ನರ ಬಲಿ ತಡೆಯಲಾಗದೆ ಹಲ್ಲಿಲ್ಲದ 'ಹುಲಿ'ಯಾದ ಅರಣ್ಯ ಇಲಾಖೆ, ಇಲ್ಲಿ ಇನ್ನೂ ಹಳೆಯ ಕಾಲದ ಶಸ್ತ್ರಾಸ್ತ್ರಗಳ ಬಳಕೆ!
ಬೆಂಗಳೂರು: ನಾಡಿನಲ್ಲಿ 'ಕಾಡಿನ ರಾಜ' ಹುಲಿ ಉಪಟಳ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಆದರೆ ಇದನ್ನು ನಿಯಂತ್ರಿಸುವ ಶಕ್ತಿ ಅರಣ್ಯ ಇಲಾಖೆಗಿಲ್ಲ. ನಾಗರಹೊಳೆ ಮತ್ತು ಬಂಡೀಪುರ ಅಭಯಾರಣ್ಯ ವ್ಯಾಪ್ತಿಯಲ್ಲಿ ಹುಲಿಗಳು ಈತನಕ ಅರಣ್ಯ ಸಿಬ್ಬಂದಿ ಸೇರಿ 7 ಮಂದಿ ಬಲಿ ತೆಗೆದುಕೊಂಡಿವೆ. ಇದರಲ್ಲೂ ಮೂರು ಹುಲಿಗಳು ಸೆರೆಯಾಗಿ ಮೃಗಾಲಯ ಸೇರಿವೆ. ಈವರೆಗೂ ಹಸು, ಎಮ್ಮೆಗಳ ಮೇಲೆ ದಾಳಿ ಮಾಡಿ ಕೊಲ್ಲುತ್ತಿದ್ದ ಹುಲಿಗಳು ಮನುಷ್ಯರನ್ನು ಈ ಪ್ರಮಾಣದಲ್ಲಿ ಬಲಿ ತೆಗೆದುಕೊಂಡಿದ್ದು ಇದೇ ಪ್ರಥಮ. ಹಾಗೆ ನೋಡಿದರೆ ರಾಜ್ಯದಲ್ಲಿ ಕಳೆದ ನಾಲ್ಕೈದು ತಿಂಗಳ ಅವಧಿಯಲ್ಲಿ ಮನುಷ್ಯ ಆನೆಗೆ ಬಲಿಯಾಗಿದ್ದಕ್ಕಿಂತ ಹುಲಿಗೆ ಬಲಿಯಾಗಿದ್ದೇ ಹೆಚ್ಚು. ಅಂದಮಾತ್ರಕ್ಕೆ ಈ ಹುಲಿಗಳು ನರಭಕ್ಷಕ ಏನಲ್ಲ. ಬೇಟೆಯಾಡುವ ಸಾಮರ್ಥ್ಯ ಕುಸಿದಾಗ ಸುಲಭ ಬೇಟೆಗೋ ಅಥವಾ ಅತ್ಮರಕ್ಷಣೆಗೋ ಮನುಷ್ಯನ ಮೇಲೆ ಎರಗಬಹುದು. ಇಂಥ ಸಂದರ್ಭದಲ್ಲಿ ಹುಲಿ ಮತ್ತು ಮನುಷ್ಯ ಇಬ್ಬರನ್ನೂ ರಕ್ಷಿಸಲು ಇಲಾಖೆ ಬಳಿ ಶಕ್ತಿಯೂ ಇಲ್ಲ. ಶಸ್ತ್ರಾಸ್ತ್ರವೂ ಇಲ್ಲ.
ಹುಲಿ ಸಂಬಂಧಿಸಿದ ಘಟನೆಗಳನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದ್ದು, ಪ್ರತಿ ನಿಮಿಷ ಹುಲಿ ಸಂರಕ್ಷಣಾ ಅರಣ್ಯದ ಮೇಲೆ ನಿಗಾ ಇರಿಸಿದ್ದೇವೆ. ಹುಲಿ ಸಂರಕ್ಷಣೆ ಹಾಗೂ ಹುಲಿ ದಾಳಿ ಘಟನೆಗಳನ್ನು ತಡೆಯಲು ನಮ್ಮಲ್ಲಿ ಸಿಬ್ಬಂದಿ ಮತ್ತು ಉಪಕರಣಗಳ ಕೊರತೆ ಇದೆ. ಇದನ್ನು ಸರಿಪಡಿಸುವ ಕಾರ್ಯ ಶುರು ಮಾಡಿದ್ದೇವೆ.
- ರಮಾನಾಥ ರೈ, ಪರಿಸರ ಮತ್ತು ಅರಣ್ಯ ಸಚಿವ
ದುರ್ಬಲ ಹುಲಿಗೆ ಉಳಿಗಾಲವಿಲ್ಲ
ಈ ಮೊದಲು ನಾಗರಹೊಳೆ ಮತ್ತು ಬಂಡೀಪುರ ಅರಣ್ಯಗಳಲ್ಲಿ ಹೆಚ್ಚಾಗಿದ್ದ ಹುಲಿ ಈಗ ಭದ್ರಾ, ಬಿಳಿಗಿರಿರಂಗನ ಬೆಟ್ಟ ಅರಣ್ಯ, ಕಾವೇರಿ ಅರಣ್ಯ ವ್ಯಾಪ್ತಿಯಲ್ಲಿ ಹೆಚ್ಚಾಗಿವೆ. ಕನಕಪುರ ವಲಯ ದಾಂಡೇಲಿ ಕಾಡುಗಳಲ್ಲೂ ಕಾಣಸಿಗುತ್ತಿವೆ. ಹೀಗಾಗಿ ರಾಜ್ಯದಲ್ಲಿ ಹುಲಿಗಳ ಸಂಖ್ಯೆ 300ರಿಂದ 350ಕ್ಕೆ ಹೆಚ್ಚಾಗಿದೆ ಎನ್ನಲಾಗುತ್ತಿದೆ. ಹುಲಿ ದುರ್ಬಲವಾದಾಗ ಅದನ್ನು ಶಕ್ತಿಶಾಲಿ ಹುಲಿ ದೂರ ಅಟ್ಟುತ್ತವೆ. ಆ ಹುಲಿ ಪ್ರಾಂತ್ಯವನ್ನು ಶಕ್ತಿಶಾಲಿ ಹುಲಿ ಆಕ್ರಮಿಸಿಕೊಳ್ಳುತ್ತದೆ. ಇಂಥ ಸಂದರ್ಭದಲ್ಲಿ ಅಶಕ್ತಿ ಹುಲಿಗಳು ಕಾಡಂಚಿಗೆ ಬಂದು ಸುಲಭ ಬೇಟೆ ನಿರೀಕ್ಷೆಯಲ್ಲಿದ್ದಾಗ ಜನ, ಜಾನುವಾರು ಬಲಿಯಾಗಬಹುದು. ಆದ್ದರಿಂದ ನಾವು ಹುಲಿ ಮತ್ತು ಮನುಷ್ಯ ಇಬ್ಬರನ್ನೂ ರಕ್ಷಿಸಬೇಕಿದೆ ಎಂದು ಇಲಾಖೆಯ ವನ್ಯಜೀವಿ ವಿಭಾಗದ ಎಪಿಸಿಸಿಎಫ್ ಅಜಯ್ಮಿಶ್ರಾ ಹೇಳುತ್ತಾರೆ.
ನಿಧಾನವಾಗಿ ಕಣ್ಬಿಟ್ಟ ಇಲಾಖೆ
7 ಮಂದಿ ಬಲಿಯ ನಂತರ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿದ್ದು, ವಾರದ ಹಿಂದಷ್ಟೆ ಹುಲಿ ದಾಳಿ ತಡೆಯುವ ನಿಟ್ಟಿನಲ್ಲಿ ಸಚಿವರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಮೊದಲಿಗೆ 700 ಮಂದಿ ಸಿಬ್ಬಂದಿ ನೇಮಕಕ್ಕೆ ತೀರ್ಮಾನಿಸಲಾಗಿದೆ. ಹಾಗೆಯೇ ಹುಲಿ ದಾಳಿ ಪ್ರಕರಣಗಳನ್ನು ನಿರ್ವಹಿಸಲು ಶಸ್ತ್ರಸಜ್ಜಿತ ಹಾಗೂ ತರಬೇತಿ ಹೊಂದಿದ ಪ್ರತ್ಯೇಕ ತಂಡ ಸಿದ್ಧಪಡಿಸುವುದು. ಎರಡು ಔಷಧ ಸಿರಿಂಜ್ ಲೋಡ್ ಆಗುವ 8 ಆಧುನಿಕ ಟ್ರಾಂಕ್ಯೂಲೈಸರ್ ಖರೀದಿಸುವುದು ತೀರ್ಮಾನಿಸಿದೆ. ಗ್ರಾಮ ಅರಣ್ಯ ಸಮಿತಿಗಳ ಮೂಲಕ ಕಾಡಂಚಿನ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹುಲಿ ಉಪಟಳ ಕಡಿಮೆಯಾಗುವಂತೆ ಮಾಡಲು ಇಲಾಖೆ ಚಿಂತಿಸಿದೆ.
ಎಲ್ಲ ಓಬಿರಾಯನ ಕಾಲದ್ದು
ಉಪಟಳ ನೀಡುವ ಹುಲಿ ಹಿಡಿಯಲು ಅರಣ್ಯ ಇಲಾಖೆ ಅಲ್ಲಲ್ಲಿ ಟ್ರ್ಯಾಂಕುಲೈಸರ್ (ಗುಂಡಿನ ಮಾದರಿ ಔಷಧ ಹೊಡೆದು ಪ್ರಜ್ಞೆ ತಪ್ಪಿಸುವುದು) ಬಳಸುತ್ತಿದೆ. ಆದರೆ ಅವು 1960ರ ಕಾಲದ ತಂತ್ರಜ್ಞಾನದ್ದು. ಅವು ಕೂಡ ಅಗತ್ಯ ಪ್ರಮಾಣದಷ್ಟಿಲ್ಲ. ಇದರೊಂದಿಗೆ ಟ್ರ್ಯಾಂಕುಲೈಸರ್ ಬಳಸಿ ಹುಲಿ ಹಿಡಿಯುವ ಸಿಬ್ಬಂದಿಯೂ ಕಡಿಮೆ. ಇರುವ ಸಿಬ್ಬಂದಿಗೆ ಔಷಧ ಹಾಕಿದ ಟ್ರ್ಯಾಂಕುಲೈಸರ್ ಬಳಸುವುದು ಗೊತ್ತಿಲ್ಲ. ಗೊತ್ತಿರುವವರೆಲ್ಲಾ ಬಹುತೇಕ ಪಶುವೈದ್ಯರು. ಆದರೆ ಈ ಕೆಲಸ ಸುಲಭವಲ್ಲ ಎಂಬ ಕಾರಣಕ್ಕೆ ಪಶುವೈದ್ಯರು ಅರಣ್ಯ ಇಲಾಖೆಗೆ ಬರುತ್ತಿಲ್ಲ. ಹೀಗಾಗಿ ಹುಲಿ ಹಿಡಿಯಲು ಸಮರ್ಥರಾದ ಅನುಭವೀ ಹಿರಿಯ ಪಶು ವೈದ್ಯರ ಸಂಖ್ಯೆ ಐದು ಮಂದಿ ಇದ್ದರೆ ಹೆಚ್ಚು. ಅದರಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಸಹಾಯಕ ನಿರ್ದೇಶಕ ಡಾ. ಚೆಟ್ಟಿಯಪ್ಪ ಪ್ರಮುಖರು. ಸಾಮಾನ್ಯ ಹುಲಿ ಹಿಡಿಯುವ ಕಾರ್ಯಕ್ಕೆ ಪಶು ವೈದ್ಯರೂ ಸೇರಿದಂತೆ 10 ಮಂದಿಯಾದರೂ ಬೇಕು. ಆದರೆ ಹುಲಿ ಸಂರಕ್ಷಿತ ಅರಣ್ಯ ವಿಭಾಗಗಳಲ್ಲಿ ಅಷ್ಟು ಸಂಖ್ಯೆ ಸಿಬ್ಬಂದಿ ಇಲ್ಲದೆ ಇಲಾಖೆ ಅಸಹಾಯಕವಾಗಿದೆ.
ಹುಲಿಗೆ ಬಲಿ ಆದೋರು
ನ.27 ಎಚ್.ಡಿ.ಕೋಟೆ ಅರಣ್ಯ ವ್ಯಾಪ್ತಿಯ ನಡ ಎಂಬ ಪ್ರದೇಶದಲ್ಲ್ಲಿ ಒಬ್ಬನ ಸಾವು
ನ.29 ಸೀಗೋಡಿ ಅರಣ್ಯ ಪ್ರದೇಶದಲ್ಲಿ ಯುವಕನ ಬಲಿ
ನ.30 ನಾಗರಹೋಳೆಯ ಡಿ.ಬಿ.ಕುಪ್ಪೆ ಅರಣ್ಯ ವ್ಯಾಪ್ತಿಯಲ್ಲಿ ಸಿಬ್ಬಂದಿ ಬಲಿ
ಡಿ.5 ಎಚ್.ಡಿ.ಕೋಟೆಯ ಚಿಕ್ಕಬರಗಿಯಲ್ಲಿ ಸತತ ಮೂವರ ಆಹುತಿ
ಡಿ.27 ಬಂಡೀಪುರದ ಮದ್ದೂರು ಅರಣ್ಯ ಪ್ರದೇಶದಲ್ಲಿ ವ್ಯಕ್ತಿಯ ಸಾವು
-ಶಿವಕುಮಾರ್ ಬೆಳ್ಳಿತಟ್ಟೆ