ಕೆಆರ್ಎಸ್ಗೆ ಝಡ್ ಭದ್ರತೆ
ದಕ್ಷಿಣ ಕರ್ನಾಟಕದ ಲಕ್ಷಾಂತರ ರೈತರ ಜೀವನಾಡಿಯಾಗಿರುವ 'ಕೃಷ್ಣರಾಜಸಾಗರ ಜಲಾಶಯ'ಕ್ಕೆ 'ಝಡ್ ಕೆಟಗರಿ' ಮಾದರಿ ಭದ್ರತೆ ನೀಡಲು...
ಕನ್ನಡ ಪ್ರಭ ವಾರ್ತೆ , ಮಂಡ್ಯ , ಜ.10
ದಕ್ಷಿಣ ಕರ್ನಾಟಕದ ಲಕ್ಷಾಂತರ ರೈತರ ಜೀವನಾಡಿಯಾಗಿರುವ 'ಕೃಷ್ಣರಾಜಸಾಗರ ಜಲಾಶಯ'ಕ್ಕೆ 'ಝಡ್ ಕೆಟಗರಿ' ಮಾದರಿ ಭದ್ರತೆ ನೀಡಲು ರಾಷ್ಟ್ರೀಯ ಭದ್ರತಾ ಪಡೆ ಸೂಚಿಸಿದೆ. ಇದಕ್ಕಾಗಿ ಅಂದಾಜು 5 ಕೋಟಿ ಯೋಜನೆ ಹಾಗೂ ನೀಲನಕ್ಷೆಯೊಂದನ್ನು ಸಿದ್ಧಪಡಿಸಲು ನಿರ್ಧರಿಸಲಾಗಿದೆ.
ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧ ನಂತರ ಎರಡನೇ ಅತಿ ಹೆಚ್ಚಿನ ಭದ್ರತೆಯನ್ನು ಕೆಆರ್ಎಸ್ಗೆ ಒದಗಿಸಲಾಗುತ್ತಿದೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ ನೇತೃತ್ವದಲ್ಲಿ ಜಲ ಸಂಪನ್ಮೂಲ ಇಲಾಖೆ, ತೋಟಗಾರಿಕೆ, ಪ್ರವಾಸೋದ್ಯಮ ಇಲಾಖೆಗಳ ಅಧಿಕಾರಿಗಳ ಉನ್ನತ ಮಟ್ಟದ ಸಭೆ ನಡೆದಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೆಆರ್ಎಸ್ ಭದ್ರತೆಗೆ ಸಂಬಂಧಿಸಿದಂತೆ ನೀಡಿರುವ ಸೂಚನೆಗಳೂ ಒಳಗೊಂಡಂತೆ ಭದ್ರತೆ ಕುರಿತು ಇನ್ನೂ ಕೆಲವು ಮಹತ್ವದ ಬಿಗಿ ಕ್ರಮಗಳನ್ನು ಅನುಷ್ಠಾನಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕೆಆರ್ಎಸ್ನ ವಿಶೇಷ ಭದ್ರತೆಗಾಗಿ ಕಾವೇರಿ ನೀರಾವರಿ ನಿಗಮದ ವತಿಯಿಂದ 4.72 ಕೋಟಿ ಆರ್ಥಿಕ ನೆರವು ಸಿಗಲಿದೆ.
ಇನ್ನೂ ಹೆಚ್ಚಿನ ಹಣದ ಅಗತ್ಯ ಕಂಡು ಬಂದರೆ ನಿಗಮ ನೆರವು ನೀಡುವ ಭರವಸೆ ನೀಡಿದೆ. ಈ ಸಭೆಯಲ್ಲಿ ನಿರ್ಧಾರವಾಗಿರುವಂತೆ 60 ಸಿಸಿ ಟಿವಿ ಕ್ಯಾಮೆರಾ ಖರೀದಿ ಮತ್ತು ಅದರ ಉಸ್ತುವಾರಿಗಾಗಿ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ ಎಂದು ಮಂಡ್ಯ ಎಸ್ಪಿ ಭೂಷಣ್ ತಿಳಿಸಿದ್ದಾರೆ. ಸಭೆಯಲ್ಲಿ ನಿರ್ಧರಿಸಲಾದ ಎಲ್ಲ ಸಂಗತಿಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ. ಕೆಆರ್ಎಸ್ ಶಾಶ್ವತ ಭದ್ರತೆ ಜೊತೆಗೆ ಅಣೆಕಟ್ಟೆಯ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಉನ್ನತ ಮಟ್ಟದ ಅಧಿಕಾರಿಗಳು ಭದ್ರತೆಗೆ ಸಂಬಂಧಿಸಿದಂತೆ ಕೈಗೊಳ್ಳಲಾದ ಕ್ರಮಗಳನ್ನು ಅವಲೋಕಿಸಲು ಸರ್ಕಾರ ಸೂಚಿಸಿದೆ ಎಂದು ಹೇಳಿದರು.
ಕೆಆರ್ಎಸ್ ಅಣೆಕಟ್ಟೆಗೆ ಉಗ್ರರ ಬೆದರಿಕೆ ಇದೆ. ಈ ಹಿನ್ನೆಲೆಯಲ್ಲಿ ದಿನವಿಡಿ ಕ್ಯಾಮೆರಾ, ಪೊಲೀಸ್ ಕಣ್ಗಾವಲು ಹಾಕುವುದರಿಂದ ವಿಶೇಷ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ.
- ಭೂಷಣ್ ಜಿ. ಬೊರಸೆ, ಮಂಡ್ಯ ಎಸ್ಪಿ.
ಕ್ಯಾಮೆರಾ ಕಣ್ಗಾವಲು
ಅಣೆಕಟ್ಟೆಯ ಕೆಳ ಭಾಗದ ನೀರಿನಲ್ಲಿ ಬೋಟಿಂಗ್ ಮೂಲಕ ದಾಳಿ ಮಾಡಿದರೆ ಅಥವಾ ನಿಷೇಧಿತ ಪ್ರದೇಶದಲ್ಲಿ ಅಪರಿಚಿತರು ಕಂಡು ಬಂದರೆ, ರಾತ್ರಿ ವೇಳೆಯಲ್ಲೂ ಸ್ಪಷ್ಟ ಚಿತ್ರಣ ಮತ್ತು ಎಚ್ಚರಿಕೆ ನೀಡುವ ಸರ್ವೈಲೆನ್ಸ್ ಕ್ಯಾಮೆರಾ ಅಳವಡಿಸಲು ಉದ್ದೇಶಿಸಲಾಗಿದೆ. ಮೆಟಲ್ ಡಿಟೆಕ್ಟರ್, ದೈಹಿಕ ಮತ್ತು ಎಲೆಕ್ಟ್ರಾನಿಕ್ ರೂಪದಲ್ಲಿ ಎರಡು ಹಂತದಲ್ಲಿ ಭದ್ರತೆ ವ್ಯವಸ್ಥೆ ಮಾಡಲಾಗುವುದು. ಅಣೆಕಟ್ಟೆಯ ಉತ್ತರ ಮತ್ತು ದಕ್ಷಿಣ ಭಾಗದ ಗೇಟ್ಗೆ ಬ್ಲೂಮ್ ಬ್ಯಾರಿಯರ್ಸ್ ಹಾಕಲಾಗುವುದು. ಅಲ್ಲದೇ ಸಿಬ್ಬಂದಿಗೆ ಮತ್ತು ಪೊಲೀಸರೂ ಸಹ ಪ್ರವೇಶ ಮಾಡಬೇಕಾದರೆ ಎಲೆಕ್ಟ್ರಾನಿಕ್ಸ್ ಗುರುತಿನ ಕಾರ್ಡ್ನ್ನು ಬಳಸಿದರೆ ಮಾತ್ರ ಅಣೆಕಟ್ಟೆಯ ಗೇಟ್ ತೆರೆಯುವಂತಹ ವ್ಯವಸ್ಥೆಯನ್ನು ಜಾರಿಗೆ ತರಲು ಚಿಂತಿಸಲಾಗಿದೆ ಎಂದರು.
-ಕೆ. ಎನ್. ರವಿ