ಆರೋಪದಲ್ಲಿ ಹುರುಳಿಲ್ಲ
ತಮ್ಮ ವಿರುದ್ಧ ಮಾಡಲಾದ ಲೈಂಗಿಕ ಕಿರುಕುಳ ಆರೋಪದಲ್ಲಿ ಹುರುಳಿಲ್ಲ. ಅದೊಂದು ಸಂಚಲ್ಲದೆ ಬೇರೇನೂ ಅಲ್ಲ ಎಂದು ಸುಪ್ರೀಂಕೋರ್ಟ್‌ನ...
ನವದೆಹಲಿ: ತಮ್ಮ ವಿರುದ್ಧ ಮಾಡಲಾದ ಲೈಂಗಿಕ ಕಿರುಕುಳ ಆರೋಪದಲ್ಲಿ ಹುರುಳಿಲ್ಲ. ಅದೊಂದು ಸಂಚಲ್ಲದೆ ಬೇರೇನೂ ಅಲ್ಲ ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸ್ವತಂತ್ರ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಲೈಂಗಿಕ ಕಿರುಕುಳದ ಆರೋಪ ಮಾಡಿರುವ ಯುವ ವಕೀಲೆ ಹೆಸರೇ ನೆನಪಿಗೆ ಬರುತ್ತಿಲ್ಲ. ನನ್ನ ಇಂಟರ್ನಿಯಾಗಿದ್ದರೆ ಕನಿಷ್ಠ ಹೆಸರಾದರೂ ನೆನಪಿಗೆ ಬರಬೇಕಿತ್ತು ಎಂದಿದ್ದಾರೆ ನ್ಯಾ. ಸ್ವತಂತ್ರ ಕುಮಾರ್. ಇದೇ ವೇಳೆ, ಯುವ ವಕೀಲೆ ಸಲ್ಲಿಸಿರುವ ಅಫಿಡವಿಟ್ ಕುರಿತೂ ತಮಗೆ ಮಾಹಿತಿ ಇಲ್ಲ. ಈ ಕುರಿತು ಮಾಧ್ಯಮಗಳಿಂದಷ್ಟೇ ಕೇಳಿ ತಿಳಿದುಕೊಂಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಈ ನಡುವೆ, ಕೇಂದ್ರ ಸಚಿವರಾದ ವೀರಪ್ಪ ಮೊಯ್ಲಿ ಕೂಡ ಇದೊಂದು ಗಂಭೀರ ಆರೋಪ ಎಂದಿದ್ದಾರೆ. ಆದರೆ, ಈ ಕುರಿತು ತನಿಖೆ ನಡೆಸಬೇಕೇ ಬೇಡವೇ ಎನ್ನುವುದು ಸುಪ್ರೀಂಕೋರ್ಟ್ ತೀರ್ಮಾನಕ್ಕೆ ಬಿಟ್ಟ ವಿಚಾರ ಎಂದಿದ್ದಾರೆ ಮೊಯ್ಲಿ.
ಏತನ್ಮಧ್ಯೆ, ಹೆಚ್ಚುವರಿ ಸಾಲಿಸಿಟರ್ ಜನರಲ್ ಇಂದಿರಾ ಜೈಸಿಂಗ್ ಅವರಿಂದಲೂ ಯುವ ವಕೀಲೆಗೆ ಬೆಂಬಲ ವ್ಯಕ್ತವಾಗಿದೆ. ನ್ಯಾಯಮೂರ್ತಿಗಳ ವಿರುದ್ಧದ ಆರೋಪಗಳ ತನಿಖೆಗೂ ವ್ಯವಸ್ಥೆಯೊಂದರ ಅವಶ್ಯಕತೆ ಇದೆ ಎಂದು ಜೈಸಿಂಗ್ ಅಭಿಪ್ರಾಯಪಟ್ಟಿದ್ದಾರೆ.