ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಭೈರಪ್ಪ ಸರಿಯಾದ ಲೇಖಕಅಲ್ಲ: ನಾ. ಡಿ'ಸೋಜಾ ಕಿಡಿ

Vishwanath S
Updated On : 15 Jan 2014, 12:46 pm

ಶಿವಮೊಗ್ಗ: ಎಸ್.ಎಲ್. ಭೈರಪ್ಪ ಅವರ ಪುಸ್ತಕಗಳು ಕಡಿಮೆ ದಿನದಲ್ಲಿ ಹೆಚ್ಚು ಮುದ್ರಣ ಕಾಣುತ್ತಿವೆ. ಆದರೆ ಭೈರಪ್ಪ ಸರಿಯಾದ ಲೇಖಕರಲ್ಲ ಎಂದು ನನ್ನಂಥ ಲೇಖಕನಿಗೆ ಅನಿಸುತ್ತದೆ. ಹಳೇ ಗಾಯವನ್ನು ಕೆದಕುವುದರಲ್ಲಿ ಅರ್ಥವಿಲ್ಲ. ಹೊಸ ಬದುಕಿನೆಡೆಗೆ ನಮ್ಮ ಜನರನ್ನು ನಡೆಸಬೇಕು. ಈ ದೃಷ್ಟಿಯಿಂದ ಯಾವ ಲೇಖಕ ಬರೆಯುತ್ತಾನೋ ಅವನಿಂದ ಒಳ್ಳೆಯದಾಗುತ್ತದೆ ಎಂದು ಸಾಹಿತಿ ನಾ. ಡಿ'ಸೋಜಾ ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮಂಗಳವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಭೈರಪ್ಪ ಅವರು ತಮ್ಮ ಭಾಷಣದಲ್ಲಿ ನಾನು ಯಾವುದೇ ಸಿದ್ಧಾಂತ ಒಪ್ಪುವುದಿಲ್ಲ. ಸಂಶೋಧನೆಯಿಂದ ಕಂಡುಕೊಂಡ ಅಂಶಗಳನ್ನು ಬರೆಯುತ್ತೇನೆ ಎಂದು ಹೇಳಿದ್ದಾರೆ. ಆದರೆ, ಸಂಶೋಧನೆಗಳೇ ವಸ್ತುವಾಗಬೇಕು ಎನ್ನುವುದನ್ನು ನಾನು ಒಪ್ಪುವುದಿಲ್ಲ. ಅವರ ಎಲ್ಲಾ ಮಾತನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಭೈರಪ್ಪನವರ ಕೆಲವು ಕಾದಂಬರಿ ಹೆಚ್ಚು ಮುದ್ರಣ ಕಾಣುತ್ತವೆ. ಅವುಗಳನ್ನು ಖರೀದಿಸಿ ಮನೆ ಮನೆಗೆ ಹಂಚಿರುವುದು ನನಗೆ ಗೊತ್ತು ಎಂದರು.
ಲೇಖಕನಿಗೆ ಸಾಮಾಜಿಕ ಜವಾಬ್ದಾರಿ ಇರಬೇಕು. ತಾನು ಬದುಕುತ್ತಿರುವ ಸಮಾಜಕ್ಕೆ ಏನನ್ನಾದರೂ ಕೊಡಬೇಕು. ಹಾಗೆ ಕೊಡುವಾಗ ಸುಮ್ಮನೆ ಸಿದ್ಧಾಂತ ಕೊಡಲಾಗುವುದಿಲ್ಲ. ಬಹಳ ಯೋಚನೆ ಮಾಡಿ ತನ್ನ ಅನುಭವ ಕಲ್ಪನೆ ಓರೆಗೆ ಹಚ್ಚುವ ಸಿದ್ಧಾಂತವನ್ನು ಕೊಡುತ್ತಾನೆ. ಈ ನಿಟ್ಟಿನಲ್ಲಿ ಕೆ.ವಿ. ಸುಬ್ಬಣ್ಣ ಅವರ ಕುದುರೆಮುಖ ಗಣಿ ಹೋರಾಟ, ಶಿವರಾಮ ಕಾರಂತರ ಹೋರಾಟವನ್ನು ನೆನಪಿಸಿಕೊಳ್ಳಬಹುದು ಎಂದರು.
ಲೇಖಕನನ್ನು ನಂಬಬೇಡ, ಲೇಖನವನ್ನು ನಂಬು ಎಂಬ ಮಾತಿದೆ. ನನ್ನ ಅಭಿಪ್ರಾಯದಲ್ಲಿ ಎರಡೂ ಒಂದೇ. ಬದುಕು- ಬರೆಹ ಬೇರೆ ಬೇರೆ ಆಗಿರುವುದಿಲ್ಲ. ತಾನು ಹೇಳುವುದಕ್ಕೆ ಲೇಖಕ ಬದ್ಧನಾಗಿರಬೇಕು. ಕೆಲವು ಪುಸ್ತಕಗಳ ಬಗ್ಗೆ ವಿವಾದ ಹುಟ್ಟಿಕೊಳ್ಳುತ್ತಿರುವುದರ ಹಿಂದೆ ಕೆಲವು ಕೋಮು ಹಾಗೂ ಧಾರ್ಮಿಕ ಸಂಘಟನೆಗಳು ಈ ಕೆಲಸ ಮಾಡುತ್ತಿವೆ. ವಿವಾದ ಆಗಬಾರದು ಎಂದು ನಾನು ಹೇಳುತ್ತಿಲ್ಲ. ಇದು ಸಹಜವಾಗಿ, ಸೂಕ್ಷ್ಮವಾಗಿ ಆಗಬೇಕು. ಲೇಖಕನನ್ನು, ಪುಸ್ತಕವನ್ನು ಕೊಲ್ಲುವ ರೀತಿಯಲ್ಲಿ ಆಗಬಾರದು ಎಂದರು.
ಕಾರ್ಪೊರೇಟ್ ಸಂಸ್ಥೆಗಳು ಸಾಹಿತ್ಯ ಕ್ಷೇತ್ರವನ್ನು ನಿಯಂತ್ರಿಸುತ್ತಿವೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಕನ್ನಡ ಸಾಹಿತ್ಯ ಪರಿಷತ್ತು ಮಾತ್ರ ಸಾಹಿತ್ಯ ಸಮ್ಮೇಳನ ಮಾಡುತ್ತಿಲ್ಲ. ಬೇರೆಯವರೂ ಮಾಡುತ್ತಿದ್ದಾರೆ. ಇದರ ಹಿಂದಿನ ಉದ್ದೇಶವನ್ನು ಸೂಕ್ಷ್ಮವಾಗಿ ಗಮನಿಸಬೇಕು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement