ಜನ ಬದಲಾವಣೆ ಬಯಸಿದ್ದಾರೆ ನಾವು ಎಚ್ಚರಿಕೆಯಿಂದಿರಬೇಕು
ಕ.ಪ್ರ. ವಾರ್ತೆ , ಮೈಸೂರು , ಜ.15
ಜನ ಬದಲಾವಣೆ ಬಯಸುತ್ತಿದ್ದಾರೆ. ನಾವು ಚುನಾವಣೆಯ ಸಂದಿಗ್ಧ ಕಾಲದಲ್ಲಿರುವುದರಿಂದ ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರು ಸಂಸದ ಎಚ್. ವಿಶ್ವನಾಥ್ ಕಿವಿಮಾತು ಹೇಳಿದರು.
ನಗರದ ಗಾಂಧಿಚೌಕದಲ್ಲಿ ಯುವ ಕಾಂಗ್ರೆಸ್ ಮಂಗಳವಾರ ರಾತ್ರಿ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಮತ್ತು ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿಶ್ವನಾಥ್ ಪ್ರಜಾಪ್ರಭುತ್ವ ನಿಂತ ನೀರಲ್ಲ. ಜನ ಬದಲಾವಣೆ ಬಯಸುತ್ತಾರೆ. ಅಲ್ಲದೆ ಚುನಾವಣೆ ಈಗ ಸಂದಿಗ್ಧ ಕಾಲದಲ್ಲಿದೆ. ಆದ್ದರಿಂದ ನಾವು ಎಚ್ಚರಿಕೆಯಿಂದ ಇರಬೇಕು. ಬಡವರನ್ನು ಕಂಡರೆ ತನ್ನ ಜೇಬನ್ನು ಮುಟ್ಟಿನೋಡಿಕೊ ಎಂದ ಮಹಾತ್ಮ ಗಾಂಧೀಜಿ ತತ್ವಾದರ್ಶಗಳನ್ನು ನಾವು ಇಂದು ಅಳವಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಟ್ಟ ಮಾತಿನಂತೆ ನಡೆದಿದ್ದಾರೆ. ಎಂದು ವಿಶ್ವಾಸ ಕಳೆದುಕೊಂಡಿಲ್ಲ. ರಾಜ್ಯದಲ್ಲಿ 7 ತಿಂಗಳು ಅಧಿಕಾರ ನಡೆಸಿದ ಕಾಂಗ್ರೆಸ್ನ ಸಾಧನೆ ಮತ್ತು ಕೇಂದ್ರ ಸರ್ಕಾರದ ಸಾಧನೆಯನ್ನು ಜನರ ಮುಂದಿಟ್ಟು ಮತಯಾಚಿಸಬೇಕು ಎಂದು ಹೇಳಿದರು.
ಕಾಂಗ್ರೆಸ್ಗೆ ಎಲ್ಲರ ಬೆಂಬಲ: ಮೋದಿ ಭಾಷಣಕಷ್ಟೇ ಸೀಮಿತ. ಆದರೆ ಬಿಜೆಪಿಗೆ ಎಲ್ಲಾ ಜಾತಿಯ, ಧರ್ಮದ ಮತ್ತು ಎಲ್ಲಾ ಭಾಷಿಕರ ಬೆಂಬಲ ಇಲ್ಲ. ಅದು ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ. ಧಾರ್ಮಿಕ ಭಾವನೆ ಕೆಡಿಸುವ, ಕೆರಳಿಸುತ್ತಿದ್ದಾರೆ. ಮೋದಿಯ ಭಾಷಣವನ್ನು ಎಷ್ಟೆ ಅಳೆದು, ಸುರಿದರೂ ಕೋಮುವಾದ ಮಾತ್ರ ಅವರನ್ನು ಬಿಡುವುದಿಲ್ಲ ಎಂದರು. ಸಂಸದ ಎಚ್.ವಿಶ್ವನಾಥ್ ಮಾತನಾಡಿ, ಬೇವು ಬಿತ್ತಿ ಮಾವು ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಮತದಾರರು ತಮ್ಮ ಮತವನ್ನು ದಾನ ಮಾಡಬೇಕೆ ಹೊರತು ಮತವಿಕ್ರಯಕ್ಕೆ ಅವಕಾಶ ಮಾಡಿಕೊಡಬಾರದು. ಸಶಕ್ತ ಭಾರತ ನಿರ್ಮಾಣದ ಕೀರ್ತಿ ಕಾಂಗ್ರೆಸ್ಗೆ ಸಲ್ಲುತ್ತದೆ. ಆದ್ದರಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಪಕ್ಷ ಬಲಪಡಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಅವರನ್ನು ಅಭಿನಂದಿಸಲಾಯಿತು.
ಪಾಲಿಕೆ ವಾರ್ಡ್ ನಂ. 37ರ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡುವಂತೆ ಪಾಲಿಕೆ ಸದಸ್ಯೆ ರಾಜಲಕ್ಷ್ಮಿ ಶಿವಣ್ಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಎಚ್.ಎಸ್. ಮಹದೇವಪ್ರಸಾದ್, ಸಂಸದ ಆರ್. ಧ್ರುವನಾರಾಯಣ್, ಶಾಸಕರಾದ ಎಂ.ಕೆ. ಸೋಮಶೇಖರ್, ಎಚ್.ಪಿ. ಮಂಜುನಾಥ್, ವಾಸು, ಆರ್. ಧರ್ಮಸೇನ, ಮಾಜಿ ಶಾಸಕರಾದ ಎಂ. ಸತ್ಯನಾರಾಯಣ, ನಗರ ಕಾಂಗ್ರೆಸ್ ಅಧ್ಯಕ್ಷ ಸಿ.ದಾಸೇಗೌಡ, ಜಿಪಂ ಅಧ್ಯಕ್ಷ ಕೂರ್ಗಳ್ಳಿ ಎಂ. ಮಹದೇವ್, ಸದಸ್ಯೆ ಡಾ.ಪುಷ್ಪಾವತಿ ಅಮರನಾಥ್, ಪಾಲಿಕೆ ಸದಸ್ಯರಾದ ಪ್ರಶಾಂತ್ಗೌಡ, ರಾಜಲಕ್ಷ್ಮಿ, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್ ಇದ್ದರು.