ನಕಲಿ ವಿಳಾಸ ನೀಡಿದ ಐವರಿಗೆ 'ಪಾಸ್'
ಮಂಗಳೂರು: ದಿಲ್ಸುಖ್ ನಗರ ಸ್ಫೋಟದಲ್ಲಿ ಭಾಗಿಯಾಗಿರುವ ಶಂಕಿತ ಉಗ್ರ ಇಬ್ರಾಹಿಂ ಜತೆಗೆ ಇನ್ನೂ ಐವರು ಬೆಂದೂರ್ವೆಲ್ನ ರೋಸಾ ಕಾಟೇಜ್ನ ನಕಲಿ ವಿಳಾಸ ನೀಡಿ ಪಾಸ್ಪೋರ್ಟ್ ಪಡೆದಿದ್ದಾರೆ!
'ಕನ್ನಡಪ್ರಭ' ದಿಲ್ಸುಖ್ ನಗರ ಸ್ಫೋಟಕ್ಕೆ ಮಂಗಳೂರು ನಂಟಿನ ಬಗ್ಗೆ ಜೂ.7, 2013ರಂದೇ ತನಿಖಾ ವರದಿಯೊಂದನ್ನು ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಇಬ್ರಾಹಿಂ ಖಲೀಲ್ ನಕಲಿ ವಿಳಾಸ ನೀಡಿದ ಕುರಿತು ಮತ್ತು ಪಾಸ್ಪೋರ್ಟ್ ವೆರಿಫಿಕೇಷನ್ ಮಾಡಿದ ಪೊಲೀಸ್ ವಿರುದ್ಧ ಕದ್ರಿ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಇನ್ನೂ ಐವರು ಇದೇ ಅಪಾರ್ಟ್ಮೆಂಟ್ ವಿಳಾಸದಲ್ಲಿ ನಕಲಿ ಡೋರ್ ನಂಬರ್ ನೀಡಿ ಪಾಸ್ಪೋರ್ಟ್ ಮಾಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ.
ನ.5, 2013ರಂದು ಐವರು ಶಂಕಿತರ ಪಾಸ್ಪೋರ್ಟ್ ಕುರಿತು ಸಮಗ್ರ ವಿವರ ನೀಡುವಂತೆ ಬೆಂಗಳೂರಿನ ಪಾಸ್ಪೋರ್ಟ್ ಕಚೇರಿಗೆ ಕದ್ರಿ ಪೊಲೀಸರು ಅರ್ಜಿ ಸಲ್ಲಿಸಿದ್ದರು. ತಕ್ಷಣವೇ ನೀಡಬಹುದಾದ ಈ ಮಾಹಿತಿಗೆ ಎರಡು ತಿಂಗಳು ಹತ್ತು ದಿನಗಳಾದರೂ ಪಾಸ್ಪೋರ್ಟ್ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಕದ್ರಿ ಪೊಲೀಸರು ಎರಡು ಬಾರಿ ರಿಮೈಂಡರ್ ಕಳುಹಿಸಿದರೂ ಪ್ರತಿಕ್ರಿಯೆ ಲಭ್ಯವಾಗಿಲ್ಲ.
ಆರೋಪಿಗಳನ್ನು ರಕ್ಷಿಸುತ್ತಿದ್ದಾರೆಯೇ?: ದಿಲ್ಸುಖ್ ನಗರ ಸ್ಫೋಟದಲ್ಲಿ ಮೋಸ್ಟ್ ವಾಂಟೆಡ್ ಉಗ್ರ ರಿಯಾಜ್ ಭಟ್ಕಳ್ ಗ್ಯಾಂಗ್ನ ಕೈವಾಡದ ಶಂಕೆ ಇದೆ. ಇಂಥ ಗಂಭೀರ ಪ್ರಕರಣಗಳಲ್ಲಿಯೂ ಪಾಸ್ಪೋರ್ಟ್ ಕಚೇರಿ ಅಧಿಕಾರಿಗಳ ನಿರ್ಲಕ್ಷ್ಯ, ಆರೋಪಿಗಳನ್ನು ರಕ್ಷಿಸುವ ಕೆಲಸಕ್ಕೆ ಸಮವಾಗಿದೆ.
ವಿಳಂಬದಿಂದ ಶಂಕಿತ ಉಗ್ರ ಇಬ್ರಾಹಿಂ ಮತ್ತು ಪಾಸ್ಪೋರ್ಟ್ ವೆರಿಫಿಕೇಷನ್ ಮಾಡಿಸಿದ ಪೊಲೀಸ್ ಪೇದೆ ವಿರುದ್ಧ ತನಿಖೆಗೆ ಅಡ್ಡಿಯಾಗಿದೆ. ಈಗಾಗಲೇ ಇಲಾಖೆ ತನಿಖೆಯಲ್ಲಿ ಪೊಲೀಸ್ ಪೇದೆ ತಪ್ಪಿತಸ್ಥ ಎಂದು ವರದಿ ನೀಡಲಾಗಿದೆ. ಆದರೆ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಆರೋಪ ಪಟ್ಟಿ ಕೋರ್ಟ್ಗೆ ದಾಖಲಿಸಲು ಸಾಧ್ಯವಾಗುತ್ತಿಲ್ಲ. ಕ್ರಮೇಣ ಇದು ಪತ್ತೆಯಾಗದ ಪ್ರಕರಣವಾಗುವ ಸಾಧ್ಯತೆಯೂ ಇದೆ.
ನಕಲಿ ವಿಳಾಸ ನೀಡಿದ ಐವರ ಮಾಹಿತಿ ನೀಡುವಂತೆ ಎರಡು ತಿಂಗಳ ಹಿಂದೆಯೇ ಬೆಂಗಳೂರು ಪಾಸ್ಪೋರ್ಟ್ ಕಚೇರಿಗೆ ಅರ್ಜಿ ಕಳುಹಿಸಿದ್ದೇವೆ. ಆದರೆ ಇನ್ನೂ ಉತ್ತರ ಬಂದಿಲ್ಲ. ಪಾಸ್ಪೋರ್ಟ್ ಕಚೇರಿ ಅದರದ್ದೇ ಶೈಲಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.
- ಆರ್.ಹಿತೇಂದ್ರ, ಪೊಲೀಸ್ ಕಮಿಷನರ್
ಇಬ್ರಾಹಿಂ ಆಸ್ಪತ್ರೆ ಉದ್ಯೋಗಿ!
ಇಬ್ರಾಹಿಂ ಖಲೀಲ್ ತಾನು ಅತ್ತಾವರ ಕೆಎಂಸಿ ಆಸ್ಪತ್ರೆಯಲ್ಲಿ ಉದ್ಯೋಗದಲ್ಲಿರುವುದಾಗಿ ಖೊಟ್ಟಿ ದಾಖಲೆಯನ್ನು ಪೊಲೀಸರಿಗೆ ನೀಡಿದ್ದ. ಬೆಂದೂರ್ವೆಲ್ನ ರೋಸಾ ಕಾಟೇಜ್ನ ನಕಲಿ ಡೋರ್ನಂಬರ್ ನೀಡಿದ್ದ. ಈಗ ಪೊಲೀಸರು ನೀಡಿರುವ ಐವರ ಪಾಸ್ಪೋರ್ಟ್ಗಳಿಗೂ ಈ ನಕಲಿ ವಿಳಾಸವನ್ನೇ ನೀಡಲಾಗಿದೆ. 'ಐವರಲ್ಲಿ ಅಪರಾಧಿ ಕೃತ್ಯಕ್ಕಾಗಿ ನಕಲಿ ವಿಳಾಸ ನೀಡಿರುವ ಸಾಧ್ಯತೆ ಇಲ್ಲ. ಆದರೂ ಸಂಶಯ ಬಂದಿರುವ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗುತ್ತಿದೆ' ಎಂದು ತನಿಖಾಧಿಕಾರಿ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
-ಜಿತೇಂದ್ರ ಕುಂದೇಶ್ವರ