ಉತ್ತರ ಕನ್ನಡ 'ಲೋಕ' ಸಮರದ ಟಿಕೆಟ್ ಯಾರ 'ಕೈ'ಗೆಟುಕಲಿದೆ?
-ಜಿಲ್ಲೆ ಅಭ್ಯರ್ಥಿಯನ್ನೇ ಚುನಾವಣಾ ಕಣಕ್ಕಿಳಿಸಲು ಕಾರ್ಯಕರ್ತರ ಒಲವು
ಕ.ಪ್ರ.ವಾರ್ತೆ ಕಾರವಾರ ಜ. 6
ಲೋಕಸಭೆ ಚುನಾವಣೆ ಗಾಳಿ ಬೀಸುತ್ತಿದೆ. ಉತ್ತರ ಕನ್ನಡ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ಗಾಗಿ ಪ್ರಶಾಂತ ದೇಶಪಾಂಡೆ, ನಿವೇದಿತ್ ಆಳ್ವ ಹಾಗೂ ಬಿ.ಕೆ.ಹರಿಪ್ರಸಾದ್- ಈ ಮೂವರಲ್ಲಿ ಭಾರಿ ಪೈಪೋಟಿ ಉಂಟಾಗಿದೆ. ಆದರೆ, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈಚೆಗೆ ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಪದಾಧಿಕಾರಿಗಳ ಸಭೆಯಲ್ಲಿ ಈ ಬಾರಿ ಹೊರಗಿನ ಅಭ್ಯರ್ಥಿಗೆ ಮಣೆ ಹಾಕದೆ, ಜಿಲ್ಲೆಯ ಅಭ್ಯರ್ಥಿಯನ್ನೇ ಚುನಾವಣಾ ಕಣಕ್ಕಿಳಿಸಬೇಕೆಂಬ ಬಗ್ಗೆ ಬಹುತೇಕ ಪದಾಧಿಕಾರಿಗಳು ಒಲವು ವ್ಯಕ್ತಪಡಿಸಿರುವುದರಿಂದ ಅಳೆದು ತೂಗಿ ಟಿಕೆಟ್ ನೀಡಬೇಕಾದ ಪರಿಸ್ಥಿತಿ ಕಾಂಗ್ರೆಸ್ ಹೈಕಮಾಂಡಿಗೆ ಎದುರಾಗಿದೆ.
ಮ್ಯಾಗಿ ಸೋಲು ಪಾಠವಾಗಬೇಕು: ಕಾಂಗ್ರೆಸ್ನ ಪ್ರಭಾವಿ ಮುಖಂಡರಾಗಿರುವ ಮಾರ್ಗರೆಟ್ ಆಳ್ವ ಜಿಲ್ಲೆಯಲ್ಲಿ ಸೋತಿದ್ದು ಹೇಗೆಂಬ ಬಗ್ಗೆ ವ್ಯಾಪಕ ಚರ್ಚೆ ನಡೆಸಿದ ಕಾಂಗ್ರೆಸ್ ಪದಾಧಿಕಾರಿಗಳು ಅವರ ಸೋಲಿನಿಂದ ನಾವು ಪಾಠ ಕಲಿಯಬೇಕು ಎಂದೂ ಅಭಿಪ್ರಾಯ ವ್ಯಕ್ತಪಡಿಸಿದ್ದು ಗಮನಾರ್ಹ. ಮಾರ್ಗರೆಟ್ ಆಳ್ವ ಮೂಲತಃ ಉ.ಕ. ಜಿಲ್ಲೆಯವರಲ್ಲ. ಹಿಂದೆ ಅವರಿಗೆ ಟಿಕೆಟ್ ನೀಡುವಾಗಲೂ ಪಕ್ಷದಲ್ಲಿ ಸಹಮತ ಇರಲಿಲ್ಲ. ಆದರೂ ಅವರಿಗೆ ಟಿಕೆಟ್ ಕೊಟ್ಟ ಪರಿಣಾಮ ಕಾಂಗ್ರೆಸ್ ಲೋಕಸಭಾ ಚುನಾವಣೆಗಳಲ್ಲಿ ಸೋಲು ಅನುಭವಿಸಬೇಕಾಯಿತು ಎಂಬ ಅಭಿಪ್ರಾಯ ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ.
ಹಿಂದೆಂದೂ ಇಲ್ಲದ ಬಿ.ಕೆ. ಹರಿಪ್ರಸಾದ್ ಹೆಸರು ಚುನಾವಣೆ ಎದುರಿಗಿರುವಾಗ ಕೇಳಿ ಬರಲಾರಂಭಿಸಿದೆ. ಹರಿಪ್ರಸಾದ್ ಜಿಲ್ಲೆಯ ಬಹುಸಂಖ್ಯಾತರಾದ ನಾಮಧಾರಿ ಸಮಾಜಕ್ಕೆ ಸೇರಿದವರು ಎನ್ನುವುದನ್ನು ಹೊರತು ಪಡಿಸಿದರೆ ಅವರಿಗೆ ಜಿಲ್ಲೆಯ ಆಳ, ಅಗಲ ಗೊತ್ತಿಲ್ಲ. ಜಿಲ್ಲೆಯಲ್ಲಿ ದುಡಿದವರೂ ಅಲ್ಲ. ಅವರಿಗೆ ಟಿಕೆಟ್ ನೀಡಿದಲ್ಲಿ ಮತ್ತೆ ಹಿಂದಿನಂತೆ ಪಕ್ಷದಲ್ಲಿ ಗೊಂದಲವಾಗಲಿರುವ ಹಿನ್ನೆಲೆಯಲ್ಲಿ ಹೊರಗಿನವರಿಗೆ ಮಣೆ ಹಾಕದೆ ಜಿಲ್ಲೆಯವರಿಗೆ ಆದ್ಯತೆ ನೀಡಬೇಕೆಂಬ ಅಭಿಪ್ರಾಯ ಪಕ್ಷದಲ್ಲಿ ಬಲವಾಗಿದೆ.
ಟಿಕೆಟ್ಗಾಗಿ ಕಸರತ್ತು ನಡೆಸುತ್ತಿರುವವರಲ್ಲಿ ನಿವೇದಿತ್ ಆಳ್ವ ಕೂಡ ಪ್ರಮುಖರು. ಈಗಾಗಲೆ ಅವರು ಜಿಲ್ಲೆಯಲ್ಲಿ ಪ್ರವಾಸ ಮಾಡಿ ಕಾಂಗ್ರೆಸ್ ಮುಖಂಡರನ್ನು ಭೇಟಿಯಾಗುತ್ತಿದ್ದಾರೆ. ಆದರೆ, ನಿವೇದಿತ್ ಕೂಡ ಈ ಜಿಲ್ಲೆಯವರಲ್ಲ ಎನ್ನುವುದು ಕಾಂಗ್ರೆಸ್ಸಿಗರ ಕೊರಗು. ಜತೆಗೆ ಈ ಹಿಂದಿನ ಚುನಾವಣೆಯಲ್ಲಿ ಇದು ತನ್ನ ಕೊನೆ ಚುನಾವಣೆ ಎಂದು ಮ್ಯಾಗಿ ಘೋಷಿಸಿದ್ದರು. ಈಗ ಪುತ್ರನ ಮೂಲಕ ಮ್ಯಾಗಿ ಪರೋಕ್ಷವಾಗಿ ಚುನಾವಣಾ ಕಣಕ್ಕಿಳಿಯುತ್ತಿದ್ದಾರೆ ಎಂಬ ವ್ಯಾಖ್ಯಾನವೂ ಕೇಳಿ ಬರುತ್ತಿದೆ.
ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ ಹಿಂದುತ್ವವನ್ನೇ ಪ್ರತಿಪಾದಿಸುತ್ತಿದ್ದಾರೆ. ಈ ಬಾರಿಯೂ ರಾಷ್ಟ್ರೀಯತೆ ಅಂದರೆ ಪರೋಕ್ಷವಾಗಿ ಹಿಂದುತ್ವವನ್ನೇ ಚುನಾವಣಾ ಅಸ್ತ್ರವನ್ನಾಗಿಸಿಕೊಂಡಿದ್ದಾರೆ. ಹೀಗಿರುವಾಗ ನಿವೇದಿತ್ ಆಳ್ವ ಅಭ್ಯರ್ಥಿಯಾದಲ್ಲಿ ಬಹುಸಂಖ್ಯಾತರ ಓಲೈಕೆ ಅನಂತಕುಮಾರ ಹೆಗಡೆ ಅವರಿಗೆ ಇನ್ನೂ ಸುಲಭವಾಗಲಿದೆ. ಇದರಿಂದ ಅನಂತಕುಮಾರ ಹೆಗಡೆ ಅವರ ಚುನಾವಣಾ ಓಟಕ್ಕೆ ಅನುಕೂಲ ಮಾಡಿಕೊಟ್ಟಂತಾಗಲಿದೆ ಎಂಬ ಅಭಿಪ್ರಾಯ ಪಕ್ಷದ ವಲಯದಿಂದ ವ್ಯಕ್ತವಾಗಿದೆ.
ಕಾಂಗ್ರೆಸ್ ಟಿಕೆಟ್ನ ಮತ್ತೊಬ್ಬ ಪ್ರಬಲ ಆಕಾಂಕ್ಷಿ ಪ್ರಶಾಂತ ದೇಶಪಾಂಡೆ ಅವರಿಗೆ ನಿವೇದಿತ್ ಆಳ್ವ ಹಾಗೂ ಬಿ.ಕೆ.ಹರಿಪ್ರಸಾದ್ ಅವರಿಗಿಂತ ಈ ಜಿಲ್ಲೆ ಚೆನ್ನಾಗಿ ಗೊತ್ತು. ಏಕೆಂದರೆ ಪ್ರಶಾಂತ ಮೂಲತಃ ಉ.ಕ ಜಿಲ್ಲೆಯವರು. ಅದರಲ್ಲೂ ತಂದೆಯ ರಾಜಕೀಯ ಪ್ರಭಾವ, ಅಪಾರ ಸಂಖ್ಯೆಯಲ್ಲಿರುವ ಬೆಂಬಲಿಗರು, ಕೈಗೊಂಡ ಜನಪರ ಯೋಜನೆಗಳು ಪ್ರಶಾಂತ ಅವರ ನೆರವಿಗೆ ಬರಲಿವೆ. ಇದಲ್ಲದೆ, ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಮೂಲಕ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರಶಾಂತ ದೇಶಪಾಂಡೆ ಜಿಲ್ಲೆಯ ಎಲ್ಲೆಡೆ ತಲುಪಿದ್ದಾರೆ. ಈ ಎಲ್ಲ ಕಾರಣಗಳಿಗಾಗಿ ಜಿಲ್ಲೆಯ ಕಾಂಗ್ರೆಸ್ನ ಬಹುತೇಕ ಪದಾಧಿಕಾರಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಪ್ರಶಾಂತ ದೇಶಪಾಂಡೆ ಅವರ ಪರ ಒಲವು ತೋರಿರುವುದು ಮಹತ್ವದ ಬೆಳವಣಿಗೆಯಾಗಿದೆ.
ಕಾಂಗ್ರೆಸ್ ಈ ಲೋಕಸಭೆ ಕ್ಷೇತ್ರದಲ್ಲಿ ಪ್ರಬಲವಾಗಿದೆ. ಹೀಗಾಗಿ ಈ ಬಾರಿ ಟಿಕೆಟ್ ನೀಡಿಕೆಯಲ್ಲಿ ಎಡವದೆ ಸೂಕ್ತ ಅಭ್ಯರ್ಥಿಗೆ ಟಿಕೆಟ್ ನೀಡಬೇಕು. ಆ ಮೂಲಕ ಗೆಲ್ಲುವ ಅವಕಾಶವನ್ನು ಉಜ್ವಲವಾಗಿಸಿಕೊಳ್ಳಬೇಕು ಎಂಬುದು ಪಕ್ಷದ ಅಭಿಪ್ರಾಯ.
-ವಸಂತಕುಮಾರ್ ಕತಗಾಲ