ಪ್ರಾಂಶುಪಾಲರ ಯಡವಟ್ಟು, ವಿದ್ಯಾರ್ಥಿಗಳಿಗೆ ಇಕ್ಕಟ್ಟು
ಕ.ಪ್ರ.ವಾರ್ತೆ , ಬೆಂಗಳೂರು , ಜ. 11
ದ್ವಿತೀಯ ಪಿಯುಸಿ ಖಾಸಗಿ ಅಭ್ಯರ್ಥಿಗಳ ನೋಂದಣಿಯಲ್ಲಿ ಸರ್ಕಾರಿ ಕಾಲೇಜುಗಳ ಪ್ರಾಂಶುಪಾಲರೇ ಅಕ್ರಮ ನಡೆಸಿದ್ದಾರೆ.
ಖಾಸಗಿ ಅಭ್ಯರ್ಥಿ ನೋಂದಣಿಗೆ ಖಾಸಗಿ ಕಾಲೇಜುಗಳಿಗೆ ಅನುಮತಿ ನೀಡಿದರೆ ಅಕ್ರಮ ನಡೆಯುತ್ತದೆ ಎಂಬ ಉದ್ದೇಶದಿಂದ ಸರ್ಕಾರಿ ಕಾಲೇಜಿಗೆ ಅವಕಾಶ ಕಲ್ಪಿಸಲಾಗಿತ್ತು. ಈ ಕಾಲೇಜುಗಳಲ್ಲಿನ ಪ್ರಾಂಶುಪಾಲರು ಅರ್ಹರಲ್ಲದ ಅಭ್ಯರ್ಥಿಗಳನ್ನು ಅರ್ಹರೆಂದು ಪರಿಗಣಿಸಿ ನೋಂದಾಯಿಸಿಕೊಂಡಿದ್ದಾರೆ. ಮಾರ್ಚ್ 2014ರಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳಿಗೆ ಖಾಸಗಿ ಅಭ್ಯರ್ಥಿಗಳಾಗಿ ಹೆಸರು ನೋಂದಾಯಿಸುವ ಅಭ್ಯರ್ಥಿಗಳಿಗೆ ಕನಿಷ್ಠ 17 ವರ್ಷ ತುಂಬಿರಬೇಕು. ಅಲ್ಲದೆ, ಅಭ್ಯರ್ಥಿಗಳಿಂದ ಅರ್ಜಿ ಸ್ವೀಕರಿಸುವ ಪ್ರಾಂಶುಪಾಲರು ಅಭ್ಯರ್ಥಿಯ ಮೂಲ ವರ್ಗಾವಣೆ ಪತ್ರ ಪಡೆದುಕೊಳ್ಳಬೇಕು ಎಂಬ ಇಲಾಖೆ ಸ್ಪಷ್ಟ ನಿಯಮವಿದೆ.
ಅಲ್ಲದೆ, ಅಭ್ಯರ್ಥಿಗಳು ಯಾವ ಮಾಹಿತಿ ನೀಡಬೇಕು ಮತ್ತು ಪ್ರಾಂಶುಪಾಲರು ಯಾವ ಮಾಹಿತಿ ಪಡೆದುಕೊಳ್ಳಬೇಕು ಎಂಬ ಬಗ್ಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಸ್ಪಷ್ಟವಾಗಿ ಅಧಿಸೂಚನೆಯನ್ನೇ ಹೊರಡಿಸಿದೆ.
ಆದರೆ, ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಂಶುಪಾಲರು ಇದನ್ನು ಉಲ್ಲಂಘಿಸಿ ಅರ್ಹರಲ್ಲದ ಅಭ್ಯರ್ಥಿಗಳ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. 2014 ಮಾರ್ಚ್ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳಿಗೆ ಖಾಸಗಿ ಆಭ್ಯರ್ಥಿಗಳಾಗಿ ರಾಜ್ಯಾದಂತ 36,000 ಅಭ್ಯರ್ಥಿಗಳು ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಅರ್ಜಿ ಸಲ್ಲಿಸಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 119 ವಿದ್ಯಾರ್ಥಿಗಳಿಗೆ ಇನ್ನು 17 ವರ್ಷ ತುಂಬಿಲ್ಲ. ಅಲ್ಲದೆ, 40 ಅಭ್ಯರ್ಥಿಗಳಿಗೆ ಮೂಲ ವರ್ಗಾವಣೆ ಪತ್ರವೇ ಇಲ್ಲ ಎಂಬುದು ಅಭ್ಯರ್ಥಿಗಳ ದಾಖಲೆ ಪರಿಶೀಲನೆ ವೇಳೆ ಸಾಬೀತಾಗಿದೆ.
ನಿಯಮದಲ್ಲೇನಿದೆ?: ಖಾಸಗಿ ಅಭ್ಯರ್ಥಿಯಾಗಿ ಅರ್ಜಿ ಸಲ್ಲಿಸುವವರಿಗೆ 31.03.2014ಕ್ಕೆ 17 ವರ್ಷಗಳು ತುಂಬಿರಬೇಕು. ವಿದ್ಯಾರ್ಥಿಗಳು ಅರ್ಜಿಗಳನ್ನು ಸಲ್ಲಿಸುವ ಸಂದರ್ಭದಲ್ಲಿ ಈ ಹಿಂದೆ ಓದಿದ ಶಾಲೆ ಅಥವಾ ಕಾಲೇಜಿನಿಂದ ಕಡ್ಡಾಯವಾಗಿ ಮೂಲ ವರ್ಗಾವಣೆ ಪತ್ರ ಪಡೆದು ಸಲ್ಲಿಸಬೇಕು ಎಂಬುವುದು ಖಾಸಗಿ ಅಭ್ಯರ್ಥಿ ನೋಂದಣಿಗೆ ರೂಪಿಸಿರುವ ನಿಯಮಗಳಲ್ಲಿ ಪ್ರಮುಖ ಅಂಶವಾಗಿದೆ. ಅರ್ಜಿಗಳನ್ನು ಸ್ವೀಕರಿಸುವ ಕಾಲೇಜಿನ ಸಿಬ್ಬಂದಿ ಎಲ್ಲಾ ದಾಖಲೆಗಳನ್ನು ಕ್ರೋಡೀಕರಿಸಿ ಪರಿಶೀಲಿಸಿ ಆನಂತರ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಕಳುಹಿಸಬೇಕಾಗಿರುತ್ತದೆ. ಕೆಲವೊಂದು ವೇಳೆ ಜಾತಿ, ಆದಾಯ ಪ್ರಮಾಣ ಪತ್ರ ಸಲ್ಲಿಸದೆ ಇರುವಂತಹ ಅಭ್ಯರ್ಥಿಗಳಿಂದ ಮತ್ತೆ ದಾಖಲೆಗಳನ್ನು ಪಡೆದುಕೊಳ್ಳುತ್ತೇವೆ. ಆದರೆ, ಪ್ರಾಂಶುಪಾಲರು ಬೇಜವಾಬ್ದಾರಿ ತನದಿಂದ ಈ ರೀತಿ ಅರ್ಹರಲ್ಲದ ಅಭ್ಯರ್ಥಿಗಳ ಹೆಸರು ನೋಂದಾಯಿಸಿಕೊಂಡಿರುವುದು ದುರಂತ ಎನ್ನುತ್ತಾರೆ ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು.
ಶುಲ್ಕವೂ ಇಲ್ಲ ಪ್ರವೇಶವೂ ಇಲ್ಲ: ಖಾಸಗಿ ಅಭ್ಯರ್ಥಿಯಾಗಿ ಸರ್ಕಾರಿ ಕಾಲೇಜಿನಲ್ಲಿ ಹೆಸರು ನೋಂದಾಯಿಸಿಕೊಳ್ಳುವ ಸಾಮಾನ್ಯ ಅಭ್ಯರ್ಥಿಗಳಿಗೆ 1412 ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಂಡ ವಿದ್ಯಾರ್ಥಿಗಳಿಗೆ 1160 ಶುಲ್ಕ ನಿಗದಿ ಪಡಿಸಲಾಗಿದೆ. ಈಗಾಗಲೇ ಶುಲ್ಕ ಪಾವತಿಸಿ ಹೆಸರು ನೋಂದಾಯಿಸಿಕೊಂಡಿರುವ ಅಭ್ಯರ್ಥಿಗಳು ಪ್ರವೇಶ ಪತ್ರಕ್ಕಾಗಿ ಕಾಯುತ್ತಿದ್ದಾರೆ. ಆದರೆ, 17 ವರ್ಷ ತುಂಬಿಲ್ಲದ 119 ಹಾಗೂ ಮೂಲ ವರ್ಗಾವಣೆ ಪತ್ರ ಸಲ್ಲಿಸದ 40 ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ನೀಡಲು ಸಾಧ್ಯವಿಲ್ಲ. ಅಲ್ಲದೆ, ಈಗಾಗಲೇ ಇಲಾಖೆ ಸಲ್ಲಿಸಿರುವ ಪ್ರವೇಶ ಶುಲ್ಕವೂ ಮರುಪಾವತಿಸುವುದಿಲ್ಲ. ಹೀಗಾಗಿ ವಿದ್ಯಾರ್ಥಿಗಳಿಗೆ ಇತ್ತ ಶುಲ್ಕವೂ ಇಲ್ಲ ಅತ್ತ ಪ್ರವೇಶವೂ ಇಲ್ಲದ ಪರಿಸ್ಥಿತಿಗೆ ತಲುಪಿದ್ದಾರೆ.
ಖಾಸಗಿ ಅಭ್ಯರ್ಥಿಗಳ ನೋಂದಾಯಿಸಿಕೊಳ್ಳಲು ಖಾಸಗಿ ಕಾಲೇಜುಗಳಿಗೆ ಅನುಮತಿ ನೀಡಿದರೆ, ಶಿಕ್ಷಣ ಮತ್ತಷ್ಟು ವ್ಯಾಪಾರೀಕರಣಗೊಳ್ಳುತ್ತದೆ ಎಂಬ ಉದ್ದೇಶದಿಂದ ಸರ್ಕಾರಿ ಕಾಲೇಜುಗಳಿಗೆ ಅನುಮತಿ ನೀಡಲಾಗಿದೆ. ಆದರೆ, ನಮ್ಮ ಪ್ರಾಂಶುಪಾಲರು ತಪ್ಪು ಮಾಡಿರುವುದರಿಂದ ಅವರ ವಿರುದ್ಧ ಕ್ರಮಜರುಗಿಸುತ್ತೇವೆ.
- ಎನ್. ನರಸಿಂಹ ನಾಯಕ್, ಸಹ ನಿರ್ದೇಶಕ(ಪರೀಕ್ಷೆ), ಪ.ಪೂ.ಇಲಾಖೆ
ಪ್ರಾಂಶುಪಾಲರಿಗೆ ದಂಡ
ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಂಶುಪಾಲರು ಜವಾಬ್ದಾರಿ ಮರೆತು ಖಾಸಗಿ ಅಭ್ಯರ್ಥಿಗಳ ನೋಂದಾಯಿಸಿಲು ಇಲಾಖೆ ಹೊರಡಿಸಿರುವ ಅಧಿಸೂಚನೆ ಲೆಕ್ಕಿಸದೆ ಅಭ್ಯರ್ಥಿಗಳ ಹೆಸರು ನೋಂದಾಯಿಸಿಕೊಂಡಿರುವುದರಿಂದ ದಂಡ ವಿಧಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಇದೇ ಮೊದಲ ಬಾರಿಗೆ ದಂಡ ವಿಧಿಸುತ್ತಿದ್ದು, ಇದೇ ತಪ್ಪು ಮರುಕಳಿಸಿದರೆ ಶಿಸ್ತು ಕ್ರಮ ಕೈಗೊಳ್ಳಲು ಸದ್ಯದಲ್ಲೇ ನೋಟಿಸು ಕಳುಹಿಸಲು ನಿರ್ಧರಿಸಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಸಹ ನಿರ್ದೇಶಕ(ಪರೀಕ್ಷೆ) ಎನ್. ನರಸಿಂಹ ನಾಯಕ್ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
-ದೇವರಾಜ್ ಎಲ್.