ಕಚ್ಚಾ ಅದಿರು ರಫ್ತು ಅವಕಾಶಕ್ಕೆ ಮನವಿ ಮಾಡಿದ ರಾಜ್ಯದ ಕಂಪನಿ
ನವದೆಹಲಿ: ಕಚ್ಚಾ ಅದಿರು ರಫ್ತಿಗೆ ಅನುಮತಿ ನೀಡುವಂತೆ ಕೋರಿ ಕರ್ನಾಟಕದ ಕಂಪನಿಯೊಂದು ಸುಪ್ರೀಂ ಕೋರ್ಟ್‌ನ ಅರಣ್ಯ ಪೀಠಕ್ಕೆ ಮನವಿ ಸಲ್ಲಿಸಿದೆ.
ಅದಿರು ಗಣಿಗಾರಿಕೆಗೆ ಹಣ ಹೂಡಿಕೆ ಮಾಡಿದ್ದು, ನಷ್ಟ ಅನುಭವಿಸುತ್ತಿದ್ದೇವೆ. ನಷ್ಟ ತಡೆಯಲು ಕಚ್ಚಾ ಅದಿರು ರಫ್ತಿಗೆ ಅವಕಾಶ ನೀಡಬೇಕು ಎಂದು ಸತ್ಯಾ ಗ್ರಾನೈಟ್ಸ್ ಕಂಪನಿ ತನ್ನ ಮನವಿಯಲ್ಲಿ ತಿಳಿಸಿದೆ. ಕರ್ನಾಟಕದಲ್ಲಿ ಇ-ಹರಾಜಿನಲ್ಲಿ ಕಚ್ಚಾ ಅದಿರನ್ನು ಯಾರೂ ಖರೀದಿಸುತ್ತಿಲ್ಲ. ಆದ್ದರಿಂದ ರಫ್ತಿಗೆ ಅವಕಾಶ ನೀಡಬೇಕೆಂದು ಕೋರಿದೆ. ಆದರೆ, ಅರ್ಜಿದಾರರ ಕೋರಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಸಮಾಜ ಪರಿವರ್ತನ ಸಮುದಾಯದ ವಕೀಲ ಪ್ರಶಾಂತ್ ಭೂಷಣ್ ಅವರು, ಕಚ್ಚಾ ಅದಿರು ರಫ್ತಿಗೆ ಅವಕಾಶ ನೀಡಬಾರದು ಎಂದು ವಾದಿಸಿದರು. ಕಬ್ಬಿಣದ ಅದಿರು ದೇಶೀಯ ಉದ್ಯಮಕ್ಕೆ ಲಭ್ಯವಾಗಬೇಕು ಎಂಬ ಕಾರಣಕ್ಕೆ ಈಗಾಗಲೇ ಕಬ್ಬಿಣದ ಅದಿರು ರಫ್ತಿಗೆ ನಿಷೇಧ ಹೇರಲಾಗಿದೆ. ಈ ಹಂತದಲ್ಲಿ ಕಚ್ಚಾ ಅದಿರು ರಫ್ತಿಗೆ ಅವಕಾಶ ನೀಡಿದರೆ, ಕಬ್ಬಿಣದ ಅದಿರು ರಫ್ತು ನಿಷೇಧಕ್ಕೆ ಅರ್ಥವೇ ಇರುವುದಿಲ್ಲ. ಕಚ್ಚಾ ಅದಿರಿನ ಜತಗೆ ಕಂಪನಿಗಳು ಕಬ್ಬಿಣದ ಅದಿರನ್ನು ರಫ್ತು ಮಾಡುತ್ತವೆ ಎಂದರು.
ನ್ಯಾ.ಎ.ಕೆ. ಪಟ್ನಾಯಕ್ ನೇತೃತ್ವದ ತ್ರಿಸದಸ್ಯ ಪೀಠ ಅರಣ್ಯಪೀಠವು ಅರ್ಜಿದಾರರ ಮನವಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುವಂತೆ ಕರ್ನಾಟಕ ಸರ್ಕಾರ ಹಾಗೂ ಕೇಂದ್ರ ಉನ್ನತಾಧಿಕಾರ ಸಮಿತಿಗೆ (ಸಿಇಸಿ) ಸೂಚಿಸಿ ವಿಚಾರಣೆ ಮುಂದೂಡಿದೆ. ವಾರದ ಹಿಂದಷ್ಟೆ, ಕರ್ನಾಟಕದಲ್ಲಿ ಉಕ್ಕು ಅದಿರು ಉತ್ಪಾದನೆ ಮಿತಿ ಹೆಚ್ಚಳ ಕೋರಿ ಕೇಂದ್ರ ಸರ್ಕಾರ ಮನವಿ ಮಾಡಿತ್ತು. ಆದರೆ, ಕರ್ನಾಟಕದಲ್ಲಿ ಅದಿರು ಉತ್ಪಾದನೆಗೆ ವಿಧಿಸಿರುವ ಮಿತಿ ಸಡಿಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು.
-ಕನ್ನಡಪ್ರಭ ಪ್ರತಿನಿಧಿಯಿಂದ