ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸಹಕಾರಿ ಕ್ಷೇತ್ರದಲ್ಲೂ ಮೀಸಲು ಜಾರಿ: ಸಿದ್ದು

ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳಿಗೆ ಸಹಕಾರಿ ಕ್ಷೇತ್ರದಲ್ಲೂ ಮೀಸಲು ನೀಡಲಿದೆ. ಜತೆಗೆ ವಿಧಾನಸಭೆ, ಲೋಕಸಭೆ ಮಾತ್ರವಲ್ಲದೆ...

Vishwanath S
Updated On : 13 Jan 2014, 1:57 am

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳಿಗೆ ಸಹಕಾರಿ ಕ್ಷೇತ್ರದಲ್ಲೂ ಮೀಸಲು ನೀಡಲಿದೆ. ಜತೆಗೆ ವಿಧಾನಸಭೆ, ಲೋಕಸಭೆ ಮಾತ್ರವಲ್ಲದೆ ಖಾಸಗಿ ಕ್ಷೇತ್ರದ ಉದ್ಯೋಗದಲ್ಲೂ ಹಿಂದುಳಿದವರಿಗೆ ಮೀಸಲು ಸಿಗಬೇಕಾದ ಅಗತ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ನೆಲಮಂಗಲ ರಸ್ತೆಯ ಮಾದಾವರದಲ್ಲಿ ಭಾನುವಾರ ಏರ್ಪಡಿಸಿದ್ದ ದಶಮಾನೋತ್ಸವ ಮತ್ತು ಹಿಂದುಳಿದ ವರ್ಗಗಳ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ತಾವು 1994ರಲ್ಲಿ ಹಣಕಾಸು ಮಂತ್ರಿಯಾಗಿದ್ದಾಗ ರಾಜೀವ ಗಾಂಧಿ ಅವರು 1973-74ರಲ್ಲಿ ತಂದ ತಿದ್ದುಪಡಿ ಅನ್ವಯ ಹಿಂದುಳಿದವರು ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲು ಪಡೆಯುವಂತಾಯಿತು. ಆದರೆ ಸಹಕಾರಿ ಕ್ಷೇತ್ರದಲ್ಲಿ ಅವರಿಗೆ ಮೀಸಲು ಇಲ್ಲ. ಕಾಂಗ್ರೆಸ್ ಸರ್ಕಾರ ಸಹಕಾರಿ ಕ್ಷೇತ್ರದಲ್ಲೂ ಹಿಂದುಳಿದವರಿಗೆ ಮೀಸಲು ಕಲ್ಪಿಸಿಕೊಡಲಿದೆ ಎಂದು ಭರವಸೆ ನೀಡಿದರು. ಸರ್ಕಾರಿ ಕ್ಷೇತ್ರದಲ್ಲಿ ಉದ್ಯೋಗ ಕಡಿಮೆ ಇರುವುದರಿಂದ ಹಿಂದುಳಿದವರಿಗೆ ಹೆಚ್ಚಿನ ಮೀಸಲು ನೀಡಲು ಸಾಧ್ಯವಾಗುತ್ತಿಲ್ಲ. ಆದರೆ ಖಾಸಗಿ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಹೆಚ್ಚಾಗಿದ್ದು, ಅಲ್ಲಿಯೂ ಹಿಂದುಳಿದವರಿಗೆ ಮೀಸಲು ಸಿಗಬೇಕಾದ ಅಗತ್ಯವಿದೆ ಎಂದರು.
ಯಾರು ಹಿತ ಅಂತ ಗುರುತಿಸಿ: ಹಾವನೂರು, ಮಂಡಲ್, ಮಿಲ್ಲರ್, ವೆಂಕಟಸ್ವಾಮಿ ಮುಂತಾದ ಹಿಂದುಳಿದವರಪರ ಆಯೋಗಗಳ ವರದಿ ಜಾರಿಯಾಗಿದ್ದು ವಿರೋಧದ ನಡುವೆ. ಅಂದು ಅದನ್ನು ವಿರೋಧಿಸಿದವರೇ ಇಂದು ಹಿಂದುಳಿದವರ ಪರ ವಿಪರೀತ ಮಾತನಾಡಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಕೆಲವರು ಸ್ವಾರ್ಥಕ್ಕಾಗಿ ಹಿಂದುಳಿದವರ ವಿರೋಧಿಗಳನ್ನು ಹೊಗಳುತ್ತಾರೆ ಎಂದರು.          
ಸಿಎಂ ಸ್ಥಾನ ತಪ್ಪಿಸಿದ್ದೇ ಜೆಡಿಎಸ್: ನಾನು ಜೆಡಿಎಸ್‌ನಲ್ಲಿದ್ದಾಗ ನನ್ನನ್ನು ಮುಖ್ಯಮಂತ್ರಿ ಮಾಡಲು ಕಾಂಗ್ರೆಸ್‌ನವರು ಬಿಡಲಿಲ್ಲ ಎಂದು ಜೆಡಿಎಸ್‌ನವರು ಹೇಳಿದ್ದಾರೆ. ಆದರೆ ನನಗೆ 2 ಬಾರಿ ಮುಖ್ಯಮಂತ್ರಿ ಸ್ಥಾನ ತಪ್ಪಿಸಿದ್ದೇ ಜೆಡಿಎಸ್. ಕಾಂಗ್ರೆಸ್ ಸೇರಿದಾಗ ನನ್ನನ್ನು ಕಾಂಗ್ರೆಸ್‌ನವರು ಸಿಎಂ ಮಾಡಲ್ಲ ಎಂದು ಈಶ್ವರಪ್ಪ ಟೀಕಿಸಿದ್ದರು. ಆದರೆ ದೇವರಾಜ ಅರಸು, ವೀರಪ್ಪ ಮೊಯ್ಲಿ, ಧರಂಸಿಂಗ್, ಬಂಗಾರಪ್ಪ ಮತ್ತು ನನ್ನನ್ನು ಕಾಂಗ್ರೆಸ್ ಸಿಎಂ ಮಾಡಿದೆ. ಇದು ಜೆಡಿಎಸ್ ಮತ್ತು ಬಿಜೆಪಿಯಲ್ಲಿ ಅಸಾಧ್ಯ. ಜೆಡಿಎಸ್‌ನಲ್ಲಿ ದೇವೇಗೌಡರು ಅಥವಾ ಅವರ ಮಕ್ಕಳಷ್ಟೇ ಸಿಎಂ ಆಗಬೇಕು. ಬಿಜೆಪಿಯಲ್ಲಿ ಹಿಂದುಳಿದವರಿಗೆ ಮುಂದೆ ಬರಲು ಬಿಡುವುದಿಲ್ಲ. ನಾನು ಸಿಎಂ ಆಗಲು ಸೋನಿಯಾ ಹಾಗೂ ರಾಹುಲ್ ಗಾಂಧಿ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಒಕ್ಕೂಟ ಕಚೇರಿಗೆ ನಿವೇಶನ: ಒಕ್ಕೂಟ ಇದೇ ವೇಳೆ ಸಲ್ಲಿಸಿದ ಬೇಡಿಕೆಗಳ ಪಟ್ಟಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಅವರು ಒಕ್ಕೂಟದ ಕಚೇರಿಗೆ ನಿವೇಶನ ನೀಡುವುದಾಗಿ ಹೇಳಿದರು. ಜತೆಗೆ ವಸತಿ ಯೋಜನೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲು ಹಾಗೂ 2014-15ನೇ ಸಾಲಿನಲ್ಲಿ ಹೆಚ್ಚಿನ ಅನುದಾನ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದರು. ಕುಲಕಸುಬುಗಳ ಪುನಶ್ಚೇತನಕ್ಕಾಗಿ ಪ್ರಸ್ತಾವ ಸಲ್ಲಿಸಿದರೆ ಸರ್ಕಾಕರ ಆರ್ಥಿಕ ನೆರವು ಹಾಗೂ ಕೌಶಲ್ಯವೃದ್ಧಿಗೆ ಬೆಂಬಲ ನೀಡಲು ಸಿದ್ಧ ಎಂದರು.    
ಪಟೇಲರ ಒತ್ತಾಯದ ನಡುವೆಯೂ ನಾನು ಸಾರಾಯಿ ನಿಷೇಧ ಮಾಡಿರಲಿಲ್ಲ. ದ್ವೇಷ ಸಾಧನೆಗಾಗಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ಸಾರಾಯಿ ನಿಷೇಧ ಜಾರಿ ಮಾಡಿತು. ಅದರಿಂದ ಅವರು ಹೆಣ್ಣು ಮಕ್ಕಳ ಕಣ್ಣೀರನ್ನೆಲ್ಲಾ ಒರೆಸಿ ಬಿಟ್ಟಿದ್ದಾರಾ?
ಸಿದ್ದರಾಮಯ್ಯ, ಮುಖ್ಯಮಂತ್ರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement