ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಬಂಡೆ ಸಾವು; ಖಜೂರು ಉದ್ವಿಗ್ನ

Vishwanath S
Updated On : 16 Jan 2014, 1:12 am

ಕ.ಪ್ರ.ವಾರ್ತೆ , ಗುಲ್ಬರ್ಗ , ಜ. 15
ಸ್ಟೇಷನ್ ಬಜಾರ್ ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಗುಲ್ಬರ್ಗ ಜಿಲ್ಲಾದ್ಯಂತ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಗುಲ್ಬರ್ಗ ನಗರ, ಆಳಂದ, ಜೇವರ್ಗಿಯಲ್ಲಿ ಕಲಂ 144ರನ್ವಯ ಬುಧವಾರ ಮಧ್ಯಾಹ್ನ 1 ಗಂಟೆಯಿಂದ ಗುರುವಾರ ಸಂಜೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅಲ್ಲದೇ ಗುರುವಾರ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಬಂಡೆ ಅವರ ಸ್ವಗ್ರಾಮ ಖಜೂರಿನಲ್ಲಿ ಪೋಸ್ಟರ್ ಹರಿದು ಹಾಕಿದ್ದರಿಂದ ಉದ್ರಿಕ್ತಗೊಂಡ ಗುಂಪು ಎರಡು ಸಾರಿಗೆ ಬಸ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದೆ. ಒಂದು ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಲಾಲಗೇರಿ ಕ್ರಾಸ್‌ನಲ್ಲಿ ವಿವಿಧ ಸಂಘಟನೆಗಳ ನೂರಾರು ಯುವಕರು ಬೀದಿಗಿಳಿದು ಬಂಡೆ ಅವರಿಗೆ ಶ್ರದ್ಧಾಂಜಲಿ ಸಭೆ ನಡೆಸಿದ ನಂತರ ಕಲ್ಲು ತೂರಾಟ ನಡೆಸಿದ್ದಾರೆ. ಆಟೋ ಜಖಂಗೊಂಡಿದ್ದು ಹಲವರು ಗಾಯಗೊಂಡಿದ್ದಾರೆ. ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಬಿಜೆಪಿ ಗುಲ್ಬರ್ಗ ಘಟಕ ಜ.16ರಂದು ಗುಲ್ಬರ್ಗ ಬಂದ್‌ಗೆ ಕರೆ ನೀಡಿದೆ.
ಬಂಡೆ ಸಾವಿನ ಸುದ್ದಿ ಹರಡುತ್ತಿದ್ದಂತೆಯೇ ನಗರದ ಪ್ರಮುಖ ರಸ್ತೆಗಳಲ್ಲಿರುವ ಅಂಗಡಿ- ಮುಂಗಟ್ಟುಗಳನ್ನು ಮುಚ್ಚಿ ಪ್ರತಿಭಟನೆ ನಡೆಸಲಾಗಿದೆ. ಕನ್ನಡ ಪರ ಸಂಘಟನೆಗಳು, ವೀರಶೈವ ಯುವ ವೇದಿಕೆ ಸೇರಿದಂತೆ ಅನೇಕ ಸಂಘ- ಸಂಸ್ಥೆಗಳ ನೂರಾರು ಕಾರ್ಯಕರ್ತರು ಪ್ರಮುಖ ರಸ್ತೆ, ವೃತ್ತಗಳಲ್ಲಿ ಗುಂಪು ಸೇರಿ ಬಂಡೆ ಅವರಿಗೆ ವಿದೇಶಕ್ಕೆ ಕರೆದೊಯ್ಯುವಲ್ಲಿ ಸರ್ಕಾರ ಲಕ್ಷ್ಯ ನೀಡಲಿಲ್ಲ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಹಾಗೂ ಗುಲ್ಬರ್ಗದ ಐಜಿಪಿ ಮೊಹ್ಮದ್ ವಜೀರ್ ಅಹ್ಮದ್, ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ, ಎಸ್ಪಿ ಅಮೀತ್ ಸಿಂಗ್ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ, ರಸ್ತೆ ತಡೆ ನಡೆಸಿದ್ದಾರೆ.
ಲಾಲಗೇರಿ ಕ್ರಾಸ್‌ನಲ್ಲಿ ವಿವಿಧ ಸಂಘಟನೆಗಳ ನೂರಾರು ಯುವಕರು ಬೀದಿಗಿಳಿದು ಬಂಡೆ ಅವರಿಗೆ ಶ್ರದ್ಧಾಂಜಲಿ ಸಭೆ ನಡೆಸಿದ ನಂತರ ಕಲ್ಲು ತೂರಾಟ ನಡೆಸಿದ್ದಾರೆ. ಆಟೋಗಳ ಮೇಲೆ ಕಲ್ಲು ತೂರಾಟವಾಗಿದ್ದರಿಂದ ಈ ಮಾರ್ಗದಲ್ಲಿ ಗುರುವಾರ ಇಡೀ ದಿನ ಸಂಚಾರ ಸ್ಥಗಿತಗೊಂಡಿತ್ತು. ಜೇವರ್ಗಿ ರಸ್ತೆಯಲ್ಲಿರುವ ರಾಮ ಮಂದಿರ ವೃತ್ತದಲ್ಲಿಯೂ ವಿವಿಧ ಗುಂಪುಗಳು ಕಲ್ಲು ತೂರಾಟ ನಡೆಸಿವೆ. ಮುಂಜಾಗ್ರತೆ ಕ್ರಮವಾಗಿ ನಗರ ಸಾರಿಗೆ ಸೇವೆಯನ್ನು ಈಶಾನ್ಯ ಸಾರಿಗೆ ಸಂಸ್ಥೆ ಬುಧವಾರ ಬೆಳಗ್ಗೆಯಿಂದಲೇ ಸ್ಥಗಿತಗೊಳಿಸಲಾಗಿತ್ತು.
ಬಸ್‌ಗೆ ಬೆಂಕಿ: ಪಿಎಸ್‌ಐ ಬಂಡೆ ಸಾವಿನಿಂದಾಗಿ ಆಳಂದ ತಾಲೂಕು ಹಾಗೂ ಬಂಡೆ ಹುಟ್ಟೂರು ಖಜೂರಿಯಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿದೆ. ಬಂಡೆ ಅವರ ಶವ ಹಸ್ತಾಂತರದಲ್ಲಿ ವಿಳಂಬವಾಗುತ್ತಿರುವ ಘಟನೆ ಗ್ರಾಮಸ್ಥರನ್ನು ಕೆರಳಿಸಿದೆ. ಏತನ್ಮಧ್ಯೆ ದುಷ್ಕರ್ಮಿಗಳ ಗುಂಪು ಉಮ್ಮರ್ಗಾ- ಖಜೂರಿ ರಾಜ್ಯ ಹೆದ್ದಾರಿ ಮೇಲೆ ಸಾರಿಗೆ ಸಂಸ್ಥೆಗೆ ಸೇರಿದ್ದ 2 ಬಸ್ಸುಗಳಿಗೆ ಬೆಂಕಿ ಹಚ್ಚಿದೆ. ಘಟನೆಯಲ್ಲಿ ಬಾಲಕಿಯೊಬ್ಬಳು ಗಾಯಗೊಂಡಿದ್ದಾಳೆ.
ಆಳಂದ ಪಟ್ಟಣದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ. ಪೋಸ್ಟರ್ ಹರಿದ ವಿಚಾರ ಮುಂದಿಟ್ಟುಕೊಂಡು 2 ಗುಂಪುಗಳ ಮಧ್ಯೆ ಜಗಳವಾಗಿದ್ದು ಅದು ವಿಕೋಪಕ್ಕೆ ಹೋಗುವ ಲಕ್ಷಣ ಕಂಡಾಗ ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ. ದುಷ್ಕರ್ಮಿಗಳು ಇದೇ ಸಂದರ್ಭದಲ್ಲಿ ಕೆಲವು ಪ್ರದೇಶಗಳಲ್ಲಿ ಕಲ್ಲು ತೂರಾಟ ಮಾಡಿದ್ದಾರೆ. 10 ಜನರನ್ನು ಬಂಧಿಸಲಾಗಿದೆ. ರಾಯಚೂರು, ಹುಮನಾಬಾದ್‌ನಲ್ಲೂ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ರಾಯಚೂರಲ್ಲಿ ಗುರುವಾರ ಬಿಜೆಪಿ ಜಿಲ್ಲಾ ಘಟಕ ಕರಾಳ ದಿನ ಆಚರಿಸಲು ನಿರ್ಧರಿಸಿದೆ.
ಇಂದು ಅಂತ್ಯ ಸಂಸ್ಕಾರ
ಕಾನೂನು ಸುವ್ಯವಸ್ಥೆ ಗಮನದಲ್ಲಿಟ್ಟುಕೊಂಡು ಬಂಡೆ ಪಾರ್ಥಿವ ಶರೀರ ಜ.16ರಂದೇ ಹೈದರಾಬಾದ್‌ನಿಂದ ತರಲು ನಿರ್ಧರಿಸಿದ್ದ ಜಿಲ್ಲಾಡಳಿತ, ಪೊಲೀಸ್ ಇಲಾಖೆಗಳು ಇದೀಗ ಕುಟುಂಬದವರ ಆಗ್ರಹದ ಮೇರೆಗೆ ಪಾರ್ಥೀವ ಶರೀರವನ್ನು ಸಂಜೆ ಗುಲ್ಬರ್ಗದ ಪೊಲೀಸ್ ಪರೇಡ್ ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಟ್ಟು ನಂತರ ಖಜೂರಿಗೆ ಕೊಂಡೊಯ್ದು ಧಾರ್ಮಿಕ ವಿಧಿ- ವಿಧಾನಗಳನ್ನು ನೆರವೇರಿಸುವ ಸಲುವಾಗಿ ಕುಟುಂಬ ವರ್ಗಕ್ಕೆ ನೀಡಲು ನಿರ್ಧರಿಸಿದೆ. ಈ ಕುರಿತು 'ಕನ್ನಡಪ್ರಭ'ಕ್ಕೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಡಾ. ಪ್ರಸಾದ್, ಆಯಾ ಧರ್ಮದಲ್ಲಿನ ಪದ್ಧತಿಯಂತೆ ಅಂತ್ಯ ಸಂಸ್ಕಾರಕ್ಕೂ ಮುನ್ನ ಹಲವು ಆಚರಣೆಗಳನ್ನು ಪೂರೈಸಲು ಬಂಡೆ ಕುಟುಂಬಕ್ಕೆ ಪಾರ್ಥಿವ ಶರೀರ ನೀಡಲಾಗುತ್ತದೆ. ನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ಖಜೂರಿಯಲ್ಲಿ ಬಂಡೆ ಅವರ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರ ಜ.16ರ ಗುರುವಾರ ನಡೆಯುತ್ತದೆ. ಗೃಹ ಸಚಿವ ಜಾರ್ಜ್, ಹಿರಿಯ ಪೊಲೀಸ್ ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರಾದಿಯಾಗಿ ಜನನಾಯಕರು ಭಾಗವಹಿಸಲಿದ್ದಾರೆ. ಅಂತ್ಯ ಸಂಸ್ಕಾರಕ್ಕೆ ಸಿದ್ಧತೆಗಳು ಸಾಗಿವೆ. ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದಿದ್ದಾರೆ.
ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ವಿಷಯದಲ್ಲಿ ಸರ್ಕಾರ ನಿರ್ಲಕ್ಷ್ಯ ತಾಳಿತು. ಸರ್ಕಾರದ ನಿರ್ಲಕ್ಷ್ಯವೇ ಸಾವಿಗೆ ಕಾರಣ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಗಾಯಾಳು ಪೊಲೀಸ್ ಅಧಿಕಾರಿಯ ಆರೋಗ್ಯದ ಬಗ್ಗೆ ಕಿಂಚಿತ್ತಾದರೂ ಗಮನ ಕೊಟ್ಟಿದ್ದರೆ ಅವರನ್ನು ಉಳಿಸಬಹುದಾಗಿತ್ತು. ಇಂಥ ವಿಷಯಗಳಲ್ಲಿ ಸರ್ಕಾರ ತನ್ನ ಇಚ್ಛಾಶಕ್ತಿ ಪ್ರಕಟಿಸಲ್ಲ ಎಂಬುದಕ್ಕೆ ಇದೊಂದು ಉದಾಹರಣೆ. ಕುಟುಂಬ ವರ್ಗದವರಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಕೋರುತ್ತೇನೆ.
- ಬಿ.ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement