ಸೇಲ್ಸ್ಮನ್ ಕೆಲಸ ಮಾಡಿ, ಓದಿ ಪದವಿ ಪಡೆದಿದ್ದರು!
ಗುಲ್ಬರ್ಗ: ಆಳಂದ ತಾಲೂಕಿನ ಖಜೂರಿ ಮಲ್ಲಿಕಾರ್ಜುನ ಬಂಡೆ ಅವರ ಹುಟ್ಟೂರು. 1974, ಜೂ.1ರಂದು ಜನಿಸಿದ ಬಂಡೆ ಕರಿಬಸಪ್ಪ ಹಾಗೂ ಕಲಾವತಿ ದಂಪತಿಯ ನಾಲ್ವರು ಮಕ್ಕಳಲ್ಲಿ ದ್ವಿತೀಯ ಪುತ್ರ. ಮಹಾರಾಷ್ಟ್ರ ಗಡಿಯಂಚಲ್ಲಿರುವ ಗ್ರಾಮದಲ್ಲಿಯೇ ತಮ್ಮ ವಿದ್ಯಾಭ್ಯಾಸ ಪೂರೈಸಿದ್ದರು. ನಂತರ ಪದವಿ ಅಧ್ಯಯನಕ್ಕೆ ಗುಲ್ಬರ್ಗಕ್ಕೆ ಬಂದು ನೆಲೆಸಿದ್ದರು. ಇಲ್ಲಿನ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಲಾ ಮಹಾವಿದ್ಯಾಲಯದಲ್ಲಿ ಬಿಎ ಪದವಿ ಪಡೆದ ನಂತರ ರಾಜ್ಯಶಾಸ್ತ್ರದಲ್ಲಿ ಗುಲ್ಬರ್ಗ ವಿವಿಯಿಂದ ಸ್ನಾತಕೋತ್ತರ ಪದವೀಧರ ಪಡೆದಿದಿದ್ದರು.
ವಿದ್ಯಾರ್ಥಿ ದೆಸೆಯಲ್ಲೇ 'ಕಲಿಕೆಯೊಂದಿಗೆ ಗಳಿಕೆ' ಎಂದು ಸ್ಥಳೀಯವಾಗಿ ರೆಡಿಮೇಡ್ ಬಟ್ಟೆ ಅಂಗಡಿಯಲ್ಲಿ ಸೇಲ್ಸ್ಮನ್ ಆಗಿದ್ದರು. ಮನೆಯವರಿಗೆ ಏಕೆ ಹೊರೆ ಎಂದು ತಮ್ಮ ಓದಿಗೆ ಅಗತ್ಯವಿದ್ದ ಹಣವನ್ನು ತಾವೇ ದುಡಿದು ಗಳಿಸುತ್ತಿದ್ದರು. ಇದೇ ಸಂದರ್ಭದಲ್ಲಿ 1997ರಲ್ಲಿ ಗುಲ್ಬರ್ಗದಲ್ಲಿ ನಡೆದಿದ್ದ ಪೇದೆ ನೇಮಕಾತಿ ಸಂದರ್ಶನದಲ್ಲಿ ಯಶಸ್ವಿಯಾದ ಬಂಡೆ ಪೇದೆಯಾಗಿ ಪೊಲೀಸ್ ಇಲಾಖೆ ಸೇರಿದ್ದರು. 2004-05ರಲ್ಲಿ ಇಲಾಖಾ ಪರೀಕ್ಷೆ ಬರೆದು ಪಿಎಸ್ಐ ಆಗಿ ಬಡ್ತಿ ಹೊಂದಿ ಗುಲ್ಬರ್ಗ ಜಿಲ್ಲೆಯ ವಾಡಿ, ಗುಲ್ಬರ್ಗ ನಗರದ ನ್ಯೂ ರಾಘವೇಂದ್ರ ಕಾಲೋನಿ, ಬೀದರ್ ಜಿಲ್ಲೆಯ ಹುಮನಾಬಾದ್, ರಾಯಚೂರು ಜಿಲ್ಲೆಯ ಮಸ್ಕಿ ಹೀಗೆ ಅನೇಕ ಕಡೆಗಳಲ್ಲಿ ಪಿಎಸ್ಐ ಆಗಿ ಸೇವೆ ಸಲ್ಲಿಸಿದ್ದರು. ಎಲ್ಲೆಡೆ ಜನಪರ ಪೊಲೀಸಿಂಗ್ ಮಾಡುತ್ತ ಸಾಮಾನ್ಯ ಜನರ ಪ್ರೀತಿ- ವಿಶ್ವಾಸ ಗಳಿಸಿದ್ದರು. ಕಳೆದ 5 ತಿಂಗಳ ಹಿಂದಷ್ಟೇ ಇಲ್ಲಿನ ಸ್ಟೇಷನ್ ಬಜಾರ್ ಠಾಣೆಗೆ ವರ್ಗವಾಗಿ ಬಂದಿದ್ದರು.
ಗುಲ್ಬರ್ಗದಲ್ಲಿಂದು ಶಾಲಾ- ಕಾಲೇಜಿಗೆ ರಜೆ
ಬಂಡೆ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಗುಲ್ಬರ್ಗ ಜಿಲ್ಲಾದ್ಯಂತ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಗುಲ್ಬರ್ಗ ನಗರ, ಆಳಂದ, ಜೇವರ್ಗಿಯಲ್ಲಿ ಕಲಂ 144ರನ್ವಯ ಬುಧವಾರ ಮಧ್ಯಾಹ್ನ 1 ಗಂಟೆಯಿಂದ ಗುರುವಾರ ಸಂಜೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಗುರುವಾರ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.