'ಕ್ಷೀರಭಾಗ್ಯ'ಕ್ಕೆ ರಾಷ್ಟ್ರೀಯ ಪ್ರಶಂಸೆ
ಕ.ಪ್ರ.ವಾರ್ತೆ ಬೆಂಗಳೂರು ಜ. 6
ರಾಜ್ಯ ಸರ್ಕಾರದ ಕ್ಷೀರಭಾಗ್ಯ ಯೋಜನೆ ರಾಷ್ಟ್ರಮಟದಲ್ಲಿ ಮತ್ತೆ ಪ್ರಶಂಸೆಗೆ ಒಳಗಾಗಿದ್ದು, ಇದೇ ಮಾದರಿಯನ್ನು ಅನುಷ್ಠಾನಕ್ಕೆ ತರಲು ಪಂಜಾಬ್ ಸರ್ಕಾರ ಆಸಕ್ತಿ ತೋರಿದೆ.
ಈ ಕುರಿತಂತೆ ರಾಜ್ಯಕ್ಕೆ ಒಂದು ನಿಯೋಗ ಕಳುಹಿಸಿ ಯೋಜನೆಯ ನಿರ್ವಹಣೆ ಕುರಿತು ಮಾಹಿತಿ ಪಡೆಯಲು ಪಂಜಾಬ್ ಸರ್ಕಾರದ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ನಿರ್ಧರಿಸಿದ್ದಾರೆ. ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ನಗರದಲ್ಲಿ ಸೋಮವಾರ ಆಯೋಜಿಸಿದ್ದ ಅಕ್ಷರ ದಾಸೋಹದ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಈ ಬೆಳವಣಿಗೆಯಾಗಿದೆ.
ಪೂರ್ವ ಪ್ರಾಥಮಿಕ ತರಗತಿಗಳಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದ ಜತೆಗೆ ಹಾಲು ನೀಡುತ್ತಿರುವ ಬಗ್ಗೆ ಕಾರ್ಯಾಗಾರದಲ್ಲಿ ರಾಜ್ಯ ಸರ್ಕಾರದ ಪರವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಹಾಗೂ ಕೆಎಂಎಫ್ ಅಧಿಕಾರಿಗಳು ವಿವರಿಸಿದರು.
ರಾಜ್ಯದ 1.03 ಕೋಟಿ ಮಕ್ಕಳಿಗೆ ಸುಮಾರು 412 ಕೋಟಿ ವೆಚ್ಚದಲ್ಲಿ ಯೋಜನೆ ಜಾರಿಗೆ ತರಲಾಗಿದೆ. ವಿದ್ಯಾರ್ಥಿಗಳ ಆರೋಗ್ಯ ವರ್ಧನೆಗೆ ಇದು ಸಹಕಾರಿಯಾಗಲಿದೆ. ಈ ಯೋಜನೆಗೆ ಕೇಂದ್ರ ಸರ್ಕಾರದ ಅಕ್ಷರ ದಾಸೋಹ ಅಥವಾ ಸರ್ವ ಶಿಕ್ಷಣ ಅಭಿಯಾನದ ಹಣ ಉಪಯೋಗಿಸುತ್ತಿಲ್ಲ. ವೆಚ್ಚವನ್ನು ಸಂಪೂರ್ಣವಾಗಿ ರಾಜ್ಯ ಸರ್ಕಾರವೇ ಭರಿಸುತ್ತಿದೆ ಎಂದು ಆಯುಕ್ತ ಮೊಹಮದ್ ಮೊಹಸೀನ್ ತಿಳಿಸಿದರು.
ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಅಕ್ಷರ ದಾಸೋಹ ಯೋಜನೆ ನಿರ್ದೇಶಕ ಗಯಾ ಪ್ರಸಾದ್ ಸೇರಿದಂತೆ ವಿವಿಧ ರಾಜ್ಯಗಳ ಅಕ್ಷರ ದಾಸೋಹ ಯೋಜನೆ ನಿರ್ದೇಶಕರು ಶ್ಲಾಘನೆ ವ್ಯಕ್ತಪಡಿಸಿದರು. ಹಾಲಿನ ಲಭ್ಯತೆ ಇರುವ ಇತರ ರಾಜ್ಯಗಳು ಈ ಯೋಜನೆಯತ್ತ ಗಮನ ನೀಡಬೇಕು. ವಿದ್ಯಾರ್ಥಿಗಳನ್ನು ಶಾಲೆಗೆ ಆಕರ್ಷಿಸುವಲ್ಲಿ ಇದು ಉತ್ತಮ ಪಾತ್ರ ನಿರ್ವಹಿಸಲಿದೆ ಎಂದು ಗಯಾ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.
ಸಾಮಾಜಿಕ ಲೆಕ್ಕ ಪರಿಶೋಧನೆ ಕಡ್ಡಾಯ
ಅಕ್ಷರ ದಾಸೋಹ ಯೋಜನೆ ಯಶಸ್ವಿಯಾಗಲು ಸಮುದಾಯದ ಪಾಲ್ಗೊಳ್ಳುವಿಕೆ ಹಾಗೂ ಸಾಮಾಜಿಕ ಲೆಕ್ಕ ಪರಿಶೋಧನೆ ಅನಿವಾರ್ಯವಾಗಿದೆ. ಆದರೆ ಈ ವಿಚಾರವು ಸಾಕಷ್ಟು ರಾಜ್ಯಗಳಲ್ಲಿ ನಡೆಯುತ್ತಿಲ್ಲ. ಇದಲ್ಲದೇ ಕೇಂದ್ರ ಸರ್ಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿ ಗ್ರಾಮೀಣ ಪ್ರದೇಶಗಳಲ್ಲಿಯೂ ಎನ್‌ಜಿಒಗಳಿಗೆ ಜವಾಬ್ದಾರಿ ನೀಡಲಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ನಿರ್ದೇಶಕ ಗಯಾ ಪ್ರಸಾದ್ ಅಸಮಧಾನ ವ್ಯಕ್ತಪಡಿಸಿದರು. ಅಕ್ಷರ ದಾಸೋಹ ಸೇರಿದಂತೆ ಯಾವುದೇ ಯೋಜನೆಗೆ ಕೇಂದ್ರ ಸರ್ಕಾರ ಅನುದಾನ ಬಿಡುಗಡೆಗೆ ವಿಳಂಬ ಮಾಡುತ್ತಿಲ್ಲ. ಆದರೆ ನಿಯಮಾವಳಿಗಳನ್ನು ಮೀರಿ ಕಾರ್ಯನಿರ್ವಹಿಸಿದ್ದರೆ ಅನುದಾನ ಬಿಡುಗಡೆಯಾಗಿರುವುದಿಲ್ಲ. ಕೆಲ ರಾಜ್ಯ ಸರ್ಕಾರಗಳು ಇದನ್ನು ಮುಚ್ಚಿಡುತ್ತವೆ. ಇದಲ್ಲದೇ ಎಂದಿನಂತೆ ಬಿಸಿಯೂಟ ಯೋಜನೆಗೆ ಪ್ರತಿವರ್ಷ ಶೇ.7.50ರಷ್ಟು ದರದಲ್ಲಿ ಏರಿಕೆ ಮಾಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು. ಕಳೆದ 2008ರೊಳಗೆ ಬಿಸಿಯೂಟ ಯೋಜನೆಗೆ ಪರಿಕರಗಳನ್ನು ನೀಡಲಾಗಿತ್ತು. ಇದನ್ನು ಬದಲಿಸಿ ಹೊಸತನ್ನು ನೀಡಲು ಪ್ರತಿ ಶಾಲೆಗೆ 5 ಸಾವಿರ ನೀಡಲಾಗುತ್ತಿದೆ. ಇದನ್ನು 15 ಸಾವಿರಕ್ಕೆ ಏರಿಸಲು ಚಿಂತಿಸಲಾಗಿದೆ. ಶೀಘ್ರದಲ್ಲಿಯೇ ಆದೇಶ ಹೊರಬೀಳಲಿದೆ ಎಂದು ಅವರು ಎಲ್ಲ ರಾಜ್ಯ ಸರ್ಕಾರಕ್ಕೆ ತಿಳಿಸಿದರು.