ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕಗ್ಗಂಟಾದ ಎರಡು ಕ್ಷೇತ್ರ

ಬಿಜೆಪಿಯಲ್ಲಿ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಸುಗಮವಾಗುತ್ತಿದ್ದರೂ ಎರಡು ಕ್ಷೇತ್ರಗಳು ಮಾತ್ರ ಕಗ್ಗಂಟು ಸೃಷ್ಟಿ ಮಾಡುವ ಸಾಧ್ಯತೆ ಇದೆ....

Vishwanath S
Updated On : 15 Jan 2014, 12:41 pm

ಕನ್ನಡಪ್ರಭ ವಾರ್ತೆ ,  ಬೆಂಗಳೂರು ,  ಜ.14
ಬಿಜೆಪಿಯಲ್ಲಿ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಸುಗಮವಾಗುತ್ತಿದ್ದರೂ ಎರಡು ಕ್ಷೇತ್ರಗಳು ಮಾತ್ರ ಕಗ್ಗಂಟು ಸೃಷ್ಟಿ ಮಾಡುವ ಸಾಧ್ಯತೆ ಇದೆ.
ಬಾಗಲಕೋಟೆ ಮತ್ತು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಗೊಂದಲ ಕಾಣಿಸಿಕೊಂಡಿದ್ದು, ಇದನ್ನು ಸರಿಪಡಿಸಲು ಬಿಜೆಪಿ ನಾಯಕರು ಆರ್‌ಎಸ್‌ಎಸ್ ಮುಖಂಡರು ಮತ್ತು ರಾಷ್ಟ್ರೀಯ ನಾಯಕರ ಮೊರೆ ಹೋಗುವ ಸಾಧ್ಯತೆ ಇದೆ. ಇದಕ್ಕೆ ಕಾರಣ ಸದ್ಯಕ್ಕೆ ಪಕ್ಷ ಯೋಚಿಸಿರುವ ಅಭ್ಯರ್ಥಿಗಳ ಜತೆಗೆ ಪ್ರಬಲ ವ್ಯಕ್ತಿಗಳು ಟಿಕೆಟ್‌ಗಾಗಿ ಪ್ರಯತ್ನಿಸುತ್ತಿರುವುದು.
ಬಾಗಲಕೋಟೆ ಕ್ಷೇತ್ರದಲ್ಲಿ ಮಾಜಿ ಸಚಿವ ನಿರಾಣಿ ಮತ್ತು ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಶಾಸಕ ಆರ್. ಅಶೋಕ ಅವರು ಟಿಕೆಟ್‌ಗಾಗಿ ಸ್ಪರ್ಧೆಗೆ ಬಿದ್ದಿದ್ದಾರೆ. ಬಾಗಲಕೋಟೆ ಕ್ಷೇತ್ರದಲ್ಲಿ ಹಾಲಿ ಸಂಸದ ಗದ್ದಿಗೌಡರ್ ಅವರಿಗೆ ಟಿಕೆಟ್ ನೀಡಬೇಕು ಎನ್ನುವುದು ಬಿಜೆಪಿಯ ಒಂದು ಬಣದ ನಿರ್ಧಾರ. ಆದರೆ, ಮುರುಗೇಶ್ ನಿರಾಣಿ ಕೂಡ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿರುವುದು ಗೊಂದಲಕ್ಕೆ ಕಾರಣವಾಗಿದೆ.            
ಮುರುಗೇಶ್ ನಿರಾಣಿ ಯಡಿಯೂರಪ್ಪ ಅವರೊಂದಿಗೆ ಗುರುತಿಸಿಕೊಂಡಿರುವುದರಿಂದ ಸಾರಾಸಗಾಟಾಗಿ ಅವರನ್ನು ತಿರಸ್ಕರಿಸಲು ಸಾಧ್ಯವಾಗುತ್ತಿಲ್ಲ.
ಇನ್ನು ಬೆಂಗಳೂರು ಉತ್ತರ ಕ್ಷೇತ್ರದಿಂದ ಹಾಲಿ ಸಂಸದ ಡಿ.ಬಿ. ಚಂದ್ರೇಗೌಡ ಕಣಕ್ಕಿಳಿಯುತ್ತಿಲ್ಲ. ಅವರ ಬದಲಾಗಿ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರಿಗೆ ಟಿಕೆಟ್ ನೀಡಬೇಕು ಎಂಬುದು ಬಿಜೆಪಿಯ ಆಲೋಚನೆ. ಆದರೆ, ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ ಕೂಡ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಒಂದು ಅವಕಾಶ ನೋಡೋಣ ಎಂದು ನಿರ್ಧರಿಸಿ ಈ ಕ್ಷೇತ್ರದ ಮೇಲೆಯೇ ಕಣ್ಣಿಟ್ಟಿದ್ದಾರೆ. ಜತೆಗೆ ಶೋಭಾ ಕರಂದ್ಲಾಜೆ ಅವರ ಹೆಸರೂ ಕೇಳಿಬರುತ್ತಿದೆ. ಶೋಭಾ ಯಾವ ಕ್ಷೇತ್ರವಾದರೂ ಸರಿ ಎಂದು ಹೇಳಿದ್ದರಿಂದ ಸದ್ಯ ಸದಾನಂದಗೌಡ ಮತ್ತು ಅಶೋಕ ಅವರ ಮಧ್ಯೆ ಪೈಪೋಟಿ ಇದೆ.
ಇನ್ನುಳಿದಂತೆ ಟಕೆಟ್ ಹಂಚಿಕೆಯಲ್ಲಿ ಯಾವುದೇ ಗೊಂದಲ ಇಲ್ಲ. ಅಭ್ಯರ್ಥಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆಯಾದರೂ ಯಾರಿಗೆ ಟಿಕೆಟ್ ನೀಡಿದರೂ ಉಳಿದವರು ಆಕ್ಷೇಪ ಎತ್ತುವುದಿಲ್ಲ. ಆಕಾಂಕ್ಷಿಗಳಿಂದ ಈ ಕುರಿತು ಮಾತು ಪಡೆಯಲಾಗಿದೆ.
ಉಡುಪಿ-ಚಿಕ್ಕಮಗಳೂರಿನಿಂದ ಶೋಭಾ: ಮೂಲಗಳ ಪ್ರಕಾರ ಶೋಭಾ ಕರಂದ್ಲಾಜೆ ಅವರು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಇದಕ್ಕೆ ಸ್ಥಳೀಯ ಬಿಜೆಪಿ ಶಾಸಕರು ಹಾಗೂ ಮುಖಂಡರು ಕೂಡ ಒಪ್ಪಿಗೆ ನೀಡಿದ್ದಾರೆ.
ಶೋಭಾ ಬೆಂಗಳೂರು ಉತ್ತರ ಮತ್ತು ಮೈಸೂರು ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದರೂ ಪಕ್ಷದ ನಿರ್ಧಾರದಂತೆ ಯಾವುದೇ ಕ್ಷೇತ್ರದಲ್ಲಿ ಬೇಕಾದರೂ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದಾರೆ. ಈ ಹಿಂದೆ ಇಲ್ಲಿ ಸಿ.ಟಿ. ರವಿ ಅವರ ಹೆಸರು ಕೇಳಿಬಂದಿತ್ತಾದರೂ ಸ್ವತಃ ಅವರಿಗೇ ಅದು ಇಷ್ಟವಿಲ್ಲ. ಹೀಗಾಗಿ ಮೈಸೂರಿನಲ್ಲಿ ಮಾಜಿ ಸಚಿವ ಎ. ರಾಮದಾಸ್ ಅಥವಾ ಸಿ.ಎಚ್. ವಿಜಯಶಂಕರ್ ಪೈಕಿ ಒಬ್ಬರನ್ನು ಆಯ್ಕೆ ಮಾಡಿ ಶೋಭಾ ಅವರನ್ನು ಉಡುಪಿ- ಚಿಕ್ಕಮಗಳೂರು ಕ್ಷೇತ್ರದಿಂದ ಕಣಕ್ಕಿಳಿಸಲು ಬಿಜೆಪಿ ಮುಂದಾಗಿದೆ.
ಏಳು ಮಂದಿ ಹಾಲಿ ಸಂಸದರಿಗೆ ಟಿಕೆಟ್ ಇಲ್ಲ: ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ.ಬಿ. ಚಂದ್ರೇಗೌಡ ಅವರು ತಾವು ಮತ್ತೆ ಕಣಕ್ಕಿಳಿಯುವುದಿಲ್ಲ ಎಂದು ಈಗಾಗಲೇ ಹೇಳಿದ್ದಾರೆ. ಹೀಗಾಗಿ ಅಲ್ಲಿ ಬೇರೆಯವರಿಗೆ ಟಿಕೆಟ್ ನೀಡಲಾಗುತ್ತದೆ. ಶಿವಮೊಗ್ಗದಲ್ಲಿ ಯಡಿಯೂರಪ್ಪ ಅವರಿಗಾಗಿ ಅವರ ಪುತ್ರ ಬಿ.ವೈ. ರಾಘವೇಂದ್ರ ಹಾಗೂ ಹಾವೇರಿಯಲ್ಲಿ ಸಿ.ಎಂ. ಉದಾಸಿ ಅವರಿಗಾಗಿ ಪುತ್ರ ಶಿವಕುಮಾರ್ ಉದಾಸಿ ಕಣದಿಂದ ಹಿಂದೆ ಸರಿಯಲು ಸಿದ್ಧರಿದ್ದಾರೆ.
ಇನ್ನು ಕೆಜೆಪಿಯಲ್ಲಿರುವಾಗ ಯಡಿಯೂರಪ್ಪ ಅವರೊಂದಿಗೆ ಗುರುತಿಸಿಕೊಂಡಿದ್ದ ತುಮಕೂರು ಸಂಸದ ಬಸವರಾಜು ತಮ್ಮ ಒಂದು ಕಾಲನ್ನು ಕಾಂಗ್ರೆಸ್‌ನಲ್ಲಿಟ್ಟಿದ್ದಾರೆ. ಅವರ ಜಾಗಕ್ಕೆ ನಂದೀಶ್ ಅಥವಾ ಸೊಗಡು ಶಿವಣ್ಣ ಅವರನ್ನು ಕಣಕ್ಕಿಳಿಸಲಾಗುತ್ತದೆ. ಕೊಪ್ಪಳದಲ್ಲಿ ಹಾಲಿ ಸಂಸದ ಶಿವರಾಮೇಗೌಡ ಅವರ ಬದಲಾಗಿ ಕರಡಿ ಸಂಗಣ್ಣ, ಬಳ್ಳಾರಿಯಲ್ಲಿ ಹಾಲಿ ಸಂಸದೆ ಜೆ. ಶಾಂತಾ ಬದಲಾಗಿ ಬಿ. ಶ್ರೀರಾಮುಲು (ಬಿಜೆಪಿ ಸೇರಿದರೆ) ಹಾಗೂ ರಾಯಚೂರಿನಲ್ಲಿ ಪಕೀರಪ್ಪ ಬದಲು ಶಿವನಗೌಡ ನಾಯಕ್ ಅವರನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ. ಒಂದು ವೇಳೆ ಚಿತ್ರದುರ್ಗದಲ್ಲಿ ಎ. ನಾರಾಯಣಸ್ವಾಮಿ ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿಯಾದರೆ ಆಗ ಹಾಲಿ ಸಂಸದ ಜನಾರ್ದನ ಸ್ವಾಮಿ ಅವಕಾಶ ಕಳೆದುಕೊಳ್ಳಲಿದ್ದು, ಟಿಕೆಟ್ ಸಿಗದ ಸಂಸದರ ಸಂಖ್ಯೆ 8ಕ್ಕೇರಲಿದೆ.
ಹೀಗಾಗಿ ಜ. 16 ಮತ್ತು 17ರಂದು ನಡೆಯಲಿರುವ ಬಿಜೆಪಿ ಚುನಾವಣಾ ವ್ಯವಹಾರಗಳ ಸಮಿತಿ ಸಭೆಯಲ್ಲಿ 15 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮಾತ್ರ ಅಂತಿಮಗೊಳಿಸಲು ತೀರ್ಮಾನಿಸಲಾಗಿದ್ದು, ರಾಷ್ಟ್ರೀಯ ಕಾರ್ಯಕಾರಿಣಿ ಬಳಿಕ (ಜ. 18, 19 ಮತ್ತು 20) ಪಟ್ಟಿ ಬಿಡುಗಡೆ ಮಾಡಲಾಗುವುದು ಮೂಲಗಳು ತಿಳಿಸಿವೆ.
ವಿಧಾನಸಭೆ ಸದಸ್ಯರಿಗೆ ಲೋಕಸಭೆ ಟಿಕೆಟ್ ಇಲ್ಲ!
ಈ ಮಧ್ಯೆ ಲೋಕಸಭೆ ಮೇಲೆ ಕಣ್ಣಿಟ್ಟಿರುವ ವಿಧಾನಸಭೆ ಸದಸ್ಯರಿಗೆ ಅವಕಾಶ ನೀಡದೇ ಇರಲು ಮುಂದಾಗಿರುವ ಬಿಜೆಪಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಹೊರತುಪಡಿಸಿ ಉಳಿದಂತೆ ಹಾಲಿ ಶಾಸಕರಿಗೆ ಟಿಕೆಟ್ ನೀಡದೇ ಇರಲು ಚಿಂತನೆ ನಡೆಸಿದೆ. ಆರ್‌ಎಸ್‌ಎಸ್ ಸೇರಿದಂತೆ ಸಂಘ ಪರಿವಾರದ ಮುಖಂಡರ ಜತೆಗೆ ಬಿಜೆಪಿ ನಾಯಕರು ಸೋಮವಾರ ನಡೆಸಿದ ಮಾತುಕತೆ ವೇಳೆ ಈ ವಿಚಾರ ಪ್ರಸ್ತಾಪವಾಗಿದ್ದು, ಲೋಕಸಭೆ ಚುನಾವಣೆಯಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ನೀಡದೇ ಇರುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ. ಇದಕ್ಕೆ ಕಾರಣ ಪಕ್ಷಕ್ಕೆ ಮುಜುಗರವಾಗದಂತೆ ನೋಡಿಕೊಳ್ಳುವುದು. ಒಂದ ವೇಳೆ ಹಾಲಿ ಶಾಸಕರು ಲೋಕಸಭೆ ಚುನಾವಣೆಯಲ್ಲಿ ಸೋತರೆ ಅವರ ವಿಧಾನಸಭೆ ಸದಸ್ಯ ಸ್ಥಾನಕ್ಕೆ ಯಾವುದೇ ಧಕ್ಕೆ ಬರುವುದಿಲ್ಲವಾದರೂ ಪಕ್ಷ ಮುಜುಗರ ಅನುಭವಿಸಬೇಕಾಗುತ್ತದೆ.
ಸಿದ್ಧವಾಗಿರುವ ಪಟ್ಟಿ
-    ಬಾಗಲಕೋಟೆ- ಗದ್ದಿಗೌಡರ್/ ಮುರುಗೇಶ್ ನಿರಾಣಿ
-    ಬೆಂಗಳೂರು ಉತ್ತರ- ಸದಾಂದಗೌಡ/ ಅಶೋಕ/ ಶೋಭಾ ಕರಂದ್ಲಾಜೆ
-    ಬೆಂಗಳೂರು ದಕ್ಷಿಣ- ಅನಂತಕುಮಾರ್
-    ಬೆಂಗಳೂರು ಗ್ರಾಮಾಂತರ- ಪಿ. ಮುನಿರಾಜು
-    ಬೆಂ.ಕೇಂದ್ರ- ಪಿ.ಸಿ. ಮೋಹನ್/ ನಿರ್ಮಲ್ ಕುಮಾರ್ ಸುರಾನಾ
-    ಬೆಳಗಾವಿ- ಸುರೇಶ್ ಅಂಗಡಿ
-    ಬಳ್ಳಾರಿ- ಬಿ. ಶ್ರೀರಾಮುಲು (ಬಿಜೆಪಿಗೆ ಸೇರ್ಪಡೆಯಾದರೆ)
-    ಬೀದರ್- ಸೂರ್ಯಕಾಂತ ನಾಗಮಾರಪಲ್ಲಿ
-    ಬಿಜಾಪುರ- ರಮೇಶ್ ಜಿಗಜಿಣಗಿ
-    ಚಾಮರಾಜನಗರ- ಎ.ಆರ್. ಕೃಷ್ಣಮೂರ್ತಿ
-    ಚಿಕ್ಕಬಳ್ಳಾಪುರ- ಬಿ.ಎನ್. ಬಚ್ಚೇಗೌಡ/ ವಿವೇಕ್ ರೆಡ್ಡಿ
-    ಚಿಕ್ಕೋಡಿ- ರಮೇಶ್ ಕತ್ತಿ
-    ಚಿತ್ರದುರ್ಗ- ಜನಾರ್ದನ ಸ್ವಾಮಿ/ ಎ. ನಾರಾಯಣಸ್ವಾಮಿ
-    ದಕ್ಷಿಣ ಕನ್ನಡ- ನಳಿನ್‌ಕುಮಾರ್ ಕಟೀಲ್
-    ದಾವಣಗೆರೆ- ಜಿ.ಎಂ. ಸಿದ್ದೇಶ್
-    ಧಾರವಾಡ- ಪ್ರಹ್ಲಾದ ಜೋಶಿ
-    ಗುಲ್ಬರ್ಗಾ- ರೇವುನಾಯಕ್ ಬೆಳಮಗಿ
-    ಹಾಸನ- ಇನ್ನೂ ನಿರ್ಧಾರವಾಗಿಲ್ಲ
-    ಹಾವೇರಿ- ಸಿ.ಎಂ. ಉದಾಸಿ/ ಸೋಮಣ್ಣ ಬೇವಿನಮರದ್
-    ಕೋಲಾರ- ಬೇತಮಂಗಲ ನಾರಾಯಣಸ್ವಾಮಿ
-    ಕೊಪ್ಪಳ- ಶಿವರಾಮೇಗೌಡ/ ಕರಡಿ ಸಂಗಣ್ಣ
-    ಮಂಡ್ಯ- ಇನ್ನೂ ನಿರ್ಧಾರವಾಗಿಲ್ಲ
-    ಮೈಸೂರು- ಶೋಭಾ ಕರಂದ್ಲಾಜೆ/ರಾಮದಾಸ್/ ವಿಜಯಶಂಕರ್
-    ರಾಯಚೂರು- ಶಿವನಗೌಡ ನಾಯಕ್
-    ಶಿವಮೊಗ್ಗ- ಬಿ.ಎಸ್. ಯಡಿಯೂರಪ್ಪ
-    ತುಮಕೂರು- ನಂದೀಶ್/ ಸೊಗಡು ಶಿವಣ್ಣ
-    ಉಡುಪಿ ಚಿಕ್ಕಮಗಳೂರು- ಶೋಭಾ ಕರಂದ್ಲಾಜೆ/ ಸಿ.ಟಿ. ರವಿ
-    ಉತ್ತರ ಕನ್ನಡ- ಅನಂತಕುಮಾರ್ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement