ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ನಾನು ಕ್ಷಮೆ ಕೇಳುವೆ: ಪುಂಡಲೀಕ ಹಾಲಂಬಿ

Vishwanath S
Updated On : 9 Jan 2014, 11:56 am

ಮಡಿಕೇರಿ: 'ಸಮ್ಮೇಳನಾಧ್ಯಕ್ಷ ನಾ. ಡಿ'ಸೋಜಾ ಅವರಿಗೆ ಭಾಷಣ ಮೊಟಕುಗೊಳಿಸವಂತೆ ಹೇಳಿದ್ದಕ್ಕೆ ಬೇಸರವಾಗಿದ್ದರೆ ನಾನು ಅವರ ಕ್ಷಮೆಯಾಚಿಸುತ್ತೇನೆ. ಹಾಗೆಯೇ ಸಮ್ಮೇಳನಾಧ್ಯಕ್ಷರ ಭಾಷಣವನ್ನು ತಪ್ಪಾಗಿ ಅರ್ಥೈಸಿ ಅವರನ್ನು ಟೀಕಿಸಿದ ಶಾಸಕರು ಕೂಡ ವಿಷಾದ ವ್ಯಕ್ತಪಡಿಸಬೇಕು' ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಹೇಳಿದ್ದಾರೆ. ಉದ್ಘಾಟನಾ ಸಂದರ್ಭದಲ್ಲಿ ಸಮ್ಮೇಳನಾಧ್ಯಕ್ಷರಿಗೆ ಭಾಷಣ ಮೊಟಕು ಮಾಡಬೇಕೆಂದು ಹೇಳಿದ್ದು ತಪ್ಪು. ಅದರಿಂದ ಅವರ ಮನಸ್ಸಿಗೆ ಬೇಸರವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ. ಹಾಗೆಯೇ ಸಮ್ಮೇಳನಾಧ್ಯಕ್ಷರು ಪರಿಸರ ಕಾಳಜಿಯಿಂದ ಕಸ್ತೂರಿ ರಂಗನ್ ವರದಿ ಕುರಿತು ಮಾತನಾಡಿದ್ದಾರೆಯೇ ಹೊರತು, ಅದು ಜಾರಿಯಾಗಬೇಕು ಅಥವಾ ಜಾರಿಯಾಗಬಾರದು ಎಂಬ ವಿಷಯದಲ್ಲಿ ಅವರು ಏನನ್ನೂ ಹೇಳಿಲ್ಲ. ಕಸ್ತೂರಿರಂಗನ್ ವರದಿಯ ಪರ- ವಿರೋಧಗಳೇನೇ ಇರಲಿ ಅಧ್ಯಕ್ಷರಿಗೆ ಅದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಇದ್ದೇ ಇದೆ. ಆದರೆ, ಅದನ್ನೇ ತಪ್ಪಾಗಿ ಅರ್ಥೈಸಿ, ಪತ್ರಿಕಾಗೋಷ್ಠಿ ನಡೆಸಿ ಅಧ್ಯಕ್ಷರು ಕ್ಷಮೆಯಾಚಿಸಬೇಕು ಎಂದು ಹೇಳಿದ್ದು ಸರಿಯಲ್ಲ. ಹಾಗೆಯೇ ಮುಖ್ಯವೇದಿಕೆಯ ಮೇಲೇರಿ ನೇರವಾಗಿ ಅಧ್ಯಕ್ಷರನ್ನೇ ಈ ಬಗ್ಗೆ ಕ್ಷಮೆ ಕೇಳುವಂತೆ ಒತ್ತಾಯಿಸಿದ್ದು ಸರಿಯಲ್ಲ. ಅವರ ಹೇಳಿಕೆ ಅಥವಾ ಭಾಷಣದ ಬಗ್ಗೆ ತಕರಾರಿದ್ದರೆ ಅಧ್ಯಕ್ಷರೊಂದಿಗೆ ನೇರವಾಗಿ ಸಂವಾದ ನಡೆಸಬಹುದಿತ್ತು. ಅದರ ನಂತರವೂ ಸಮಾಧಾನ ಆಗದಿದ್ದರೆ ನಂತರ ಪ್ರತಿಭಟನೆ ನಡೆಸಬಹುದಿತ್ತು ಎಂದರು.
ಚಂಪಾ ಹೇಳಿಕೆಗೆ ಕಿಡಿ...
ಚಂಪಾ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಹಾಲಂಬಿ, 'ಚಂಪಾ ಅವರಿಗೆ ನನ್ನ ಹೇಳಿಕೆ ವಿರೋಧಿಸುವ ಹಕ್ಕಿಲ್ಲ. ಇಷ್ಟಕ್ಕೂ ನಾನು ಕಸಾಪ ಮುಚ್ಚುವುದಾಗಿ ಹೇಳಿಲ್ಲ. ಬದಲಾಗಿ ಪರಿಸ್ಥಿತಿ ಹೀಗೇ ಮುಂದುವರಿದರೆ ಕಸಾಪ ಬಾಗಿಲು ಹಾಕುವುದು ಅನಿವಾರ್ಯವಾಗುತ್ತದೆ ಎಂಬ ಸತ್ಯವನ್ನು ಹೇಳಿದ್ದೇನೆ. ಅಲ್ಲದೇ ಈ ಪ್ರಭುತ್ವದ ಕಣ್ಣು, ಕಿವಿಗಳನ್ನು ತೆರೆಸಲು ಅಷ್ಟು ಖಾರವಾಗಿ ಮಾತನಾಡುವುದು ಅನಿವಾರ್ಯವಾಗಿತ್ತು. ಚಂಪಾ ಅವರು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ನನ್ನ ತೇಜೋವಧೆ ಮಾಡಲು ಹೊರಟಿದ್ದಾರೆ' ಎಂದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement