ಪಕ್ಷದ ಕೆಲಸವನ್ನು ಪ್ರಾಮಾಣಿಕವಾಗಿ ಪೂರೈಸುತ್ತೇನೆ...
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಪ್ರಧಾನಿ ಅಭ್ಯರ್ಥಿ ಪಟ್ಟ ಕಟ್ಟುವ ಕಾಲ ಕೊನೆಗೂ ಕೂಡಿ ಬಂದಿದೆ...
ಪ್ರಧಾನಿ ಹುದ್ದೆ ಜವಾಬ್ದಾರಿ ಒಪ್ಪಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ರಾಹುಲ್ ಉತ್ತರ
ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಪ್ರಧಾನಿ ಅಭ್ಯರ್ಥಿ ಪಟ್ಟ ಕಟ್ಟುವ ಕಾಲ ಕೊನೆಗೂ ಕೂಡಿ ಬಂದಿದೆ. ಇದರ ಸೂಚನೆಯೆಂಬಂತೆ ಈವರೆಗೆ 'ಅಧಿಕಾರ ವಿಷ' ಎನ್ನುತ್ತಿದ್ದ ರಾಹುಲ್ ಗಾಂಧಿ ಇದೇ ಮೊದಲ ಬಾರಿಗೆ ಪಕ್ಷ ನೀಡುವ ಯಾವುದೇ ಜವಾಬ್ದಾರಿ ವಹಿಸಿಕೊಳ್ಳಲು ಸಿದ್ಧ ಎಂದಿದ್ದಾರೆ. ಈ ಮೂಲಕ ಪ್ರಧಾನಿ ಅಭ್ಯರ್ಥಿಯಾಗಲು ತಾನು ತಯಾರಿದ್ದೇನೆ ಎನ್ನುವ ಸಂದೇಶವನ್ನು ರಾಹುಲ್ ರವಾನಿಸಿದ್ದಾರೆ.
'ನಾನು ಕಾಂಗ್ರೆಸ್ನ ಶಿಸ್ತಿನ ಸಿಪಾಯಿ. ಪಕ್ಷದ ಯಾವುದೇ ಆದೇಶವನ್ನು ಪಾಲಿಸಲು ಸಿದ್ಧ. ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ಪ್ರಾಮಾಣಿಕತೆಯಿಂದ ನಿಭಾಯಿಸುತ್ತೇನೆ' ಎಂದು ದೈನಿಕ್ ಭಾಸ್ಕರ್ ಹಿಂದಿ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ರಾಹುಲ್ ತಿಳಿಸಿದ್ದಾರೆ.
ಕಾಂಗ್ರೆಸ್ನದು ಪ್ರಜಾಸತ್ತಾತ್ಮಕ ವ್ಯವಸ್ಥೆ. ನಾವು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟುಕೊಂಡಿದ್ದೇವೆ. ದೇಶದ ಪ್ರಧಾನಿ ಯಾರಾಗಬೇಕೆಂಬುದನ್ನು ಜನ ನಿರ್ಧರಿಸುತ್ತಾರೆ. ದೇಶದ ಹಿತದೃಷ್ಟಿಯಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಪಕ್ಷ ಈ ಹಿಂದೆ ನೀಡಿದ ಎಲ್ಲ ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ. ಮುಂದೆ ನೀಡುವ ಜವಾಬ್ದಾರಿಯನ್ನೂ ಅಷ್ಟೇ ಪ್ರಾಮಾಣಿಕತೆಯಿಂದ ನಿರ್ವಹಿಸುತ್ತೇನೆ ಎಂದಿದ್ದಾರೆ ರಾಹುಲ್.
ಅಧಿಕಾರ ವಿಷ ಆದ್ರೆ...: ಕಳೆದ ವರ್ಷ ಪಕ್ಷದ ಜೈಪುರ ಚಿಂತನ್ ಶಿಬಿರದಲ್ಲಿ ತಾವು ನೀಡಿದ್ದ 'ಅಧಿಕಾರ ವಿಷ' ಎನ್ನುವ ಹೇಳಿಕೆಗೂ ರಾಹುಲ್ ಸ್ಪಷ್ಟನೆ ನೀಡಿದ್ದಾರೆ. ಆ ರೀತಿ ಹೇಳಿದ್ದು ಅಧಿಕಾರವನ್ನು ಜವಾಬ್ದಾರಿಯಿಂದ ನಿಭಾಯಿಸಬೇಕು ಎಂಬರ್ಥದಲ್ಲೇ ಹೊರತು ಅದರಿಂದ ದೂರ ಇರಬೇಕೆಂದಲ್ಲ. ಅಧಿಕಾರ ಸಿಕ್ಕಾಗ ಅದನ್ನು ಹೇಗೆ ನಿರ್ವಹಿಸಬೇಕು ಎನ್ನುವುದರ ಅರಿವಿರಬೇಕು. ಅಧಿಕಾರದ ಜತೆ ಜತೆಗೆ ಅಪಾಯವೂ ಬರುತ್ತದೆ. ಅಧಿಕಾರವನ್ನು ಜನರ ಒಳಿತಿಗಾಗಿ ಬಳಸಬೇಕೇ ಹೊರತು ತಮ್ಮನ್ನು ತಾವು ಇನ್ನಷ್ಟು ಬಲಿಷ್ಠಗೊಳಿಸಲಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ತಿಳಿಸಿದ್ದಾರೆ.
ನನ್ನ ಅಜ್ಜಿ ಇಂದಿರಾಗಾಂಧಿ ಅವರಾಗಲಿ, ತಂದೆ ರಾಜೀವ್ ಗಾಂಧಿ ಅವರಾಗಲಿ ಯಾರೂ ಅಧಿಕಾರಕ್ಕಾಗಿ ಕೆಲಸ ಮಾಡಿಲ್ಲ ಎಂದು ಇದೇ ವೇಳೆ ರಾಹುಲ್ ಸಮರ್ಥನೆ ನೀಡಿದ್ದಾರೆ.
ಚುನಾವಣೆಯಲ್ಲಿ ಪ್ರಿಯಾಂಕಾ ಪಾತ್ರ ಇಲ್ಲ
ಪ್ರಿಯಾಂಕಾ ಗಾಂಧಿ ನನ್ನ ಸಹೋದರಿಯೂ ಹೌದು, ಗೆಳತಿಯೂ ಹೌದು. ಆಕೆ ಕಾಂಗ್ರೆಸ್ನ ಸದಸ್ಯೆ. ಪಕ್ಷ ಹಾಗೂ ನನ್ನ ಕೈ ಬಲಪಡಿಸಲು ಆಕೆ ನೆರವು ನೀಡುತ್ತಿದ್ದಾಳೆ. ಆಕೆ ಮುಂಬರುವ ಚುನಾವಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಾಳೆ ಎಂದು ನನಗನಿಸುತ್ತಿಲ್ಲ ಎಂದಿದ್ದಾರೆ ಗಾಂಧಿ. ಈ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದಲ್ಲಿ ಪ್ರಿಯಾಂಕಾ ಮುಖ್ಯ ಪಾತ್ರವಹಿಸಲಿದ್ದಾಳೆ ಎನ್ನುವ ಊಹಾಪೋಹಗಳನ್ನು ಗಾಂಧಿ ತಳ್ಳಿ ಹಾಕಿದ್ದಾರೆ.
ಕಾಂಗ್ರೆಸ್ನಲ್ಲಿ ಎಲ್ಲವೂ ಸರಿಯಿದೆ ಅಂತಲ್ಲ
ಕಾಂಗ್ರೆಸ್ನಲ್ಲಿ ಎಲ್ಲವೂ ಸರಿಯಾಗಿದೆ ಎಂದು ನಾನು ಒಪ್ಪಿಕೊಳ್ಳಲ್ಲ. ಕೆಲವೊಂದು ವಿಚಾರಗಳ ಕುರಿತು ನಾವು ಪುನರ್ ಅವಲೋಕನ ಮಾಡಬೇಕಿದೆ. ಅವುಗಳನ್ನೆಲ್ಲ ನಾನು ಪಕ್ಷದ ಮುಂದಿಟ್ಟಿದ್ದೇನೆ. ಪಕ್ಷವನ್ನು ಯುವಕರೊಂದಿಗೆ ಜೋಡಿಸುವ ಕೆಲಸ ಅಗತ್ಯವಾಗಿ ಆಗಬೇಕಿದೆ. ಕಳೆದ ಕೆಲವು ವರ್ಷಗಳಲ್ಲಿ ನಾವು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಭವಿಷ್ಯದಲ್ಲೂ ಈ ಕೆಲಸ ಮಾಡುತ್ತೇವೆ.
ಎಲ್ಲಾ ಚರ್ಚೆಗಳು ಯಾಕೆ ಒಂದೇ ಹುದ್ದೆ (ಪ್ರಧಾನಿ ಹುದ್ದೆ)ಯ ಸುತ್ತ ಗಿರಕಿ ಹೊಡೆಯಬೇಕು. ಯಾಕೆ ನಿರ್ದಿಷ್ಟ ವ್ಯಕ್ತಿ, ಹುದ್ದೆ ಕುರಿತು ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆಯಬೇಕು? ರಾಜಕೀಯ ಸುಧಾರಣೆ ಕುರಿತು ಯಾಕೆ ಯಾರೂ ಮಾತನಾಡುತ್ತಿಲ್ಲ? ವ್ಯವಸ್ಥೆಯಲ್ಲಿ ಬದಲಾವಣೆ ತರಲು ಯಾಕೆ ಯಾರೂ ಸಿದ್ಧರಿಲ್ಲ? ಪ್ರಧಾನಿ ಹುದ್ದೆಯ ಬದಲು ರಾಜಕೀಯ ವ್ಯವಸ್ಥೆಯ ಸುಧಾರಣೆ ಕುರಿತು ಚರ್ಚೆಯಾಗಲಿ.
ದೇಶ ಬದಲಾವಣೆಯನ್ನು ಎದುರು ನೋಡುತ್ತಿದೆ. ರಾಹುಲ್ ಅವರ ಸಾಮರ್ಥ್ಯ, ಪ್ರತಿಭೆ ಏನೆಂಬುದು ಜನರಿಗೆ ಗೊತ್ತಿದೆ. ಅವರನ್ನು ಜನ ಈಗಾಗಲೇ ಅವರನ್ನು ತಿರಸ್ಕರಿಸಿದ್ದಾರೆ.
- ರವಿಶಂಕರ್ ಪ್ರಸಾದ್
ಬಿಜೆಪಿ ಮುಖಂಡ
ವ್ಯಕ್ತಿ ಕೇಂದ್ರಿತ ರಾಜಕೀಯದ ಕುರಿತು ರಾಹುಲ್ ಮಾತು ಹಾಸ್ಯಾಸ್ಪದ. ಗಾಂಧಿ ಕುಟುಂಬಕ್ಕೆ ಸೇರಿದವರು ಎನ್ನುವ ಕಾರಣಕ್ಕಷ್ಟೇ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಲಾಗುತ್ತದೆಯೇ ಹೊರತು ಬೇರೆ ಯಾವ ಕಾರಣಕ್ಕೂ ಅಲ್ಲ.
- ಮೀನಾಕ್ಷಿ ಲೇಖಿ
ಬಿಜೆಪಿ ವಕ್ತಾರೆ
ಆಪ್ನ ಎಲ್ಲ ನಿರ್ಧಾರಗಳನ್ನು ಒಪ್ಪಿಕೊಳ್ಳಲ್ಲ
ಕಾಂಗ್ರೆಸ್ ಒಂದು ಬಲಿಷ್ಠ ಹಾಗೂ ಪ್ರಗತಿಪರ ಸಂಘಟನೆ. ಇದು ದೇಶದ ರಾಜಕೀಯದ ಪಾತ್ರ ಹಾಗೂ ಚಿತ್ರಣವನ್ನು ಬದಲಾಯಿಸುತ್ತಲೇ ಬಂದಿದೆ. ಆಮ್ ಆದ್ಮಿ ಪಕ್ಷ(ಆಪ್) ಕೂಡ ಇದೇ ದಿಕ್ಕಿನಲ್ಲಿ ಕೆಲಸ ಮಾಡಿದೆ ನಿಜ. ಆದರೆ, ಕಾಂಗ್ರೆಸ್ಗೂ ಆಪ್ಗೂ ಸಾಕಷ್ಟು ವ್ಯತ್ಯಾಸ ಇದೆ. ನಮ್ಮ ಸಿದ್ಧಾಂತ, ಕೆಲಸ ಮಾಡುವ ಶೈಲಿ ಆಪ್ಗಿಂತ ಭಿನ್ನ. ಆಪ್ನ ಇತ್ತೀಚಿನ ಹಲವು ನಿರ್ಧಾರಗಳನ್ನು ನಾನು ಒಪ್ಪಿಕೊಳ್ಳುವುದಿಲ್ಲ. ನಾವು ಅಲ್ಪಾವಧಿಯನ್ನು ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳುವುದಿಲ್ಲ. ದೇಶದ ಭವಿಷ್ಯದ ದೃಷ್ಟಿಯಿಂದ ದೀರ್ಘಾವಧಿಯ ದೃಷ್ಟಿಕೋನ ಅಗತ್ಯ.
ಬಿಜೆಪಿಯದು ವ್ಯಕ್ತಿ ರಾಜಕೀಯ
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ವಿರುದ್ಧ ಪರೋಕ್ಷವಾಗಿ ಹರಿಹಾಯ್ದ ರಾಹುಲ್ ಗಾಂಧಿ, ಅವರ 'ಕಾಂಗ್ರೆಸ್ ಮುಕ್ತ ಭಾರತ' ಆಂದೋಲನಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಜೆಪಿ ವ್ಯಕ್ತಿ ಕೇಂದ್ರಿತ ಆಡಳಿತ ಬಯಸುತ್ತಿದೆ. ಇದು ದೇಶದ ಹಿತಾಸಕ್ತಿಗೆ ಮಾರಕವಾಗಿದೆ.
ನಿರ್ದಿಷ್ಟ ವ್ಯಕ್ತಿಯೊಬ್ಬನ ಯೋಚನೆ ಹಾಗೂ ನಿರ್ಧಾರದ ಆಧಾರದ ಮೇಲೆ ದೇಶವನ್ನು ಮುನ್ನಡೆಸುವುದು ಸರಿಯಲ್ಲ. ಎಲ್ಲರನ್ನೂ ಜತೆಗೆ ಕರೆದೊಯ್ಯುವ ಮೂಲಕ 120 ಕೋಟಿ ಮಂದಿಯ ಭವಿಷ್ಯ ನಿರ್ಧಾರವಾಗಬೇಕು. ಕಾಂಗ್ರೆಸ್ ಈ ದೇಶದ ಡಿಎನ್ಎಯೇ ಆಗಿ ಬಿಟ್ಟಿದೆ. ಕಾಂಗ್ರೆಸ್ ಮುಕ್ತ ಭಾರತದ ಬಗ್ಗೆ ಮಾತನಾಡುವ ಬಿಜೆಪಿಗೆ ಈ ದೇಶವನ್ನು ಐಕ್ಯವಾಗಿಟ್ಟ ಏಕೈಕ ಪಕ್ಷ ಕಾಂಗ್ರೆಸ್ ಎಂಬುದು ಈವರೆಗೆ ಅರ್ಥವಾಗಿಲ್ಲ ಎಂದಿದ್ದಾರೆ ರಾಹುಲ್ ಗಾಂಧಿ.
17 ರಂದು ಘೋಷಣೆ ಸಾಧ್ಯತೆ
ಜ.17ರಂದು ದೆಹಲಿಯಲ್ಲಿ ನಡೆಯಲಿರುವ ಸಮಾವೇಶದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸುವ ಸಾಧ್ಯತೆ ಇದೆ.
1991 ರ ಬಳಿಕ...
ಮಾಜಿ ಪ್ರಧಾನಿ ರಾಜೀವ್ಗಾಂಧಿ ಅವರ ಹತ್ಯೆ ಬಳಿಕ ಗಾಂಧಿ ಕುಟುಂಬದ ಕುಡಿಯೊಂದು ಪ್ರಧಾನಿ ಅಭ್ಯರ್ಥಿ ಪಟ್ಟಕ್ಕೇರುತ್ತಿರುವುದು ಇದೇ ಮೊದಲು. ರಾಹುಲ್ ಗಾಂಧಿ ಅವರು ಸಕ್ರಿಯ ರಾಜಕೀಯಕ್ಕೆ ಕಾಲಿಟ್ಟು ಸುಮಾರು 10 ವರ್ಷ ಬಳಿಕ ಈಗ ಪಕ್ಷದಲ್ಲಿ ಉನ್ನತ ಜವಾಬ್ದಾರಿ ಸ್ವೀಕರಿಸಲು ಸಿದ್ಧವಾಗಿದ್ದಾರೆ.