ಬೆಳ್ಳಂಬೆಳಗ್ಗೆ ಗೋಡೆ ಒಡೆಸಿ ಹಾಕ್ಸಿದ್ರು ಸಚಿವ ಆಂಜನೇಯ
ಸಮಾಜಕಲ್ಯಾಣ ಸಚಿವ ಎಚ್. ಆಂಜನೇಯ ಹೇಳಿದಂತೆ ನಡೆದುಕೊಂಡಿದ್ದಾರೆ. ಭಾನುವಾರ ಬೆಳ್ಳಂಬೆಳಗ್ಗೆ...
ಬೆಂಗಳೂರು: ಸಮಾಜಕಲ್ಯಾಣ ಸಚಿವ ಎಚ್. ಆಂಜನೇಯ ಹೇಳಿದಂತೆ ನಡೆದುಕೊಂಡಿದ್ದಾರೆ. ಭಾನುವಾರ ಬೆಳ್ಳಂಬೆಳಗ್ಗೆ ವಿಧಾನಸೌಧದ ಗೋಡೆ ಒಡೆಸಿದ್ದಾರೆ.
ತಮ್ಮನ್ನು ನೋಡಲು ಬರುವವರಿಗೆ ಜಾಗವಿಲ್ಲ ಮತ್ತು ಆಡಳಿತದ ಕಾರಣ ನೀಡಿ ತಾವು ನೂತನವಾಗಿ ಸೇರಿಕೊಂಡ ವಿಧಾನಸೌಧದ ಮೂರನೇ ಮಹಡಿಯಲ್ಲಿರುವ 340 ಮತ್ತು 340ಎ ಮಧ್ಯೆ ಇದ್ದ ಗೋಡೆ ಒಡೆಸಿಹಾಕಿ ಕೊಠಡಿಯನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ.
ಪಾರಂಪರಿಕ ಕಟ್ಟಡ ವಿಧಾನಸೌಧದ ಗೋಡೆ ಒಡೆಯುವುದು ಸರಿಯಲ್ಲ ಎಂಬ ವಿರೋಧದ ನಡುವೆಯೂ ವಿಶಾಲವಾದ ಕೊಠಡಿ ಬೇಕು ಎಂಬ ಕಾರಣಕ್ಕೆ ಈ ಕೆಲಸ ಮಾಡಿರುವುದನ್ನು ಗಮನಿಸಿದರೆ ಗೋಡೆ ಒಡೆಯಲೆಂದೇ 340 ಸಂಖ್ಯೆಯ ಕೊಠಡಿ ಆಯ್ಕೆ ಮಾಡಿಕೊಂಡರೇ ಎನ್ನುವಂತಾಗಿದೆ. ಏಕೆಂದರೆ, ಆಂಜನೇಯ ಈ ಹಿಂದೆ ಇದ್ದ ಕೊಠಡಿ 346 ಈಗಿನದ್ದಕ್ಕಿಂತ ವಿಶಾಲವಾಗಿತ್ತು.
ಆದರೂ ಒಂದೂವರೆ ತಿಂಗಳ ಹಿಂದೆ ತಮಗೆ 340ನೇ ಕೊಠಡಿ ಬೇಕು ಎಂದು ಹೇಳಿ ಪಡೆದುಕೊಂಡಿದ್ದರು.
ಆದರೆ, ಡಿ.ಕೆ. ಶಿವಕುಮಾರ್ ಮಂತ್ರಿಯಾಗುವವರೆಗೆ ಆ ಕೊಠಡಿಯತ್ತ ಹೋಗಿರಲಿಲ್ಲ. ಯಾವತ್ತು ಶಿವಕುಮಾರ್ ಮಂತ್ರಿಯಾದರೋ, 340ನೇ ಕೊಠಡಿ ಅವರಿಗೆ ಮಂಜೂರಾಗುತ್ತದೆ ಎಂದು ಖಚಿತವಾಗುತ್ತಿದ್ದಂತೆ ಹೊಸ ಕೊಠಡಿ ಸೇರಿಕೊಂಡರು.
ಹೊಸ ಕೊಠಡಿ ಸೇರಿಕೊಳ್ಳುವಾಗಲೇ ಅವರಿಗೆ ತಾವು ಹೋಗುತ್ತಿರುವುದು ಸಣ್ಣ ಕೊಠಡಿ ಎಂಬುದು ಗೊತ್ತಿತ್ತು. ಹೀಗಾಗಿ ಅದರ ಗೋಡೆ ಕೆಡವಿ ಎರಡೂ ಕೊಠಡಿಗಳನ್ನು ಒಟ್ಟು ಸೇರಿಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರು.
ಅಷ್ಟೇ ಅಲ್ಲ, ಸಚಿವ ಆಂಜನೇಯ ಅವರಿಗೆ ದೊಡ್ಡ ಕೊಠಡಿ ಬೇಕೆಂದರೆ ವಿಕಾಸಸೌಧದಲ್ಲಿ ಸಾಕಷ್ಟು ಕೊಠಡಿಗಳಿದ್ದವು. ಅದನ್ನೇ ಸರಿಪಡಿಸಿಕೊಳ್ಳಬಹುದಿತ್ತು.
ಇನ್ನು ವಿಧಾನಸೌಧದಲ್ಲೇ ಇರಬೇಕು ಎಂಬುದು ಅವರ ಬಯಕೆಯಾಗಿದ್ದರೆ ಹಿಂದೆ ಇದ್ದ ಕೊಠಡಿಯಲ್ಲೇ ಉಳಿದುಕೊಳ್ಳಬಹುದಿತ್ತು. ಹೀಗಾಗಿ ಸಚಿವರು ಹೊಸ ಕೊಠಡಿಗೆ ಹೋಗಿರುವುದೇ ವಿಧಾನಸೌಧದ ಗೋಡೆ ಕೆಡವಲೆಂದು ಎಂಬ ಮಾತು ಕೇಳಿಬರುತ್ತಿದೆ.
ಬೆಳ್ಳಂಬೆಳಗ್ಗೆ ಗೋಡೆ ಒಡೆದರು: ವಿಧಾನಸೌಧದ ಗೋಡೆ ಒಡೆಸುತ್ತೇನೆ. ಇನ್ನು 15 ದಿನ ಕಳೆದು ನೋಡಿ ನನ್ನ ಕೊಠಡಿ ಹೇಗಿರುತ್ತದೆ ಎಂದು ಶನಿವಾರ ಸಂಜೆ ಘೋಷಣೆ ಮಾಡಿದ್ದ ಆಂಜನೇಯ ಅವರು ಭಾನುವಾರ ಬೆಳ್ಳಂಬೆಳಗ್ಗೆ ಕೊಠಡಿ ಗೋಡೆ ಒಡೆಸಿದ್ದರು.
ಅಷ್ಟೇ ಅಲ್ಲ, ಲಾರಿಗಳ ಮೂಲಕ ಅಲ್ಲಿನ ಮಣ್ಣನ್ನು ಬೇರೆಡೆ ಸಾಗಿಸಲಾಗಿತ್ತು. ಅಧಿಕಾರಿಗಳು, ಕಾರ್ಮಿಕರೊಂದಿಗೆ ಸಚಿವರ ಆಪ್ತರೇ ಮುಂದೆ ನಿಂತು ಈ ಎಲ್ಲಾ ಕೆಲಸಗಳನ್ನು ಪೂರೈಸಿದ್ದರು.
ಈ ಮಾಹಿತಿ ತಿಳಿಯುತ್ತಿದ್ದಂತೆ ಮಾಧ್ಯಮ ಪ್ರತಿನಿಧಿಗಳು, ಛಾಯಾಚಿತ್ರಕಾರರು ವಿಧಾನಸೌಧದ ಬಳಿ ಬರುತ್ತಿದ್ದಂತೆ ಅವರಿಗೆ ಒಳಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಭಾನುವಾರ ವಿಧಾನಸೌಧದಲ್ಲೇನು ಕೆಲಸ ಎಂದು ಗೇಟಿನ ಬಳಿಯೇ ಅವರನ್ನು ವಾಪಸ್ ಕಳುಹಿಸಲಾಗುತ್ತಿತ್ತು.