ಗ್ರಾಮೀಣ ಪರಿಶಿಷ್ಟರಿಗೆ ಯೋಜನೆ ಜಾರಿಯಲ್ಲಿ ಆರೋಗ್ಯ ಇಲಾಖೆ ವಿಫಲ
ಬೆಳಗಾವಿ: ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಜಾರಿಗೊಳಿಸಿರುವ ಯೋಜನೆಗಳನ್ನ್ನು ಗ್ರಾಮೀಣ ಜನರಿಗೆ ತಲುಪಿಸುವಲ್ಲಿ ಆರೋಗ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಕರ್ನಾಟಕ ವಿಧಾನ ಮಂಡಲದ ಅನುಸೂಚಿತ ಜಾತಿ ಹಾಗೂ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು. ಸೋಮವಾರ ಸುವರ್ಣ ವಿಧಾನಸೌಧದಲ್ಲಿ ಕರ್ನಾಟಕ ವಿಧಾನ ಮಂಡಲದ ಅನುಸೂಚಿತ ಜಾತಿ, ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಸಭೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, ಆರೋಗ್ಯ ಇಲಾಖೆಯ ವಿವಿಧ ಯೋಜನೆ ಮತ್ತು ವಿವಿಧ ವಿಭಾಗಗಳ ಪ್ರಗತಿಗಳನ್ನು ಪರಿಶೀಲಿಸಲಾಗಿದೆ. ಹಳ್ಳಿಗಳಲ್ಲಿ ಶೇ.30ರಷ್ಟಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನತೆಗೆ ದೊರೆಯಬೇಕಾದ ಸೌಲಭ್ಯಗಳು ಸರಿಯಾಗಿ ದೊರೆಯುತ್ತಿಲ್ಲ. ಸಿಬ್ಬಂದಿ ಲೋಪ, ಸಿಬ್ಬಂದಿ ಕೊರತೆ, ಭರ್ತಿಯಾಗದ ಬ್ಯಾಕ್ಲಾಗ್ ಹುದ್ದೆಗಳು, ಯುನಾನಿ, ಆಯುಷ್ ವಿಭಾಗಗಳು ಸೇರಿದಂತೆ ಆರೋಗ್ಯ ಇಲಾಖೆಯಲ್ಲಿ ಬಹಳಷ್ಟು ವೈಫಲ್ಯಗಳಿದ್ದು, ಅವುಗಳನ್ನು ಸರಿ ಮಾಡುವುದಕ್ಕಾಗಿ ಆರೋಗ್ಯ ಸಚಿವರಿಗೆ ವರದಿ ನೀಡಲಾಗುವುದು ಎಂದರು. ಗ್ರಾಮಾಂತರ ಪ್ರದೇಶದಲ್ಲಿ ಇನ್ನ್ನೂ ಹಳೆಯ ಕಾಲದ ಪದ್ಧತಿಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಅತ್ಯಾಧುನಿಕ ಉಪಕರಣ ಅಳವಡಿಕೆ ಮಾಡಬೇಕಿದೆ. ಎಸ್ಸಿ-ಎಸ್ಟಿ ಬಡ ಮಕ್ಕಳು ಪೌಷ್ಟಿಕ ಆಹಾರದ ಕೊರತೆಯಿಂದ ಬಳಲುತ್ತಿದ್ದು, ನೀಡಲಾಗುತ್ತಿರುವ ಆಹಾರವೂ ಸರಿಯಾಗಿ ದೊರೆಯುತ್ತಿಲ್ಲ ಎಂದು ಆರೋಪಿಸಿದರು.