ಹಾಲಂಬಿ ಕ್ಷಮೆಗೆ ಚಂಪಾ ಆಗ್ರಹ
ಮಡಿಕೇರಿ (ಗೌರಮ್ಮ ವೇದಿಕೆ): ಸಮ್ಮೇಳನಾಧ್ಯಕ್ಷ ನಾ. ಡಿಸೋಜಾ ಭಾಷಣವನ್ನೇ ಮೊಟಕುಗೊಳಿಸಿದ ಕಸಾಪ ರಾಜ್ಯಾಧ್ಯಕ್ಷ ಪುಂಡಲೀಕ ಹಾಲಂಬಿ ಕನ್ನಡಿಗರ ಬಹಿರಂಗ ಕ್ಷಮೆ ಕೇಳಬೇಕು ಎಂದು ಕಸಾಪ ಮಾಜಿ ಅಧ್ಯಕ್ಷ ಪ್ರೊ. ಚಂದ್ರಶೇಖರ ಪಾಟೀಲ ಒತ್ತಾಯಿಸಿದ್ದಾರೆ. ಸಾಹಿತ್ಯ ಸಮ್ಮೇಳನದ ಎರಡನೇ ದಿನ ಸಮಾನಾಂತರ ವೇದಿಕೆಯಲ್ಲಿ ಜರುಗಿದ 'ಸಾಮಾಜಿಕ ವಲಯದಲ್ಲಿ ಕನ್ನಡದ ಸ್ಥಾನಮಾನ' ಕುರಿತು ಮಾತನಾಡಿದ ಅವರು, ಸರ್ಕಾರದ ಜತೆ ಕನ್ನಡ ಸಾಹಿತ್ಯ ಪರಿಷತ್ ಅನ್ನೂ ಕಟುವಾಗಿಯೇ ತರಾಟೆಗೆ ತೆಗೆದುಕೊಂಡರು. ಇತ್ತೀಚೆಗೆ ಕಸಾಪ ರಾಜ್ಯಾಧ್ಯಕ್ಷ ಪುಂಡಲೀಕ ಹಾಲಂಬಿ ಸರ್ಕಾರ ಅನುದಾನ ನೀಡದೇ ಇದ್ದಲ್ಲಿ ಸಾಹಿತ್ಯ ಪರಿಷತ್ ಮುಚ್ಚಬೇಕಾಗುತ್ತದೆ ಎಂದು ನೀಡಿದ್ದ ಹೇಳಿಕೆಗೆ ತೀಕ್ಷ್ಣವಾಗಿಯೇ ಪ್ರತಿಕ್ರಿಯಿಸಿದ ಅವರು, ಕೋಟ್ಯಂತರ ಕನ್ನಡಿಗರು ಬೆಳೆಸಿದ ಕಸಾಪವನ್ನು ಮುಚ್ಚುತ್ತೇನೆ ಎನ್ನಲು ಇವರು ಯಾರು? ಮತ್ತು ಮುಚ್ಚಲು ಸರ್ಕಾರದವರು ಯಾರು? ಎಂದು ಪ್ರಶ್ನಿಸಿದರು. ಕನ್ನಡ ಸಾಹಿತ್ಯ ಪರಿಷತ್ ಸರ್ಕಾರದ ಅನುದಾನಕ್ಕೆ ಮಾತ್ರ ಸೀಮಿತವಾಗದೆ ಕನ್ನಡಿಗರ ಹೋರಾಟದ ಶಕ್ತಿಯುತ ಸಂಸ್ಥೆಯಾಗಿ ರೂಪುಗೊಳ್ಳುವ ಅಗತ್ಯವಿದೆ ಎಂದರು.
ರಾಜಕಾರಣಿಗಳ ಕೆಳಗಿಳಿಸಿ ಸಮ್ಮೇಳನ ನಡೆಸಿ
ಮಡಿಕೇರಿ (ಭಾರತೀಸುತ ವೇದಿಕೆ): ಕನ್ನಡ ಸಾಹಿತ್ಯ ಮತ್ತು ಪರಿಷತ್ ಉದ್ಧಾರಕ್ಕೆ ಸರ್ಕಾರದ ನೆರವಿಗೆ ಕೈ ಚಾಚದೇ, ಕನ್ನಡಿಗರನ್ನು ಒಟ್ಟುಗೂಡಿಸಬೇಕು. ಪುಸ್ತಕ ಪ್ರಕಟಿಸಬೇಕು, ಕನ್ನಡ ತಿಳಿಯದ ಕನ್ನಡಿಗರ ಮಕ್ಕಳಿಗೆ ಕನ್ನಡ ಕಲಿಸಬೇಕು, ಸರ್ಕಾರವನ್ನು ಎದುರಿಸಿ, ರಾಜಕಾರಣಿಗಳನ್ನು ಕೆಳಗಿರಿಸಿ ಸಾಹಿತ್ಯ ಸಮ್ಮೇಳನ ನಡೆಸಬೇಕು. ಇದು 'ನೂರರ ಗಡಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್' ಗೋಷ್ಠಿಯಲ್ಲಿ ವಿದ್ವಾಂಸರಿಂದ ಮೂಡಿ ಬಂದ ಆಕ್ರೋಶಿತ ಒಕ್ಕೊರಲ ಅಭಿಪ್ರಾಯ. ಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಪ್ರೊ.ಜಿ. ಅಶ್ವತ್ಥನಾರಾಯಣ್ ಮಾತನಾಡಿ, 98 ವರ್ಷಗಳ ಹಿಂದೆ ನಡೆದ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರು ಇಂಗ್ಲಿಷ್ನಲ್ಲಿ ಭಾಷಣ ಮಾಡುವ ಮೂಲಕ ಇಂಗ್ಲಿಷ್ ಸರ್ಕಾರದ ಓಲೈಕೆಗೆ ತೊಡಗಿದರು. ಹಣಕ್ಕಾಗಿ, ಅಧಿಕಾರಕ್ಕಾಗಿ ಸರ್ಕಾರವನ್ನು ಓಲೈಸುವ ಕಾರ್ಯ ಅಂದಿನಿಂದಲೇ ಆರಂಭವಾಯಿತು. ಈಗಲೂ ಅದೇ ಸ್ಥಿತಿ ಮುಂದುವರಿದಿದೆ. ವಾದ, ಮಾತುಗಳಿಂದ ಸಾಹಿತ್ಯ ಪರಿಷತ್ ಪ್ರಗತಿ ಸಾಧ್ಯವಿಲ್ಲ. ಯಾವ ಹಂಗೂ ಇಲ್ಲದೆ ಹೆಚ್ಚುತನದ ಬಿಚ್ಚು ನುಡಿಯ ಮನೋಭಾವ ಬೇಕು ಎಂದರು.