ಮನೆಪಾಠ.. 'ಪಪೂ' ಗಿಳಿಪಾಠ
ಕ.ಪ್ರ.ವಾರ್ತೆ , ಬೆಂಗಳೂರು , ಜ.7
ಮನೆಪಾಠದ ಕೇಂದ್ರಗಳನ್ನು ನಿಯಂತ್ರಿಸಲು ಹೊರಟಿರುವ ಪದವಿಪೂರ್ವ ಶಿಕ್ಷಣ ಇಲಾಖೆ ಬಳಿ ರಾಜ್ಯದಲ್ಲಿರುವ ಮನೆ ಪಾಠ ಕೇಂದ್ರಗಳ ಸಂಖ್ಯೆ ಎಷ್ಟು ಎಂಬುದೇ ಗೊತ್ತಿಲ್ಲ.
ಏಕೆಂದರೆ 1983ರ ಕಾಯಿದೆಪ್ರಕಾರ ಯಾವುದೇ ಮನೆಪಾಠ (ಟ್ಯೂಶನ್) ನಡೆಸುವ ಮುಂಚೆ ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆದು ನೋಂದಾಯಿಸಿಕೊಳ್ಳಬೇಕು. ಆದರೆ ರಾಜ್ಯದಲ್ಲಿ ಇಂತಹ ನೋಂದಾಯಿತ ಟ್ಯೂಶನ್ ಕೇಂದ್ರಗಳು ಎಷ್ಟಿವೆ ಎಂದು ಕೇಳಿದರೆ ಯಾರ ಬಳಿಯೂ ಲೆಕ್ಕವಿಲ್ಲ. ಪದವಿಪೂರ್ವ ಶಿಕ್ಷಣ ಇಲಾಖೆ ಎಷ್ಟು ನಿರ್ಲಕ್ಷ ್ಯವಹಿಸಿದೆ ಎಂದರೆ ಜಿಲ್ಲಾ ಮಟ್ಟದಲ್ಲಿ ಉಪನಿರ್ದೇಶಕರು ನೋಂದಣಿಗೆ ಪಡೆವ ಒಟ್ಟು ಶುಲ್ಕದ ಮೊತ್ತವೇ ತಿಳಿದಿಲ್ಲ.
ಟ್ಯೂಶನ್ ನಡೆಸುತ್ತಿರುವ ಸರ್ಕಾರಿ ಉಪನ್ಯಾಸಕರ ಬಗ್ಗೆ ಪದವಿಪೂರ್ವ ಶಿಕ್ಷಣ ಇಲಾಖೆಯೂ ನಿಗಾವಹಿಸಿದೆ, ಇದು ಶ್ಲಾಘನೀಯ. ಆದರೆ ಇದೇ ಉಪನ್ಯಾಸಕರು ಮನೆಪಾಠ ಮಾಡುತ್ತಿರುವ ಅಥವಾ ಮಾಡುತ್ತಿದ್ದ ಕೇಂದ್ರಗಳಿಗೆ ಮೂಗುದಾರ ಹಾಕುತ್ತಿಲ್ಲ. ಇದರಿಂದ ಪದವಿಪೂರ್ವ ಶಿಕ್ಷಣ ಇಲಾಖೆಯ ಬೊಕ್ಕಸಕ್ಕೆ ನಷ್ಟವಾಗುತ್ತಿರುವುದಲ್ಲದೇ ಅಕ್ರಮ ಎಸಗುತ್ತಿರುವ ಕೇಂದ್ರಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಆಗುತ್ತಿಲ್ಲ.
ಇದಕ್ಕೆ ಪ್ರಮುಖ ಕಾರಣ ಎಲ್ಲ ಜಿಲ್ಲೆಗಳಲ್ಲಿರುವ ಪಿಯು ಉಪನಿರ್ದೇಶಕರು (ಡಿಡಿಪಿಯು) ಟ್ಯೂಶನ್ ಲಾಬಿ ಜತೆ ಕೈಜೋಡಿಸಿದ್ದಾರೆ. ಇದರಿಂದ ಟ್ಯೂಶನ್ ಕೇಂದ್ರಗಳ ವಿರುದ್ಧ ದೂರು ದಾಖಲಾಗುತ್ತಿಲ್ಲ, ದಾಖಲಾದ ದೂರುಗಳ ಬಗ್ಗೆ ವಿಚಾರಣೆಯಾಗುವುದಿಲ್ಲ ಹಾಗೂ ಪ್ರಾಥಮಿಕವಾಗಿ ನೋಂದಣಿ ಪ್ರಕ್ರಿಯೆಯೇ ನಡೆಯುವುದಿಲ್ಲ.
ನೋಂದಣಿ ಕಡ್ಡಾಯ: ಕರ್ನಾಟಕ ಶಿಕ್ಷಣ ಕಾಯಿದೆ 1983ರ ಸೆಕ್ಷನ್ 4ರ ಪ್ರಕಾರ ಯಾವುದೇ ಟ್ಯೂಶನ್ ಕೇಂದ್ರಗಳು ಕಾರ್ಯನಿರ್ವಹಿಸಲು ಕಡ್ಡಾಯವಾಗಿ ಡಿಡಿಪಿಯುಗಳಲ್ಲಿ ನೋಂದಾಯಿಸಿಕೊಳ್ಳಬೇಕು. ಈ ನೋಂದಣಿ ಪ್ರಕ್ರಿಯೆಗೆ ಸರ್ಕಾರಕ್ಕೆ ಪ್ರತಿ ಕೇಂದ್ರವು 25 ಸಾವಿರ ಹಣ ಪಾವತಿಸಬೇಕು. ಟ್ಯೂಶನ್ ಕೇಂದ್ರಗಳನ್ನು ಕಾಯಿದೆ ವ್ಯಾಪ್ತಿಗೆ ತರಲು ಹಾಗೂ ಅವಘಡಗಳು ಸಂಭವಿಸಿದಾಗ ಕ್ರಮ ಜರುಗಿಸುವ ಸಲುವಾಗಿ ಇದನ್ನು ಕಡ್ಡಾಯಗೊಳಿಸಲಾಗಿದೆ. ಆದರೆ ಇದು ಕಾಯಿದೆಗೆ ಮಾತ್ರ ಸೀಮಿತವಾಗಿದೆ.
ಈ ಸಂಬಂಧ ಇಲಾಖೆಯ ಜಂಟಿ ನಿರ್ದೇಶಕ ನರಸಿಂಹ ನಾಯಕ್ ಅವರನ್ನು ಸಂಪರ್ಕಿಸಿದಾಗ ಹೀಗೆ ಹೇಳಿದ್ದಾರೆ. 'ಟ್ಯೂಶನ್ ಕೇಂದ್ರಗಳ ನೋಂದಣಿಗೆ ಸಂಬಂಧಿಸಿ ನಮ್ಮಲ್ಲಿ ಸ್ಪಷ್ಟ ಮಾಹಿತಿಯಿಲ್ಲ. ಆದರೆ ಎಲ್ಲ ಕೇಂದ್ರಗಳು ಜಿಲ್ಲಾ ಮಟ್ಟದಲ್ಲಿ ನೋಂದಾಯಿಸಿ 25 ಸಾವಿರ ಹಣವನ್ನು ಸರ್ಕಾರಕ್ಕೆ ಕಟ್ಟಬೇಕು. ಈ ಹಣವು ಎಷ್ಟು ಒಟ್ಟಾಗಿದೆ ಎಂಬ ಮಾಹಿತಿಯೂ ನಮ್ಮಲ್ಲಿಲ್ಲ' ಎಂದಿದ್ದಾರೆ. ಹಾಗಿದ್ದರೆ ಡಿಡಿಪಿಯುಗಳು ನೋಂದಣಿಯನ್ನೇ ಮಾಡುತ್ತಿಲ್ಲ, ಇದ್ದಿದ್ದರೆ ಒಟ್ಟಾದ ಹಣವನ್ನು ಕೇಂದ್ರ ಕಚೇರಿಗೆ ಕಳುಹಿಸುತ್ತಿದ್ದರಲ್ಲವೇ ಎಂದು ಪ್ರಶ್ನಿಸಿದಾಗ ಯಾವುದೇ ಉತ್ತರ ನೀಡಲಿಲ್ಲ.
ದೂರೇ ಬಂದಿಲ್ಲ ಎಂದ ಕೆಲ ಡಿಡಿಪಿಐಗಳು: ಟ್ಯೂಶನ್ ಕೇಂದ್ರಗಳ ನೋಂದಣಿ ಹೊರಬರುತ್ತದೆ ಎಂದು ರಾಜ್ಯದ ಕೆಲ ಡಿಡಿಪಿಯುಗಳು ದೂರುಗಳೇ ಬಂದಿಲ್ಲ ಎಂದು ವರದಿ ನೀಡಿದ್ದಾರೆ. ಇದಲ್ಲದೇ ಬಂದ ದೂರುಗಳ ಬಗೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ವಿಚಿತ್ರವೆಂದರೆ ಬೆಂಗಳೂರು ಗ್ರಾಮೀಣ ಜಿಲ್ಲೆಯಿಂದ ಯಾವುದೇ ದೂರುಗಳಿಲ್ಲ ಎಂದು ಹೇಳಿದ್ದರೆ, ನಗರ ಡಿಡಿಪಿಯು ಸ್ಪಷ್ಟ ವರದಿಯನ್ನೇ ಕೊಟ್ಟಿಲ್ಲ. ಸರ್ಕಾರಿ ಉಪನ್ಯಾಸಕರ ಟ್ಯೂಶನ್ ದಂದೆ ನಿಲ್ಲಿಸಲು ರಾಜ್ಯವ್ಯಾಪಿ ಸಮೀಕ್ಷೆ ನಡೆಸಲು ಇಲಾಖೆ ನಿರ್ಧರಿಸಿತ್ತು. ಆ ಸಮೀಕ್ಷೆಯ ಬಳಿಕ ಈ ವಿಚಾರ ಹೊರಬಿದ್ದಿದೆ.
ಉಪನ್ಯಾಸಕರಿಂದ ಪ್ರಮಾಣಪತ್ರ: ಎಲ್ಲ ಡಿಡಿಪಿಯು ಕಚೇರಿಗಳ ಮೂಲಕ ಪದವಿಪೂರ್ವ ಕಾಲೇಜುಗಳ ಸರ್ಕಾರಿ ಉಪನ್ಯಾಸಕರಿಂದ ಪ್ರಮಾಣಪತ್ರವನ್ನು ಪದವಿಪೂರ್ವ ಶಿಕ್ಷಣ ಇಲಾಖೆ ಪಡೆದಿದೆ. ಭವಿಷ್ಯದಲ್ಲಿ ಟ್ಯೂಶನ್ ನಡೆಸಿದ ಪ್ರಕರಣ ಬೆಳಕಿಗೆ ಬಂದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿ ಕ್ರಮ ಜರುಗಿಸಬಹುದು ಎಂದು ಪ್ರಮಾಣಪತ್ರದಲ್ಲಿ ಉಪನ್ಯಾಸಕರು ಇಲಾಖೆಗೆ ಮುಚ್ಚಳಿಕೆ ನೀಡಿದ್ದಾರೆ.
-ರಾಜೀವ ಹೆಗಡೆ