ಶೈತ್ಯಾಗಾರ ಬೆಂಕಿ ನಂದಿಸುವ ಕಾರ್ಯ ಮುಂದುವರಿಕೆ
ಬಳ್ಳಾರಿ: ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಶ್ರೀದೇವಿ ಶೈತ್ಯಾಗಾರಕ್ಕೆ ಮಂಗಳವಾರ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿದ್ದು, ಬುಧವಾರವೂ ಬೆಂಕಿ ನಂದಿಸುವ ಕಾರ್ಯ ಮುಂದುವರಿದಿದೆ.
ಮಂಗಳವಾರ ರಾತ್ರಿಯಿಡಿ ಬೆಂಕಿ ನಂದಿಸುವ ಕಾರ್ಯ ನಡೆದಿದ್ದು, ಕೆಳಗಿನ ಎರಡು ಅಂತಸ್ತಿನಲ್ಲಿನ ಬೆಂಕಿ ನಂದಿಸಲಾಗಿದೆ. ಮೇಲಿನ ಮಹಡಿಗಳಲ್ಲಿ ಬೆಂಕಿ ನಂದಿಸುವ ಕಾರ್ಯ ನಡೆದಿದೆ. ವಿಮಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶೈತ್ಯಾಗಾರದಲ್ಲಿ 300ಕ್ಕೂ ಹೆಚ್ಚು ರೈತರು 2012-13ರಲ್ಲಿ ಮೆಣಸಿನಕಾಯಿ, ಕಡಲೆ, ದನಿಯಾ, ಜೋಳ, ತೊಗರಿಯನ್ನು ಸಂಗ್ರಹಿಸಿಟ್ಟಿದ್ದರು.
ಬಳ್ಳಾರಿ ಜಿಲ್ಲೆ ಸೇರಿದಂತೆ ಆಂಧ್ರದ ರಾಯದುರ್ಗ, ಆದೋನಿ ತಾಲೂಕಿನ ರೈತರೂ ಧಾನ್ಯಗಳನ್ನು ಸಂಗ್ರಹಿಸಿಟ್ಟಿದ್ದಾರೆ. ತಾವು ಸಂಗ್ರಹಿಸಿಟ್ಟಿರುವ ಶೈತ್ಯಾಗಾರಕ್ಕೆ ಬೆಂಕಿ ಬಿದ್ದಿರುವ ವಿಷಯ ತಿಳಿದ ರೈತರು ಸ್ಥಳಕ್ಕೆ ಆಗಮಿಸಿ ಆತಂಕ ವ್ಯಕ್ತಡಿಸಿದರು. 1 ಲಕ್ಷ ಚೀಲ ಧಾನ್ಯ ಸಂಗ್ರಹಿಸುವ ಸಾಮರ್ಥ್ಯ ಇದ್ದು, ಇದರಲ್ಲಿ 60 ಸಾವಿರಕ್ಕೂ ಹೆಚ್ಚು ಚೀಲಗಳಲ್ಲಿ ವಿವಿಧ ಧಾನ್ಯಗಳನ್ನು ಸಂಗ್ರಹಿಸಿಡಲಾಗಿತ್ತು. ಹುಬ್ಬಳ್ಳಿಯಿಂದ ಆಗಮಿಸಿರುವ ಬ್ರಾಂಟೋ ಸ್ಕೈ ಲಿಫ್ಟ್ ಯಂತ್ರವು ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದೆ. ಮೇಲಿನ ಅಂತಸ್ತುಗಳಲ್ಲಿ ಬ್ರಾಂಟೋ ಸ್ಕೈ ಲಿಫ್ಟ್ನಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ.
ಪರಿಶೀಲನೆ: ಯುನೈಟೆಡ್ ಇಂಡಿಯನ್ ಇನ್ಸೂರೆನ್ಸ್ ಕಂಪನಿಯವರು ಪರಿಶೀಲನೆ ನಡೆಸಿದ್ದು, ಇನ್ಸೂರೆನ್ಸ್ ಕಂಪನಿಗೆ 40.6 ಕೋಟಿ ಸಂಗ್ರಹಿಸಿದ ಧಾನ್ಯ ಹಾಗೂ ಕಟ್ಟಡಕ್ಕೆ 6 ಕೋಟಿ ಮೌಲ್ಯದ ಹಾನಿಯಾಗಿದೆ ಎಂದು ಶೈತ್ಯಾಗಾರದ ಪಾಲುದಾರರು ಮಾಹಿತಿ ನೀಡಿದ್ದಾರೆ. ಈ ಕುರಿತು ಕಂಪನಿಯ ಚೆನ್ನೈನ ಎಂಜಿನಿಯರ್ ತಂಡ ಸರ್ವೆ ನಡೆಸಿ ವರದಿ ನೀಡಲಿದೆ. ಬಳಿಕ ಕಂಪನಿಯು ಅಗತ್ಯ ದಾಖಲೆಗಳನ್ನು ಪಡೆದು ಇನ್ಸೂರೆನ್ಸ್ ಹಣ ನೀಡಲಿದೆ ಎಂದು ಹೇಳಲಾಗುತ್ತಿದೆ.
ಆತಂಕ ಪಡಬೇಡಿ: ಶೈತ್ಯಾಗಾರದ ಪಾಲುದಾರರಲ್ಲಿ ಒಬ್ಬರಾಗಿರುವ ತಿಮ್ಮಾರೆಡ್ಡಿ ಮಾತನಾಡಿ, ಸುಮಾರು 300 ರೈತರು ಧಾನ್ಯಗಳನ್ನು ಸಂಗ್ರಹಿಸಿಟ್ಟಿದ್ದಾರೆ. ಸಂಗ್ರಹಿಸಿರುವ ಧಾನ್ಯಕ್ಕೆ 30 ಕೋಟಿ ಇನ್ಸೂರೆನ್ಸ್ ಮಾಡಿಸಲಾಗಿದೆ. ಇನ್ನು ಕಟ್ಟಡಕ್ಕೆ 5 ಕೋಟಿ ಇನ್ಸೂರೆನ್ಸ್ ಮಾಡಿಸಲಾಗಿದೆ. ಧಾನ್ಯಗಳನ್ನು ಸಂಗ್ರಹಿಸಿಟ್ಟಿರುವ ರೈತರಿಗೆ ಧಾನ್ಯಕ್ಕೆ ಹಣ ನೀಡಲಾಗುತ್ತದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರು ಕೊಂಚ ನಿಟ್ಟುಸಿರು ಬಿಟ್ಟರು.