ಹಂಪಿ ಉತ್ಸವಕ್ಕೆ ವಿಧ್ಯುಕ್ತ ಚಾಲನೆ
ಶ್ರೀಕೃಷ್ಣದೇವರಾಯ ವೇದಿಕೆ, ಹಂಪಿ: ಐತಿಹಾಸಿಕ ಹಂಪಿಯ ವಿಜಯನಗರ ಸಾಮ್ರಾಜ್ಯದ ಗತ ವೈಭವವನ್ನು ನೆನಪಿಸಿಕೊಡುವ 3 ದಿನಗಳ ಹಂಪಿ ಉತ್ಸವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಸಂಜೆ ಶ್ರೀ ಕೃಷ್ಣದೇವರಾಯ ಮುಖ್ಯವೇದಿಕೆಯಲ್ಲಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿ, ವಿವಿಧ ಸಾಂಸ್ಕೃತಿಕ ಕಲೆ, ಸಂಗೀತ, ನೃತ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, 'ಹಂಪಿ ದೇಶ, ವಿದೇಶಗಳ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುವ ಐತಿಹಾಸಿಕ ಸ್ಥಳ. ಇಂತಹ ಸ್ಥಳವನ್ನು ಸಾಕಷ್ಟು ಅಭಿವೃದ್ಧಿಪಡಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಕೆಲಸಗಳು ಆಗಬೇಕಿದ್ದು, ಈಗಾಗಲೆ ಪ್ರವಾಸೋದ್ಯಮ ಸಚಿವರ ಮೂಲಕ ಹಂಪಿ ಅಭಿವೃದ್ಧಿಗೆ ಸಂಬಂಧಿಸಿದಂತೆ ನೀಲನಕ್ಷೆ ತಯಾರಿಸುವಂತೆ ತಿಳಿಸಿದ್ದೇನೆ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ಕಾರ್ಯೋನ್ಮುಖವಾಗಿದೆ' ಎಂದು ತಿಳಿಸಿದರು. ಇದೇ ವೇಳೆ, ಅವರು ಹಂಪಿ ಉತ್ಸವ ಆಚರಣೆಗೆ ಎಂ.ಪಿ.ಪ್ರಕಾಶ್ ಕಾರಣರು ಎಂದು ಸ್ಮರಿಸಿಕೊಂಡರು. ಸಚಿವರಾದ ಆರ್.ವಿ. ದೇಶಪಾಂಡೆ, ಉಮಾಶ್ರೀ, ಪಿ.ಟಿ. ಪರಮೇಶ್ವರ ನಾಯ್ಕ, ಶಾಸಕರಾದ ಅನಿಲ್ ಲಾಡ್, ಈ. ತುಕಾರಾಂ, ಭೀಮಾನಾಯ್ಕ, ಬಿ.ಎಂ. ನಾಗರಾಜ್, ಎಂಎಲ್ಸಿ ಮೃತ್ಯುಂಜಯ ಜಿನಗಾ, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಜಿಂದಾಲ್ ಸಿಇಒ ವಿನೋದ್ ನಾವೆಲ್, ಜಿಪಂ ಅಧ್ಯಕ್ಷೆ ಶೋಭಾ ಬೆಂಡಿಗೇರಿ, ಉಪಾಧ್ಯಕ್ಷೆ ಮಮತಾ ಸುರೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಶಾಸಕ ಬಿ. ಶ್ರೀರಾಮುಲು ಹಾಗೂ ಸಂಸದೆ ಶಾಂತಾ ಅವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.
ಜನರಿಗಾಗಿ 2 ಗಂಟೆ ಕಾದ ಸಿಎಂ ಸಿದ್ದರಾಮಯ್ಯ
ಹಂಪಿ ಉತ್ಸವ ಎಂದರೆ ಜನರ ಉತ್ಸವ ಎಂಬ ಖ್ಯಾತಿ ಇದೆ. ಇಂತಹ ಮಾತು ಅಕ್ಷರಶಃ ಸತ್ಯ ಎಂಬುದು ಇಂದಿನ ಕಾರ್ಯಕ್ರಮದಲ್ಲಿ ಸಾಬೀತು ಪಡಿಸಿತು. ಕಾರಣ ಹಂಪಿ ಉತ್ಸವ ಉದ್ಘಾಟನೆ ಸಂಜೆ 5ಕ್ಕೆ ನಿಗದಿಯಾಗಿತ್ತು. ಆದರೆ 6 ಗಂಟೆಯಾದರೂ ವೇದಿಕೆಯ ಮುಂದೆ ಇದ್ದದ್ದು ಬೆರಳೆಣಿಕೆ ಜನ. ಇದನ್ನು ತಿಳಿದ ಸಿಎಂ ಸಿದ್ದು, ವೇದಿಕೆ ಏರಲು ಹಿಂದೇಟು ಹಾಕಿದರು. ಜನ ಸೇರಿದ ನಂತರ ಉದ್ಘಾಟನೆ ಮಾಡೋಣ ಎಂದು ಕಾದ ಪ್ರಸಂಗ ನಡೆಯಿತು. 7.10ಕ್ಕೆ ವೇದಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದಾಗಲೂ ಜನರು ಸೇರಿದ್ದು ಅಷ್ಟಕಷ್ಟೆ. ಅಧಿಕೃತವಾಗಿ ಕಾರ್ಯಕ್ರಮ ಉದ್ಘಾಟನೆಯಾಗಿದ್ದು ಸಂಜೆ 7.45ಕ್ಕೆ. ಆಗಲೂ ನಿರೀಕ್ಷೆಯಷ್ಟು ಜನ ಸೇರಿರಲಿಲ್ಲ. ಗಣ್ಯರ ಸೀಟುಗಳು ಖಾಲಿ ಇದ್ದದ್ದನ್ನು ನೋಡಿ, ಇರುಸು ಮುರುಸುಗೊಂಡ ಸಿಎಂ, ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಸಾರ್ವಜನಿಕರಿಗೆ ಎಲ್ಲ ದ್ವಾರಗಳಲ್ಲೂ ಮುಕ್ತ ಪ್ರವೇಶ ಮಾಡಿಕೊಡಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
-ಆರ್. ಶಿವಕುಮಾರ್/ ಶಶಿಧರ ಮೇಟಿ