ಗೋವಾ, ಮಹಾರಾಷ್ಟ್ರ ಪಾಲಾಗುತ್ತಿದೆ ಮರಳು
ಬೆಳಗಾವಿ: ಜಿಲ್ಲೆಯಲ್ಲಿ ಮರಳು ಮಾಫಿಯಾದ ಕಾರುಬಾರು ಜೋರಾಗಿದ್ದು, ಮಲಪ್ರಭಾ, ಘಟಪ್ರಭಾ ಮತ್ತು ಕೃಷ್ಣಾ ನದಿಗಳ ಒಡಲಿನಲ್ಲಿರುವ ಮರಳನ್ನು ಸಂಗ್ರಹಿಸಿ, ಗೋವಾ, ಮಹಾರಾಷ್ಟ್ರ ರಾಜ್ಯಗಳಿಗೆ ಅಕ್ರಮವಾಗಿ ಸಾಗಿಸಲಾಗುತ್ತಿದೆ.
ಹಾಲಿ, ಮಾಜಿ ರಾಜಕಾರಣಿಗಳ ಕೈವಾಡದಿಂದ ಸರ್ಕಾರದ ಖಜಾನೆ ಸೇರಬೇಕಾದ ಮರಳಿನ ಆದಾಯ ಇನ್ಯಾರದ್ದೋ ಪಾಲಾಗುತ್ತಿದೆ. ಪ್ರಭಾವಿಗಳೇ ಮಾಫಿಯಾದಲ್ಲಿ ಭಾಗಿಯಾಗಿರುವುದರಿಂದ ತಾಲೂಕು ಮಟ್ಟದ ಅಧಿಕಾರಿಗಳೂ ಜಾಣ ಕುರುಡು ತೋರುವುದು ಅನಿವಾರ್ಯವಾಗಿದೆ.
ಮರಳು ಮಾಫಿಯಾಕ್ಕೆ ಕುಮ್ಮಕ್ಕು ನೀಡಲೆಂದೇ ಅಧಿಕಾರಿಗಳು ವಿನಾಕಾರಣ ಟೆಂಡರ್ ಪ್ರಕ್ರಿಯೆ ಮುಂದೂಡುತ್ತಿದ್ದಾರೆ. ಇದರಿಂದ ಖಜಾನೆ ಸೇರಬೇಕಿದ್ದ ಕೋಟ್ಯಂತರ ರುಪಾಯಿ ಅನ್ಯರ ಪಾಲಾಗುತ್ತಿದೆ.
ಗೋವಾದಲ್ಲಿ ನಿಷೇಧ: ಹಳ್ಳಕೊಳ್ಳ, ನದಿ, ಸಮುದ್ರದಲ್ಲಿ ಉಸುಕು ತೆಗೆಯುವುದರಿಂದ ಜಲಚರಗಳು ಮೃತಪಡುತ್ತವೆ. ನೀರು ಕಲುಷಿತಗೊಳ್ಳುತ್ತದೆ ಎಂಬ ಕಾರಣಕ್ಕೆ ಗೋವಾದಲ್ಲಿ ಮರಳು ತೆಗೆಯುವುದನ್ನು ನಿಷೇಧಿಸಲಾಗಿದೆ. ಹೀಗಾಗಿ ಆ ರಾಜ್ಯದಲ್ಲಿ ಮರಳಿಗೆ ಎಲ್ಲಿಲ್ಲದ ಬೇಡಿಕೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಗೋವಾದ ಕೆಲವು ಮರಳು ಉದ್ಯಮಿಗಳು, ಮರಳು ಸಾಗಾಣೆದಾರರು ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಗಳ ಉಸುಕಿನ ಮೇಲೆ ಕಣ್ಣಿಟ್ಟಿದ್ದು, ಈ ಪ್ರದೇಶದ ಮರಳನ್ನು ನೆರೆ ರಾಜ್ಯಕ್ಕೆ ಸಾಗಿಸುತ್ತಿದ್ದಾರೆ.
ಮಲಪ್ರಭಾ ನದಿ ತೀರದ ಖಾನಾಪುರ, ರಾಮದುರ್ಗ, ಬೈಲಹೊಂಗಲ ತಾಲೂಕಿನ ಸುಮಾರು 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಅಕ್ರಮವಾಗಿ ಮರಳು ತೆಗೆಯಲಾಗುತ್ತಿದೆ. ಎಂ.ಕೆ. ಹುಬ್ಬಳ್ಳಿ ಬಳಿಯ ಹುಣಶಿಕಟ್ಟಿಯಲ್ಲಿ ನಾಲ್ಕೈದು ಬೋಟ್ಗಳ ಮೂಲಕ ಮಲಪ್ರಭಾ ನದಿಯಿಂದ ಪ್ರತಿನಿತ್ಯ 40-45 ಟ್ರಕ್ ಉಸುಕು ತೆಗೆದು ಸಾಗಿಸಲಾಗುತ್ತಿದೆ. ಸ್ಥಳೀಯವಾಗಿ 1 ಲಾರಿ ಉಸುಕಿಗೆ 15-20 ಸಾವಿರ ದರವಿದ್ದರೆ, ಗೋವಾದಲ್ಲಿ ಅದು 40 ಸಾವಿರದವರೆಗೂ ಮಾರಾಟವಾಗುತ್ತದೆ. ಇನ್ನು ಗೋಕಾಕ್ ತಾಲೂಕಿನ ಮಮದಾಪುರ ಬಳಿ ಘಟಪ್ರಭಾ ನದಿಯಿಂದ ಅಕ್ರಮವಾಗಿ ಉಸುಕು ತೆಗೆದು, 100-120 ಟ್ರಕ್ಗಳಲ್ಲಿ ಸಾಗಿಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.
ಸರ್ಕಾರಕ್ಕಿಲ್ಲ ಆದಾಯ: ಚಿಕ್ಕೋಡಿ ಉಪ ವಿಭಾಗವೊಂದರಿಂದಲೇ ಸರ್ಕಾರಕ್ಕೆ ಮರಳು ಮಾರಾಟದಿಂದ 8 ಕೋಟಿ ಆದಾಯ ಬರುತ್ತಿತ್ತು. ಆದರೆ ಇದೀಗ ಮರಳೆಲ್ಲವೂ ಮಾಫಿಯಾ ಪಾಲಾಗುತ್ತಿದ್ದು, ನಿಜವಾದ ಗ್ರಾಹಕರಿಗೆ ಮರಳು ಸಿಗದಂತಾಗಿದೆ. ರಾಜ್ಯಾದ್ಯಂತ ಮರಳು ಲಾರಿ ಮುಷ್ಕರ ನಡೆಸುತ್ತಿದ್ದರೂ ಜಿಲ್ಲೆಯಲ್ಲಿ ಅಕ್ರಮವಾಗಿ ತೆಗೆದ ಮರಳು ಒಳ ದಾರಿ, ಚಿಕ್ಕ ಪುಟ್ಟ ಗ್ರಾಮಗಳ ರಸ್ತೆಯ ಮೂಲಕ ನೆರೆಯ ಗೋವಾಕ್ಕೆ ರವಾನೆಯಾಗುತ್ತಲೇ ಇದೆ.
ಜಿಲ್ಲಾಡಳಿತ, ಲೋಕೋಪಯೋಗಿ ಇಲಾಖೆ ಅಥವಾ ಪೊಲೀಸ್ ಇಲಾಖೆ ಈ ವಿಚಾರವಾಗಿ ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ.
ಸರ್ಕಾರ ಮರಳು ನೀತಿ ರೂಪಿಸುವಾಗ ಬೆಂಗಳೂರು, ಬೆಳಗಾವಿಯಂಥ ದೊಡ್ಡ ನಗರಗಳನ್ನಷ್ಟೇ ಗಮನದಲ್ಲಿಟ್ಟುಕೊಳ್ಳಬಾರದು. ಮರಳು ಮಾಫಿಯಾಕ್ಕೆ ಅನುಕೂಲವಾಗುವಂತೆ ನೀತಿ ರೂಪಿಸಬಾರದು. ಬಡವರು ಮನೆ ಕಟ್ಟಲು ಬೇಕಾಗುವ ದರದಲ್ಲೂ ಉಸುಕು ಪೂರೈಸಬೇಕು.
- ಭೀಮಪ್ಪ ಗಡಾದ, ಸಮಾಜ ಸೇವಕ, ಮೂಡಲಗಿ
ಸರ್ಕಾರ ಹೊಸದಾಗಿ ಜಾರಿಗೊಳಿಸಿರುವ ಮರಳು ನೀತಿ ಪ್ರಕಾರ ಮರಳಿನ ಬ್ಲಾಕ್ಗಳನ್ನು ಗುರುತಿಸಿ, ಹೊಸ ಟೆಂಡರ್ ಕರೆಯಲಾಗುವುದು. ಮರಳು ನಿಯಂತ್ರಣ ಮತ್ತು ಮಾರಾಟದ ಜವಾಬ್ದಾರಿ ಲೋಕೋಪಯೋಗಿ ಇಲಾಖೆ ಕೈಯಲ್ಲಿದೆ.
- ಶಶಿಧರ ಬಗಲಿ, ಉಪವಿಭಾಗಾಧಿಕಾರಿ, ಬೆಳಗಾವಿ
-ರಾಯಣ್ಣ ಆರ್.ಸಿ.