ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸಾಹಿತ್ಯ ಜಾತ್ರೆಗೆ ಸವಿ ಸವಿ ಭೋಜನ

Mainashree
Updated On : 6 Jan 2014, 10:02 am

ಮಡಿಕೇರಿ: ಮಡಿಕೇರಿಯಲ್ಲಿ ಮಂಗಳವಾರದಿಂದ ನಡೆಯಲಿರುವ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳುವವರಿಗೆ ಕೊಡಗಿನ ಸಾಂಪ್ರದಾಯದೊಂದಿಗೆ ಉತ್ತರ ಕರ್ನಾಟಕದ ಸವಿರುಚಿ ಭೋಜನ ವ್ಯವಸ್ಥೆಯಾಗುತ್ತಿದೆ. ಕೊಡಗಿನ ಕಡುಂಬುಟ್ (ಅಕ್ಕಿಯಿಂದ ಮಾಡಲಾಗುವ ಕಡಬು) ಜತೆಗೆ ಜೋಳದ ರೊಟ್ಟಿಯೂ ಉಪಹಾರಕ್ಕೆ ದೊರಯುತ್ತದೆ. ಊಟಕ್ಕೆ ಗೋದಿ ಪಾಯಸ ಸಾಹಿತ್ಯಾಸಕ್ತರ ನಾಲಗೆಯಲ್ಲಿ ನೀರೂರಿಸುವಂತೆ ಸಿದ್ಧಗೊಳ್ಳುತ್ತಿದೆ.
ಮಡಿಕೇರಿಯ ಜಿಲ್ಲಾ ಪೊಲೀಸ್ ಮೈದಾನದ ಬೃಹತ್ ಶಾಮಿಯಾನದಲ್ಲಿ ಪ್ರತಿನಿಧಿಗಳಿಗೆ ಮತ್ತು ಸಾಮಾನ್ಯರಿಗೆಂದು ಎರಡು ವಿಭಾಗಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಭೋಜನಾಲಾಯಕ್ಕೆ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ, 1982ರಲ್ಲಿ ಮಡಿಕೇರಿಯಲ್ಲಿ ಜರುಗಿದ 54ನೇ ಸಮ್ಮೇಳನದ ಸಾರಥ್ಯ ವಹಿಸಿದ್ದ ಡಿ.ಜೆ.ಪದ್ಮನಾಭ ಹೆಸರಿಡಲಾಗಿದೆ.
 ಆಹಾರ ತಯಾರಿಕೆಗೆ ಅಗತ್ಯ ಪ್ರಮಾಣದಲ್ಲಿ ಅಕ್ಕಿ, ಗೋದಿ, ಜೋಳದ ಹಿಟ್ಟು, ಸಕ್ಕರೆ, ಕಾಫಿ ಮತ್ತು ಚಹಾ ಪುಡಿ ಸೇರಿದಂತೆ ವಿವಿಧ ಪಡಿತರ ವಸ್ತುಗಳನ್ನು ಪೊಲೀಸ್ ಮೈದಾನದ ತಾತ್ಕಾಲಿಕ ಗೋದಾಮಿನಲ್ಲಿ ಸಂಗ್ರಹಿಸಲಾಗಿದೆ. ಭಾನುವಾರ ರಾತ್ರಿಯಿಂದಲೇ ಹುಬ್ಬಳ್ಳಿ, ಧಾರವಾಡ, ತುಮಕೂರು ವ್ಯಾಪ್ತಿಯ 600ಕ್ಕೂ ಅಧಿಕ ಸಿಬ್ಬಂದಿ, 300 ಬಾಣಸಿಗರು ಸಮ್ಮೇಳನಕ್ಕೆ ನಿರೀಕ್ಷೆಯಿರುವ 50 ಸಾವಿರ ಮಂದಿಗೆ ಭೋಜನ, ಉಪಹಾರ ತಯಾರಿ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಗಣ್ಯರ ನೆರವು: ಸಾಹಿತ್ಯ ಪ್ರೇಮಿಗಳಿಗೆ ಉತ್ತಮ ಊಟೋಪಾಚಾರಕ್ಕಾಗಿ ಅನೇಕರು ನೆರವನ್ನೂ ನೀಡಿದ್ದಾರೆ. ಸಂಸದ ಎಚ್. ವಿಶ್ವನಾಥ್ 35 ಕ್ವಿಂಟಲ್ ಸಕ್ಕರೆ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ 130 ಕ್ವಿಂಟಲ್ ಸೋನಾ ಮಸೂರಿ ಅಕ್ಕಿ, ಬೆಳೆಗಾರ ವಿನೋದ್ ಶಿವಪ್ಪ 70 ಕೆ.ಜಿ. ಕಾಫಿಪುಡಿ ಮತ್ತು 1 ಕ್ವಿಂಟಲ್ ಚಹಾ ಪುಡಿ ನೀಡಿದ್ದಾರೆ. ಪುತ್ತೂರಿನ ಆಫೀಸರ್ಸ್ ಅಸೋಸಿಯೇಷನ್ ವತಿಯಿಂದ 3 ಸಾವಿರ ತೆಂಗಿನಕಾಯಿ ಮಡಿಕೇರಿ ತಲುಪಿದೆ.
 ಭೋಜನಾಲಯದಲ್ಲಿ ಬೃಹತ್ ಒಲೆಗಳಲ್ಲಿ ಹಗಲು, ರಾತ್ರಿಯೆನ್ನದೆ ಅಡುಗೆ ತಯಾರಿ ಸಾಗಿದೆ ಎಂದು ಸಮ್ಮೇಳನದ ಆಹಾರ ಸಮಿತಿ ಪ್ರಧಾನ ಸಂಚಾಲಕ ಎಂ.ಪಿ.ಕೇಶವ ಕಾಮತ್ 'ಕನ್ನಡಪ್ರಭ'ಕ್ಕೆ ತಿಳಿಸಿದರು.
100 ಕೌಂಟರ್: ಭೋಜನಾಲಾಯದಲ್ಲಿ ಜಿಲ್ಲೆಯ ವಿವಿಧ ಭಾಗಗಳ ಸುಮಾರು 1,700 ಸ್ವಯಂಸೇವಕರು 100 ಕೌಂಟರ್‌ಗಳಲ್ಲಿ ಊಟೋಪಾಚಾರದ ವಿತರಣೆಗೆ ಸಜ್ಜಾಗಿರುತ್ತಾರೆ ಎಂದು ತಿಳಿಸಿದ ಕೇಶವ ಕಾಮತ್, ಕೊಪ್ಪಳ ಮತ್ತು ಬಿಜಾಪುರದ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯಾಸಕ್ತರಿಗೆ ರುಚಿ, ಶುಚಿಯಾದ ಊಟೋಪಾಚಾರ ವ್ಯವಸ್ಥೆ ಮಾಡಿದ್ದ ಹುಬ್ಬಳ್ಳಿಯ ಶ್ರೀ ಬೈರು ಕ್ಯಾಟರರ್ಸ್‌ನ ಬಾಬು ಲಾಲ್, ಶಿವ ಪ್ರಕಾಶ್ ನೇತೃತ್ವದಲ್ಲಿಯೇ ಮಡಿಕೇರಿಯ ಸಮ್ಮೇಳನಕ್ಕೂ ಭೋಜನ ವ್ಯವಸ್ಥೆಯಾಗಿದೆ. ಸತತ 3ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಊಟೋಪಾಚಾರದ ವ್ಯವಸ್ಥೆ ಮಾಡಿದ ಹಿರಿಮೆ ಇವರದ್ದಾಗಿದೆ ಎಂದರು.
ಊಟೋಪಚಾರಕ್ಕೆ ಅಗತ್ಯ ಪ್ರಮಾಣದಲ್ಲಿ ಪಡಿತರಗಳನ್ನು ಆಹಾರ ಸಮಿತಿ ವತಿಯಿಂದ ನೀಡಲಾಗುತ್ತದೆ. ಇದಕ್ಕೆ ಸುಮಾರು 40-50 ಲಕ್ಷ ಅಂದಾಜಿಸಲಾಗಿದೆ.  ಅಡುಗೆ ತಯಾರಿಸಲು ಮತ್ತು ಅಗತ್ಯ ಪಾತ್ರೆ ಮತ್ತಿತರ ಸರಂಜಾಮುಗಳನ್ನು ಒದಗಿಸಲು ಹುಬ್ಬಳ್ಳಿಯ ಶ್ರೀ ಬೈರ ಕ್ಯಾಟರರ್ಸ್ಸ್‌ಗೆ 20 ಲಕ್ಷ ಗುತ್ತಿಗೆ ನೀಡಲಾಗಿದೆ ಎಂದು ಕೇಶವ ಕಾಮತ್ ಮಾಹಿತಿ ನೀಡಿದರು.  ಸೋಮವಾರ ರಾತ್ರಿಯಿಂದಲೇ ಸಮ್ಮೇಳನಕ್ಕೆ ಬಂದವರಿಗೆ ಊಟ ನೀಡಲಾಗುತ್ತಿದ್ದು, ನಾಲ್ಕು ರಾತ್ರಿ, ಮೂರು ದಿನಗಳ ಊಟೋಪಾಚಾರದ ತಯಾರಿಗೆ ಸಿದ್ಧತೆ ಪೂರ್ಣಗೊಂಡಿದೆ.  

-ಅನಿಲ್ ಎಚ್.ಟಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement