ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ವೃತ್ತಿ ಸೀಟು; ಸರ್ಕಾರಕ್ಕೆ 'ಖಾಸಗಿ' ಏಟು

Vishwanath S
Updated On : 12 Jan 2014, 12:56 pm

ಕ.ಪ್ರ.ವಾರ್ತೆ , ಬೆಂಗಳೂರು , ಜ. 11
ಎಲ್ಲ ವಿದ್ಯಾರ್ಥಿಗಳಿಗೆ ಏಕರೂಪ ಶುಲ್ಕ ಜಾರಿಗೆ ತನ್ನಿ, ಇಲ್ಲವಾದಲ್ಲಿ ನಮ್ಮ ಪಾಡಿಗೆ ನಾವು ಪ್ರವೇಶ ಪ್ರಕ್ರಿಯೆ ನಡೆಸುತ್ತೇವೆ!
ಕರ್ನಾಟಕ ವೃತ್ತಿಶಿಕ್ಷಣ ಸಂಸ್ಥೆಗಳ ಪ್ರವೇಶ ನಿಯಂತ್ರಣ ಹಾಗೂ ಶುಲ್ಕ ನಿಗದಿ ಕಾಯಿದೆ ಜಾರಿಗೆ ತರದಿದ್ದರೆ ರಾಜ್ಯ ಸರ್ಕಾರಕ್ಕೆ ಒಂದೂ ಸೀಟೂ ನೀಡದೇ, ಸುಪ್ರೀಂ ಕೋರ್ಟ್‌ನ ಆದೇಶದಂತೆ ರಾಷ್ಟ್ರ ಮಟ್ಟದಲ್ಲಿ ಶೇ.100ರಷ್ಟು ಸೀಟುಗಳಿಗೂ ಪ್ರವೇಶ ಪ್ರಕ್ರಿಯೆ ನಡೆಸಲು ಖಾಸಗಿ ಎಂಜನಿಯರಿಂಗ್ ಕಾಲೇಜುಗಳ ಆಡಳಿತ ಮಂಡಳಿ ನಿರ್ಧರಿಸಿದೆ.
2006ರ ಕಾಯಿದೆಯನ್ನು ಜಾರಿಗೆ ತರದೇ ಮತ್ತೆ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಜತೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಸೆಡ್ಡು ಹೊಡೆದಿರುವ ಆಡಳಿತ ಮಂಡಳಿಗಳು, ಈ ಸಂಬಂಧ ಕಾನೂನು ಹೋರಾಟ ನಡೆಸಲು ಮುಂದಾಗಿವೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ ವೃತ್ತಿಶಿಕ್ಷಣ ಸಂಸ್ಥೆಗಳ ಪ್ರವೇಶ ನಿಯಂತ್ರಣ ಹಾಗೂ ಶುಲ್ಕ ನಿಗದಿ ಕಾಯಿದೆ-2006ನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾದಾಗ ವಿದ್ಯಾರ್ಥಿಗಳ ವಲಯದಿಂದ ವ್ಯಾಪಕ ವಿರೋಧವ್ಯಕ್ತವಾಗಿತ್ತು. ಈ
ಹಿನ್ನೆಲೆಯಲ್ಲಿ 2014-15ನೇ ಶೈಕ್ಷಣಿಕ ವರ್ಷದಲ್ಲಿ ಎಂದಿನಂತೆ ಖಾಸಗಿ ಆಡಳಿತ ಮಂಡಳಿಗಳ ಜತೆ ಒಪ್ಪಂದಕ್ಕೆ ಸಹಿ ಹಾಕಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದ್ದರು. ಇದರ ಪ್ರಕಾರ ಎಂಜಿನಿಯರಿಂಗ್‌ನಲ್ಲಿ ಶೇ.50ರಷ್ಟು ಸೀಟುಗಳು ಸರ್ಕಾರಿ ಶುಲ್ಕಕ್ಕೆ ಸಿಗುತ್ತಿತ್ತು. ಇದರ ಜತೆಗೆ ಸರ್ಕಾರಿ ಕೋಟಾದಲ್ಲಿ ಸುಮಾರು 55 ಸಾವಿರ ಸೀಟುಗಳು ಲಭ್ಯವಿರುತ್ತಿದ್ದವು. ಇದರಲ್ಲಿ ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳ 8 ಸಾವಿರ ಸೀಟುಗಳು ಸೇರಿವೆ.
ಖಾಸಗಿ ಆಡಳಿತ ಮಂಡಳಿಗಳ ಈ ನಿರ್ಧಾರದಿಂದ ಖಾಸಗಿ ಕಾಲೇಜುಗಳ ವ್ಯಾಪ್ತಿಗೆ ಬರುವ 75 ಸಾವಿರಕ್ಕೂ ಅಧಿಕ ಎಂಜಿನಿಯರಿಂಗ್ ಸೀಟುಗಳು ರಾಜ್ಯ ಸರ್ಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)ಯಿಂದ ಹೊರಗುಳಿಯಲಿವೆ.
ಖಾಸಗಿ ಕಾಲೇಜುಗಳ ವರಸೆಯೇನು?: 2006ರ ಕಾಯಿದೆ ಜಾರಿಗೆ ತರಲು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ರಾಜ್ಯ ಸರ್ಕಾರ ಶುಲ್ಕ ನಿಗದಿ ಸಮಿತಿ ರಚಿಸಿತ್ತು. ಈ ಸಮಿತಿಗೆ ಬಹುತೇಕ ಕಾಲೇಜುಗಳು ತಮ್ಮ ವಾರ್ಷಿಕ ವೆಚ್ಚದ ಲೆಕ್ಕಪರಿಶೋಧನೆ ವರದಿ ಕಳುಹಿಸಿವೆ. ಈ ವರದಿ ಆಧರಿಸಿ ರಾಜ್ಯ ಸರ್ಕಾರವೇ ಶುಲ್ಕ ನಿಗದಿ ಮಾಡಲಿ, ಆದರೆ ಈ ಶುಲ್ಕ ಶೇ.100ರಷ್ಟು ಸೀಟುಗಳಿಗೂ ಅನ್ವಯವಾಗಬೇಕು ಎನ್ನುವುದು ಖಾಸಗಿ ಕಾಲೇಜುಗಳ ಒತ್ತಾಯವಾಗಿದೆ.
'ಸರ್ಕಾರ, ಕಾಮೆಡ್-ಕೆ, ಅನಿವಾಸಿ ಭಾರತಿಯ, ಆಡಳಿತ ಮಂಡಳಿ ಎಂಬ ವಿಂಗಡಣೆಯ ಅಗತ್ಯ ನಮಗಿಲ್ಲ. ಕಾಲೇಜಿಗೆ ಸೇರುವ ಎಲ್ಲ ವಿದ್ಯಾರ್ಥಿಗಳಿಗೂ ಸಮಾನ ಶುಲ್ಕ ಜಾರಿಗೆ ಬರಲಿ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿವುದು ರಾಜ್ಯ ಸರ್ಕಾರದ ಜವಾಬ್ದಾರಿ. ಒಂದೊಮ್ಮೆ ಸರ್ಕಾರ ಈ ಬೇಡಿಕೆಗೆ ಒಪ್ಪದಿದ್ದರೆ ಯಾವ ಸೀಟುಗಳನ್ನು ಸರ್ಕಾರಿ ಕೋಟಾಕ್ಕೆ ನೀಡುವುದಿಲ್ಲ' ಎಂದು ಒಕ್ಕೂಟದ ಅಧ್ಯಕ್ಷ ಪಾಂಡುರಂಗ ಶೆಟ್ಟಿ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಖಾಸಗಿ ಆಡಳಿತ ಮಂಡಳಿಗಳ ಈ ನಿರ್ಧಾರಕ್ಕೆ ಸುಮಾರು 72 ಎಂಜಿನಿಯರಿಂಗ್ ಕಾಲೇಜುಗಳು ಒಪ್ಪಿಗೆ ಸೂಚಿಸಿವೆ. ಈ ಕಾಲೇಜುಗಳಲ್ಲಿ ಲಭ್ಯವಿರುವ ಎಲ್ಲ ಸೀಟುಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಪ್ರವೇಶ ಪರೀಕ್ಷೆ ನಡೆಸಲು ಒಕ್ಕೂಟ ನಿರ್ಧರಿಸಿದೆ. ಆದರೆ ಸಂವಿಧಾನದ ಪ್ರಕಾರ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದವರಿಗೆ ಸೀಟು ನೀಡುವ ಬಗ್ಗೆ ಇನ್ನು ಯಾವುದೇ ನಿರ್ಧಾರಕ್ಕೆ ಬಂದಿಲ್ಲ ಎಂದು ಒಕ್ಕೂಟದ ಮೂಲಗಳು ತಿಳಿಸಿವೆ.
ಒಪ್ಪಂದಕ್ಕೆ ಸುಪ್ರೀಂ ಮಾನ್ಯತೆ ದೊರೆತಿಲ್ಲ!
2006 ಕಾಯಿದೆ ರೂಪುಗೊಂಡ ದಿನದಿಂದ ಸರ್ಕಾರ ಹಾಗೂ ಖಾಸಗಿ ಆಡಳಿತ ಮಂಡಳಿಗಳು ಒಪ್ಪಂದಕ್ಕೆ ಸಹಿ ಹಾಕಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸುತ್ತಿದ್ದವು. ಆದರೆ ಕಳೆದ 3 ಶೈಕ್ಷಣಿಕ ವರ್ಷದ ಒಪ್ಪಂದಕ್ಕೆ ಸುಪ್ರೀಂ ಕೋರ್ಟ್‌ಸಮ್ಮತಿ ನೀಡಿಲ್ಲ. ಏಕರೂಪ ಶುಲ್ಕಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ಪ್ರಕರಣದಲ್ಲಿ ಅಂತಿಮ ತೀರ್ಪು ಬಂದರೆ ಈ 3 ವರ್ಷದಲ್ಲಿ ಸರ್ಕಾರಿ ಶುಲ್ಕಕ್ಕಿಂತ ಹೆಚ್ಚು ಶುಲ್ಕ ನೀಡಿ ಪ್ರವೇಶ ಪಡೆದ ಕಾಮೆಡ್-ಕೆ ವಿದ್ಯಾರ್ಥಿಗಳಿಗೆ ಕಾಲೇಜು ಆಡಳಿತ ಮಂಡಳಿ ಹಣ ಹಿಂತಿರುಗಿಸಬೇಕಾಗುತ್ತದೆ. ಈ  ಹಿನ್ನೆಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಒಪ್ಪಂದಕ್ಕೆ ಸಹಿ ಹಾಕದಿರಲು ನಿರ್ಧರಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಪಾಂಡುರಂಗ ಶೆಟ್ಟಿ ತಿಳಿಸಿದ್ದಾರೆ.
ಹೈಕೋರ್ಟ್, ಸುಪ್ರೀಂ ಕೋರ್ಟ್ ಆದೇಶದಂತೆ ಏಕರೂಪ ಶುಲ್ಕ ಜಾರಿಗೊಳಿಸಲಿ. ಇಲ್ಲವಾದಲ್ಲಿ ಸರ್ಕಾರಕ್ಕೆ ಯಾವುದೇ ಸೀಟು ನೀಡಲು ಸಾಧ್ಯವಿಲ್ಲ. ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಕಾನೂನು ಹೋರಾಟ ಮಾಡುತ್ತೇವೆ. ಮುಂದಿನ ಶೈಕ್ಷಣಿಕ ವರ್ಷದಿಂದ ಯಾವುದೇ ಕಾರಣಕ್ಕೂ ಒಪ್ಪಂದಕ್ಕೆ ಸಹಿ ಹಾಕುವುದಿಲ್ಲ.
- ಪಾಂಡುರಂಗ ಶೆಟ್ಟಿ, ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ
ಆಗುವ ಸಮಸ್ಯೆಗಳೇನು?
ರಾಜ್ಯದ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಬೇಕಾದ ಅನಿವಾರ್ಯ.
ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಹೆಚ್ಚಿನ ಸೀಟು
ಶುಲ್ಕ ಪ್ರಮಾಣ ವಿಪರೀತವಾಗಿ ಹೆಚ್ಚಳ ಸಾಧ್ಯತೆ
ಖಾಸಗಿ ಕಾಲೇಜುಗಳು ಸರ್ಕಾರಿ ಸಿಇಟಿಯಿಂದ ಹೊರಗೆ
ಮೀಸಲು ಪ್ರಕ್ರಿಯೆಯಲ್ಲಿ ಗೊಂದಲ
ಮೀಸಲು ವಿದ್ಯಾರ್ಥಿಗಳ ಶುಲ್ಕ ಮರುಪಾವತಿ ಕಷ್ಟ


-ರಾಜೀವ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement