ಬಾ ಎಂದು ಒಗ್ಗಟ್ಟಿನ ಜಪ
ಸಿಡಿದು ದೂರವಾಗಿದ್ದ ಬಿಜೆಪಿ-ಕೆಜೆಪಿ ನಾಯಕರು ಒಡೆದ ಮನಸ್ಸುಗಳನ್ನು ಒಂದು ಮಾಡುವ ಸಂಕಲ್ಪದೊಂದಿಗೆ ಮತ್ತೆ ಒಂದಾಗಿದ್ದಾರೆ...
ಕನ್ನಡಪ್ರಭ ವಾರ್ತೆ , ಬೆಂಗಳೂರು , ಜ.9
ಸಿಡಿದು ದೂರವಾಗಿದ್ದ ಬಿಜೆಪಿ-ಕೆಜೆಪಿ ನಾಯಕರು ಒಡೆದ ಮನಸ್ಸುಗಳನ್ನು ಒಂದು ಮಾಡುವ ಸಂಕಲ್ಪದೊಂದಿಗೆ ಮತ್ತೆ ಒಂದಾಗಿದ್ದಾರೆ.
ಕೆಜೆಪಿಯನ್ನು ಬಿಜೆಪಿ ಜತೆ ವಿಲೀನಗೊಳಿಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪಕ್ಷದ ಇಬ್ಬರು ಶಾಸಕರು, ಪದಾಧಿಕಾರಿಗಳ ಜತೆ ಗುರುವಾರ ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ. ಇವರೊಂದಿಗೆ ಕೆಜೆಪಿಯ ನೂರಾರು ಕಾರ್ಯಕರ್ತರೂ ಬಿಜೆಪಿಗೆ ಸೇರಿಕೊಂಡಿದ್ದಾರೆ.
ಇದರೊಂದಿಗೆ ತಾವು ಕಳೆದ ಒಂದು ವರ್ಷ ಒಂದು ತಿಂಗಳ ಹಿಂದೆ ಸ್ಥಾಪಿಸಿದ್ದ ಕೆಜೆಪಿಯ ಬಾಗಿಲು ಮುಚ್ಚಿ ಮರಳಿ ಮಾತೃ ಪಕ್ಷಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರೆಲ್ಲರೂ ಒಗ್ಗಟ್ಟಿನ ಮಂತ್ರ ಹೇಳುತ್ತಾ ಮತ್ತೆ ಪಕ್ಷವನ್ನು ರಾಜ್ಯದಲ್ಲಿ ಉಚ್ಛ್ರಾಯ ಸ್ಥಿತಿಗೆ ಕೊಂಡೊಯ್ಯುವ ಶಪಥ ಮಾಡಿದ್ದಾರೆ. ಅಲ್ಲದೆ, ಮಾಡಿದ ತಪ್ಪು ಮನ್ನಿಸಿ ಮತ್ತೆ ನಮ್ಮನ್ನು ಆಶೀರ್ವದಿಸಿ ಎಂಬ ಮನವಿಯೊಂದಿಗೆ ಇನ್ನು ಮುಂದೆ ಜಗಳವಾಡಿ ಬೇರೆಯಾಗುವುದಿಲ್ಲ ಎಂಬ ವಾಗ್ದಾನವನ್ನೂ ಮಾಡಿದ್ದಾರೆ.
ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಅವರು ಯಡಿಯೂರಪ್ಪ ಅವರಿಂದ 105 ಸ್ವೀಕರಿಸಿ ಸಾಮಾನ್ಯ ಮತ್ತು ಸಕ್ರಿಯ ಸದಸ್ಯತ್ವ ನೀಡಿದರು. ಅಲ್ಲದೆ ಬಿಜೆಪಿ ಮುಖಂಡರು ಯಡಿಯೂರಪ್ಪಗೆ ಸಿಹಿ ತಿನ್ನಿಸಿದರು. ಇವರೊಂದಿಗೆ ಕೆಜೆಪಿ ಶಾಸಕರಾದ ಯು.ಬಿ. ಬಣಕಾರ್, ಡಾ. ವಿಶ್ವನಾಥ್ ಪಾಟೀಲ್, ಶೋಭಾ ಕರಂದ್ಲಾಜೆ, ಸಿ.ಎಂ. ಉದಾಸಿ, ರೇಣುಕಾಚಾರ್ಯ, ಸುನೀಲ್ ವಲ್ಯಾಪುರೆ, ಸೂರ್ಯಕಾಂತ ನಾಗಮಾರಪಲ್ಲಿ ಕೂಡ ಬಿಜೆಪಿ ನಾಯಕರೆದುರು ಸದಸ್ಯತ್ವ ನೋಂದಣಿ ಮಾಡಿಕೊಂಡರು.
ಮೆರವಣಿಗೆ ಮೂಲಕ ಆಗಮನ: ಬೆಳಗ್ಗೆ 10.30ಕ್ಕೆ ಮಲ್ಲೇಶ್ವರದ ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಸಿ.ಎಂ. ಉದಾಸಿ ಮತ್ತಿತರರು ಮೆರವಣಿಗೆ ಮೂಲಕ 11.15ರ ವೇಳೆಗೆ ಬಿಜೆಪಿ ಕಚೇರಿಗೆ ಆಗಮಿಸಿದರು. ಅಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಮಾಜಿ ಸಚಿವ ವಿ. ಸೋಮಣ್ಣ, ಶಾಸಕ ಸುನೀಲ್ ಕುಮಾರ್, ಎಸ್.ಆರ್. ವಿಶ್ವನಾಥ್ ಮತ್ತಿತರರು ಹೂಮಾಲೆ ಹಾಕಿ, ಹೂಗುಚ್ಛ ನೀಡಿ ಯಡಿಯೂರಪ್ಪ ಮತ್ತಿತರರನ್ನು ಕಚೇರಿಗೆ ಬರಮಾಡಿಕೊಂಡರು. ಬಳಿಕ ಬಿಜೆಪಿ ಕಚೇರಿಯಲ್ಲಿ ಭಾರತಮಾತೆ ಭಾವಚಿತ್ರಕ್ಕೆ ಹೂ ಹಾಕಿ ಪೂಜೆ ಸಲ್ಲಿಸಿದ ಯಡಿಯೂರಪ್ಪ ಮತ್ತು ಅವರ ಬೆಂಬಲಿಗರು ಅಲ್ಲಿಂದ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯೂ ಆಗಿರುವ ಸಂಸದ ಅನಂತಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದಗೌಡ, ಜಗದೀಶ್ ಶೆಟ್ಟರ್ ಮತ್ತಿತರರ ಜತೆ ಪಕ್ಷದ ಕಚೇರಿಯ ಎರಡನೇ ಮಹಡಿಗೆ ಆಗಮಿಸಿದರು. ಅಲ್ಲಿ ಸದಸ್ಯತ್ವ ಸ್ವೀಕಾರ ಕಾರ್ಯಕ್ರಮ ನಡೆಯಿತು. ಇದೇ ವೇಳೆ ಬಿಜೆಪಿಯ ರಾಜ್ಯ, ಜಿಲ್ಲೆ ಮತ್ತು ತಾಲೂಕು ಪದಾಧಿಕಾರಿಗಳು ಹಾಗೂ ನೂರಾರು ಕಾರ್ಯಕರ್ತರು ಕೂಡ ಬಿಜೆಪಿ ಕಚೇರಿಯ ನೆಲಮಹಡಿಯಲ್ಲಿ ಸ್ಥಾಪಿಸಿದ್ದ ಕೌಂಟರ್ಗಳಲ್ಲಿ 5 ನೀಡಿ ಸಾಮಾನ್ಯ ಸದಸ್ಯತ್ವ ಪಡೆದರು. ಬಿಜೆಪಿ ಸೇರುತ್ತಿರುವ ಕೆಜೆಪಿ ಮುಖಂಡರು ಮತ್ತು ಕಾರ್ಯಕರ್ತರನ್ನು ಸ್ವಾಗತಿಸಲು ಪಕ್ಷದ ಸಂಸದರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಮಾಜಿ ಸಂಸದರು ಸೇರಿದಂತೆ ಸಾವಿರಾರು ಬಿಜೆಪಿ ಕಾರ್ಯಕರ್ತರು ಕೂಡ ಪಕ್ಷದ ಕಚೇರಿಯಲ್ಲಿ ಸೇರಿದ್ದರು.