ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ದಲಿತರ ಸಾಹಿತ್ಯ ಯಾವುದೇ ಜಾತಿ ವಿರುದ್ಧವಲ್ಲ

Vishwanath S
Updated On : 9 Jan 2014, 12:56 pm

ಮಡಿಕೇರಿ (ಭಾರತಿಸುತ ವೇದಿಕೆ):  ದಲಿತರು ಅನುಭವಿಸುತ್ತಿರುವ ಸಮಸ್ಯೆಯನ್ನು ಕೇವಲ ದಲಿತರ ಸಮಸ್ಯೆ ಎಂದು ತಿಳಿಯದೆ ಅದನ್ನು ಸಾಮಾಜಿಕ ಸಮಸ್ಯೆಯೆಂದು ಪರಿಗಣಿಸಿ, ಎಲ್ಲ ಜಾತಿಯ ಪ್ರಗತಿಪರರು ದಲಿತರೊಂದಿಗೆ ಕೈ ಜೋಡಿಸಬೇಕು ಎಂದು ಕವಿ ಡಿ. ಸಿದ್ದಲಿಂಗಯ್ಯ ಹೇಳಿದರು.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಬುಧವಾರ ಮೊದಲ ಗೋಷ್ಠಿ 'ಕನ್ನಡ ಸಾಹಿತ್ಯದಲ್ಲಿ ದಲಿತ ಸಂವೇದನೆ'ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
'ದುಃಖದಿಂದ ಬಿಡುಗಡೆ' ಕುರಿತು ಇರುವ ದಲಿತ ಸಾಹಿತ್ಯ ಯಾವುದೇ ಜಾತಿಯ ವಿರುದ್ಧ ಅಲ್ಲ. ದಲಿತರ ನೋವನ್ನು ಸಮಾಜದ ಇತರರು ಅರ್ಥಮಾಡಿಕೊಳ್ಳಬೇಕು. ದಲಿತರ ಮೊಗದಲ್ಲಿ ನಗುವಿದ್ದರೂ ಒಳಗಡೆ ನೋವಿದೆ. ಹೊಟ್ಟೆಯಲ್ಲಿ ಸಂಕಟವಿದೆ. ಆ ನಗು ವಿಷಾದದ ನಗು. ಸಾಮಾಜಿಕ ಕಾಳಜಿ ಇರುವವರೆಲ್ಲರೂ ಇದರ ನಿವಾರಣೆಗೆ ಪ್ರಯತ್ನಿಸಬೇಕು ಎಂದು ಅವರು ಹೇಳಿದರು.
ಆಕ್ರೋಶ, ತಪ್ಪಾಗಿ ಭಾವಿಸಬೇಡಿ: ದಲಿತರ ಆಕ್ರೋಶವನ್ನು ತಪ್ಪಾಗಿ ಪರಿಗಣಿಸಬೇಡಿ. ನಾನು 'ಇಕ್ರಲಾ ವದೀಲ್ರಾ' ಎಂದು ಬರೆದಾಗ ಕನ್ನಡದ ಜನತೆ ಕೋಪಗೊಳ್ಳಲಿಲ್ಲ. ಕನ್ನಡಿಗರ ಔದಾರ್ಯಕ್ಕೆ ನಾನು ಋಣಿ. ಕನ್ನಡಿಗರು ಮೂಲತಃ ಕೋಮುವಾದಿಗಳೂ ಅಲ್ಲ, ಜಾತಿವಾದಿಗಳೂ ಅಲ್ಲ. ಬಸವಣ್ಣನ ಪರಂಪರೆ ಅವರಿಗಿದೆ. ಈಗ ಬರುತ್ತಿರುವ ದಲಿತ ಸಾಹಿತ್ಯದಲ್ಲಿ ದ್ವೇಷ ಇಲ್ಲ. ತಮ್ಮ ನೋವಿನ ಬಗ್ಗೆ ದಲಿತ ಸಾಹಿತಿಗಳು ಅರಿವು ಮೂಡಿಸುತ್ತಿದ್ದಾರೆ. ಅದು ಕಲಾತ್ಮಕವಾದ ಸಾಹಿತ್ಯ. ದಲಿತರ ಚಳವಳಿಯ ಹೋರಾಟ ಕೇವಲ ದಲಿತರ ವಿಮೋಚನೆಗೆ ಮಾತ್ರವಲ್ಲ. ಎಲ್ಲ ಜಾತಿಯ ಶೋಷಿತರ ವಿಮೋಚನೆಗೆ ಈ ಹೋರಾಟ. ಇಂದು ಎಲ್ಲ ಸ್ತರದಲ್ಲೂ ದಲಿತರ ಅಸ್ತಿತ್ವವನ್ನು ಪರಿಗಣಿಸಲಾಗಿದೆ ಎಂದು ಸಿದ್ದಲಿಂಗಯ್ಯ ಹೇಳಿದರು. ಹೇಳಿದರು.
'ದಲಿತ ಸಾಹಿತ್ಯ ಮತ್ತು ಚಳವಳಿ' ಕುರಿತು ಡಾ.ಎಚ್. ದಂಡಪ್ಪ ಮಾತನಾಡಿದರೆ, 'ದಲಿತ ಸಾಹಿತ್ಯ ಮತ್ತು ರಾಜಕೀಯ ದೃಷ್ಟಿಕೋನ' ಕುರಿತು ಪ್ರಶಾಂತ ಜಿ. ನಾಯಕ ತಮ್ಮ ವಿಚಾರಗಳನ್ನು ಮಂಡಿಸಿದರು.
ಬುದ್ಧ ಪ್ರಜ್ಞೆಯ ಕಡೆಗೆ ಹೊರಳಲಿ: ಗೋಷ್ಠಿಯ ಆಶಯ ಭಾಷಣ ಮಾಡಿದ ಕವಿ ಮೂಡ್ನಾಕೂಡು ಚಿನ್ನಸ್ವಾಮಿ, ದಲಿತ ಸಾಹಿತ್ಯದ ಮೂಲದ್ರವ್ಯ ಅಸ್ಪೃಶ್ಯತೆ, ಅಸಮಾನತೆ ಮತ್ತು ಹಸಿವು. ಇವು ಅಂಬೇಡ್ಕರ್ ಸಾಹಿತ್ಯಕ್ಕೂ ಮೂಲದ್ರವ್ಯ. ದಲಿತ ಸಾಹಿತ್ಯಕ್ಕೆ ತಾತ್ವಿಕ ನೆಲೆ ಒದಗಿಸಿದ್ದು ಅಂಬೇಡ್ಕರ್ ಸಾಹಿತ್ಯ. ನಾಲ್ಕು ದಶಕದ ಇತಿಹಾಸವಿರುವ ದಲಿತ ಚಳವಳಿಯ ಹಿನ್ನೆಲೆಯಲ್ಲಿ ಇನ್ನೂ ಎಷ್ಟು ಕೃತಿಗಳನ್ನು ರಚಿಸಬಹುದು ಎಂದು ಪ್ರಶ್ನಿಸಿದ ಅವರು, 'ದಲಿತ ಸಾಹಿತ್ಯದ ಮೇರು ಕೃತಿ ಇನ್ನೂ ಬರಬೇಕಾಗಿದೆ. ದಲಿತ ಲೇಖಕರು ದಲಿತ ಪ್ರಜ್ಞೆಯಿಂದ ಬುದ್ಧ ಪ್ರಜ್ಞೆಯ ಕಡೆಗೆ ಹೊರಳಬೇಕಾಗಿದೆ' ಎಂದರು. ಆಧ್ಯಾತ್ಮದ ಹಸಿವಿನ ಬಗ್ಗೆ, ಧರ್ಮದ ಹಸಿವಿನ ಬಗ್ಗೆ ದಲಿತ ಲೇಖಕರು ಪ್ರಯತ್ನಿಸಬೇಕು. ವಿವೇಕವು ನೋವಿನಲ್ಲಿ, ಅಪಮಾನದಲ್ಲಿ ಹುಟ್ಟುತ್ತದೆ. ದಲಿತ ಸಾಹಿತ್ಯದ ಬಗ್ಗೆ ಗೋಷ್ಠಿಯೊಂದನ್ನು ಹಮ್ಮಿಕೊಂಡಿರುವುದು ಸ್ವಾಗತಾರ್ಹ. ಅದೇ ರೀತಿ ದಲಿತ ಲೇಖಕರೊಬ್ಬರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಲಿ, ಮಹಿಳೆಯರಿಗೆ ಪ್ರಾತಿನಿಧ್ಯ ಹೆಚ್ಚಲಿ, ಅದರಲ್ಲೂ ದಲಿತ ಮಹಿಳೆಯರಿಗೆ ಪ್ರಾತಿನಿಧ್ಯ ಹೆಚ್ಚು ಕೊಡಿ ಎಂದು ತಿಳಿಸಿದರು.


-ಡಾ. ವಾಸುದೇವ ಶೆಟ್ಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement