ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ನಾಡು, ನುಡಿಗೆ ಮಿಡಿದ 'ನಾಡಿ'

ದೀರ್ಘ ಹೋರಾಟದ ಮೂಲಕ ಪಡೆದ ನಾಡು ಇದು. ಈ ನಾಡು ಒಡೆದರೆ ನಾವು ದುರ್ಬಲರಾಗುತ್ತೇವೆ. ನಮ್ಮ ದನಿ ಉಡುಗಿ ಹೋಗುತ್ತದೆ...

Vishwanath S
Updated On : 8 Jan 2014, 12:39 pm

ಕ.ಪ್ರ. ವಾರ್ತೆ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಆವರಣ, ಜ.7
ದೀರ್ಘ ಹೋರಾಟದ ಮೂಲಕ ಪಡೆದ ನಾಡು ಇದು. ಈ ನಾಡು ಒಡೆದರೆ ನಾವು ದುರ್ಬಲರಾಗುತ್ತೇವೆ. ನಮ್ಮ ದನಿ ಉಡುಗಿ ಹೋಗುತ್ತದೆ. ಪ್ರತ್ಯೇಕ ರಾಜ್ಯ ಕೊಡಿ ಎಂದು ಯಂಕ ನಾಣಿ ಸೀನರೆಲ್ಲ ಕೇಳುವಂತಾಗಿದೆ. ಕನ್ನಡ ಮತ್ತು ಕರ್ನಾಟಕದ ಸಾರ್ವಭೌಮತೆಗೆ ಅಡ್ಡಿಯಾಗುವವರು ಯಾರೇ ಇರಲಿ ಅಂಥವರ ಕಿವಿ ಹಿಂಡಿ ಬುದ್ಧಿ ಕಲಿಸಬೇಕು ಎಂದು 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ನಾಡೋಜ ನಾ. ಡಿಸೋಜ ಹೇಳಿದ್ದಾರೆ.
ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಮೈದಾನದಲ್ಲಿ ನಿರ್ಮಿಸಲಾಗಿರುವ ಭಾರತೀಸುತ ವೇದಿಕೆಯಲ್ಲಿ ಮಂಗಳವಾರ ಸಾಹಿತ್ಯಾಭಿಮಾನಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಮೆಲು ನುಡಿಯ ಸಾಹಿತಿ ಎಂದೇ ಹೆಸರಾದ ನಾ. ಡಿಸೋಜ ಕನ್ನಡದ ಹಿತಾಸಕ್ತಿಯ ಸಂಬಂಧದಲ್ಲಿ ಮಾತನಾಡುವಾಗ ಯಾವ ಮುಲಾಜೂ ಇಟ್ಟುಕೊಳ್ಳದೆ ಸಂಬಂಧಪಟ್ಟವರನ್ನು ತರಾಟೆಗೆ ತೆಗೆದುಕೊಂಡರು.
ನಮ್ಮ ಶಾಲೆಗಳಲ್ಲಿ ಕನ್ನಡದ ವಾತಾವರಣ ಇಲ್ಲದಿರುವುದಕ್ಕೆ ನಮ್ಮ ಅಪ್ಪ, ಅಮ್ಮ ಕಾರಣ. ಎರಡನೇ ಕಾರಣ ನಮ್ಮ ಸರ್ಕಾರ. ಎಲ್ಲ ರಾಜ್ಯಗಳ ಸರ್ಕಾರಗಳೂ ತಮ್ಮ ರಾಜ್ಯದ ಭಾಷೆಯ ಹಿತ ಕಾಪಾಡುತ್ತ ಬಂದಿವೆ. ಆದರೆ ಕರ್ನಾಟಕ ಸರ್ಕಾರ ಕನ್ನಡ ಸರ್ಕಾರವಾಗಿದೆಯೇ ಎಂದು ಪ್ರಶ್ನಿಸಿಕೊಳ್ಳಬೇಕಾದ ಸ್ಥಿತಿ ಇದೆ. ನಾವು ನಮ್ಮ ಬೇಡಿಕೆಗಳ ಪಟ್ಟಿಯೊಂದಿಗೆ ಸರ್ಕಾರದ ಮುಂದೆ ಹೋಗುತ್ತೇವೆ. ಕೆಲಸ ಆಗಲಿಲ್ಲವೆಂದರೆ ಸರ್ಕಾರವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತೇವೆ. ಕನ್ನಡಕ್ಕಾಗಿ ನಾವೇನು ಮಾಡಿದ್ದೇವೆ ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳುವುದಿಲ್ಲ. ಕನ್ನಡಕ್ಕಾಗಿ ನಾವೇನು ಮಾಡಿದ್ದೇವೆ ಎಂಬುದು ಮುಖ್ಯವಾಗಬೇಕು ಎಂದರು.
ಪ್ರತಿ ವಿದ್ಯಾಮಂತ್ರಿ ಬಂದಾಗಲೂ ನಮ್ಮ ಶಿಕ್ಷಣ ನೀತಿ ಬದಲಾಗುತ್ತವೆ. ವಿವಿಧ ಪ್ರಯೋಗಗಳಿಗೆ ನಮ್ಮ ಮಕ್ಕಳು ತುತ್ತಾಗುತ್ತಿದ್ದಾರೆ. ಈ ಸ್ಥಿತಿ ತಪ್ಪಬೇಕು. ಮಕ್ಕಳಿಗೆ ಇಂಗ್ಲಿಷ್‌ನ್ನು ಕಲಿಸುವ ವಿಷಯದಲ್ಲಿ ಸಾಹಿತಿಗಳ ತಕರಾರಿಲ್ಲ. ಆದರೆ ಇಂಗ್ಲಿಷ್‌ನಲ್ಲಿಯೇ ಎಲ್ಲ ಇದೆ. ಅದೇ ಶ್ರೇಷ್ಠ. ಅದು ಬಾರದೆ ಇದ್ದರೆ ನಮ್ಮ ಬದುಕೇ ವ್ಯರ್ಥ ಅನ್ನುವ ನಂಬಿಕೆಯನ್ನು ನಮ್ಮ ಮಕ್ಕಳ ಮನಸ್ಸಿನಲ್ಲಿ ಬಿತ್ತುವ ಕೆಲಸವನ್ನು ನಾವು ಮಾಡಬಾರದು. ಇದರಿಂದ ನಮ್ಮ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತದೆ ಎಂದರು.
ಗಡಿಯಲ್ಲಿ ಕನ್ನಡಿಗರು ಆತಂಕದಲ್ಲಿದ್ದಾರೆ: ಕನ್ನಡ ಬಾರದೇನೆ ಇಲ್ಲಿ ಬದುಕುವಂಥ ವಾತಾವರಣವನ್ನು ನಾವು ಸೃಷ್ಟಿ ಮಾಡಿ ಇಟ್ಟಿದ್ದೇವೆ. ಕನ್ನಡಿಗರಿಗೆ ಉದ್ಯೋಗ ಸಿಗಬೇಕು, ಮತ್ತಿತರ ಕನ್ನಡ ಹಿತದ ಹಲವು ವರದಿಗಳು ಜಾರಿಯಾಗದೆ ಗೆದ್ದಲು ತಿನ್ನುತ್ತ ಬಿದ್ದಿವೆ. ನಾಡೊಳಗಿನ ಸ್ಥಿತಿ ಹೀಗಿದ್ದರೆ ಗಡಿಯಲ್ಲಿಯ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಗಡಿನಾಡ ಕನ್ನಡಿಗರು ಕನ್ನಡಿಗರಾಗಿಯೇ ಉಳಿಯುವುದಕ್ಕೆ ಹೋರಾಟವನ್ನೇ ನಡೆಸಿದ್ದಾರೆ. ಬೇರೆ ರಾಜ್ಯಗಳಲ್ಲಿ ಕನ್ನಡಿಗರ ಸ್ಥಿತಿಗತಿಗಳು ತೃಪ್ತಿಕರವಾಗಿಲ್ಲ. ಅಲ್ಲಿ ಕನ್ನಡಿಗರ ಮಕ್ಕಳಿಗೆ ಕನ್ನಡ ಶಾಲೆಗಳಿಲ್ಲ. ಅಲ್ಲಿಯ ಸರ್ಕಾರ ಕನ್ನಡಿಗರ ಪರವಾಗಿ ಇಲ್ಲ. ಅಲ್ಲಿಯ ಕನ್ನಡಿಗರು ಆತಂಕದಿಂದ ಬದುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ ಹೊರನಾಡ ಕನ್ನಡಿಗರ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸುವರ್ಣ ಮಾಧ್ಯಮ:  ಪರಿಸರವನ್ನು ಬೇಕಾಬಿಟ್ಟಿಯಾಗಿ ಬಳಸಿಕೊಳ್ಳುವ ಅಧಿಕಾರವನ್ನು ಮನುಷ್ಯನಿಗೆ ಯಾರೂ ಕೊಟ್ಟಿಲ್ಲ. ನಾವು ಪರಿಸರದ ನಿಯಮಗಳನ್ನು ಮೀರಿದ ದಿನ ಅದು ನಮ್ಮ ಮೇಲೆ ಸೇಡು ತೀರಿಸಿಕೊಳ್ಳುತ್ತದೆ. ಪ್ರಕೃತಿ ನಿಯಮಕ್ಕೆ ಪ್ರತಿಕೂಲ ಯೋಜನೆಗಳನ್ನು ರೂಪಿಸಬೇಡಿ ಎಂದು ನದಿ ತಿರುವುಗಳ ಯೋಜನೆಗಳ ಹಿನ್ನೆಲೆಯಲ್ಲಿ ಸಲಹೆ ನೀಡಿದರು.
ಪರಿಸರವನ್ನು ಮುಟ್ಟಲೇಬೇಡಿ ಅನ್ನುವುದು ಅವೈಜ್ಞಾನಿಕ. ಆದರೆ ಅಭಿವೃದ್ಧಿ ಮತ್ತು ಪರಿಸರ ಎರಡರ ನಡುವಿನ ಒಂದು ಸುವರ್ಣ ಮಾಧ್ಯಮದ ದಾರಿ ಹಿಡಿಯದಿದ್ದರೆ ನಾವೂ ಇಲ್ಲ, ಪರಿಸರವೂ ಇಲ್ಲ ಎಂಬಂತಾಗುತ್ತದೆ. ವ್ಯವಸಾಯವೇ ಬದುಕು ಅನ್ನುವ ನಂಬಿಕೆ ಇದ್ದ ಈ ನಾಡಿನಲ್ಲಿ ವ್ಯವಸಾಯವನ್ನು ದಿವಾಳಿಕೋರತನ ಅನ್ನುವಂತೆ ಬಿಂಬಿಸಲಾಗುತ್ತಿದೆ. ಕುವೆಂಪು ಹೇಳಿದ ನೇಗಿಲ ಯೋಗಿ ನಿತ್ಯ ಆತ್ಮಹತ್ಯೆಯ ಪ್ರತೀಕವಾಗುತ್ತಿದ್ದಾನೆ ಎಂದರು.
ಹೆಣ್ಣನ್ನು ಗೌರವಿಸಿ: ಹೆಣ್ಣನ್ನು ನೋಡುವ ಸಮಗ್ರ ದೃಷ್ಟಿ ನಮ್ಮಲ್ಲಿ ಬದಲಾಗದಿದ್ದರೆ ಹೆಣ್ಣಿನ ಬದುಕಿಗೆ ಭರವಸೆ ಇಲ್ಲ. ಅವಳನ್ನು ಒಪ್ಪಿಕೊಳ್ಳುವ, ಸ್ವೀಕರಿಸುವ, ಸಹಿಸಿಕೊಳ್ಳುವ, ಗೌರವಿಸುವ ಮನೋಭಾವ ಎಲ್ಲರಲ್ಲಿ ಬಾರದೇ ಹೆಣ್ಣಿಗೆ ಇವತ್ತಿನ ಆತಂಕ, ಭೀತಿ, ಕಳವಳ ದೂರವಾಗುವುದಿಲ್ಲ. ಹೆಣ್ಣಿಗೆ ನೀಡಬೇಕಾದ ಸ್ಥಾನ ನೀಡದಿದ್ದರೆ ನಮ್ಮ ಸಮಾಜಕ್ಕೆ ಪಾರ್ಶ್ವವಾಯು ಹೊಡೆಯುತ್ತದೆ ಎಂಬ ಎಚ್ಚರಿಕೆ ನೀಡಿದರು.
ನಮ್ಮ ಸಹಜೀವಿಗಳನ್ನೇ ಅನುಮಾನದಿಂದ ನೋಡುವ ಪ್ರವೃತ್ತಿ ಮತ್ತು ನೈತಿಕ ಪೊಲೀಸ್‌ಗಿರಿಯಂಥ ಪರ್ಯಾಯ ವ್ಯವಸ್ಥೆಯ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ನಮ್ಮ ಶಾಲೆಗಳಲ್ಲಿ ಕನ್ನಡದ ವಾತಾವರಣ ಇಲ್ಲದಿರುವುದಕ್ಕೆ ನಮ್ಮ ಅಪ್ಪ, ಅಮ್ಮ ಕಾರಣ. ಎರಡನೇ ಕಾರಣ ನಮ್ಮ ಸರ್ಕಾರ. ಎಲ್ಲ ರಾಜ್ಯಗಳ ಸರ್ಕಾರಗಳೂ ತಮ್ಮ ರಾಜ್ಯದ ಭಾಷೆಯ ಹಿತ ಕಾಪಾಡುತ್ತ ಬಂದಿವೆ. ಆದರೆ ಕರ್ನಾಟಕ ಸರ್ಕಾರ ಕನ್ನಡ ಸರ್ಕಾರವಾಗಿದೆಯೇ ಎಂದು ಪ್ರಶ್ನಿಸಿಕೊಳ್ಳಬೇಕಾದ ಸ್ಥಿತಿ ಇದೆ. ನಾವು ನಮ್ಮ ಬೇಡಿಕೆಗಳ ಪಟ್ಟಿಯೊಂದಿಗೆ ಸರ್ಕಾರದ ಮುಂದೆ ಹೋಗುತ್ತೇವೆ. ಕೆಲಸ ಆಗಲಿಲ್ಲವೆಂದರೆ ಸರ್ಕಾರವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತೇವೆ ಎಂಬುದು ಸಮ್ಮೇಳನಾಧ್ಯಕ್ಷ ನಾ.ಡಿಸೋಜ ಅವರ ಆಕ್ರೋಶದ ನುಡಿ.
ಸಂಘಟಕರ ಕಿರಿಕಿರಿಗೆ ಭಾಷಣವನ್ನೇ ಮೊಟಕು ಮಾಡಿದ ನಾ.ಡಿಸೋಜ!
ಸಭಾಂಗಣದ ಉದ್ದಕ್ಕೂ ತುಂಬಿತುಳುಕುತ್ತಿದ್ದ ಜನ ಸಮ್ಮೇಳನಾಧ್ಯಕ್ಷ ನಾ. ಡಿಸೋಜ ಅವರ ಭಾಷಣ ಕಿವಿತುಂಬಿಕೊಳ್ಳುತ್ತಿದ್ದರು. ಆದರೆ ಸಂಘಟಕರು ಮಾತ್ರ ಅವರ ಕಿವಿಯ ಹತ್ತಿರ ಬಂದು ಭಾಷಣ ಮೊಟಕುಗೊಳಿಸಿ ಎಂದು ಒತ್ತಡ ಹೇರತೊಡಗಿದ್ದರು. ಇದನ್ನು ನಾ. ಡಿಸೋಜ ಅವರೇ ತಮ್ಮ ಭಾಷಣದ ಕೊನೆಯಲ್ಲಿ ಹೇಳಿದರು. ಸುದೀರ್ಘ ಭಾಷಣವನ್ನು ಅವರು ಬರೆದುಕೊಂಡು ಬಂದಿದ್ದರು. ನಡುನಡುವೆ ಅವರು ತಮ್ಮ ಭಾಷಣವನ್ನು ಮೊಟಕುಗೊಳಿಸಿ ಅದರ ಸಾರಾಂಶವನ್ನು ಮಾತ್ರ ಹೇಳಿದರು. 'ಪಕ್ಕದಲ್ಲಿ ಬಂದು ನಿಂತು ಒತ್ತಡ ಹೇರಿದರು. ಹಾಗಾಗಿ ನನ್ನ ಭಾಷಣವನ್ನು ಮೊಟಕು ಮಾಡಿದೆ. ನನ್ನ ಅರೆಬರೆಯ ಭಾಷಣವನ್ನು ಕೇಳಿದ್ದಕ್ಕೆ ತಮಗೆಲ್ಲ ಧನ್ಯವಾದಗಳು' ಎಂದು ಮಾರ್ಮಿಕ ನುಡಿಯೊಂದಿಗೆ ಭಾಷಣ ಮುಗಿಸಿದರು. ಸಮ್ಮೇಳನದಲ್ಲಿ ಅಧ್ಯಕ್ಷರ ಭಾಷಣಕ್ಕೇ ಹೆಚ್ಚು ಮಹತ್ವ. ಆದರೆ 80ನೇ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರ ಭಾಷಣವೇ ಮೊಟಕುಗೊಂಡಿತು.



-ಡಾ. ವಾಸುದೇವ ಶೆಟ್ಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement