಅದು ಇತ್ಯರ್ಥವಾಗುವವರೆಗೆ ವಿಲೀನಕ್ಕೆ ಮಾನ್ಯತೆ ನೀಡುವುದು ಸರಿಯಲ್ಲ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಸ್ಪೀಕರ್ ಕಾಗೋಡು ತಿಮ್ಮಪ್ಪ, ಕೆಜೆಪಿ ಸಂಸ್ಥಾಪಕ ಅಧ್ಯಕ್ಷರು ನನಗೆ ಮನವಿ ಸಲ್ಲಿಸಿದ್ದಾರೆ. ಆದರೆ, ವಿಲೀನ ಪ್ರಕ್ರಿಯೆ ನನ್ನ ವ್ಯಾಪ್ತಿಗೆ ಬರುವುದಿಲ್ಲ ಎಂದಿದ್ದಾರೆ.
ಕಾನೂನು ರೀತಿ ಕ್ರಮ
ವಿಲೀನ ಕುರಿತು ಬಿಜೆಪಿ ಮತ್ತು ಕೆಜೆಪಿಯಿಂದ ನನಗೆ ಪತ್ರ ಬಂದಿದೆ. ಅಲ್ಲದೆ, ಬಿಜೆಪಿಯನ್ನು ಅಧಿಕೃತ ಪ್ರತಿಪಕ್ಷವಾಗಿ ಪರಿಗಣಿಸುವಂತೆ ಕೋರಿಕೆಯೂ ಬಂದಿದೆ. ಈ ಎಲ್ಲಾ ಅಂಶಗಳ ಬಗ್ಗೆ ಪರಿಶೀಲಿಸಿ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇನೆ.
- ಕಾಗೋಡು ತಿಮ್ಮಪ್ಪ, ಸ್ಪೀಕರ್