ಇನ್ನು 15-20 ದಿನದಲ್ಲಿ ಅಗತ್ಯ ಮರಳು ಲಭ್ಯ
ಕ.ಪ್ರ.ವಾರ್ತೆ , ಬೆಂಗಳೂರು , ಜ. 16
ಮರಳು ನೀತಿ ವಿಚಾರದಲ್ಲಿ ಸರ್ಕಾರ ಮತ್ತು ಲಾರಿ ಮಾಲೀಕರ ನಡುವೆ ಉಂಟಾಗಿದ್ದ ಸಂಘರ್ಷಕ್ಕೆ ತೆರೆ ಬಿದ್ದಿದೆಯಾದರೂ ಸಾರ್ವಜನಿಕರಿಗೆ ಅಗತ್ಯ ಪ್ರಮಾಣದಲ್ಲಿ ಮರಳು ಲಭ್ಯವಾಗಲು ಇನ್ನೂ 15ರಿಂದ 20 ದಿನ ಕಾಯಬೇಕು.
ಹೊಸ ನೀತಿಯನ್ವಯ ರಾಜ್ಯಾದ್ಯಂತ ಮರಳು ಬ್ಲಾಕ್ಗಳನ್ನು ಗುರುತಿಸಲಾಗಿದೆಯಾದರೂ ಅವುಗಳ ಹರಾಜಿಗೆ ಟೆಂಡರ್ ಪ್ರಕ್ರಿಯೆ ಇನ್ನಷ್ಟೇ ಆರಂಭವಾಗಬೇಕಿದೆ. ಈ ಕೆಲಸ ಮುಗಿಯಬೇಕಿದ್ದರೆ ಇನ್ನೂ 10 ದಿನಕ್ಕೂ ಹೆಚ್ಚು ಕಾಲಾವಕಾಶ ಬೇಕು. ಹರಾಜು ಮುಗಿದ ಬಳಿಕ ಮರಳು ಗಣಿಗಾರಿಕೆ ನಡೆಸಿ ಅದನ್ನು ಲಾರಿಗಳಿಗೆ ತುಂಬಿಸಿ ಗ್ರಾಹಕರಿಗೆ ತಲುಪಿಸಲು 15ರಿಂದ 20 ದಿನ ಆಗಲಿದೆ.
ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ತಕ್ಷಣವೇ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್ ನಡೆಸಿ ಟೆಂಡರ್ ಪ್ರಕ್ರಿಯೆ ಚುರುಕುಗೊಳಿಸುವಂತೆ ನಿರ್ದೇಶನ ನೀಡಬೇಕು ಎಂದು ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಕಾರ್ಯದರ್ಶಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರಿಗೆ ಸೂಚನೆ ನೀಡಿದೆ.
ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಈ ವಿಷಯ ತಿಳಿಸಿದ ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಅದುವರೆಗೆ ಪ್ರಸ್ತುತ ಸಂಗ್ರಹವಿರುವ 5ರಿಂದ 8 ಸಾವಿರ ಲೋಡ್ ಮರಳನ್ನು ತಕ್ಷಣವೇ ಗ್ರಾಹಕರಿಗೆ ಮಾರಾಟ ಮಾಡುವಂತೆ ಸೂಚಿಸಲಾಗಿದೆ. ಪ್ರಮುಖವಾಗಿ ಬೆಂಗಳೂರಿಗೆ ಈ ಮರಳು ಪೂರೈಕೆಯಾಗಲಿದೆ ಎಂದು ತಿಳಿಸಿದರು.
ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ತಾಲೂಕುಗಳನ್ನು ಮರಳು ಇಲ್ಲದ ಜಿಲ್ಲೆ ಎಂದು ಗುರುತಿಸಲಾಗಿದೆ. ಉಳಿದಂತೆ ರಾಜ್ಯಾದ್ಯಂತ 100ಕ್ಕೂ ಹೆಚ್ಚು ಮರಳು ಬ್ಲಾಕ್ಗಳನ್ನು ಗುರುತಿಸಲಾಗಿದ್ದು, ಇವುಗಳನ್ನು ತಕ್ಷಣವೇ ಟೆಂಡರ್ ಕರೆದು ಹರಾಜು ಹಾಕುವಂತೆ ಜಿಲ್ಲಾಧಿಕಾರಿಗಳ ನೇತೃತ್ವದ ಜಿಲ್ಲಾ ಮಟ್ಟದ ಮರಳು ನಿರ್ವಹಣಾ ಸಮಿತಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ಮ್ಯಾನುಫ್ಯಾಕ್ಚರ್ ಮರಳು: ಕೇಂದ್ರ ಗಣಿ ಮತ್ತು ಭೂವಿಜ್ಞಾನ ನೀತಿಯನ್ವಯ ಮರಳು ಬ್ಲಾಕ್ಗಳನ್ನು ನಿರ್ಧರಿಸಲಾಗಿದೆ. ಇಲ್ಲಿ ಮರಳು ತೆಗೆಯಲು ಕೂಡ ಕೆಲವು ನಿಯಮಗಳನ್ನು ರೂಪಿಸಲಾಗಿದ್ದು, ಪರಿಸರಕ್ಕೆ ಹಾನಿಯಾಗದಂತೆ ನಿರ್ದಿಷ್ಟ ಪ್ರಮಾಣದಲ್ಲಿ ಮಾತ್ರ ಮರಳು ತೆಗೆಯಬೇಕೇ ಹೊರತು ಬೇಕಾಬಿಟ್ಟಿ ಮರಳು ಗಣಿಗಾರಿಕೆ ನಡೆಯುವಂತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮರಳು ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲು ಮ್ಯಾನುಫ್ಯಾಕ್ಚರ್ ಮರಳು (ಜಲ್ಲಿ ಪುಡಿ) ಬಳಕೆಗೂ ಆದ್ಯತೆ ನೀಡಲಾಗುತ್ತದೆ. ಇದಕ್ಕಾಗಿ ಜಲ್ಲಿ ಕ್ರಷರ್ಗಳನ್ನು ಸ್ಥಾಪಿಸುವವರಿಗೆ ಮ್ಯಾನುಫ್ಯಾಕ್ಚರ್ ಮರಳು ಉತ್ಪಾದನೆಗೂ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.
ಒತ್ತಡಕ್ಕೆ ಮಣಿಯುವುದಿಲ್ಲ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮರಳು ನೀತಿಯನ್ನು ಲಾರಿ ಮಾಲೀಕರ ಸಂಘಟನೆಗಳು ಸ್ವಾಗತಿಸಿದ್ದವು. ಈ ವಿಚಾರದಲ್ಲಿ, ಕೆಲವೊಂದು ಗೊಂದಲಗಳಿದ್ದವಾದರೂ ಅದನ್ನು ಬಗೆಹರಿಸಲಾಗಿದೆ. ಆದರೆ, ಮರಳು ಗಣಿಗಾರಿಕೆ ಮತ್ತು ಸಾಗಣೆ ಸಂದರ್ಭದಲ್ಲಿ ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ಎಚ್ಚರಿಕೆಯಿಂದ ವ್ಯವಹರಿಸಲಾಗುವುದು. ಈ ವಿಚಾರದಲ್ಲಿ ಯಾವುದೇ ಒತ್ತಡಗಳಿಗೂ ಮಣಿಯುವ ಪ್ರಶ್ನೆಯಿಲ್ಲ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರು-ಮೈಸೂರು ರಸ್ತೆ; ಮಾಸಾಂತ್ಯಕ್ಕೆ ನಿರ್ಧಾರ
ಬೆಂಗಳೂರು- ಮೈಸೂರು ಮಧ್ಯೆ ರಸ್ತೆ ವಿಸ್ತರಣೆ ಮಾಡುವ ಅಥವಾ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವ ವಿಚಾರ ಈ ತಿಂಗಳ ಅಂತ್ಯದೊಳಗೆ ಬಗೆಹರಿಯಲಿದೆ ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ರಸ್ತೆ ವಿಸ್ತರಣೆ ಕುರಿತಂತೆ ಬಿಡದಿ, ಚನ್ನಪಟ್ಟಣ, ಮಂಡ್ಯ ಮತ್ತು ಮದ್ದೂರು ಪಟ್ಟಣಗಳಲ್ಲಿ ಮೇಲ್ಸೇತುವೆ ನಿರ್ಮಾಣ ಕುರಿತಂತೆ ಸಮಗ್ರ ಕ್ರಿಯಾ ಯೋಜನೆ ರೂಪಿಸಲು ಸೂಚಿಸಲಾಗಿದೆ. ಇದರ ಜತೆಗೆ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವ ಕುರಿತಂತೆ ಕೇಂದ್ರ ಹೆದ್ದಾರಿ ಖಾತೆ ಸಚಿವರ ಮೇಲೆ ಒತ್ತಡ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವ ಕುರಿತು ಜನವರಿ ಅಂತ್ಯದೊಳಗೆ ನಿರ್ಧಾರ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದರು. ಸದ್ಯಕ್ಕೆ ಈ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರ ಒಪ್ಪದೇ ಇದ್ದರೆ ಪ್ರಸ್ತುತ ಇರುವ 4 ಲೇನ್ ರಸ್ತೆಯನ್ನು 6 ಅಥವಾ 8 ಲೇನ್ಗೆ ವಿಸ್ತರಿಸುವ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುವುದು. ಇದಕ್ಕೆ ಪೂರಕವಾಗಿಯೇ ನಾಲ್ಕು ಪಟ್ಟಣಗಳಲ್ಲಿ ಮೇಲ್ಸೇತುವೆ ನಿರ್ಮಿಸುವ ಕುರಿತು ಸಮಗ್ರ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದರು.
ನೈಸ್ ರಸ್ತೆ ನಿರ್ಮಾಣ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯೋಜನೆಗೆ ಸಂಬಂಧಿಸಿದಂತೆ ಇದುವರೆಗೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ. ಈ ಕೆಲಸ ಮುಗಿದ ಕೂಡಲೇ ಮೂಲ ಒಪ್ಪಂದಕ್ಕೆ ಅನುಸಾರವಾಗಿ ಸರ್ಕಾರ ತನ್ನ ಮುಂದಿನ ನಿರ್ಧಾರವನ್ನು ಪ್ರಕಟಿಸಲಿದೆ ಎಂದು ಹೇಳಿದರು.