ಜೆಡಿಎಸ್ ಕಚೇರಿ ಕಾಂಗ್ರೆಸ್ ಪಾಲು?
ಬೆಂಗಳೂರಿನ ಹೃದಯ ಭಾಗದಲ್ಲಿರುವ ಜೆಡಿಎಸ್ ಕಚೇರಿ ಮಾಲೀಕತ್ವ ವಿವಾದ ಕುರಿತು ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪನ್ನು ಸುಪ್ರೀಂ ಕೋರ್ಟ್...
ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ: ಬೆಂಗಳೂರಿನ ಹೃದಯ ಭಾಗದಲ್ಲಿರುವ ಜೆಡಿಎಸ್ ಕಚೇರಿ ಮಾಲೀಕತ್ವ ವಿವಾದ ಕುರಿತು ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿಯುವ ಸಾಧ್ಯತೆ ಇದೆ.
ಜೆಡಿಎಸ್ ಕಚೇರಿ ಕಾಂಗ್ರೆಸ್‌ಗೆ ಸೇರಿದ್ದು ಎಂಬ ಹೈಕೋರ್ಟ್ ಆದೇಶ ಪ್ರಶ್ನಿಸಿ ಜೆಡಿಎಸ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ಶುಕ್ರವಾರ ನ್ಯಾ. ರಾಧಾಕೃಷ್ಣನ್ ಅವರ ಪೀಠದಲ್ಲಿ ನಡೆಯಿತು.
ವಿಚಾರಣೆ ವೇಳೆ, ನ್ಯಾಯಮೂರ್ತಿಗಳು ಅರ್ಜಿದಾರರ ಪರ ವಕೀಲರಿಗೆ, 'ನಿಮ್ಮ ಅರ್ಜಿ ವಜಾ ಮಾಡಿದರೆ, ನೀವು ಕಚೇರಿ ತೆರವುಗೊಳಿಸಲು ಎಷ್ಟು ಸಮಯ ಬೇಕಾಗಬಹುದು' ಎಂದು ಪ್ರಶ್ನಿಸಿದರು. ಜೆಡಿಎಸ್ ಪರ ವಕೀಲ ಗೋಪಾಲ್ ಸುಬ್ರಹ್ಮಣ್ಯ ಅವರು, 'ಚುನಾವಣಾ ವರ್ಷ ಆಗಿರುವುದರಿಂದ ಕಚೇರಿ ತೆರವಿಗೆ 2014ರ ಅಂತ್ಯದವರೆಗೂ ಕಾಲಾವಕಾಶ ಬೇಕಾಗುತ್ತದೆ' ಎಂದರು.
ಇದಕ್ಕೂ ಮುನ್ನ ವಕೀಲರು, ಕಚೇರಿ ಜೆಡಿಎಸ್‌ಗೆ ಸೇರಿದೆ. 1969ರಲ್ಲಿ ಕಾಂಗ್ರೆಸ್ ಇಬ್ಭಾಗವಾದಾಗಿಂದಲೂ ಕಚೇರಿ ಬೇರೆ ಬೇರೆ ರೂಪದಲ್ಲಿದ್ದ ಜೆಡಿಎಸ್ ಪಕ್ಷದ ವಶದಲ್ಲೇ ಇದೆ ಎಂದು ವಾದಿಸಿದರು. ಆದರೆ, ನ್ಯಾಯಮೂರ್ತಿಗಳು ನಿಮ್ಮ ಅರ್ಜಿ ವಜಾ ಮಾಡಿದರೆ ತೆರವಿಗೆ ಎಷ್ಟು ದಿನ ಬೇಕಾಗಬಹುದು ಎಂದು ಪ್ರಶ್ನಿಸಿದ್ದರಿಂದ ಪರೋಕ್ಷವಾಗಿ ಕರ್ನಾಟಕ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿಯುವ ಇಂಗಿತ ವ್ಯಕ್ತಪಡಿಸಿದಂತಾಗಿದೆ. ನ್ಯಾಯಪೀಠ ಸದ್ಯಕ್ಕೆ ಯಾವ ಆದೇಶವನ್ನೂ ನೀಡಿಲ್ಲ. ಜತೆಗೆ ಪ್ರತಿವಾದಿಗಳಿಗೆ ನೋಟಿಸ್ ಸಹ ನೀಡಿಲ್ಲ. ಶೀಘ್ರವೇ ತನ್ನ ಆದೇಶ ನೀಡಲಿದೆ.