ಕೇಸು ದಾಖಲಿಸಿ ವಾಪಸ್ ಕಳ್ಸಿದ್ರು
ದೇವಯಾನಿ ಖೋಬ್ರಗಡೆ ಪ್ರಕರಣಕ್ಕೆ ಸಂಬಂಧಿಸಿ ಭಾರತ, ಅಮೆರಿಕದ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಶುಕ್ರವಾರ ಮತ್ತಷ್ಟು ಬಿಗಡಾಯಿಸಿದೆ...
ನವದೆಹಲಿ/ನ್ಯೂಯಾರ್ಕ್: ದೇವಯಾನಿ ಖೋಬ್ರಗಡೆ ಪ್ರಕರಣಕ್ಕೆ ಸಂಬಂಧಿಸಿ ಭಾರತ, ಅಮೆರಿಕದ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಶುಕ್ರವಾರ ಮತ್ತಷ್ಟು ಬಿಗಡಾಯಿಸಿದೆ. ಕೋರ್ಟ್‌ಲ್ಲಿ ಆರೋಪಪಟ್ಟಿ ದಾಖಲಾದ ಬೆನ್ನಲ್ಲೇ ದೇವಯಾನಿ ಅವರನ್ನು ಅಮೆರಿಕ ಭಾರತಕ್ಕಟ್ಟಿದೆ. ಈ ಬೆಳವಣಿಗೆಯಿಂದ ಕೆಂಡಾಮಂಡಲವಾಗಿರುವ ಭಾರತ ದೆಹಲಿಯಲ್ಲಿರುವ ದೇವಯಾನಿ ಹುದ್ದೆ ದರ್ಜೆಯ ಅಮೆರಿಕದ ರಾಜತಾಂತ್ರಿಕ ಅಧಿಕಾರಿಯೊಬ್ಬರಿಗೆ ದೇಶ ತೊರೆಯುವಂತೆ ಸೂಚಿಸಿದೆ.
ಇದಕ್ಕೂ ಮುನ್ನ ದೇವಯಾನಿಗೆ ಸಂಪೂರ್ಣ ರಾಜತಾಂತ್ರಿಕ ರಕ್ಷಣೆ ನೀಡುವ ಪ್ರಸ್ತಾಪಕ್ಕೆ ಅಮೆರಿಕ ಒಪ್ಪಿಗೆ ನೀಡಿತ್ತು. ಆ ಬಳಿಕ ದೇವಯಾನಿಗೆ ಸಿಕ್ಕಿರುವ ಈ ರಾಜತಾಂತ್ರಿಕ ರಕ್ಷಣೆಯನ್ನು ಹಿಂಪಡೆಯುವಂತೆ ಈ ಮೂಲಕ ಆಕೆಯ ವಿಚಾರಣೆಗೆ ಅನುವು ಮಾಡಿಕೊಡುವಂತೆ ಭಾರತಕ್ಕೆ ಮನವಿ ಮಾಡಿತ್ತು.
ಭಾರತ ಈ ಮನವಿ ತಿರಸ್ಕರಿಸಿದ ಹಿನ್ನೆಲೆಯಲ್ಲಿ ದೇವಯಾನಿ ಅವರನ್ನು ವಾಪಸ್ ಕರೆಸಿಕೊಳ್ಳುವಂತೆ ಅಮೆರಿಕ ಸೂಚಿಸಿತು.ದೇವಯಾನಿ ಸ್ವದೇಶಕ್ಕೆ ಮರಳಿದರೂ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಅವರ ವೀಸಾ ವಂಚನೆ ಕೇಸು ಹಾಗೆಯೇ ಉಳಿಯಲಿದೆ. ಒಂದು ವೇಳೆ ರಾಜತಾಂತ್ರಿಕ ರಕ್ಷಣೆ ಇಲ್ಲದೆ ಅವರು ಅಮೆರಿಕಕ್ಕೆ ಕಾಲಿಟ್ಟರೆ ವಿಚಾರಣೆ ಎದುರಿಸುವುದು ಅನಿವಾರ್ಯವಾಗಲಿದೆ ಎಂದು ಅಮೆರಿಕದ ಅಟಾರ್ನಿ ಪ್ರೀತ್ ಭರಾರ ಹೇಳಿದ್ದಾರೆ.
ಜಿ-1 ವೀಸಾ ನೀಡದೆ ದಾರಿ ಇರಲಿಲ್ಲ
ದೇವಯಾನಿ ಅವರಿಗೆ ಜಿ-1 ವೀಸಾ ನೀಡುವಂತೆ ಭಾರತ ಮಾಡಿದ್ದ ಮನವಿಯನ್ನು ಒಪ್ಪಿಕೊಂಡಿರುವ ಅಮೆರಿಕ ಈ ರೀತಿ ಮಾಡದೆ ಬೇರೆ ದಾರಿಯೇ ಇಲ್ಲ ಎಂದಿದೆ. ಈ ಜಿ-1 ವೀಸಾ ದೇವಯಾನಿಗೆ ಸಂಪೂರ್ಣ ರಾಜತಾಂತ್ರಿಕ ರಕ್ಷಣೆ ನೀಡುತ್ತದೆ. ಆದರೆ, ಈ ವೀಸಾ ನೀಡಿದ ಬೆನ್ನಲ್ಲೇ ದೇವಯಾನಿಗೆ ಸಿಕ್ಕಿರುವ ರಾಜತಾಂತ್ರಿಕ ರಕ್ಷಣೆ ರದ್ದುಪಡಿಸುವಂತೆ ಅಮೆರಿಕ ಮನವಿ ಮಾಡಿತ್ತು.
ಮೌನ ಮುರಿದ ಸಂಗೀತಾ ರಿಚರ್ಡ್
ವೀಸಾ ವಂಚನೆ ಪ್ರಕರಣದಲ್ಲಿ ಕೇಂದ್ರಬಿಂದುವಾಗಿದ್ದ ದೇವಯಾನಿ ಮನೆಗೆಲಸದಾಕೆ ಸಂಗೀತಾ ರಿಚರ್ಡ್ ಇದೇ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ದೇವಯಾನಿ ಮನೆಯಲ್ಲಿ ಸಾಕಷ್ಟು ಶೋಷಣೆಗೆ ಒಳಗಾಗಿದ್ದಾಗಿ ತಿಳಿಸಿದ್ದಾರೆ. ಜತೆಗೆ, ಯಾವುದೇ ರೀತಿಯ ಶೋಷಣೆಯನ್ನು ಸಹಿಸಿಕೊಳ್ಳದಂತೆ ಅಮೆರಿಕದಲ್ಲಿರುವ ಇತರೆ ಮನೆಗೆಲಸದವರಿಗೂ ಸಲಹೆ ನೀಡಿದ್ದಾರೆ. 'ನನ್ನ ಕುಟುಂಬವನ್ನು ಬೆಂಬಲಿಸಲು ಅಮೆರಿಕಕ್ಕೆ ಬಂದಿದ್ದೆ. ಕೆಲ ವರ್ಷಗಳ ಬಳಿಕ ಭಾರತಕ್ಕೆ ಹಿಂತಿರುವುದು ನನ್ನ ಉದ್ದೇಶವಾಗಿತ್ತು. ಆದರೆ, ಇಲ್ಲಿ ನಾನು ಈ ರೀತಿಯ ಸಂಕಷ್ಟ ಅನುಭವಿಸಬೇಕೆಂದು ಗೊತ್ತಿರಲಿಲ್ಲ. ನನಗೆ ಮಲಗಲಾಗಲಿ, ತಿನ್ನಲಾಗಲಿ ಸಮಯವೇ ಇರುತ್ತಿರಲಿಲ್ಲ' ಎಂದು ಸಂಗೀತಾ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಸಂಗೀತಾ ಹೇಳಿಕೆಯನ್ನು ಆಕೆಗೆ ರಕ್ಷಣೆ ನೀಡಿರುವ ಸೇಫ್ ಹಾರಿಜಾನ್ ಸಂಸ್ಥೆ ಬಿಡುಗಡೆ ಮಾಡಿದೆ.
ಸಂಬಂಧವೃದ್ಧಿಗೆ ಇನ್ನಷ್ಟು ಕ್ರಮ ಅಗತ್ಯ
ಭಾರತ ಮತ್ತು ಅಮರಿಕದ ನಡುವಿನ ಬಾಂಧವ್ಯಕ್ಕೆ ಸಾಕಷ್ಟು ಪ್ರಾಮುಖ್ಯತೆ ಇದೆ. ಈ ಸಂಬಂಧ ಸಾಂಸ್ಕೃತಿಕ, ರಾಜಕೀಯ, ಆರ್ಥಿಕ ಹೀಗೆ... ವಿವಿಧ ವಿಚಾರಗಳನ್ನು ಒಳಗೊಂಡಿದೆ. ಈ ಸಂಬಂಧವನ್ನು ಬಲಗೊಳಿಸುವ ನಿಟ್ಟಿನಲ್ಲಿ ಇನ್ನಷ್ಟು ಕೆಲಸ ಮಾಡುವ ಅಗತ್ಯವಿದೆ ಎಂದು ಒಬಾಮ ನಂಬಿಕೆ ಇರಿಸಿಕೊಂಡಿದ್ದಾಗಿ ಅಮೆರಿಕದ ವಿದೇಶಾಂಗ ಸಚಿವ ಜಾನ್ ಕೆರ್ರಿ ತಿಳಿಸಿದ್ದಾರೆ.
ರಾಜಿ ಪ್ರಸ್ತಾಪ ತಿರಸ್ಕರಿಸಿದ್ದರು
ವೀಸಾ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ರಾಜಿ ಪ್ರಸ್ತಾಪವನ್ನು ದೇವಯಾನಿ ತಿರಸ್ಕರಿಸಿದ್ದರು. ದೇಶದ ಸಾರ್ವಭೌಮತ್ವವನ್ನು ಎತ್ತಿ ಹಿಡಿಯುವ ಹಿನ್ನೆಲೆಯಲ್ಲಿ ಅಮೆರಿಕದಲ್ಲೇ ಉಳಿಯಲು ನಿರ್ಧರಿಸಿದ್ದರು ಎಂದು ದೇವಯಾನಿ ತಂದೆ ಉತ್ತಮ್ ಖೋಬ್ರಗಡೆ ತಿಳಿಸಿದ್ದಾರೆ. ಇದೇ ವೇಳೆ, ದೇವಯಾನಿ ಪ್ರಕರಣವನ್ನು ಇತ್ಯರ್ಥಗೊಳಿಸುವಲ್ಲಿ ಸಹಕಾರ ನೀಡಿದ ಪ್ರಧಾನಿ ಮನಮೋಹನ ಸಿಂಗ್, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯಕ್ಕೆ ಉತ್ತಮ್ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಏಟಿಗೆ ಇದಿರೇಟು ನೀಡಿದ ಭಾರತ
ದೇವಯಾನಿ ಅವರನ್ನು ಸ್ವದೇಶಕ್ಕೆ ಅಟ್ಟಿದ ಅಮೆರಿಕದ ಕ್ರಮಕ್ಕೆ ಭಾರತ ತಿರುಗೇಟು ನೀಡಲು ಮುಂದಾಗಿದೆ. ದೆಹಲಿಯಲ್ಲಿರುವ ಅಮೆರಿಕದ ರಾಜತಾಂತ್ರಿಕ ಅಧಿಕಾರಿಯೊಬ್ಬರಿಗೆ ಭಾರತಬಿಟ್ಟು ತೆರಳುವಂತೆ ಸೂಚಿಸಲಾಗಿದೆ.
ದೇವಯಾನಿ ಬಂಧನದ ಹಿಂದೆ ಅಧಿಕಾರಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಭಾರತ ಆರೋಪಿಸಿದೆ. ದೇವಯಾನಿ ಪ್ರಕರಣ ಎರಡೂ ದೇಶಗಳ ನಡುವೆ ಸೃಷ್ಟಿಯಾಗಿರುವ ಬಿಕ್ಕಟ್ಟು ಇನ್ನೂ ಬಗೆಹರಿದಂತಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿದೆ.
ಅಮೆರಿಕದ ನ್ಯಾಯಾಲಯದಲ್ಲಿ ನನ್ನ ವಿರುದ್ಧ ಮಾಡಲಾದ ಎಲ್ಲ ಆರೋಪಗಳಲ್ಲಿ ಹುರುಳಿಲ್ಲ. ನಾನು ಈ ಆರೋಪಗಳನ್ನು ಸುಳ್ಳು ಎಂದು ಸಾಬೀತುಪಡಿಸಲಿದ್ದೇನೆ
- ದೇವಯಾನಿ ಖೋಬ್ರಗಡೆ,
ರಾಜತಾಂತ್ರಿಕ ಅಧಿಕಾರಿ
ದೇವಯಾನಿ ವಿರುದ್ಧ ಆರೋಪಪಟ್ಟಿ ದಾಖಲಿಸಿ ಸ್ವದೇಶಕ್ಕೆ ವಾಪಸ್ ಕಳುಹಿಸಿರುವ ವಿಚಾರ ನಮಗೆ ಸೋಲು.
- ಯಶವಂತ್ ಸಿನ್ಹಾ, ಬಿಜೆಪಿ ನಾಯಕ