ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಪ್ರತಿಭಟನೆ, ವಿವಾದ, ಅವ್ಯವಸ್ಥೆ, ಗೊಂದಲ

ವ್ಯರ್ಥ ಗೋಷ್ಠಿಗಳು, ಅರ್ಥಹೀನ ಪ್ರತಿಭಟನೆಗಳು. ಅವ್ಯವಸ್ಥೆಗಳು. ವಿವಾದಕ್ಕೀಡಾದ ಸಮ್ಮೇಳನಾಧ್ಯಕ್ಷರ ಹೇಳಿಕೆ... ಹೀಗೆ 80ನೇ ಕನ್ನಡ...

Vishwanath S
Updated On : 9 Jan 2014, 1:46 am

ಕನ್ನಡಪ್ರಭ ವಾರ್ತೆ ,  ಮಡಿಕೇರಿ  ,  ಜ.8
ವ್ಯರ್ಥ ಗೋಷ್ಠಿಗಳು, ಅರ್ಥಹೀನ ಪ್ರತಿಭಟನೆಗಳು. ಅವ್ಯವಸ್ಥೆಗಳು. ವಿವಾದಕ್ಕೀಡಾದ ಸಮ್ಮೇಳನಾಧ್ಯಕ್ಷರ ಹೇಳಿಕೆ... ಹೀಗೆ 80ನೇ ಕನ್ನಡ ಸಾಹಿತ್ಯ ಸಮ್ಮೇಳನದ 2ನೇ ದಿನವಾದ ಬುಧವಾರ ಸಾಹಿತ್ಯೇತರ ಕಾರಣಗಳಿಗೇ ಹೆಚ್ಚು ಪ್ರಾಮುಖ್ಯ ದೊರೆಯಿತು.
ಮಂಗಳವಾರಕ್ಕೆ ಹೋಲಿಸಿದರೆ ಬುಧವಾರದ ಗೋಷ್ಠಿಗಳಿಗೆ ಸ್ವಲ್ಪ ಜನರಿದ್ದರಾದರೂ, ಗೋಷ್ಠಿಗಳು ಬಂದವರನ್ನು ಸಾಹಿತ್ಯದ ಕುರಿತು ಚಿಂತನೆಗೆ ಹಚ್ಚುವಲ್ಲಿ ವಿಫಲವಾದವು. ಆದರೆ, ಪುಸ್ತಕ ವ್ಯಾಪಾರ ಮಾತ್ರ 2ನೇ ದಿನ ಇನ್ನಷ್ಟು ಚುರುಕಾಗಿತ್ತು. ಪ್ರತಿ ಬಾರಿಯಂತೆ ಈ ಬಾರಿಯೂ ಸರ್ಕಾರಿ ಅಧಿಕಾರಿಗಳು ಹಾಗೂ ಪ್ರಾಧ್ಯಾಪಕರಿಗೆ ಸಾಹಿತ್ಯ ಸಮ್ಮೇಳನಕ್ಕಿಂತ ಹೆಚ್ಚಾಗಿ ಒಒಡಿ ಬಗ್ಗೆಯೇ ಹೆಚ್ಚು ಆಸಕ್ತಿ ಕಂಡುಬಂತು. ಆರಂಭದ ದಿನ ಸಾಹಿತ್ಯ ಸಮ್ಮೇಳನದ ಮೆರವಣಿಗೆ ಮುಖ್ಯ ಮಂಟಪ ತಲುಪಿ, ಇನ್ನೂ ಉದ್ಘಾಟನೆ ಆಗಿರಲಿಲ್ಲ.    
ಆಗಲೇ ಒಒಡಿಗಾಗಿ ಪ್ರತಿಭಟನೆ ಆರಂಭವಾಗಿತ್ತು. ಆಗ ಹೇಗೋ ಸಮಾಧಾನ ಪಡಿಸಲಾಗಿತ್ತು. 2ನೇ ದಿನವಾದ ಬುಧವಾರ ಒಒಡಿ ಪ್ರತಿಭಟನೆ ತಾರಕ್ಕೇರಿ ನೂಕುನುಗ್ಗಲಿನ ಸ್ಥಿತಿ ನಿರ್ಮಾಣವಾಯಿತು. ಕೂನೆಗೂ ಒಒಡಿ ನ್ಯಾಯದ ಪ್ರತಿಭಟನೆಗೆ ಜಗ್ಗಿದ ಸಂಘಟಕರು ಹಾಜರಿ ದಾಖಲೆಗಳನ್ನು ನೀಡಲು ನಿರ್ಧರಿಸಿದರು. ಆದರೆ, ಬುಧವಾರ ಮಧ್ಯಾಹ್ನ ಬಹುತೇಕ ಸಮಯ ಈ ಒಒಡಿ ಗದ್ದಲವೇ ಸಮ್ಮೇಳನದ ಆಕರ್ಷಣೆಯ, ಗದ್ದಲದ ಕೇಂದ್ರವಾಗಿತ್ತು. ಮುಖ್ಯ ವೇದಿಕೆ ಬಳಿಯೇ ಈ ಗದ್ದಲ ನಡೆದಿದ್ದರಿಂದ ಜನರ ಲಕ್ಷ್ಯವೆಲ್ಲ ಕಾರ್ಯಕ್ರಮಕ್ಕಿಂತ ಹೆಚ್ಚು ಗದ್ದಲದ ಮೇಲೇ ಇತ್ತು.
ಢಾಳಾಗಿ ಕಂಡ ಅವ್ಯವಸ್ಥೆ: ಆರಂಭದ ದಿನ ಅವ್ಯವಸ್ಥೆಗಳು ಅಷ್ಟಾಗಿ ಕಣ್ಣಿಗೆ ಬಿದ್ದಿರಲಿಲ್ಲ. ಆದರೆ, ಎರಡನೇ ದಿನ ಅವ್ಯವಸ್ಥೆಗಳು ಢಾಳಾಗಿಯೇ ಕಣ್ಣಿಗೆ ಗೋಚರಿಸಿದವು. ಶೌಚಾಲಯ ವ್ಯವಸ್ಥೆಯಂತೂ 2ನೇ ದಿನ ಸಂಪೂರ್ಣ ಹದಗೆಟ್ಟಿತ್ತು. ಬಹುತೇಕ ಶೌಚಾಲಯಗಳು ದುರ್ನಾತ ಬೀರುತ್ತಿದ್ದವು. ಸಾರ್ವಜನಿಕರು ಸಾರ್ವಜನಿಕವಾಗಿಯೇ ಶೌಚ ಮಾಡಬೇಕಾದ ಅನಿವಾರ್ಯಕ್ಕೆ ತುತ್ತಾದರು. ಆದರೆ, ಇದರಿಂದ ಮಹಿಳೆಯರು ತೀವ್ರ ತೊಂದರೆ ಎದುರಿಸಬೇಕಾಯಿತು.
ಅವ್ಯವಸ್ಥೆ ಮುಖ್ಯ ವೇದಿಕೆಯನ್ನೂ ಬಿಟ್ಟಿರಲಿಲ್ಲ. ಮಧ್ಯಾಹ್ನ ಸಮ್ಮೇಳನಾಧ್ಯಕ್ಷರ ಸಂವಾದಕ್ಕೂ ಮುನ್ನ 10 ನಿಮಿಷ ಸಮಯವಿದೆ. ಯಾರಾದರೂ ಹಾಡುವವರಿದ್ದರೆ ಬಂದು ಹಾಡಬಹುದು ಎಂದು ಮುಕ್ತ ಆಹ್ವಾನ ನೀಡಲಾಯಿತು. ಅಷ್ಟು ಘೋಷಣೆ ಮಾಡಿದ ನಂತರ ಹಾಡಲು ಬಂದವರನ್ನು ನಿಭಾಯಿಸುವವರು ಯಾರೂ ಇರದ ಕಾರಣ. ಮೈಕ್ ಮುಂದೆ ಜನ ಸೇರಿ, ಅವರವರ ನಡುವೆಯೇ ಪೈಪೋಟಿ ನಡೆಯಿತು. ಕೆಲವರು ಕರ್ಕಶವಾಗಿ ಹಾಡಿ ಪ್ರೇಕ್ಷಕರನ್ನು ಗೋಳು ಹೊಯ್ದುಕೊಂಡರು. ಅದರ ನಂತರ ವೇದಿಕೆ ಮೇಲೆ ಹೋಗುವವರಿಗೆ ಯಾವುದೇ ನಿರ್ಬಂಧ ಇಲ್ಲದ ಕಾರಣ ಯಾರು ಯಾರೋ ವೇದಿಕೆ ಏರಿ ಸಮ್ಮೇಳನಾಧ್ಯಕ್ಷರ ಜತೆ ಫೋಟೋ ತೆಗೆಸಿಕೊಳ್ಳಲಾರಂಭಿಸಿದರು. ಕೆಲವರು ಸುಲಭವಾಗಿ ವೇದಿಕೆ ಏರಿದ್ದರಿಂದ ಸ್ಫೂರ್ತಿ ಪಡೆದ ಇನ್ನಷ್ಟು ಮಂದಿ ವೇದಿಕೆ ಹತ್ತಿ, ಜನರಿಂದ ತುಂಬಿಹೋಯಿತು. ಸಂಘಟಕರ ಮನವಿಯ ಹೊರತಾಗಿಯೂ ಜನ ಸಂದಣಿ ಕೆಲಹೊತ್ತು ಕಡಿಮೆ ಆಗಲಿಲ್ಲ.
ಗೋಷ್ಠಿ ಸಮಯ ಗೋತಾ!: ಮುಖ್ಯ ವೇದಿಕೆಯಲ್ಲಿ ಕಾರ್ಯಕ್ರಮಗಳು ಸಮಯಕ್ಕೆ ಸರಿಯಾಗಿ ನಡೆದವಾದರೂ, ಸಮಾನಾಂತರ ವೇದಿಕೆಯಲ್ಲಿ ಸಮಯ ತಪ್ಪಿಹೋಗಿತ್ತು. ಎಷ್ಟೋಷ್ಟೋ ಹೊತ್ತಿಗೆ ಗೋಷ್ಠಿಗಳು ನಡೆಯುತ್ತಿದ್ದವು. ಸಮಾನಾಂತರ ವೇದಿಕೆಯಂತೂ ಸಂಪೂರ್ಣ ಅಧ್ವಾನಗಳನ್ನು ಮೈಗೂಡಿಸಿಕೊಂಡಿತ್ತು. ಮೊದಲ ದಿನ ಸಂಜೆಯೇ ಅಲ್ಲಿ ಮನರಂಜನಾ ಕಾರ್ಯಕ್ರಕ್ಕೆ ಸರಿಯಾದ ಬೆಳಕಿನ ವ್ಯವಸ್ಥೆ ದೊರೆಯದೆ ಅಡ್ಡಿಯಾಗಿತ್ತು. ಕಲಾವಿದರು ಪ್ರತಿಭಟನೆ ನಡೆಸಿದ ನಂತರ, ಬೆಳಕಿನ ವ್ಯವಸ್ಥೆ ಸರಿಪಡಿಸಲಾಗಿತ್ತು. ಅವರಿಗೆಲ್ಲ ಸೂಕ್ತ ವಸತಿ ವ್ಯವಸ್ಥೆ ಮಾಡದೇ ಇರುವುದು ಇನ್ನೊಂದು ಅವ್ಯವಸ್ಥೆಯಾಗಿತ್ತು. ಚಳಿಯಲ್ಲಿ ಅವರೆಲ್ಲ ಕಾಲೇಜು ಆವರಣದಲ್ಲೇ ಮಲಗಿದರು.

ಮುಂದಿನ ಸಮ್ಮೇಳನಹಾವೇರಿಯಲ್ಲಿ
ಹಾವೇರಿಯಲ್ಲಿ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.  ರಾಯಚೂರು, ಗುಲ್ಬರ್ಗ, ಚಾಮರಾಜನಗರ ಜಿಲ್ಲೆಗಳು ಈ ಸಮ್ಮೇಳನ ನಡೆಸಲು ಪೈಪೋಟಿಯಲ್ಲಿದ್ದವು. ಆದರೆ ಅಂತಿಮವಾಗಿ 81ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಸೌಭಾಗ್ಯ ಹಾವೇರಿಗೆ ಸಿಕ್ಕಿದೆ. 81ನೇ ಸಾಹಿತ್ಯ ಸಮ್ಮೇಳನ ಎಲ್ಲಿ ನಡೆಯಬೇಕು ಎಂಬ ಸಂಕ್ಷಿಪ್ತ ಚರ್ಚೆಯ ನಂತರ ಹಾವೇರಿಯಲ್ಲಿ ನಡೆಸಲು ಸರ್ವಾನುಮತದ ತೀರ್ಮಾನ ತೆಗೆದುಕೊಳ್ಳಲಾಗಿದೆ. 80ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂತಿಮ ದಿನವಾದ ಗುರುವಾರ ಈ ವಿಷಯವನ್ನು ಅಧಿಕೃತವಾಗಿ ಘೋಷಿಸಲಾಗುವುದು.


-ವಿನಾಯಕ ಭಟ್ಟ ಮೂರೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement