ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕಾಮನ್ ಅಲ್ಲ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಟ್ರು, ಶಾಕ್ ಕೊಟ್ರು!

Vishwanath S
Updated On : 15 Jan 2014, 12:47 pm

ಕ.ಪ್ರ.ವಾರ್ತೆ ,  ಬೆಂಗಳೂರು ,  ಜ. 14
ಎರಡು ಪ್ರವೇಶ ಪರೀಕ್ಷೆ ಆಗುತ್ತದೆ ಎಂಬ ಕಾರಣಕ್ಕೆ ಬೊಬ್ಬೆ ಹೊಡೆಯುತ್ತಿದ್ದವರಿಗೆ ದೊಡ್ಡದೊಂದು ಶಾಕ್ ಕಾದಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ 25ಕ್ಕೂ ಅಧಿಕ ಪ್ರವೇಶ ಪರೀಕ್ಷೆಗಳು ನಡೆಯಲಿವೆ!
ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳ ಪ್ರವೇಶ ನಿಯಂತ್ರಣ ಹಾಗೂ ಶುಲ್ಕ ನಿಗದಿ ಕಾಯಿದೆ ಜಾರಿಯಿಂದ ರಾಜ್ಯದಲ್ಲಿ ಎರಡು ಪ್ರವೇಶ ಪರೀಕ್ಷೆಗಳಾಗುತ್ತವೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎಂದು ಪ್ರತಿಭಟನೆಗಳು ನಡೆದಿದ್ದವು. ಈಗ ರಾಜ್ಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಖಾಸಗಿ ವಿಶ್ವವಿದ್ಯಾಲಯಗಳ ಕಾರಣದಿಂದ 25ಕ್ಕೂ ಅದಿಕ ಪ್ರವೇಶ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಹಾಜರಾಗಬೇಕಾದ ಅನಿವಾರ್ಯತೆಯಿದೆ. ಇಲ್ಲವಾದಲ್ಲಿ ವಿದ್ಯಾರ್ಥಿಗಳು ಸಂಬಂಧಪಟ್ಟ ಖಾಸಗಿ ವಿವಿಯಲ್ಲಿ ಪ್ರವೇಶ ಪಡೆಯುವ ಕನಸು ಕೈಬಿಟ್ಟು ಸರ್ಕಾರಿ ಸಿಇಟಿ ಹಾಗೂ ಕಾಮೆಡ್-ಕೆ ಪರೀಕ್ಷೆಗಳಿಗಷ್ಟೇ ಹಾಜರಾಗಬೇಕಾಗುತ್ತದೆ.
2014- 15ನೇ ಶೈಕ್ಷಣಿಕ ವರ್ಷದಲ್ಲಿ ಪ್ರವೇಶ ಪರೀಕ್ಷೆ ಸಂಖ್ಯೆ ಒಂದಂಕಿಯಲ್ಲೇ ಇರಬಹುದು. ಏಕೆಂದರೆ ನೂತನವಾಗಿ ಮಾನ್ಯತೆ ಪಡೆದ 20 ಖಾಸಗಿ ವಿವಿಗಳಲ್ಲಿ ಕೇವಲ 3 ವಿವಿಗಳಿಗೆ ಮಾತ್ರ ಶಿಕ್ಷಣ ಆರಂಭಿಸಲು ಅನುಮತಿ ನೀಡಲಾಗಿದೆ. ಆದರೆ 2015- 16ನೇ ಶೈಕ್ಷಣಿಕ ವರ್ಷದಿಂದ ಎಲ್ಲ ವಿವಿಗಳಿಗೆ ಅನುಮತಿ ಸಿಗುತ್ತದೆ. ಇದರಿಂದ ವಿದ್ಯಾರ್ಥಿಗಳು ಸರಣಿ ಪರೀಕ್ಷೆಗೆ ಹಾಜರಾಗುವ ಪ್ರಮೇಯ ಎದುರಾಗಲಿದೆ.
ಎಲ್ಲ ಖಾಸಗಿ ವಿವಿಗಳು ಸೇರಿ ಒಂದೇ ಪರೀಕ್ಷೆ ನಡೆಸದಿದ್ದಲ್ಲಿ ಅಥವಾ ಸರ್ಕಾರ ಇದಕ್ಕೆ ಮೂಗುದಾರ ಹಾಕದಿದ್ದಲ್ಲಿ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಇದು ಹೇಗಿದ್ದರೂ ಸರ್ಕಾರಿ ಸೀಟುಗಳಿಗಲ್ಲವಲ್ಲ ಎಂದು ಮೂಗು ಮುರಿಯಬಹುದು, ಆದರೆ ರಾಜ್ಯದಲ್ಲಿ ಪ್ರತಿವರ್ಷ ಸುಮಾರು 40 ಸಾವಿರ ವಿದ್ಯಾರ್ಥಿಗಳು ಸರ್ಕಾರಿ ಸಿಇಟಿ ಹೊರತಾಗಿ ಪ್ರವೇಶ ಪಡೆಯುತ್ತಾರೆ. ಯಾವ ವಿದ್ಯಾರ್ಥಿಗೆ ಎಲ್ಲಿ ಪ್ರವೇಶ ಸಿಗುತ್ತದೆ ಎನ್ನುವುದು ಪರೀಕ್ಷೆ ಬರೆಯುವಾಗ ಗೊತ್ತಾಗುವುದಿಲ್ಲ.
ಸರಣಿ ಪ್ರವೇಶ ಪರೀಕ್ಷೆ: ಖಾಸಗಿ ವಿಶ್ವವಿದ್ಯಾಲಯಗಳ ವಿಧೇಯಕದಲ್ಲಿ ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸ್ವತಂತ್ರ ಅಧಿಕಾರ ನೀಡಲಾಗಿದೆ. ಪ್ರತಿ ವಿವಿಗಳು ಶೇ.40ರಷ್ಟು ಸೀಟುಗಳನ್ನು ಸರ್ಕಾರಕ್ಕೆ ನೀಡಿ ಉಳಿದ ಸೀಟುಗಳಿಗೆ ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸುತ್ತಾರೆ. ಇದರಿಂದ ರಾಜ್ಯದಲ್ಲಿ ಈಗಾಗಲೇ 22 ಶಿಕ್ಷಣ ಸಂಸ್ಥೆಗಳು ಖಾಸಗಿ ವಿಶ್ವವಿದ್ಯಾಲಯ ಮಾನ್ಯತೆ ಪಡೆದಿವೆ.
ಈಗಾಗಲೇ ಅಜೀಂ ಪ್ರೇಮ್‌ಜಿ ಹಾಗೂ ಅಲಯನ್ಸ್ ಖಾಸಗಿ ವಿವಿಗಳು ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸುತ್ತವೆ. ಇದನ್ನು ಹೊರತುಪಡಿಸಿ 2014- 15 ಶೈಕ್ಷಣಿಕ ವರ್ಷದಲ್ಲಿ ಪಿಇಎಸ್, ರೇವಾ ಹಾಗೂ ಸಿಎಂಆರ್ ಶಿಕ್ಷಣ ಸಂಸ್ಥೆಗಳು ಖಾಸಗಿ ವಿವಿಗೆ ಪ್ರತ್ಯೇಕ ಪರೀಕ್ಷೆ ಮೂಲಕ ಪ್ರವೇಶ ಪಡೆಯಲು ನಿರ್ಧರಿಸಿವೆ. ಉಳಿದ 17 ಖಾಸಗಿ ವಿವಿಗಳು ಮುಂದಿನ ಶೈಕ್ಷಣಿಕ ವರ್ಷ ಅಥವಾ ಇನ್ಯಾವುತ್ತೋ ಅನುಮತಿ ಪಡೆದರೂ ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸುತ್ತಾರೆ.
ಖಾಸಗಿ ವಿವಿ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಲ್ಲಿ ಕೆಲ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳೂ ಇವೆ. ಇದರಿಂದ ವಿದ್ಯಾರ್ಥಿಗಳು ಈ ಖಾಸಗಿ ವಿವಿಗಳಿಗೆ ಪ್ರವೇಶ ಪಡೆಯುವ ಕನಸು ಕಾಣಲು ಬರೋಬ್ಬರಿ 22 ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ. ಒಂದು ಪ್ರವೇಶ ಪರೀಕ್ಷೆಗೆ 1 ಸಾವಿರ ರುಪಾಯಿ ಎಂದಿಟ್ಟುಕೊಂಡರೂ ವಿದ್ಯಾರ್ಥಿಯು ಶುಲ್ಕ ತುಂಬುವುದಿರಲಿ, ಪ್ರವೇಶ ಪರೀಕ್ಷೆಯ ಶುಲ್ಕ ತುಂಬಿಯೇ ಹೈರಾಣಾಗುತ್ತಾನೆ.
ಇನ್ನು ಸ್ವಾಯತ್ತ ವಿವಿಗಳು ಕೂಡ ಈಗಾಗಲೇ ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸುತ್ತಿದ್ದಾರೆ. ಇದರೊಂದಿಗೆ ಧಾರ್ಮಿಕ ಹಾಗೂ ಭಾಷಾ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೂ ಮತ್ತೊಂದು ಪರೀಕ್ಷೆಯಿದೆ. ಒಟ್ಟಿನಲ್ಲಿ ವಿದ್ಯಾರ್ಥಿಯು ದ್ವಿತೀಯ ಪಿಯುಸಿಗಿಂತ ಹೆಚ್ಚು ಪ್ರವೇಶ ಪರೀಕ್ಷೆಯ ಗೋಜಲಿನಲ್ಲಿಯೇ ಮುಳುಗುವ ಅನಿವಾರ್ಯ ಎದುರಾಗುತ್ತದೆ.
ವಿಧೇಯಕ ತಿದ್ದುಪಡಿ ಮಾಡದಿದ್ದರೆ ಇದೇ ಗತಿ!
ಎಲ್ಲ ಖಾಸಗಿ ವಿವಿಗಳಿಗೆ ಪ್ರತ್ಯೇಕ ಪ್ರವೇಶ ಪರೀಕ್ಷೆ ಮಾಡಿಕೊಳ್ಳಲು ವಿಧೇಯಕದಲ್ಲಿಯೇ ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ವಿಧಾನ ಮಂಡಲದ ಉಭಯ ಸದನಗಳಲ್ಲಿ ಈ ವಿಧೇಯಕಗಳಿಗೆ ತಿದ್ದುಪಡಿ ತರದಿದ್ದರೇ ವಿದ್ಯಾರ್ಥಿಗಳಿಗೆ ಈ ಸಂಕಷ್ಟ ಕಟ್ಟಿಟ್ಟ ಬುತ್ತಿ. ಇಲ್ಲವಾದಲ್ಲಿ ಈ ಕಾಲೇಜುಗಳಲ್ಲಿನ ಶೇ.60ರ ಸೀಟುಗಳಿಗಾಗಿ ವಿದ್ಯಾರ್ಥಿಗಳು 20ಕ್ಕೂ ಅಧಿಕ ಪರೀಕ್ಷೆಗಳಿಗೆ ಹಾಜರಾಗಬೇಕಾಗುತ್ತದೆ. ಇಲ್ಲವಾದಲ್ಲಿ ಪರೋಕ್ಷವಾಗಿ ಆ ವಿವಿಗಳಲ್ಲಿ ಪ್ರವೇಶ ಪಡೆಯುವ ಆಸೆ ಕೈಬಿಡಿ ಎಂದು ಸರ್ಕಾರ ಹೇಳಿದಂತಾಗುತ್ತದೆ.


-ರಾಜೀವ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement