ಭಿನ್ನತೆ ನಡುವೆ ಇರಲಿ ನಮ್ಮ ಏಕತೆ, ಸ್ಥಾನಕ್ಕಾಗಿ ಸುಳ್ಳಾಡದಿರಲಿ ಸಾಹಿತಿಗಳು, ಕನ್ನಡಕ್ಕಿರಲಿ ಕೆಲ ಸರಳ ನಿರ್ಣಯ
ಕರ್ನಾಟಕದ ನಾಡಗೀತೆಯನ್ನು ಖಾಸಗಿ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಶಾಲೆಯ ಆರಂಭದಲ್ಲಿಯೇ...
ಸಮ್ಮೇಳನ ನಿರ್ಣಯ
1. ಕರ್ನಾಟಕದ ನಾಡಗೀತೆಯನ್ನು ಖಾಸಗಿ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಶಾಲೆಯ ಆರಂಭದಲ್ಲಿಯೇ ಕಡ್ಡಾಯವಾಗಿ ಹಾಡಬೇಕು ಎಂದು ಸರ್ಕಾರ ಆದೇಶ ಹೊರಡಿಸಬೇಕು.
2. ಸರ್ಕಾರದ ಶವಯಾತ್ರೆ ಮಾಡುತ್ತಿದ್ದೆವು ಎಂದ ಎಂಇಎಸ್ ಶಾಸಕರ ವಿರುದ್ಧ ಸರ್ಕಾರ ಕ್ರಮ ಜರುಗಿಸದೇ ಮೌನ ವಹಿಸಿರುವುದನ್ನು ಖಂಡಿಸಲಾಗಿದೆ. ನಾಡಿನ ಅಖಂಡತೆ ವಿರುದ್ಧ ಸೊಲ್ಲೆತ್ತಿರುವ ಶಾಸಕ ಉಮೇಶ್ ಕತ್ತಿ, ಅವರಂಥ ಕನ್ನಡನಾಡಿನ ಅಖಂಡತೆ ವಿರೋಧಿಗಳ ಧೋರಣೆಯನ್ನು ಮಡಿಕೇರಿ ಸಮ್ಮೇಳನ ತೀವ್ರವಾಗಿ ಖಂಡಿಸಿದೆ.
3. ಕನ್ನಡ ಶಾಲೆಗಳನ್ನು ಮುಚ್ಚುವುದಿಲ್ಲ ಎಂಬ ಮುಖ್ಯಮಂತ್ರಿ ನಿಲುವನ್ನು ಸ್ವಾಗತಿಸಿ, ಗಡಿಭಾಗದಲ್ಲಿನ ಕನ್ನಡ ಶಾಲೆಗಳನ್ನೂ ಮುಚ್ಚದಂತೆ ಅಗತ್ಯ ಕ್ರಮಕೈಗೊಳ್ಳಬೇಕು.
4. ಉತ್ತರ ಭಾರತದ ರಾಜ್ಯಗಳು ಮತ್ತು ತ.ನಾಡಿನಲ್ಲಿ ಆಯಾ ರಾಜ್ಯದ ಭಾಷೆಗಳಲ್ಲಿ ಇರುವಂತೆ ಕರ್ನಾಟಕದ ಹೈಕೋರ್ಟ್ನಲ್ಲಿ ನಡಾವಳಿಗಳನ್ನು ಕನ್ನಡದಲ್ಲಿ ನಡೆಸಬೇಕು.
5. ಕಸ್ತೂರಿರಂಗನ್ ವರದಿಯಲ್ಲಿ ಮಾಡಲಾಗಿರುವ ಕೊಡಗಿನ ಜನತೆಯ ಬದುಕು ಕಟ್ಟಿಕೊಡದ ಅಂಶಗಳನ್ನು ಜಾರಿಯಾಗಲು ಬಿಡಬಾರದು. ವರದಿ ಯನ್ನು ಸರ್ಕಾರ ತಿರಸ್ಕರಿಸಬೇಕು.
6. 80ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಿದ ಕೊಡಗಿನ ಜನತೆಗೆ ಸಮ್ಮೇಳನದ ಮಹಾಸಭೆಯು ಧನ್ಯವಾದ ಅರ್ಪಿಸುವ ನಿರ್ಣಯ.
ಬಡವರ ಪರ ನಿಲ್ಲಿ...
ನಿಮ್ಮ ಆಸೆಗಳು ಈಡೇರದೇ ಇರಬಹುದು. ಸ್ಥಾನ ಸಿಗದೇ ಇರಬಹುದು ಎಂಬ ಕಾರಣಕ್ಕೆ ಹೆದರಿ ಸಾಹಿತಿಗಳೇ ಸತ್ಯ ಹೇಳದೇ ಇರಬೇಡಿ. ಜನರಿಗೆ ಬೇಸರವಾಗುತ್ತದೆಂದು ಸಾಹಿತಿ ಸತ್ಯ ಹೇಳಲು ಹಿಂಜರಿಯಬಾರದು.
ಕರ್ನಾಟಕ ಹಲವು ಸಂಸ್ಕೃತಿಗಳನ್ನು ಒಳಗೊಂಡ ರಾಜ್ಯ. ನಾವು ನಮ್ಮ ನಮ್ಮ ಭಿನ್ನತೆಗಳನ್ನು ಉಳಿಸಿಕೊಂಡು ಏಕತೆ ಸಾಧಿಸುವುದನ್ನು ರೂಢಿಸಿಕೊಳ್ಳಬೇಕಿದೆ. ಇಲ್ಲವಾದಲ್ಲಿ ನಮ್ಮ ಏಕತೆಗೆ ಭಂಗ ಬರಲಿದೆ.
ಕನ್ನಡಕ್ಕಾಗಿ ಕಿಟ್ಟೆಲ್ ಮತ್ತು ಮೋಗ್ಲಿಂಗ್ ಸಾಕಷ್ಟು ಕೆಲಸ ಮಾಡಿದ್ದಾರೆ. ಆದರೆ, ಮಡಿಕೇರಿಯಲ್ಲಿ ಅವರ ಬಗ್ಗೆ ಸ್ಮಾರಕ ಇಲ್ಲ ಎಂಬುದು ಬೇಸರದ ಸಂಗತಿ.
ಸಾಹಿತಿಗಳು ಬಡವರ, ದೀನರ, ತೊಂದರೆಗೊಳಗಾದವರ ಪರ ನಿಲ್ಲಬೇಕು. ಆದರೆ, ಸಾಹಿತಿಗಳು ಈ ನಿಟ್ಟಿನಲ್ಲಿ ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ.
ಹೊರಗಿನವರು ವಿರೋಧಿಗಳಲ್ಲ...
ಕನ್ನಡ ಭಾಷೆ ಸಾಯದು. ಹಲವು ದಾಳಿಗಳನ್ನು ಎದುರಿಸಿ ಕನ್ನಡ ಗಟ್ಟಿಯಾಗಿ ನಿಂತಿದೆ. ನಮ್ಮ ಮಕ್ಕಳನ್ನು ಸಲಹಿದಂತೆ ಕನ್ನಡವನ್ನು ಸಲಹುವ ಜವಾಬ್ದಾರಿ ನಮ್ಮದು.
ಕನ್ನಡಕ್ಕೆ ಹೊರಗಿನವರು ವಿರೋಧಿಗಳಲ್ಲ. ಪೋರ್ಚುಗೀಸರಿಂದ ಆರಂಭಿಸಿ ಈವರೆಗೆ ಸಾಕಷ್ಟು ದಾಳಿಗಳು ನಡೆದಿವೆ. ಆದರೆ, ಕನ್ನಡ ಅವೆಲ್ಲವನ್ನೂ ಸಮರ್ಥವಾಗಿ ಎದುರಿಸಿದೆ.
ಕೆಲವು ಸರಳ ನಿರ್ಧಾರಗಳ ಮೂಲಕ ಕನ್ನಡವನ್ನು ಉಳಿಸಿಕೊಳ್ಳಬಹುದು. ಎಲ್ಲರೂ ಮೊದಲು ಮೊಬೈಲ್ ಅಂಕಿ ಹೇಳುತ್ತಾರೆ. ಆಗೆಲ್ಲ ಕನ್ನಡ ಅಂಕಿಗಳನ್ನೇ ಹೇಳಬೇಕು.
ಕನ್ನಡ ಉಳಿಸಿಕೊಳ್ಳದಿದ್ದರೆ ನಾವು ಸ್ವದೇಶದಲ್ಲಿಯೇ ಪರದೇಶಿಗಳಾಗುತ್ತೇವೆ. ಕನ್ನಡದ ಭಾಷಾ ಸಂಪತ್ತು ಶ್ರೀಮಂತವಾಗಿದೆ. ಬಳಸುವ ಜವಾಬ್ದಾರಿ ಮಾತ್ರ ನಮ್ಮದು.
ನಮ್ಮ ಭಾಷೆಯ ಮೇಲೆ ನಾವು ನಂಬಿಕೆ ಇಟ್ಟು ಅದನ್ನು ಪ್ರೀತಿಯಿಂದ ಬಳಸಬೇಕಷ್ಟೇ.