ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮಂತ್ರಿ ಸ್ಥಾನಕ್ಕೆ ದಿಗ್ವಿಜಯಗೆ ದುಂಬಾಲು

ಸಂಪುಟ ವಿಸ್ತರಣೆ ವೇಳೆ ಅವಕಾಶ ಸಿಗದ ಸಚಿವ ಸ್ಥಾನದ ಆಕಾಂಕ್ಷಿಗಳು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು...

Mainashree
Updated On : 5 Jan 2014, 10:30 am

ಕನ್ನಡಪ್ರಭವಾರ್ತೆ  ಬೆಂಗಳೂರು   ಜ. 5
ಸಂಪುಟ ವಿಸ್ತರಣೆ ವೇಳೆ ಅವಕಾಶ ಸಿಗದ ಸಚಿವ ಸ್ಥಾನದ ಆಕಾಂಕ್ಷಿಗಳು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದಲ್ಲಿ ಪಕ್ಷದ ಉಸ್ತುವಾರಿ ವಹಿಸಿಕೊಂಡಿರುವ ದಿಗ್ವಿಜಯ್ ಸಿಂಗ್ ಅವರನ್ನು ಭೇಟಿಯಾಗಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಸೋಮವಾರ ಸಮನ್ವಯ ಸಮಿತಿ ಸಭೆ ನಡೆಯುವ ಹಿನ್ನೆಲೆಯಲ್ಲಿ ಒಂದು ದಿನ ಮುಂಚಿತವಾಗಿ ಬೆಂಗಳೂರಿಗೆ ಬಂದಿರುವ ದಿಗ್ವಿಜಯ್‌ಸಿಂಗ್ ಅತೃಪ್ತರಲ್ಲಿ ಉಂಟಾಗಿರುವ ಅಸಮಾಧಾನ ನಿವಾರಣೆ ಮಾಡುವ ಕೆಲಸ ಮಾಡಿದರು. ದಿಗ್ವಿಜಯ್ ಸಿಂಗ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ ಉತ್ತರ ಕರ್ನಾಟಕ ಭಾಗದ 8 ಶಾಸಕರು, ಸಚಿವ ಸ್ಥಾನ ನೀಡದೆ ತಮ್ಮ ಹಿರಿತನವನ್ನು ಕಡೆಗಣಿಸಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ.
ಮಾಲೀಕಯ್ಯ ಗುತ್ತೇದಾರ್, ಕೆ.ಬಿ.ಕೋಳಿವಾಡ, ಸಿ.ಎಸ್.ನಾಡಗೌಡ, ಬಸವರಾಜ ರಾಯರೆಡ್ಡಿ, ಡಾ. ಮಾಲಕರೆಡ್ಡಿ, ಸಿದ್ದುನ್ಯಾಮೇಗೌಡ ಸೇರಿ 8 ಶಾಸಕರು ದಿಗ್ವಿಜಯ್ ಸಿಂಗ್‌ಗೆ ದೂರು ನೀಡಲು ನಿರ್ಧರಿಸಿದ್ದರು.  ಪ್ರತಿಯೊಬ್ಬ ಶಾಸಕರನ್ನು ಪ್ರತ್ಯೇಕವಾಗಿ ಕರೆಯಿಸಿಕೊಂಡ ದಿಗ್ವಿಜಯ್ ಕೋಪ ಶಮನಕ್ಕೆ ಯತ್ನಿಸಿದರು. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಡಾ.ಚಲ್ಲಕುಮಾರ್ ಹಾಜರಿದ್ದರು.
ಖರ್ಗೆ ವಿರುದ್ಧ ಕೋಪ : ಸಂಪುಟ ಸೇರದಿರುವುದಕ್ಕೆ ಕೇಂದ್ರ ಸಚಿವ ಖರ್ಗೆ  ಕಾರಣವೆಂದು ಮಾಲೀಕಯ್ಯ ಗುತ್ತೇದಾರ್, ಇನ್ನಿಬ್ಬರು ಶಾಸಕರು ದಿಗ್ವಿಜಯ್ ಸಿಂಗ್ ಎದುರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.   
ಸಂಪುಟದಲ್ಲಿ ಪ್ರಾದೇಶಿಕ ಸಮತೋಲನ ಕಾಯ್ದುಕೊಂಡಿಲ್ಲ. ಜಾತಿವಾರು ಹಾಗೂ ಜಿಲ್ಲಾವಾರು ಪ್ರಾತಿನಿಧ್ಯ ಸಮರ್ಪಕವಾಗಿಲ್ಲ. ದೆಹಲಿಗೆ ಹೋಗಿ ಲಾಬಿ ನಡೆಸಿದರೆ ಯಾರು ಬೇಕಾದರೂ ಸಂಪುಟಕ್ಕೆ ಸೇರಬಹುದು ಎಂಬ ಸ್ಥಿತಿ ನಿರ್ಮಾಣವಾಗಿದೆ. ಪಕ್ಷಕ್ಕೆ ರಾಜ್ಯದಲ್ಲಿ ಘನತೆ ಸಿಕ್ಕಿರುವುದು ನಮ್ಮಂತವರಿಂದಲೇ ಹೊರತು ದೆಹಲಿ ನಾಯಕರ ಮೇಲೆ ಒತ್ತಡ ತರುವವರಿಂದಲ್ಲ ಎಂದು ಕಿಡಿಕಾರಿದ್ದಾರೆ. ಎಲ್ಲ ಶಾಸಕರ ದೂರುಗಳನ್ನು ತಾಳ್ಮೆಯಿಂದ ಆಲಿಸಿದ ದಿಗ್ವಿಜಯ್ ಸಿಂಗ್, ಲೋಕಸಭಾ ಚುನಾವಣೆ ಹೊಸ್ತಿಲಿನಲ್ಲಿ ಪಕ್ಷಕ್ಕೆ ಹಾನಿ ಮಾಡಬಾರದು. ಬಹಿರಂಗವಾಗಿ ಅಸಮಾಧಾನ ಹೊರ ಹಾಕುವುದರಿಂದ ಸಾರ್ವಜನಿಕ ವಲಯದಲ್ಲಿ ಕೆಟ್ಟ ಹೆಸರು ಬರುತ್ತದೆ. ಶೀಘ್ರದಲ್ಲೇ ತಾವು ಎಲ್ಲವನ್ನೂ ಸರಿ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಚುನಾವಣೆಗೆ ಮುನ್ನ ಸಂಪುಟಕ್ಕೆ : ದಿಗ್ವಿಜಯ್ ಸಿಂಗ್ ಭೇಟಿ ನಂತರ ಸುದ್ದಿಗಾರರ ಜತೆ ಮಾತನಾಡಿದ ಶಾಸಕ ಕೆ.ಬಿ. ಕೋಳಿವಾಡ, ನನ್ನ ಭಾವನೆಗಳನ್ನು ವ್ಯಕ್ತಪಡಿಸಿದ್ದೇನೆ. ಎಲ್ಲ ಬೆಳವಣಿಗೆಯನ್ನು ತಾಳ್ಮೆಯಿಂದ ಅವರು ಆಲಿಸಿದ್ದಾರೆ. ಲೋಕಸಭಾ ಚುನಾವಣೆಗೆ ಮುನ್ನ ನನ್ನನ್ನು ಸಂಪುಟಕ್ಕೆ ಸೇರಿಸಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಅಸಮರ್ಥರನ್ನು ಕಿತ್ತು ಹಾಕಿ : ಸುದ್ದಿಗಾರರ ಜತೆ ಮಾತನಾಡಿದ ಶಾಸಕ ಮಾಲೀಕಯ್ಯ ಗುತ್ತೇದಾರ್, ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರಿಗೆ ಸ್ವಯಂ ಇಚ್ಛೆಯಿಂದ ಯಾರನ್ನು ಬೇಕೋ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಕಿವುಡರು, ಮೂಗರು, ಎದ್ದು ನಿಲ್ಲಲು ಸಾಧ್ಯವಾಗದವರು, ಸರ್ಕಾರದ ನಿಲುವನ್ನು ಸಮರ್ಥಿಸಿಕೊಳ್ಳದ ಅಸಮರ್ಥರು ಮಂತ್ರಿಗಳಾಗಿದ್ದಾರೆ. ಇವರೆಲ್ಲರನ್ನೂ ಸಂಪುಟದಿಂದ ಕೈ ಬಿಟ್ಟು ನಿರಂತರವಾಗಿ ಗೆಲ್ಲುತ್ತಿರುವ ನಮ್ಮಂಥವರನ್ನು ಮಂತ್ರಿಗಳನ್ನಾಗಿ ಮಾಡಬೇಕು. ಈ ಬಗ್ಗೆ ದಿಗ್ವಿಜಯ್ ಸಿಂಗ್ ಅವರ ಬಳಿ ದೂರು ನೀಡುತ್ತೇನೆ ಎಂದು ಹೇಳಿದರು.
ಸಂಪುಟ ವಿಸ್ತರಣೆ ಥ್ಯಾಂಕ್‌ಲೆಸ್ ಜಾಬ್ ಎಂದ ದಿಗ್ವಿಜಯ್: ಸಚಿವ ಸಂಪುಟ ವಿಸ್ತರಣೆ ಎಂಬುದು  ಥ್ಯಾಂಕ್‌ಲೆಸ್ ಜಾಬ್...! ರಾಜ್ಯ ಕಾಂಗ್ರೆಸ್ ಉಸ್ತುವಾರಿ ವಹಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರೇ ಈ ಹೇಳಿಕೆ ನೀಡುವ ಮೂಲಕ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಹೈಕಮಾಂಡ್ ಎದುರಿಸುತ್ತಿರುವ ಸಂಕಟವನ್ನು ಬಯಲುಗೊಳಿಸಿದ್ದಾರೆ. ಕುಮಾರಕೃಪಾ ಅತಿಥಿಗೃಹದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಅತ್ಯಂತ ಸವಾಲಿನ ಕೆಲಸ. ಇದರಿಂದ ಹಿರಿಯ ಶಾಸಕರಿಗೆ ಬೇಸರವಾಗಿರುವುದು ನನ್ನ ಗಮನಕ್ಕೆ ಬಂದಿದೆ. ಪ್ರತಿಯೊಬ್ಬರನ್ನೂ ಕರೆದು ಮಾತನಾಡಿ ಮನವೊಲಿಸುತ್ತೇನೆ ಎಂದು ಹೇಳಿದರು.

ನಿಲೇಕಣಿ ಭೇಟಿ
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಬಯಸಿರುವ ವಿಶಿಷ್ಟ ಗುರುತಿನ ಪತ್ರ ಪ್ರಾಧಿಕಾರದ ಅಧ್ಯಕ್ಷ ನಂದನ್ ನಿಲೇಕಣಿ ಅವರು ದಿಗ್ವಿಜಯ್ ಸಿಂಗ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಚುನಾವಣೆ ಸ್ಪರ್ಧೆ ಹಿನ್ನೆಲೆಯಲ್ಲಿ ಈ ಭೇಟಿ ನಡೆದಿದೆ. ಈ ಸಂದರ್ಭದಲ್ಲಿ ನಡೆದ ಚರ್ಚೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಭಾಗವಹಿಸಿದ್ದರು.
ಖಾಸಗಿ ಭೇಟಿ : ದಿಗ್ವಿಜಯ್ ಸಿಂಗ್ ಬೆಂಗಳೂರಿನಲ್ಲಿ ಕೆಲ ಖಾಸಗಿ ವ್ಯಕ್ತಿಗಳನ್ನು ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಕುಮಾರಕೃಪಾದಲ್ಲಿ ವಾಸ್ತವ್ಯ ಹೂಡಿರುವ ಅವರು ರಾಜ್ಯ ನಾಯಕರ ಜತೆ ಚರ್ಚೆ ನಡೆಸುವುದಕ್ಕೆ ಮುನ್ನ ಕೆಲ ಖಾಸಗಿ ವ್ಯಕ್ತಿಗಳನ್ನು ಭೇಟಿ ಮಾಡಿದ್ದಾರೆ. ಆ ಸಂದರ್ಭದಲ್ಲಿ ರಾಜ್ಯದ ಯಾವುದೇ ನಾಯಕ ತಮ್ಮ ಜತೆ ಬರುವುದು ಬೇಡ ಎಂದು ಅವರು ಸೂಚನೆ ನೀಡಿದ್ದರು.

ಇನ್ನೊಮ್ಮೆ ಸಂಪುಟ ವಿಸ್ತರಣೆ
ಲೋಕಸಭಾ ಚುನಾವಣೆಗೆ ಮುನ್ನ ಇನ್ನೊಂದು ಸುತ್ತಿನಲ್ಲಿ ಸಂಪುಟ ವಿಸ್ತರಣೆ ಆಗುವ ಬಗ್ಗೆ  ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಸುಳಿವು ನೀಡಿದ್ದಾರೆ. ಸದ್ಯಕ್ಕೆ ಖಾಲಿ ಇರುವ ಮೂರು ಸಚಿವ ಸ್ಥಾನಗಳನ್ನು ಶಿವರಾತ್ರಿ ಹಬ್ಬದ ವೇಳೆಗೆ ಭರ್ತಿ ಮಾಡಲಾಗುವುದು. ಇದರ ಜತೆಗೆ ಯೋಜನಾ ಆಯೋಗದ ಉಪಾಧ್ಯಕ್ಷರು, ದೆಹಲಿ ಪ್ರತಿನಿಧಿ, ಮುಖ್ಯಮಂತ್ರಿಗಳ ರಾಜಕೀಯ ಹಾಗೂ ಸಂಸದೀಯ ಕಾರ್ಯದರ್ಶಿ ಸ್ಥಾನಗಳಿಗೂ ಅರ್ಹರನ್ನು ನೇಮಕ ಮಾಡಬೇಕು. ಇದರಿಂದ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹೆಚ್ಚು ಅನುಕೂಲವಾಗುತ್ತದೆ ಎಂಬ ಸಂದೇಶವನ್ನು ಪಕ್ಷದ ವರಿಷ್ಠರಿಗೆ ರವಾನಿಸುವುದಾಗಿ ತಮ್ಮನ್ನು ಭೇಟಿಯಾದ ಶಾಸಕರಿಗೆ ದಿಗ್ವಿಜಯ್‌ಸಿಂಗ್ ಭರವಸೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement