ಶಾಸಕ ಅಪ್ಪಚ್ಚು ರಂಜನ್ ಸಹೋದರನ ಮೇಲೆ ಗುಂಡಿನ ದಾಳಿ
ಮಡಿಕೇರಿ/ಮೈಸೂರು: ಬಿಜೆಪಿ ಜಿಲ್ಲಾಧ್ಯಕ್ಷ, ಶಾಸಕ ಅಪ್ಪಚ್ಚು ರಂಜನ್ ಸಹೋದರ ಸುಜಾ ಕುಶಾಲಪ್ಪ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ ಘಟನೆ ಗುರುವಾರ ಸಂಭವಿಸಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗುರುವಾರ ಸಂಜೆ ಸುಜಾ ಕುಶಾಲಪ್ಪ ವಿರಾಜಪೇಟೆಯ ಸಬ್ರಿಜಿಸ್ಟ್ರಾರ್ ಕಚೇರಿಗೆ ಕಾರ್ಯನಿಮಿತ್ತ ತೆರಳಿ ವಾಪಾಸ್ ಬರುತ್ತಿದ್ದಾಗ ಅಪರಿಚಿತರು ಸನಿಹದಿಂದಲೇ ಗುಂಡು ಹಾರಿಸಿದರು. ಆದರೆ, ಗುಂಡೇಟಿನಿಂದ ತಪ್ಪಿಸಿಕೊಂಡ ಸುಜಾ ಪ್ರಾಣಾಪಾಯದಿಂದ ಪಾರಾಗಿದ್ದು, ಕುತ್ತಿಗೆಗೆ ಗುಂಡೇಟು ತಗುಲಿದೆ. ತಮ್ಮ ಮೇಲೆ ಗುಂಡು ಹಾರಿಸಿದವರ ಮೇಲೆ ಕುಶಾಲಪ್ಪ ಕೂಡ ಗುಂಡು ಹಾರಿಸಿದರು ಎನ್ನಲಾಗಿದೆ. ವಿಚಾರ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ತೆರಳಿ ದುಷ್ಕರ್ಮಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ.
ಆಸ್ಪತ್ರೆಗೆ ದಾಖಲು: ಗಾಯಾಳು ಸುಜಾ ಕುಶಾಲಪ್ಪ ಅವರನ್ನು ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಿದ್ದು, ಅವರ ಕುತ್ತಿಗೆ ಭಾಗದಲ್ಲಿ ಎರಡು ಗುಂಡು ಹೊಕ್ಕಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಡಾ.ಅನಿಲ್ ಸಾಂಗ್ಲಿ ಮತ್ತು ಜೆಎಸ್ಎಸ್ ಆಸ್ಪತ್ರೆಯ ಪ್ರೊ.ಅಯ್ಯಪ್ಪ ನೇತೃತ್ವದ ತಂಡ ಕುಶಾಲಪ್ಪಅವರಿಗೆ ಚಿಕಿತ್ಸೆ ನೀಡುತ್ತಿದೆ. ಕುಶಾಲಪ್ಪ ಅವರೊಂದಿಗೆ ಶಾಸಕ ಅಪ್ಪಚ್ಚು ರಂಜನ್ ಆಗಮಿಸಿದ್ದರು. ಆಸ್ಪತ್ರೆಗೆ ಭೇಟಿ ನೀಡಿದ ಮಾಜಿ ಸಚಿವ ಎಸ್.ಎ.ರಾಮದಾಸ್ ಕುಶಾಲಪ್ಪ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ತಿಳಿಸಿದ್ದಾರೆ. ದಕ್ಷಿಣ ವಲಯ ಐಜಿಪಿ ಡಾ.ರಾಮಚಂದ್ರರಾವ್ ಮತ್ತು ಮೈಸೂರು ಬಿಜೆಪಿ ಜಿಲ್ಲಾಧ್ಯಕ್ಷ ಹೇಮಂತಕುಮಾರ್ ಗೌಡ ಆಸ್ಪತ್ರೆಗೆ ಭೇಟಿ ನೀಡಿದ್ದರು.