ಪಿಎಚ್.ಡಿ ಪದವಿ ಪಡೆದ ಬಿಳಿಗಿರಿ ಬನದ ಹುಡುಗ ಮಾದೇಗೌಡ
ಪಿಎಚ್.ಡಿ ಪದವಿ ಪಡೆದ ಬಿಳಿಗಿರಿ ಬನದ ಸೋಲಿಗರ ಹುಡುಗ ಮಾದೇಗೌಡ...
ಚಾಮರಾಜನಗರ: ಸುತ್ತಲೂ ಕಾಡುಮೇಡು. ವನ್ಯ ಪ್ರಾಣಿಗಳೇ ನೆರೆ ಹೊರೆಯವರು. 'ಅಕ್ಷರ ಲೋಕ' ಎಂದರೆ ಕನಸು ಮಾತ್ರ. ಆದರೆ, ಅಂಥ ಕಾಡಿನ ಹಕ್ಕಿಯೊಂದು ನಾಡಿನ ಪ್ರತಿಷ್ಠಿತ ವಿವಿಯಿಂದ ಡಾಕ್ಟರೇಟ್ ಪದವಿ ಪಡೆದಿದೆ!
ಚಾಮರಾಜನಗರ ತಾಲೂಕಿನ ಬಂಗ್ಲೇಪೋಡಿನ ಸೋಲಿಗರ ಹುಡುಗ ಮಾದೇಗೌಡ ಮೈಸೂರು ವಿವಿಯಿಂದ ಡಾಕ್ಟರೇಟ್ ಪಡೆದಿದ್ದಾರೆ. ಸೋಲಿಗರ ಪೈಕಿ ಡಾಕ್ಟರೇಟ್ ಪಡೆದ ಮೊದಲ ಯುವಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶಿಕ್ಷಣದ ಅರಿವೇ ಇಲ್ಲದ ಸೋಲಿಗರಿಗೆ ಡಾ.ಸುದರ್ಶನ್ ಅವರೇ ದಾರಿದೀಪ. 1980-81ರಲ್ಲಿ ಡಾ. ಸುದರ್ಶನ್ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ ತೆರೆದಿದ್ದಾರೆ.
ಈ ಕೇಂದ್ರದಲ್ಲಿ ಮೊದಲ ಬ್ಯಾಚ್ನ ಒಂದನೇ ತರಗತಿಗೆ ಸೇರ್ಪಡೆಯಾದ ವಿದ್ಯಾರ್ಥಿಯೇ ಸಿ.ಮಾದೇಗೌಡ. ಸುದರ್ಶನ್ ಅವರ ಸಹಾಯ, ಸಹಕಾರದಿಂದ ಇಂದು 'ಡಾ.ಸಿ.ಮಾದೇಗೌಡ' ಆಗಿದ್ದಾರೆ.
ಬಂಗ್ಲೇಪೋಡಿನ ಚಿಕ್ಕನಂಜೇಗೌಡ ಮತ್ತು ನಂಜಮ್ಮ ಎಂಬವರ ಪುತ್ರ ಸಿ.ಮಾದೇಗೌಡ 'ಸೋಲಿಗರ ಜೀವನ ಪದ್ಧತಿ ಬಗ್ಗೆ ಒಂದು ಅಧ್ಯಯನ- ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನ ವನ್ಯಧಾಮ' ಎಂಬ ವಿಷಯದ ಕುರಿತು ಮೈಸೂರು ವಿವಿ ಸಮಾಜಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಸಿ. ಉಷಾರಾವ್ ಮಾರ್ಗದರ್ಶನದಲ್ಲಿ ಪಿಎಚ್ಡಿ ಪಡೆದಿದ್ದಾರೆ. ತಮ್ಮ ವಿದ್ಯಾಭ್ಯಾಸದ ಜತೆಗೆ ಸೋಲಿಗರ ಅಭಿವೃದ್ಧಿಗಾಗಿ ದುಡಿಯುತ್ತಿದ್ದಾರೆ. ಚಾಮರಾಜನಗರ ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಕಾರ್ಯದರ್ಶಿಯಾಗಿಯೂ ಕೆಲಸ ಮಾಡುತ್ತಿದ್ದಾರೆ.
ನೆಟ್ ಕೂಡ ಪಾಸಾಗಿದ್ದಾರೆ: ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದಲ್ಲಿ 1ರಿಂದ 10ನೇ ತರಗತಿವರಗೆ ವ್ಯಾಸಂಗ ಮಾಡಿ, ಕೊಳ್ಳೇಗಾಲ ಮಹದೇಶ್ವರ ಕಾಲೇಜಿನಲ್ಲಿ ಪಿಯುಸಿ, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬಿಎಸ್ಡಬ್ಲ್ಯೂ ಮತ್ತು ಎಂಎಸ್ಡಬ್ಲ್ಯೂ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಭಾರತೀಯ ವಿಶ್ವವಿದ್ಯಾಲಯದಿಂದ ಡಿಪ್ಲೊಮಾ ಮತ್ತು ಸಿಕ್ಕಿಂ ಮಣಿಪಾಲ್ ವಿವಿಯಿಂದ ಸುಸ್ಥಿರ ಅಭಿವೃದ್ಧಿ ಕುರಿತು ಎಂಎಸ್ಸಿ ಪದವಿ ಪಡೆದ ನಂತರ 2008ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪಿಎಚ್.ಡಿ ಅಧ್ಯಯನ ನಡೆಸಿದರು. 2004 ಮತ್ತು 2006ರಲ್ಲಿ ನೆಟ್ ಪರೀಕ್ಷೆಯಲ್ಲೂ ಉತ್ತೀರ್ಣರಾಗಿದ್ದಾರೆ.
ನಾಡಿನ ಪರಿಚಯವೇ ಇಲ್ಲದ ನಮ್ಮ ಕಾಡಿಗೆ ಬಂದು ಡಾ. ಸುದರ್ಶನ್ ಅವರು ಶಾಲೆ ತೆರೆದರು. ಜತೆಗೆ ಸೋಮಸುಂದರಂ, ಚಕ್ರವರ್ತಿ, ರಾಮಾಚಾರಿ, ಉಷಾ ಮತ್ತು ದೀನಬಂಧು ಸಂಸ್ಧೆಯ ಪ್ರೊ. ಜಿ.ಎಸ್. ಜಯದೇವ್ ಅವರು ಮಾರ್ಗದರ್ಶನ ನೀಡಿದರು. ಇವರೆಲ್ಲರೂ ಬಾರದಿದ್ದರೆ ನಮ್ಮಂತರು ನಾಡನ್ನೇ ನೋಡಲು ಸಾಧ್ಯವಾಗುತ್ತಿರಲಿಲ್ಲ. ಇವರೆಲ್ಲರ ಸಹಕಾರದಿಂದ ಪದವಿ, ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಏಟ್ರಿ ಸಂಸ್ಧೆಯೂ ಪಿಎಚ್.ಡಿ ಪಡೆಯಲು ಎಲ್ಲ ರೀತಿಯಲ್ಲೂ ನೆರವಾಯಿತು ಎಂದು ಸ್ಮರಿಸಿಕೊಳ್ಳುತ್ತಾರೆ ಸಿ.ಮಾದೇಗೌಡ.
ಪಿಎಚ್ಡಿ ಸಿಕ್ಕಿದೆ ಎನ್ನುವುದಕ್ಕಿಂತ ಹೆಚ್ಚಾಗಿ ಸೋಲಿಗ ಜನಾಂಗದ ಅಭಿವೃದ್ಧಿಗೆ ಬಗ್ಗೆ ಅಧ್ಯಯನ ಮಾಡುವ ಅವಕಾಶ ಸಿಕ್ಕಿತ್ತು. ಇದರ ಮೂಲಕ ಡಾಕ್ಟರೇಟ್ ಪಡೆದಿದ್ದೇನೆ. ಅಭಿವೃದ್ಧಿಗೆ ಹೇಗೆ ಕೆಲಸ ಮಾಡಬೇಕು ಎಂಬುದು ತಿಳಿದಿದೆ. ಇದನ್ನು ಆಧಾರವಾಗಿಟ್ಟುಕೊಂಡು ಜನಾಂಗದ ಅಭಿವೃದ್ಧಿಗೆ ಶ್ರಮಿಸುತ್ತೇನೆ.
-ಡಾ. ಸಿ. ಮಾದೇಗೌಡ, ಬಂಗ್ಲೇ ಪೋಡು, ಬಿಳಿಗಿರಿರಂಗನಬೆಟ್ಟ
ವಿದೇಶಕ್ಕೆ ಹಾರಿದ ಮೊದಲ ಕಾಡು ಹಕ್ಕಿ
ಸೋಲಿಗರ ಪೈಕಿ ಪಿಎಚ್.ಡಿ ಪಡೆದ ಮೊದಲಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮಾದೇಗೌಡ 2008ರಲ್ಲಿ ಅಮೆರಿಕ ಪ್ರವಾಸ ಮಾಡುವ ಮೂಲಕ ವಿದೇಶಕ್ಕೆ ಹಾರಿದ ಮೊದಲ ಸೋಲಿಗ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಅಲ್ಲದೆ ನ್ಯೂರ್ಯಕ್ನಲ್ಲಿ ಅಮೆರಿಕ ಮ್ಯಾಜಿಯಂ ಆಫ್ ನ್ಯಾಚುರಲ್ ಹಿಸ್ಟರಿ ಸೆಂಟರ್ ಫಾರ್ ಬಯೋಡೈವರ್ಸಿಟಿ ಕನ್ಸರ್ವೇಷನ್ ಎಂಬ ವಿಚಾರ ಸಂಕಿರಣದಲ್ಲಿ ಸೋಲಿಗರ ಸಾಂಸ್ಕೃತಿಕ ಸುಸ್ಥಿರ ಮತ್ತು ಜೀವ ವೈವಿಧ್ಯತೆಯ ಶೀಘ್ರಗತಿ ಬದಲಾವಣೆ ಕುರಿತು ವಿಚಾರ ಮಂಡಿಸಿದ್ದರು. ತಾನು ಬೆಳೆಯುವ ಜೊತೆ ತನ್ನ ಸಮಾಜವನ್ನೂ ಬೆಳೆಸಬೇಕು ಎಂಬ ಹಂಬಲವುಳ್ಳ ಮಾದೇಗೌಡ ಚಾಮರಾಜನಗರ ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಾ ಹಲವು ಹೋರಾಟ ಮಾಡಿದ್ದಾರೆ. ಇವರ ಸೇವೆಯನ್ನು ಗುರುತಿಸಿ 2005ರಲ್ಲಿ ಬಿಳಿಗಿರಿರಂಗನಬೆಟ್ಟಕ್ಕೆ ಭೇಟಿ ನೀಡಿದ್ದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ವಿವೇಕಾನಂದ ಸೇವಾ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಇದೀಗ ಅವರು ಬಿಳಿಗಿರಿರಂಗನಬೆಟ್ಟದ ಏಟ್ರಿ ಸಂಸ್ಧೆಯಲ್ಲಿ ಸಂಶೋಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
-ದೇವರಾಜು ಕಪ್ಪಸೋಗೆ