ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸಿಎಂ ಮನೆ ಮುಂದೆಯೇ ಆತ್ಮಹತ್ಯೆಗೆ ಯತ್ನ!

Vishwanath S
Updated On : 13 Jan 2014, 12:57 pm

ಕನ್ನಡಪ್ರಭ ವಾರ್ತೆ ,  ಬೆಂಗಳೂರು ,  ಜ.12
'ಬಡವರ ಪಾಲಿಗೆ ಸರ್ಕಾರಿ ಆಸ್ಪತ್ರೆಗಳು ಇದು,್ದ ಇಲ್ಲದಂತಾಗಿವೆ. ಮುಖ್ಯಮಂತ್ರಿಗಳೇ ದಯವಿಟ್ಟು ಬಡವರಿಗೆ ಒಳ್ಳೆಯ ಚಿಕಿತ್ಸೆ ಕೊಡಿಸಿ' ಇದು ಭಾನುವಾರ ಮುಖ್ಯಂತ್ರಿಗಳ ನಿವಾಸ 'ಕಾವೇರಿ' ಬಳಿ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವಕನ ಮನವಿ. ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ವೈದ್ಯಕೀಯ ಚಿಕಿತ್ಸೆ ಸಿಗದೆ ನೊಂದ ಚಿತ್ರದುರ್ಗ ಮೂಲದ ಬಸವರಾಜು (25) ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿವಾಸ 'ಕಾವೇರಿ' ಬಳಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಆತ್ಮಹತ್ಯೆ ಯತ್ನಕ್ಕೂ ಮುನ್ನ ಬಸವರಾಜು ಸರ್ಕಾರಿ ಆಸ್ಪತ್ರೆಗಳು, ಅಲ್ಲಿನ ವೈದ್ಯರ ನಿರ್ಲಕ್ಷ್ಯದಿಂದ ನೊಂದು ಮರಣ ಪತ್ರ ಬರೆದಿಟ್ಟಿದ್ದಾನೆ.
'ಮರಣ ಪತ್ರ'ದ ಸಾರಾಂಶ: ಕರ್ನಾಟಕದ ಜನತೆಗಾಗಿ ಸಿದ್ದರಾಮಯ್ಯನವರಲ್ಲಿ ನನ್ನ ಮನವಿ, 2003ರಿಂದ ನಾನು ಅನಾರೋಗ್ಯದಿಂದ ನರಳುತ್ತಿದ್ದೇನೆ. ಚಿಕಿತ್ಸೆಗಾಗಿ ಲಕ್ಷ ಲಕ್ಷ ಹಣ ಖರ್ಚು ಮಾಡಿದ್ದೇನೆ. ಆದರೂ ನನ್ನ ಆರೋಗ್ಯ ಸರಿಯಾಗಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲಾ ರೀತಿಯಲ್ಲೂ ಪ್ರಯತ್ನ ನಡೆಸಿದ್ದೇನೆ. ಯಾವ ಡಾಕ್ಟರ್ ಕೂಡಾ ನನಗೆ ಇರುವ ಕಾಯಿಲೆ ಏನೆಂದು ಹೇಳಿಲ್ಲ. ಸರ್ಕಾರಿ ಆಸ್ಪತ್ರೆಗಳು ಇದ್ದು ಇಲ್ಲದಂತಿವೆ. ಸಿಎಂ ಸಿದ್ದರಾಮಯ್ಯನವರೇ, ಹಣ, ಆಸ್ತಿ ನನಗೆ ಬೇಡ. ಯಾವುದಾದರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ. ನನ್ನ ಜೀವ ಉಳಿಸಿ. ಇಲ್ಲವೇ ಕಣ್ಣು, ಕಿಡ್ನಿಗಳು ಹಾಗೂ ಇಡೀ ದೇಹವನ್ನು ದಾನ ಮಾಡುತ್ತಿದ್ದೇನೆ. ಜನರೇ ದೇವರು.  
ಅತ್ಯಾಚಾರಿಗಳಿಗೆ ಮರಣ ದಂಡನೆ ವಿಧಿಸಿ, ಭ್ರಷ್ಟರನ್ನು ಈ ದೇಶದಿಂದ ಹೊರಗೆ ಓಡಿಸಿ, ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡಿ, ಅಕ್ರಮ ಗಣಿಗಾರಿಕೆ, ಮರಳು ಗಣಿಗಾರಿಕೆ ನಿಲ್ಲಿಸಿ ಪರಿಸರವನ್ನು ರಕ್ಷಿಸಿ. ವರದಕ್ಷಿಣೆ  ಪಿಡುಗನ್ನು ನಿರ್ಮೂಲನೆ ಮಾಡಿ, ಬಾಲ್ಯ ವಿವಾಹ ಮಾಡಿ ಅವರ ಜೀವನವನ್ನು ನರಕಕ್ಕೆ ತಳ್ಳುವುದನ್ನು ತಡೆಗಟ್ಟಿ.    
ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮುನ್ನೇಚ್ಚರಿಕೆ ವಹಿಸಿ ರೈತರ ಸಾಲ ಮನ್ನಾ ಮಾಡಿ. ಬಡ ರೈತರು ಚಳಿ, ಗಾಳಿಯಲ್ಲಿ ನರಳುತ್ತಿದ್ದಾರೆ. ಅವರಿಗೆ ಮನೆಗಳನ್ನು ಕಟ್ಟಿಸಿಕೊಡಿ. ನಮ್ಮ ನಿಮ್ಮೆಲ್ಲರನ್ನು ಕಾಪಾಡುವ ಸೈನಿಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಿ. ಮಾಧ್ಯಮಗಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟಿ. ಕಾವೇರಿ ನೀರನ್ನು ಪಕ್ಕದ ರಾಜ್ಯಗಳಿಗೆ ಬಿಟ್ಟು ರಾಜ್ಯದ ರೈತರನ್ನು ಕಷ್ಟಕ್ಕೆ ತಳ್ಳಬೇಡಿ.
ಘಟನೆ: ಆತ್ಮಹತ್ಯೆಗೆ ಯತ್ನಿಸಿದ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕು ದಡೆದೇವನಹಳ್ಳಿ ನಿವಾಸಿ ಬಸವರಾಜು (25) ವೈದ್ಯಕೀಯ ಚಿಕಿತ್ಸೆಗೆ ನೆರವು ಕೋರಲು ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸಕ್ಕೆ ಬಂದಿದ್ದರು.
2003ರಿಂದ ತೀವ್ರ ಆನಾರೋಗ್ಯದಿಂದ ಬಳಲುತ್ತಿದ್ದ ಬಸವರಾಜು ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರು ಎನ್ನಲಾಗಿದೆ. ಮುಂದಿನ ಚಿಕಿತ್ಸೆಗೆ ಹಣ ಭರಿಸಲು ಸಾಧ್ಯವಾಗದೆ ತೊಂದರೆಯಲ್ಲಿದ್ದ. ಈ ಹಿನ್ನೆಲೆಯಲ್ಲಿ ಕೆಲವು ಬಾರಿ ಮುಖ್ಯಮಂತ್ರಿಗಳ ಬಳಿ ಬಂದು ಪರಿಹಾರ ಕೇಳಿದ್ದ. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಭಾನುವಾರ ಬೆಳಗ್ಗೆ ಮುಖ್ಯಮಂತ್ರಿಗಳ ನಿವಾಸ ಕಾವೇರಿಗೆ ಆಗಮಿಸಿದ್ದ ಬಸವರಾಜು, ಸಿಬ್ಬಂದಿ ಬಳಿ ತಾನು ಮುಖ್ಯಮಂತ್ರಿಯನ್ನು ಭೇಟಿ ಮಾಡಬೇಕು ಎಂದು ಕೇಳಿದ್ದ.
ಆದರೆ ಸಿಬ್ಬಂದಿ ಇಂದು ಭಾನುವಾರವಾಗಿರುವ ಕಾರಣ ಮುಖ್ಯಮಂತ್ರಿಗಳು ಭೇಟಿ ಮಾಡುವುದಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ಮುಖ್ಯಮಂತ್ರಿಗಳ ನಿವಾಸದಿಂದ ಸ್ವಲ್ಪ ಮುಂದಕ್ಕೆ ಬಂದ ಬಸವರಾಜು ರಸ್ತೆ ಬದಿ ಕುಳಿತು 20 ನಿದ್ರೆ ಮಾತ್ರೆ ಸೇವಿಸಿದ್ದಾನೆ. ಹತ್ತಿರದಲ್ಲೇ ಇದ್ದ ಪೊಲೀಸರು ಬಸವರಾಜುನನ್ನು ಆಟೋದಲ್ಲಿ ಮಲ್ಲಿಗೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಅಸ್ವಸ್ಥಗೊಂಡಿರುವ ಬಸವರಾಜುವನ್ನು ಮುಂದಿನ 24 ತಾಸುಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗುವುದು. ಬಳಿಕವಷ್ಟೇ ಆರೋಗ್ಯ ಸ್ಥಿತಿ ಸುಧಾರಿಸುವ ಭರವಸೆ ನೀಡಬಹುದು ಎಂದು ಮಲ್ಲಿಗೆ ಆಸ್ಪತ್ರೆ ವೈದ್ಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement