ಕೋಮಾ ಸ್ಥಿತಿಯಲ್ಲೇ ಮುಂದುವರಿದ ಪಿಐ ಬಂಡೆ
ಗುಲ್ಬರ್ಗ: ಪಾತಕಿ ಮುನ್ನಾ ಜೊತೆಗಿನ ಕಾಳಗದಲ್ಲಿ ಗುಂಡೇಟಿನಿಂದ ತಲೆ ಹಾಗೂ ಮೆದುಳಿಗೆ ಭಾರಿ ಗಾಯವಾಗಿ ಹೈದ್ರಾಬಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸ್ಟೇಷನ್ ಬಜಾರ್ ಪಿಐ ಮಲ್ಲಿಕಾರ್ಜುನ ಬಂಡೆ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡಿಲ್ಲ. ಗುಂಡಿನ ಕಾಳಗವಾಗಿ 4 ದಿನ ಕಳೆದರೂ ಬಂಡೆ ಕೋಮಾದಲ್ಲೇ ಮುಂದುವರಿದಿದ್ದಾರೆ. 'ಬಂಡೆ ಅವರ ದೇಹಾರೋಗ್ಯದಲ್ಲಿ ಹೆಚ್ಚಿನ ಬದಲಾವಣೆ ಕಂಡಿಲ್ಲವಾದರೂ ಕೋಮಾದಲ್ಲೇ ಮುಂದುವರಿದಿದ್ದಾರೆ. ಇದೇ ಕಳವಳದ ಸಂಗತಿ. ತಜ್ಞರೊಂದಿಗೆ ಸತತ ಸಂಪರ್ಕದಲ್ಲಿದ್ದೇವೆ. ತಜ್ಞರು ಬಂಡೆ ಅವರ ಸ್ಥಳಾಂತರಕ್ಕೆ ಸೂಚಿಸಿದರೆ ಇಲಾಖೆಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ತಕ್ಷಣ ಕಾರ್ಯಪ್ರವೃತ್ತರಾಗುತ್ತೇವೆಂದು ಐಜಿಪಿ ಮೊಹ್ಮದ್ ವಜೀರ್ ಅಹ್ಮದ್ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ. ಗುಂಡಿನ ಕಾಳಗ ಸಂಭವಿಸಿದ ನಂತರ ಗುಲ್ಬರ್ಗ ನಗರ ಹಾಗೂ ಜಿಲ್ಲಾದ್ಯಂತ ಪರಿಸ್ಥಿತಿಯ ಮೇಲೆ ನಿಗಾ ಇಡಲಾಗಿದೆ. ಗುಲ್ಬರ್ಗದಲ್ಲಿ ಪರಿಸ್ಥಿತಿ ಶಾಂತವಾಗಿದೆ. ಸೂಕ್ಷ್ಮ ಸ್ಥಳಗಳಲ್ಲಿ ಪೊಲೀಸ್ ನಿಯೋಜನೆ ಮಾಡಲಾಗಿದೆ. ನಾವೆಲ್ಲವೂ ಕೂಡಿಕೊಂಡು ಬಂಡೆ ಅವರ ಆರೋಗ್ಯ ಸುಧಾರಣೆಗೆ ಪ್ರಾರ್ಥಿಸಬೇಕಾಗಿದೆ ಎಂದು ವಜೀರ್ ಅಹ್ಮದ್ ಹೇಳಿದ್ದಾರೆ.