ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಶಿರಾಡಿಗೆ ದುರಸ್ತಿ ಭಾಗ್ಯ

ತೀವ್ರ ಅಲಕ್ಷ್ಯಕ್ಕೊಳಗಾಗಿ ಹದಗೆಟ್ಟಿದ್ದ ಶಿರಾಡಿ ಘಾಟ್ ರಸ್ತೆಯ ಗುಂಡಿ ಮುಚ್ಚುವ ಕಾರ್ಯ ಭರದಿಂದ ಸಾಗಿದ್ದು, ಕಳೆದ 15 ದಿನಗಳಲ್ಲಿ 20 ಕಿ.ಮೀ.ನಷ್ಟು...

Vishwanath S
Updated On : 12 Jan 2014, 12:49 pm

ಕನ್ನಡಪ್ರಭ ವಾರ್ತೆ , ಮಂಗಳೂರು , ಜ.11
ತೀವ್ರ ಅಲಕ್ಷ್ಯಕ್ಕೊಳಗಾಗಿ ಹದಗೆಟ್ಟಿದ್ದ ಶಿರಾಡಿ ಘಾಟ್ ರಸ್ತೆಯ ಗುಂಡಿ ಮುಚ್ಚುವ ಕಾರ್ಯ ಭರದಿಂದ ಸಾಗಿದ್ದು, ಕಳೆದ 15 ದಿನಗಳಲ್ಲಿ 20 ಕಿ.ಮೀ.ನಷ್ಟು ಗುಂಡಿ ಮುಚ್ಚಲಾಗಿದೆ. ಇನ್ನೂ 7 ಕಿ.ಮೀ. ರಸ್ತೆ ಗುಂಡಿ ಮುಚ್ಚುವ ಕಾರ್ಯ ಒಂದು ವಾರದಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.  ಶನಿವಾರವೂ ಒಂದು ಕಿ.ಮೀ. ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಲಾಗಿದೆ. ಘಾಟ್ ಮೇಲ್ಭಾಗದಲ್ಲಿ 7 ಕಿ.ಮೀ. ರಸ್ತೆ ಗುಂಡಿ ಮುಚ್ಚಲು ರಾಜ್ ಕಮಲ್ ಸಂಸ್ಥೆ ಗುತ್ತಿಗೆ ವಹಿಸಿಕೊಂಡಿದ್ದು, ಕೆಳಭಾಗದಲ್ಲಿ 20 ಕಿ.ಮೀ. ರಸ್ತೆ ಮಹಮ್ಮದ್ ಇಕ್ಬಾಲ್ ದುರಸ್ತಿ ಕಾಮಗಾರಿ ನಡೆಸುತ್ತಿದ್ದಾರೆ. ಮೇಲ್ಭಾಗದಲ್ಲಿ 3 ಕಿ.ಮೀ. ಕೆಳಭಾಗದಲ್ಲಿ 4 ಕಿ.ಮೀ. ರಸ್ತೆ ಗುಂಡಿ ಮುಚ್ಚುವ ಕೆಲಸ ಬಾಕಿ ಉಳಿದಿದೆ.      
ಮಧ್ಯದಲ್ಲಿ ಮೂರು ಕಿ.ಮೀ. ತಿರುವುಗಳಲ್ಲಿ ಜಲ್ಲಿ ಹಾಕಿದ್ದು, ಟಾರ್ ಹಾಕುವುದು ಬಾಕಿ ಉಳಿದಿದೆ. ಈ ತಿರುವುಗಳಲ್ಲಿ ಡಬ್ಬಲ್ ಲೇಯರ್ ಹಾಕಿ ರಸ್ತೆ  ನುಣುಪುಗೊಳಿಸಲಾಗುತ್ತದೆ. 'ಶಿರಾಡಿ ಘಾಟ್ ರಸ್ತೆ ಅಂಚುಗಳು ಹಾಗೆಯೇ ಇವೆ. ಹೊಂಡಗಳನ್ನು ಮುಚ್ಚಿದ್ದಾರೆ. ಇನ್ನು ಕೆಲವು ಕಿ.ಮೀ. ಮಾತ್ರ ಬಾಕಿ ಇದೆ. ರಸ್ತೆಯಲ್ಲಿ ಸಂಚರಿಸಬಹುದಾದ ಪರಿಸ್ಥಿತಿ ಇದೆ. ಹೊಂಡಗಳಿಲ್ಲ. ಆದರೂ ಸಂಚರಿಸುವಾಗ ಸಣ್ಣಪುಟ್ಟ ಉಬ್ಬುತಗ್ಗುಗಳಿಂದಾಗಿ ವಾಹನಗಳು ಸ್ವಲ್ಪ ಸದ್ದು ಮಾಡುತ್ತವೆ' ಎನ್ನುತ್ತಾರೆ ಗುಂಡ್ಯದ ಪ್ರಕಾಶ್.
ಹತ್ತು ಸಾವಿರ ಹೊಂಡಗಳು!: 'ನಮಗೆ ಕಾಮಗಾರಿ ಮುಗಿಸುವ ಒತ್ತಡ ಇದೆ. ಅದಕ್ಕಾಗಿಯೇ ಈ ಗುತ್ತಿಗೆ ನಮಗೆ ಬೇಡವೇ ಆಗಿತ್ತು. ಬಹಳ ಕಷ್ಟ. ಒಟ್ಟಾರೆ ಕಾಮಗಾರಿ ಮಾಡಲು ಸಾಧ್ಯವಿಲ್ಲ' ಎನ್ನುತ್ತಾರೆ ಗುತ್ತಿಗೆದಾರ ಇಕ್ಬಾಲ್.
100 ಮೀಟರ್ ರಸ್ತೆಯಲ್ಲಿ 4ರಿಂದ 50 ಸಾಧಾರಣ ಹೊಂಡಗಳಿವೆ. ಕೆಲವೆಡೆ ರಸ್ತೆಯೇ ಇಲ್ಲ, ಅಷ್ಟು ದೊಡ್ಡ ದೊಡ್ಡ ಹೊಂಡಗಳಿವೆ. ಈಗ ಹೊಂಡಗಳ ಸಂಖ್ಯೆ ಕಡಿಮೆಯಾಗುತ್ತದೆ. 27 ಕಿ.ಮೀಗಳಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಹೊಂಡಗಳಿರಬಹುದು ಎನ್ನುತ್ತಾರೆ ಗುತ್ತಿಗೆದಾರ ಇಕ್ಬಾಲ್.
4 ಕೋಟಿ ವೆಚ್ಚದ ತೇಪೆ ಕಾಮಗಾರಿ ಒಂದು ವಾರದಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ತಿರುವುಗಳಲ್ಲಿ ಮೃದು ಲೇಯರ್ ಹಾಕಲು ಇನ್ನೂ 1 ಕೋಟಿ ಅನುದಾನ ಬಿಡುಗಡೆಯಾಗಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ವಿಭಾಗ ಕಾರ್ಯನಿರ್ವಾಹಕ ಎಂಜಿನಿಯರ್ ನಾಗರಾಜ್ ಹೇಳುತ್ತಾರೆ.
ನಿಮ್ಮ ಗಮನಕ್ಕೆ ತರ್ತಾ ಇರ್ತೀವಿ...
ಶಿ'ರಾಡಿ' ಘಾಟ್ ದುಸ್ಥಿತಿ ಬಗ್ಗೆ ಕಳೆದ ಡಿಸೆಂಬರ್ 28ರಿಂದ 4 ದಿನಗಳ ಕಾಲ 'ಕನ್ನಡಪ್ರಭ' ಅಭಿಯಾನ ಕೈಗೊಂಡಿತ್ತು. ನಮ್ಮ ಈ ಅಭಿಯಾನಕ್ಕೆ ಸ್ಪಂದಿಸಿದ್ದ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಅವರು, 'ಒಂದು ತಿಂಗಳೊಳಗಾಗಿ ತಾತ್ಕಾಲಿಕವಾಗಿ ಹಾಗೂ ಮೇ ತಿಂಗಳೊಳಗಾಗಿ ಶಾಶ್ವತ ದುರಸ್ತಿ ಮಾಡುವುದಾಗಿ ಭರವಸೆ ಕೊಟ್ಟಿದ್ದರು'. ಇದೇ ವೇಳೆ, ಪತ್ರಿಕೆ ಕೂಡಾ ರಸ್ತೆ ದುರಸ್ತಿ ಬಗ್ಗೆ ಓದುಗರ ಗಮನಕ್ಕೆ ಕಾಲ ಕಾಲಕ್ಕೆ ನೀಡಲಿದೆ ಎಂದು ಹೇಳಿತ್ತು. ಈಗ ನಮ್ಮ ಪ್ರತಿನಿಧಿ ಖುದ್ದು ರಸ್ತೆ ದುರಸ್ತಿ ಸ್ಥಳಕ್ಕೆ ಭೇಟಿ ನೀಡಿ, ಅಲ್ಲಿನ ಕಾಮಗಾರಿಯನ್ನು ಕಂಡಿದ್ದಾರೆ. ಅದರಂತೆ ಈಗಾಗಲೇ ಶಿರಾಡಿ ಘಾಟ್ ರಸ್ತೆ ಗುಂಡಿ ಮುಚ್ಚುವ ಕೆಲಸ ಆರಂಭವಾಗಿದ್ದು, 20 ಕಿ.ಮೀ.ನಷ್ಟು ತೇಪೆ ಹಾಕುವ ಕೆಲಸ ಮುಗಿದಿದೆ. ಇನ್ನೊಂದು ವಾರದಲ್ಲಿ ಉಳಿದ 7 ಕಿ.ಮೀ. ರಸ್ತೆ ತಾತ್ಕಾಲಿಕ ದುರಸ್ತಿ ಮುಗಿಯಲಿದೆ. ನಾವು ನಮ್ಮ ಓದುಗರಿಗೆ ಆಯಾ ಕಾಲಕ್ಕೆ ಶಿರಾಡಿ ರಸ್ತೆ ದುರಸ್ತಿ ಯಾವ ಹಂತದಲ್ಲಿದೆ ಎಂಬುದನ್ನು ನೀಡುತ್ತೇವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement