ನಟಿ ಸುಚಿತ್ರಾ ಸೇನ್ ನಿಧನ
ಕೋಲ್ಕತಾ: ಖ್ಯಾತ ಬಂಗಾಳಿ ಚಿತ್ರನಟಿ ಸುಚಿತ್ರಾ ಸೇನ್(82) ಅವರು ಶುಕ್ರವಾರ ಕೋಲ್ಕತಾದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಉಸಿರಾಟದ ಸಮಸ್ಯೆಯಿಂದಾಗಿ ಕಳೆದ ಡಿ.23ರಂದು ಬೆಲ್ಲೆವ್ಯೂ ಆಸ್ಪತ್ರೆಗೆ ದಾಖಲಾಗಿದ್ದರು. ಗುರುವಾರ ಸಂಜೆ ಉಂಟಾದ ತೀವ್ರ ಹೃದಯಾಘಾತದಿಂದಾಗಿ ಬೆಳಗ್ಗೆ 8.25ಕ್ಕೆ ಕೊನೆಯುಸಿರೆಳೆದರು ಎಂದು ಅವರು ಕುಟುಂಬದ ಮೂಲಗಳು ತಿಳಿಸಿವೆ.
ದೇವದಾಸ್, ಆಂಧೀ, ದೀಪ್ ಜ್ವಲೇ ಜಾಯೆ, ಅಗ್ನಿಪರೀಕ್ಷಾ, ಸಪ್ತಪದಿ ಸೇರಿದಂತೆ 60ರಷ್ಟು ಹಿಂದಿ ಹಾಗೂ ಬಂಗಾಳಿ ಚಿತ್ರಗಳಲ್ಲಿ ಸೇನ್ ನಟಿಸಿದ್ದರು. ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದ ಪ್ರಪ್ರಥಮ ಭಾರತೀಯ ನಟಿ ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದರು. ಸುಚಿತ್ರಾ ಸೇನ್ ಅವರನ್ನು ಹಾಲಿವುಡ್ ನಟಿ ಗ್ರೇಟಾ ಗರ್ಬೋ ಅವರಿಗೆ ಹೋಲಿಕೆ ಮಾಡಲಾಗುತ್ತಿತ್ತು.
ಏಕಾಂಗಿ ಬದುಕು: ಕಳೆದ 30 ವರ್ಷಗಳಿಂದ ಸುಚಿತ್ರಾ ಸೇನ್ ಅವರು ದಕ್ಷಿಣ ಕೋಲ್ಕತಾದ ಅಪಾರ್ಟ್ಮೆಂಟ್ವೊಂದರಲ್ಲಿ ಏಕಾಂಗಿಯಾಗಿ ಬದುಕುತ್ತಿದ್ದರು. ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಸೇನ್ ನಿಧನ ವಾರ್ತೆ ತಿಳಿಯುತ್ತಿದ್ದಂತೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಆಸ್ಪತ್ರೆಗೆ ಧಾವಿಸಿದರು. ಇದೇ ವೇಳೆ, ಸಿನಿಮಾ ಕ್ಷೇತ್ರದ ಹಲವು ಗಣ್ಯರು ಸೇನ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.