ಪ್ರಾಣಿಗಳಿಗೆ ಸಿಕ್ಕೀತೇ ರಾಜ ಮಾರ್ಗ!
ಕ.ಪ್ರ.ವಾರ್ತೆ , ಬೆಂಗಳೂರು , ಜ. 15
ಅಪಘಾತದಲ್ಲಿ ಮೃತಪಡುತ್ತಿರುವ ಕಾಡುಪ್ರಾಣಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ, ಸರ್ಕಾರ ಮಾತ್ರ ಈ ಬಗ್ಗೆ ತಲೆಕೆಡಿಸಿಕೊಂಡಂತಿಲ್ಲ.
ಅರಣ್ಯ ಇಲಾಖೆ ಮತ್ತು ವನ್ಯಜೀವಿ ತಜ್ಞರು ಪ್ರಾಣಿಗಳ ಸಂರಕ್ಷಣೆಗೆ ಮುಂದಾಗಿದ್ದು, ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಪಾದಚಾರಿಗಳಿಗೆ ಒಂದು ಮಾರ್ಗ ಇರುವಂತೆ ಕಾಡು ಪ್ರಾಣಿಗಳು ರಸ್ತೆ ದಾಟಲು ಪ್ರತ್ಯೇಕ ಮಾರ್ಗ ನಿರ್ಮಾಣ ಮಾಡಲು ಮನವಿ ಮಾಡಿವೆ.
ಪ್ರತ್ಯೇಕ ಮಾರ್ಗ ನಿರ್ಮಾಣ ಯೋಜನೆಯನ್ನು ಕೈಗೆತ್ತಿಕೊಳ್ಳಲು ಅರಣ್ಯ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಪ್ರಸ್ತಾವನೆ ಸಲ್ಲಿಸಿ ಮೂರು ವರ್ಷ ಕಳೆದಿದ್ದರೂ ಸಹ ಸರ್ಕಾರ ಈ ಬಗ್ಗೆ ತಲೆಕೆಡಿಸಿ ಕೊಂಡಿಲ್ಲ. ಪ್ರಾಣಿಗಳು ಅಪಘಾತದಲ್ಲಿ ಮೃತಪಡುತ್ತಿರುವ ಪ್ರಕರಣ ಮರುಕಳಿಸುತ್ತಲೇ ಇವೆ.
ಕಾಡುಪ್ರಾಣಿಗಳ ಸಂರಕ್ಷಣೆ ಇದರ ಉದ್ದೇಶವಾಗಿದ್ದು, 'ರಸ್ತೆ ದಾಟುವ ಯೋಜನೆ'ಯಡಿ ವಿದೇಶಗಳಲ್ಲಿ ಕಾಡು ಪ್ರಾಣಿಗಳಿಗೂ ಪ್ರತ್ಯೇಕ ಅಂಡರ್‌ಪಾಸ್, ಒವರ್‌ಪಾಸ್ (ಮೇಲ್ಸೇತುವೆ) ಇದ್ದು, ಅದೇ ರೀತಿ ರಾಜ್ಯದಲ್ಲೂ ನಿರ್ಮಿಸಲು ಇಲಾಖೆ ಚಿಂತಿಸಿದೆ. ಈ ವಿಷಯವಾಗಿ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚೆ ನಡೆಸಿದೆ.
ಇಲಾಖೆ ಸರ್ಕಾರಕ್ಕೆ ಹೊಸದಾಗೇನೂ ಪ್ರಸ್ತಾವನೆ ಸಲ್ಲಿಸಿಲ್ಲ. ರಸ್ತೆ/ಕೆಳಸೇತುವೆ/ಮೇಲ್ಸೇತುವೆ ನಿರ್ಮಿಸುವ ಬಗ್ಗೆ ಅರಣ್ಯ ಇಲಾಖೆಯ ಪರಿಸರ ಮತ್ತು ಜೀವಿಶಾಸ್ತ್ರ ವಿಭಾಗದ ಅಧಿಕಾರಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿ ಮೂರು ವರ್ಷಗಳೇ ಕಳೆದಿವೆ. ಆದರೆ, ಸರ್ಕಾರದಿಂದ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕಡತ ಧೂಳು ತಿನ್ನುತ್ತಿದೆ.
ವಿದೇಶದಲ್ಲಿ ಈ ವ್ಯವಸ್ಥೆ: ವಿದೇಶಗಳಲ್ಲಿ 'ರಸ್ತೆ ದಾಟುವ ಯೋಜನೆ'ಯಡಿ ಪ್ರಾಣಿಗಳಿಗಾಗಿ ಪ್ರತ್ಯೇಕ ರಸ್ತೆ ನಿರ್ಮಿಸಲಾಗಿದೆ. ರಾಜ್ಯದಲ್ಲೂ ಅಂತಹ ಪದ್ಧತಿ ಜಾರಿಗೆ ಬಂದರೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿದಂತಾಗುತ್ತದೆ. ಅಪಘಾತ ಕಡಿಮೆಯಾಗಿ ವನ್ಯಮೃಗಗಳ ಸಂತತಿ ಹೆಚ್ಚುತ್ತದೆ ಎನ್ನುತ್ತಾರೆ ಅಧಿಕಾರಿಗಳು.
ಆಹಾರ ಹುಡುಕುತ್ತಾ ಕಾಡು ಪ್ರಾಣಿಗಳು ಆಗಾಗ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವಲಸೆ ಹೋಗುತ್ತವೆ. ಈ ಸಂದರ್ಭದಲ್ಲಿ ವಾಹನಗಳ ಓಡಾಟ ಹೆಚ್ಚಾಗಿರುವ ರಸ್ತೆಗಳನ್ನೂ ಬಳಸುತ್ತವೆ. ಈ ಸಂದರ್ಭದಲ್ಲಿ ವಾಹನಗಳಿಗೆ ಸಿಕ್ಕಿ ಸಾಯುತ್ತವೆ. ಅವುಗಳಿಗಾಗಿಯೇ ಪ್ರತ್ಯೇಕ ಮಾರ್ಗ ಇದ್ದರೆ ಸಮಸ್ಯೆ ಇರದು ಎಂಬುದು ಅಧಿಕಾರಿಗಳ ಅಭಿಪ್ರಾಯ. ಅನೆ, ಚಿರತೆ, ಜಿಂಕೆ ಮತ್ತಿತರ ವನ್ಯಜೀವಿಗಳು ಅಪಘಾತಕ್ಕೀಡಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸಾಯುತ್ತವೆ ಎನ್ನುತ್ತಾರೆ ಅವರು.
ಬೇಲಿ ನಿರ್ಮಾಣ
ಯುರೋಪ್ ಹಾಗೂ ಜರ್ಮನ್‌ಗಳಲ್ಲಿ ಈ ವ್ಯವಸ್ಥೆ ಇದ್ದು, ಅರ್ಧ ಅಥವಾ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ರಸ್ತೆ ಮೇಲೆ ಫ್ಲೈಓವರ್ ರೀತಿ ಮಾಡಿ ಅಥವಾ ಕೆಳಗೆ ಸುರಂಗದ ರೀತಿ ಮಾಡಿ ಅಲ್ಲಿ ಗಿಡಗಳನ್ನು ಬೆಳೆಸುವುದು. ರಸ್ತೆ ಬದಿಯಲ್ಲಿ ತಂತಿ, ಅಥವಾ ಫೆನ್ಸ್ ಹಾಕುವುದು. ಆಗ ಪ್ರಾಣಿಗಳು ಗಿಡ, ಮರ ಇರುವ ಕಡೆ ಮಾತ್ರ ಸಂಚರಿಸುತ್ತವೆ. ರಸ್ತೆಗೆ ಬರುವುದಿಲ್ಲ. ಅಲ್ಲದೆ, ಸಾಧ್ಯವಾದಷ್ಟು ಮನುಷ್ಯನಿಂದ ಮರೆಯಾಗಿರಬೇಕು ಎಂದು ಬಯಸುವ ಅವುಗಳು ಗಿಡಗಳಿರುವಲ್ಲಿ ಹೋಗುತ್ತವೆ. ತಂತಿ, ಫೆನ್ಸ್ ಇದ್ದಾಗ ಸಹಜವಾಗಿ ಬೇರೆ ದಾರಿಯಲ್ಲಿ ಹೋಗುತ್ತವೆ ಎನ್ನುತ್ತಾರೆ ವನ್ಯಜೀವಿ ತಜ್ಞರು.
- ಪ್ರಾಣಿಗಳಿಗಾಗಿ ಪ್ರತ್ಯೇಕ ಮಾರ್ಗ ನಿರ್ಮಾಣ ಯೋಜನೆಗೆ ಮನವಿ
- ಅರಣ್ಯ ಇಲಾಖೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಬರೋಬ್ಬರಿ 3 ವರ್ಷ
- ಯಾವುದೇ ಪ್ರತಿಕ್ರಿಯೆ ನೀಡದ ಸರ್ಕಾರ, ಧೂಳು ತಿನ್ನುತ್ತಿರುವ ಕಡತ
- ವಿದೇಶಗಳಲ್ಲಿ ಕಾಡು ಪ್ರಾಣಿಗಳಿಗಾಗಿ ಪ್ರತ್ಯೇಕ ಅಂಡರ್‌ಪಾಸ್, ಒವರ್‌ಪಾಸ್
ಎಲ್ಲೆಲ್ಲಿ ಅಗತ್ಯ
ಲೋಂಡಾ ಕಾರವಾರ ರಾಜ್ಯ ಹೆದ್ದಾರಿ- ಅಣಶಿ, ದಾಂಡೇಲಿ (ಹುಲಿ ಸಂರಕ್ಷಣ ಪ್ರದೇಶ)
ಕಾರ್ಕಳ, ಶೃಂಗೇರಿ, ಕುದುರೆಮುಖ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿ- ಕುದುರೆಮುಖ ರಾಷ್ಟ್ರೀಯ ಉದ್ಯಾನವನ
ಆಗುಂಬೆ ಘಾಟ್ ರಸ್ತೆ- ಸೋಮೇಶ್ವರ ವನ್ಯಧಾಮ
ಕೊಲ್ಲೂರು, ನಾಗೋಡಿ-ಮೂಕಾಂಬಿಕಾ ವನ್ಯಧಾಮ
ಮೈಸೂರು, ಬಂಟ್ವಾಳ- ಕದಮ್ಕಲ್ ಮೀಸಲು ಅರಣ್ಯ ಪ್ರದೇಶ
ಸುಬ್ರಮಣ್ಯ, ಬಿಸಿಲೆ-ಬಿಸಿಲೆ ರಕ್ಷಿತಾರಣ್ಯ
ಗುಂಡ್ಲುಪೇಟೆ, ಊಟಿ, ಸುಲ್ತಾನ್ ಬತೇರಿ-ಬಂಡೀಪುರ ರಾಷ್ಟ್ರೀಯ ಉದ್ಯಾನವನ
ರಸ್ತೆ ಅಪಘಾತದಲ್ಲಿ ಸಾಯುವ ಕಾಡು ಪ್ರಾಣಿಗಳ ಸಂಖ್ಯೆ ಕಡಿಮೆ ಏನಿಲ್ಲ. ಈ ಹಿನ್ನೆಲೆಯಲ್ಲಿ ಪ್ರತ್ಯೇಕ ಅಂಡರ್‌ಪಾಸ್ ರಚನೆಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.
- ಸಂಜಯ್‌ಗುಬ್ಬಿ, ವನ್ಯಜೀವಿ ತಜ್ಞ
ಈ ಯೋಜನೆ ಕುರಿತು ಪರಿಸರ ಹಾಗೂ ವನ್ಯಜೀವಿ ತಜ್ಞರೊಂದಿಗೆ ಚರ್ಚಿಸಲಾಗಿದ್ದು, ಕೆಲವು ಪ್ರಮುಖ ಪ್ರದೇಶಗಳನ್ನು ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನೂ ಒಪ್ಪಿಗೆ ದೊರೆತಿಲ್ಲ.
- ಮನೋಜ್ ಲೂತ್ರಾ, ವನ್ಯಜೀವಿ ವಿಭಾಗ, ಅರಣ್ಯ ಇಲಾಖೆ
-ಶಾಂತ ತಮ್ಮಯ್ಯ