ಇವರಿಗೆ 'ಪಶು'ಪತಿಯೇ ಗತಿ
ಬೆಂಗಳೂರು: ಪದವಿಯೇನೋ ಪೂರೈಸಿಯಾಗಿದೆ. ಆದರೆ, ಪ್ರಮಾಣಪತ್ರವಿಲ್ಲ, ಸರ್ಕಾರದ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಅವಕಾಶವೂ ಇಲ್ಲ!
ಇದು ಶಿವಮೊಗ್ಗ ಹಾಗೂ ಹಾಸನ ಸರ್ಕಾರಿ ಪಶುವೈದ್ಯಕೀಯ ವಿಶ್ವವಿದ್ಯಾನಿಲಯಗಳಿಂದ ಪದವಿ ಪಡೆದು ಹೊರಬಂದ ವಿದ್ಯಾರ್ಥಿಗಳ ಪರಿಸ್ಥಿತಿ.
ಪದವಿಯನ್ನೇನೋ ಪೂರೈಸಿದ್ದಾಗಿದೆ. ಆದರೆ, ಇವರು ಯಾವುದೇ ಸರ್ಕಾರಿ ಹುದ್ದೆಗಳಿಗೆ ಅರ್ಹರಾಗಿಲ್ಲ. ಏಕೆಂದರೆ, ಇವರು ವಿದ್ಯಾಭ್ಯಾಸ ಮಾಡಿರುವ ಕಾಲೇಜಿಗೆ ಮಾನ್ಯತೆಯೇ ಇಲ್ಲ. ಆದ್ದರಿಂದ ಇವರನ್ನು ನೋಂದಾಯಿಸಿಕೊಳ್ಳಲು ರಾಜ್ಯ ಪಶುವೈದ್ಯಕೀಯ ಪರಿಷತ್ ಸಿದ್ಧವಿಲ್ಲ. ಅಷ್ಟೇ ಅಲ್ಲ, ಇತ್ತೀಚೆಗೆ ಬಿಡುಗಡೆಯಾಗಿರುವ ಸರ್ಕಾರಿ ಹುದ್ದೆಗಳ ಆಯ್ಕೆ ಪಟ್ಟಿಯಲ್ಲಿ ಈ ಎರಡು ವಿವಿಗಳ ವಿದ್ಯಾರ್ಥಿಗಳನ್ನು ಪರಿಗಣಿಸಿಯೇ ಇಲ್ಲ.
ಇದಕ್ಕೆ ಕಾರಣ, ಈ ಎರಡು ವಿವಿಗಳು ಕೇಂದ್ರ ಪಶುವೈದ್ಯಕೀಯ ಪರಿಷತ್ತಿನಿಂದ ಮಾನ್ಯತೆಯನ್ನೇ ಪಡೆದಿಲ್ಲ. ಕಳೆದ ಏಳು ವರ್ಷಗಳಿಂದ ಯಾವುದೇ ಮಾನ್ಯತೆಯಿಲ್ಲದೆ ಕಾಲೇಜುಗಳನ್ನು ನಡೆಸುತ್ತಿರುವ ವಿವಿಯ ಆಡಳಿತ ಮಂಡಳಿ ಅಲ್ಲಿನ ವಿದ್ಯಾರ್ಥಿಗಳನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದೆ.
ಎತ್ತಿಗೆ ಜ್ವರ, ಎಮ್ಮೆಗೆ ಬರೆ: ಯಾರದೋ ತಪ್ಪಿಗೆ ಯಾರದೋ ಶಿಕ್ಷೆ ನೀಡುವಂತೆ ಮಾನ್ಯತೆ ಪಡೆಯದ ವಿವಿಗಳಲ್ಲಿ ಶಿಕ್ಷಣ ಪಡೆದ ತಪ್ಪಿಗಾಗಿ ಅದರ ವಿದ್ಯಾರ್ಥಿಗಳು ನಿರುದ್ಯೋಗಿಗಳಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ. ಮಾನ್ಯತೆ ಪಡೆಯದ ವಿವಿಗಳಲ್ಲಿ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳದಂತೆ ಕೇಂದ್ರ ಪಶುವೈದ್ಯಕೀಯ ಪರಿಷತ್ತು ಈಗಾಗಲೇ ಎರಡು ಬಾರಿ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದರೂ, ಅದನ್ನು ಗಾಳಿಗೆ ತೂರಿ ಪ್ರತಿವರ್ಷ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲಾಗುತ್ತಿದೆ. ಆದರೆ, ಪದವಿ ಕೈಯ್ಯಲ್ಲಿ ಹಿಡಿದು ವಿವಿಯಿಂದ ಹೊರಬಂದ ನಂತರ ವಿವಿ ಮಾನ್ಯತೆ ಅವರ ಭವಿಷ್ಯಕ್ಕೆ ಅಡ್ಡಗಾಲಾಗುತ್ತಿದೆ ಎಂಬುದನ್ನು ಅರಿಯದ ವಿದ್ಯಾರ್ಥಿಗಳಿಗೆ ಕನಸು ಕಂಗಳಿಂದ ಈ ವಿವಿಗಳಿಗೆ ದಾಖಲಾಗುತ್ತಿದ್ದಾರೆ.
ಅವಕಾಶ ವಂಚಿತರು: ಪ್ರಾರಂಭದಲ್ಲಿ ರಾಜ್ಯದಲ್ಲಿ ಬೆಂಗಳೂರು ಹಾಗೂ ಬೀದರ್ನಲ್ಲಿ ಮಾತ್ರ ಸರ್ಕಾರಿ ಪಶುವೈದ್ಯಕೀಯ ವಿಶ್ವವಿದ್ಯಾನಿಲಯಗಳಿದ್ದವು. 2006ರಲ್ಲಿ ಅದನ್ನು ವಿಸ್ತರಿಸಿ ಶಿವಮೊಗ್ಗ ಹಾಗೂ ಹಾಸನದಲ್ಲಿ ಎರಡು ನೂತನ ವಿವಿಗಳನ್ನು ಸ್ಥಾಪಿಸಲಾಯಿತು. ಆದರೆ, ಇದಕ್ಕೆ ಕೇಂದ್ರ ಪಶುವೈದ್ಯಕೀಯ ಪರಿಷತ್ನ ಮಾನ್ಯತೆ ಪಡೆಯದೆಯೇ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲಾಯಿತು. ಈ ವಿವಿಗಳಿಂದ 2011 ಹಾಗೂ 2012ನೇ ಸಾಲಿನಲ್ಲಿ ಒಟ್ಟು 72 ಪದವೀಧರರು ಹೊರಬಂದಿದ್ದಾರೆ.
2012ರ ಡಿಸೆಂಬರ್ 12ರಂದು ಸರ್ಕಾರ 319 ಪಶು ಅಧಿಕಾರಿಗಳ ಹುದ್ದೆಗೆ ಅರ್ಜಿ ಆಹ್ವಾನಿಸಿತ್ತು. ಅದರಂತೆ, ಈ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಆದರೆ, ವಿವಿಯ ಮಾನ್ಯತೆಯ ವಿವಾದದ ನೆಪ ಹೇಳಿ ಇವರ ಅರ್ಜಿಗಳನ್ನು ಪರಿಶೀಲಿಸಲು ಸರ್ಕಾರ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಕಾನೂನು ಹೋರಾಟಕ್ಕೆ ಮುಂದಾದರು. ನಂತರ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಅರ್ಜಿಗಳನ್ನೇನೋ ಸರ್ಕಾರ ಪರಿಗಣಿಸಿತಾದರೂ, ಅಂತಿಮ ಆಯ್ಕೆ ಪಟ್ಟಿಯಲ್ಲಿ ಈ ಅಭ್ಯರ್ಥಿಗಳನ್ನು ಕೈಬಿಡಲಾಗಿದೆ.
ಈ ಆಯ್ಕೆ ಪ್ರಕ್ರಿಯೆಯಲ್ಲಿ ಸಾಕಷ್ಟು ಲಾಬಿ ನಡೆಯುತ್ತಿದೆ. ಕರ್ನಾಟಕ ಪಶು ವೈದ್ಯಕೀಯ ಪರಿಷತ್ತಿನ ಅಧಿಕಾರಿಯೊಬ್ಬರ ಪುತ್ರ ಬೆಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದು, ಆತನ ಅಂಕಗಳು ಕಡಿಮೆಯಿದೆ. ಆದ್ದರಿಂದ ಆತನಿಗೆ ಸೀಟು ದೊರಕಿಸುವ ಉದ್ದೇಶದಿಂದ ತಮ್ಮ ವಿವಿಯನ್ನು ಪರಿಗಣಿಸಲಾಗುತ್ತಿಲ್ಲ. ಇದಕ್ಕೆ ಮಾನ್ಯತೆಯ ಕಾರಣ ನೀಡಲಾಗುತ್ತಿದೆ. ವಿವಿ ತನ್ನ ನಿಯಮ ಪಾಲಿಸದೆ ಮಾನ್ಯತೆ ಪಡೆದಿಲ್ಲವಾದರೆ, ಅದಕ್ಕೆ ತಮಗೇಕೆ ಶಿಕ್ಷೆ ನೀಡಬೇಕು ಎಂದು ಅಭ್ಯರ್ಥಿಗಳು ಅಳಲು ತೋಡಿಕೊಳ್ಳುತ್ತಾರೆ.
ಕೋರ್ಟ್ ಆದೇಶಕ್ಕೂ ಕಿಮ್ಮತ್ತಿಲ್ಲ
ಪಶು ಅಧಿಕಾರಿಗಳ ಹುದ್ದೆಗೆ ತಾವು ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಿಲ್ಲ, ತಮ್ಮ ದಾಖಲೆಗಳನ್ನು ಪರಿಶೀಲಿಸಲು ನಿರಾಕರಿಸುತ್ತಿದೆ ಎಂದು ಆರೋಪಿಸಿ ಶಿವಮೊಗ್ಗ ಹಾಗೂ ಹಾಸನ ವಿವಿಯ ಅಭ್ಯರ್ಥಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ಅರ್ಜಿಗಳನ್ನು ಪರಿಗಣಿಸಿ, ದಾಖಲೆಗಳನ್ನು ಪರಿಶೀಲಿಸುವಂತೆ ಆದೇಶಿಸಿತ್ತು. ಆದರೆ, ಈ ಆದೇಶ ಪಾಲಿಸದ ಸರ್ಕಾರ ಕಳೆದ ಡಿ. 21ರಂದು ಬಿಡುಗಡೆಗೊಳಿಸಿರುವ ಅಂತಿಮ ಪಟ್ಟಿಯಲ್ಲಿ ಈ ಎರಡು ವಿವಿಯ ವಿದ್ಯಾರ್ಥಿಗಳ ಅರ್ಜಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಿಸಿದೆ.
ಸುಪ್ರೀತಾ ಹೆಬ್ಬಾರ್